ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜಯನಗರ ಜಿಲ್ಲೆಯ ವಿದ್ಯಾರ್ಥಿನಿ ಸಂಜನಾಬಾಯಿ ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆ ಹಾಗೂ ಹೊಸಪೇಟೆಗೆ ಗೌರವ ತಂದಿದ್ದಾಳೆ.
ಸಂಜಾನಾ ಹೊಸಪೇಟೆ ತಾಲೂಕಿನ ಗುಂಡಾ ಸ್ಟೇಷನ್ ಎಂಬ ಪುಟ್ಟ ಗ್ರಾಮದ ಲಾರಿ ಚಾಲಕ ಎಲ್ ಕೆ ರಾಮ್ ನಾಯ್ಕ್ ಅವರ ಮಗಳು ಸಂಜನಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೂ ಮುಂದಿದ್ದಳು. ಮರಿಯಮ್ಮನಹಳ್ಳಿ ಪ್ರಿಯದರ್ಶಿನಿ ಬಾಲಕಿಯರ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಶೇ.93.5 ಉತ್ತಮ ಅಂಕ ಪಡೆದು ಇಡೀ ಪ್ರೌಢ ಶಾಲೆಗೆ ಉತ್ತಮ ಅಂಕ ಗಳಿಸಿದ್ದಳು.
ಹೊಸಪೇಟೆಯ ಗುಂಡಾ ಸ್ಟೇಷನ್ 30 ಮನೆಗಳ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ತಂದೆಯ ಬಳಿಯಿದ್ದ ಅಲ್ಪ ಆಸ್ತಿಯನ್ನೂ ಕೂಡಾ ಬಿಎಮ್‌ಎಮ್ ಕಾರ್ಖಾನೆ ಕಬಳಿಸಿದೆ. ಕೂಗಳತೆಯ ದೂರದಲ್ಲಿರುವ ಕಾರ್ಖಾನೆಯ ಕರ್ಕಶ ಶಬ್ದಕ್ಕೆ ಮಗಳಿಗೆ ತೊಂದರೆಯಾಗಬಾರದೆಂದು ಹಾಸ್ಟೆಲ್‌ಗೆ ಸೇರಿಸಿದ್ದರು.
ಓದುವುದರಲ್ಲಿ ಮುಂದಿದ್ದ ಮಗಳನ್ನು ಪ್ರಥಮ ಪಿಯು ವಿದ್ಯಾಭ್ಯಾಸಕ್ಕಾಗಿ ಕೊಟ್ಟುರಿನ ಪದವಿ ಪೂರ್ವ ಕಾಲೇಜಿಗೆ ಸೇರಿಸಿದ್ದರು. ಬಾಲಕಿಯರ ವಸತಿನಿಲಯದಲ್ಲಿದ್ದುಕೊಂಡು ಓದಿದ ವಿದ್ಯಾರ್ಥಿನಿ ಇದೀಗ ಶೇ.99.5ರಷ್ಟು ಅಂಕ ಪಡೆದು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿ ಕಾಲೇಜಿನ ಶುಲ್ಕದಲ್ಲಿ ರಿಯಾಯಿತಿ ಪಡೆದಿದ್ದಾಳೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಗುಡುಗು ಸಹಿತ ಭಾರೀ ಮಳೆ; ನೆಲಕ್ಕರುಳಿದ ತೆಂಗಿನ ಮರ, ವಿದ್ಯುತ್ ತಂತಿ
ವಿದ್ಯಾರ್ಥಿನಿ ಎಲ್ ಆರ್ ಸಂಜನಬಾಯಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಮನೆಯ ಆರ್ಥಿಕ ಸ್ಥಿತಿ ಅಷ್ಟೊಂದು ಸರಿಯಿಲ್ಲ. ನಮ್ಮ ಅಪ್ಪ ಒಬ್ಬ ಲಾರಿ ಡ್ರೈವರ್. ಅವರಿಗೆ ಇನ್ನೂ ಹೊರೆಯಾಗಲಾರೆ. ನನ್ನ ಈ ಉತ್ತಮ ಅಂಕದಿಂದ ಒಂದು ಸರ್ಕಾರಿ ಕೆಲಸ ಪಡೆದು ನಮ್ಮನೆ ಆರ್ಥಿಕ ಸ್ಥಿತಿ ಸುಧಾರಿಸುತ್ತೇನೆ. ಅದರ ಜತೆಗೆ ಕೆಎಎಸ್ ಹಾಗೂ ಯುಪಿಎಸ್‌ಸಿ ಕಟ್ಟಿ ಪಾಸ್ ಆಗಿ ಉನ್ನತ ಅಧಿಕಾರಿಯಾಗುವ ಆಸೆಯೂ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.