ಬಸ್‌ನಲ್ಲಿ ಮದ್ಯ ಸಾಗಾಟ ಮಾಡಲು ಅನುಮತಿ ನೀಡಿ ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದು, ಗದಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
“ಸರ್ಕಾರ ಕ್ಷಣಕ್ಕೊಂದು ರೂಲ್ಸ್ ಬದಲಾವಣೆ ಮಾಡಿದರೆ ಹೇಗೆ? ನಾವು ಮದ್ಯವನ್ನು ಹೇಗೆ ತೆಗೆದುಕೊಂಡು ಹೋಗಬೇಕು? ಬಸ್‌ನಲ್ಲಿ ಮದ್ಯ ಸಾಗಾಟ ಮಾಡಬಾರದು ಎಂದರೆ ಹೇಗೆ? ನಾವೆಲ್ಲಿಗೆ ಹೋಗಬೇಕು? ಅದೆಲ್ಲಾ ಆಗಲ್ಲ, ಮದ್ಯ ಸಾಗಾಟಕ್ಕೆ ಅನುಮತಿ ಕೊಡಲೇಬೇಕು!” ಎಂದು ಆಗ್ರಹಿಸಿದ್ದಾರೆ.
“ಆರ್ಮಿ ಕ್ಯಾಂಟೀನ್‌ನಿಂದ ಖರೀದಿಸಿ ತಂದಿರುವ ಮದ್ಯ ಒಯ್ಯಲು ಬಸ್‌ನಲ್ಲಿ ಅವಕಾಶ ನೀಡುತ್ತಿಲ್ಲ. ಇದು ಸರಿಯಾದ ಕ್ರಮ ಅಲ್ಲ. ಬಸ್ ಉಚಿತವೆಂದು ಮಾಡಿದ ಮೇಲೆ ನೀವು ಒಮ್ಮಿಂದ ಒಮ್ಮೆಗೆ ಹೇಗೆ ನೀತಿಯನ್ನು ಬದಲಾವಣೆ ಮಾಡುತ್ತೀರಿ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆರ್ಮಿ ಕ್ಯಾಂಟೀನ್‌ನಿಂದ ಕೊಡುವ ಮದ್ಯವನ್ನು ಸೈನಿಕರು ದೇಶಾದ್ಯಂತ ಎಲ್ಲಿಯಾದರೂ ಸಾಗಾಟ ಮಾಡುವ ಅವಕಾಶ ಹೊಂದಿದ್ದಾರೆ. ದೇಶವ್ಯಾಪಿ ಅವಕಾಶವಿದ್ದರೂ ಬಸ್‌ನಲ್ಲಿ ಏಕಿಲ್ಲ. ಧಾರವಾಡ ಸಿಎಸ್‌ಡಿ ಕ್ಯಾಂಟೀನ್‌ನಿಂದ ಮದ್ಯ ತಂದರೆ ಏನು ತೊಂದರೆ? ರೈಲು ಮತ್ತು ವಿಮಾನದಲ್ಲಿ ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಇಲ್ಲಿ ಬಸ್‌ನಲ್ಲಿ ಏಕೆ ಅವಕಾಶ ಕೊಡುತ್ತಿಲ್ಲ? ಇಲ್ಲಿಯೂ ಅನುಮತಿ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
“ಎರಡು ವಾರಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯ ತರುವಾಗ ಮಹಿಳೆಯರಿಗೆ ಅವಮಾನ ಮಾಡಲಾಗಿದೆ. ಮದ್ಯದ ಬಾಟಲ್‌ಗಳನ್ನು ಪ್ರಯಾಣಿಕರಿಗೆ ತೋರಿಸಿ ನಿರ್ವಾಹಕರು ಅವಮಾನಿಸಿದ್ದಾರೆ. ಹೀಗಾಗಿ ಬಸ್‌ಗಳಲ್ಲಿ ಮದ್ಯ ಸಾಗಾಟಕ್ಕೆ ಅನುಮತಿ ನೀಡಬೇಕು” ಎಂದು ಮಾಜಿ ಸೈನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ಮೂಲದ ಇಬ್ಬರು ಮಹಿಳೆಯರು ಹುಬ್ಬಳ್ಳಿಯಿಂದ ಮದ್ಯದ ಬಾಟಲ್ ಹಿಡಿದುಕೊಂಡು ಬಸ್ ಹತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ನಿರ್ವಾಹಕ ತಕರಾರು ಎತ್ತಿದ್ದು, ಹುಬ್ಬಳ್ಳಿಯಿಂದ ಗದಗಕ್ಕೆ ಹೋಗುತ್ತಿದ್ದ ಈ ಬಸ್‌ನಲ್ಲಿದ್ದ ಮದ್ಯ ಹಿಡಿದ ಮಹಿಳೆಯರನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದ. ಈ ಮಹಿಳೆಯರು ಹುಬ್ಬಳ್ಳಿಯ ಆರ್ಮಿ ಕ್ಯಾಂಟೀನ್‌ನಿಂದ ಮದ್ಯದ ಬಾಟಲ್ ತರುತ್ತಿದ್ದರು. ತಮಗೆ ಮದ್ಯ ಒಯ್ಯಲು ಅವಕಾಶ ನೀಡದೆ ಇದ್ದದ್ದು ಮಾತ್ರವಲ್ಲ, ಬಸ್ಸಿನಿಂದ ಕೆಳಗೆ ಇಳಿಸಿದ್ದರಿಂದ ಸಿಟ್ಟುಗೊಂಡ ಮಹಿಳೆಯರು ಕೂಡಲೇ ಗದಗ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಬಳಿಕ ಅವರಿಗೆ ನಿವೃತ್ತ ಯೋಧರ ಸಂಘ ಬೆಂಬಲ ನೀಡಿದೆ.
ʻʻನಾವು ಈ ಹಿಂದೆ ಹಲವು ಬಾರಿ ಮದ್ಯ ತೆಗೆದುಕೊಂಡು ಬಂದಿದ್ದೇವೆ. ಅವತ್ತು ಇಲ್ಲದ ರೂಲ್ಸ್ ಇವತ್ತು ಯಾಕೆ?ʼʼ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ʻʻಹಾಗಿದ್ದರೆ ಮದ್ಯ ತರಲು ನಮಗೆ ಸರ್ಕಾರ ಯಾವುದಾದರೂ ದಾರಿ ತೋರಿಸಲಿʼʼ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಕೆಲವೆಡೆ ಮಳೆ; ನೆಲಕ್ಕುರುಳಿದ ಬೃಹತ್ ಮರ
“ಕುಡಿದು ಬಂದವರಿಗೆ ಬಸ್ಸಿನಲ್ಲಿ ಅವಕಾಶ ಕೊಡುತ್ತೀರಿ. ಆದರೆ, ಮನೆಗೆ ಮದ್ಯದ ಬಾಟಲ್ ತರಲು ಅವಕಾಶ ಯಾಕಿಲ್ಲ. ನಾವೇನು ಬಸ್ಸಿನಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದೇವಾ” ಎಂದು ಮಹಿಳೆಯರು ಕಂಡಕ್ಟರ್ ವಿರುದ್ಧ ಕಿಡಿಕಾರಿದ್ದರು.
ನಿವೃತ್ತ ಯೋಧರಿಗೆ ಆರ್ಮಿ ಕ್ಯಾಂಟೀನ್‌ಗಳಲ್ಲಿ ಅಗ್ಗದ ದರದಲ್ಲಿ ಮದ್ಯ ಪೂರೈಕೆ ಮಾಡಲಾಗುತ್ತದೆ. ಅದನ್ನು ನಿವೃತ್ತ ಯೋಧರು, ಇಲ್ಲವೇ ಅವರು ನಿಯೋಜಿಸಿದ ಮನೆಯ ಸದಸ್ಯರು ಬಂದು ಕೊಂಡೊಯ್ಯಲು ಅವಕಾಶವಿದೆ. ಈ ಹಿಂದೆ ಬಸ್ಸು ಸೇರಿದಂತೆ ನಾನಾ ವಾಹನಗಳ ಮೂಲಕ ಅವುಗಳನ್ನು ಮನೆಯವರು ಒಯ್ಯುತ್ತಿದ್ದರು. ಆದರೆ, ಈ ಬಾರಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದುದು ಬಸ್ ಕಂಡಕ್ಟರ್‌ಗೆ ತಿಳಿದು ಈ ಕಿರಿಕ್ ಉಂಟಾಗಿತ್ತು. ಬಸ್ಸಿನಲ್ಲಿ ಮದ್ಯ ಸಾಗಾಟಕ್ಕೆ ಅವಕಾಶ ಇಲ್ಲ ಎಂಬ ಮಾರ್ಗಸೂಚಿ ಇದೆಯಾದರೂ ಇದು ಎಲ್ಲ ಸಂದರ್ಭದಲ್ಲಿ ಪಾಲನೆ ಆಗುವುದಿಲ್ಲ.