ನನ್ನನ್ನು ಒಬ್ಬ ಪೇದೆ ಕಂಕುಳಿನಿಂದ, ಮತ್ತೊಬ್ಬರು ಕಾಲನ್ನು ಹಿಡಿದು ಅಂತರಿಕ್ಷದಲ್ಲಿ ಅಡ್ಡಡ್ಡಲಾಗಿ ಕೆಡವಿಕೊಂಡು, ಸುತ್ತಲೂ ಆರು ಜನ ಪೊಲೀಸರು ನಿಂತು ಒಂದೇ ಸಮನೆ ಲಾಠಿಗಳಿಂದ ಹೊಡೆದರು. ಸಂತ್ರಸ್ತ ಹಳ್ಳಿಗಳಲ್ಲೊಂದಾದ ಬಕಚೌಡಿಯವರಾದ ಶಂಕರ್ ಎಂಬ ಸರ್ಕಲ್ ಇನ್ಸ್ಪೆಕ್ಟರ್ ʻಲೇ, ಹೊಡಿಬೇಡಿ ಹೊಡಿಬೇಡಿʼ ಎಂದು ತಡೆಯಲು ನೋಡಿದರು.
(ಈವರೆಗಿನ 3 ಭಾಗಗಳಲ್ಲಿ: 1990ರ ದಶಕದ ಆರಂಭದಲ್ಲಿ ಬೀದರ್ ನಗರಕ್ಕೆ ಕೇವಲ 7 ಕಿ.ಮೀ. ಸಮೀಪದಲ್ಲಿ 1760 ಎಕರೆ ವಿಸ್ತೀರ್ಣದ ʻಕೊಳ್ಹಾರ ಕೈಗಾರಿಕಾ ಪ್ರದೇಶʼದಲ್ಲಿ ಹತ್ತಾರು ರಾಸಾಯನಿಕ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಅವುಗಳ ನಿರಂತರ ಮಾಲಿನ್ಯದಿಂದಾಗಿ ಸುತ್ತಲಿನ ಎಂಟು-ಹತ್ತು ಹಳ್ಳಿಗಳಲ್ಲಿ ವ್ಯಾಪಕ ವಿನಾಶ ಉಂಟಾಗತೊಡಗಿತು. ʻಕರ್ನಾಟಕ ವಿಮೋಚನಾ ರಂಗʼವು ಮಾಲಿನ್ಯದ ವಿರುದ್ಧದ ರೈತರ ಹೋರಾಟಕ್ಕೆ ಮುಂದಾಳತ್ವ ವಹಿಸಿತು. ಸಮಸ್ಯೆ ಪರಿಹರಿಸಲು ಒತ್ತಾಯಿಸಿ 1994ರ ಫೆಬ್ರವರಿ 27ರಂದು ದೊಡ್ಡ ಪ್ರತಿಭಟನೆಯೊಂದಿಗೆ ಸುದೀರ್ಘ ಹೋರಾಟ ಆರಂಭವಾಯಿತು. ಅನೇಕ ಸುತ್ತಿನ ಪ್ರತಿಭಟನೆಗಳು, ಜಂಟಿ ಸಭೆಗಳ ನಂತರವೂ ಕಂಪನಿಗಳು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿಲ್ಲ. ಅಪಾರ ಸಂಖ್ಯೆಯಲ್ಲಿ ಜಾನುವಾರುಗಳ ಸಾವು, ಬೆಳೆ ನಾಶ ಮುಂದುವರಿದಾಗ, ನಿರ್ಣಾಯಕ ಹೋರಾಟಕ್ಕೆ ಮುಂದಾಗಬೇಕೆಂದು ರೈತಾಪಿ ಜನತೆ ಒಕ್ಕೊರಲಿನಿಂದ ಆಗ್ರಹಿಸಿದರು. 1995ರ ಅಕ್ಟೋಬರ್ 10ರಿಂದ ಆರಂಭಿಸಿ, ಕಾರ್ಖಾನೆಗಳು ಬಂದ್ ಆಗುವವರೆಗೂ ನಿರಂತರ ಹೋರಾಟ ನಡೆಸಬೇಕು ಎಂದು ನಿರ್ಧರಿಸಲಾಯಿತು. ಇದರ ನಡುವೆಯೇ, ಸಮಸ್ಯೆಯ ಯಾವುದೇ ಕಾರ್ಯಸಾಧ್ಯ ಪರಿಹಾರಕ್ಕೆ ಮುಂದೆ ಬಾರದ ಕಂಪನಿಗಳಿಗೆ ʻಬಿಸಿ ಮುಟ್ಟಿಸಬೇಕುʼ ಎಂದು ಯೋಚಿಸಿದ ಕವಿರಂ ರಾಜ್ಯ ಸಮಿತಿ ಬೆಂಗಳೂರಿನಲ್ಲಿದ್ದ ಎಸ್ಓಎಲ್ ಕಂಪನಿಯ ಮಾರಾಟ ಶಾಖೆಯ ಮೇಲೆ ಮಿಂಚಿನ ದಾಳಿ ನಡೆಸಿತು. ಇದರ ಬಗ್ಗೆ ಪೊಲೀಸ್ ಕೇಸ್ ದಾಖಲಾಗಿ, ನನ್ನನ್ನು ಬೆಂಗಳೂರು ಪೊಲೀಸರು ಬೀದರ್‌ನಿಂದ ಎತ್ತೊಯ್ದರು. ಕೇಂದ್ರ ಕಾರಾಗೃಹದಲ್ಲಿ 14 ದಿನ ಕಳೆದು ಜಾಮೀನಿನ ಮೇಲೆ ಬಿಡುಗಡೆಯಾಗಿ ನಾನು ಪುನಃ ಬೀದರ್ಗೆ ಬಂದು ಮುಂದಿನ ಹೋರಾಟದ ಸಿದ್ಧತೆ ಮುಂದುವರಿಸಿದೆ.) ಮುಂದೆ ಓದಿ…
ಜಿಲ್ಲಾ ಅಧಿಕಾರಿಗಳು ನಾಪತ್ತೆ !
ಅಕ್ಟೋಬರ್ 10ರ ಹೋರಾಟಕ್ಕೆ ನಾಲ್ಕೈದು ದಿನ ಇದ್ದಾಗ ಹಿಂಗಾರು ಮಳೆ ಬಿರುಸಿನಿಂದ ಆರಂಭವಾಯಿತಾದರೂ ಅದೇನೂ ಜನರ ಉತ್ಸಾಹಕ್ಕೆ ತಣ್ಣೀರೆರಚಲಿಲ್ಲ. ಆದರೆ ಜಿಲ್ಲಾಡಳಿತ ಹೋರಾಟವನ್ನು ಬಗ್ಗುಬಡಿಯಲೇಬೇಕೆಂದು ತೀರ್ಮಾನಿಸಿತ್ತು. ಜಿಲ್ಲಾಧಿಕಾರಿ ಬಿ.ಎಚ್.ಮಂಜುನಾಥ್ ಮತ್ತು ಎಸ್ಪಿ ಸಂಜಯವೀರ್ ಸಿಂಗ್ ಇಬ್ಬರೂ ರಜಾ ಹಾಕಿಯೋ, ಮೀಟಿಂಗ್ ನೆಪದಿಂದಲೋ, ಅಕ್ಟೋಬರ್ 9ರಿಂದಲೇ ʻಕಾಣೆʼಯಾದರು! ಸಮಸ್ಯೆಯ ಪೂರ್ಣ ಅರಿವಿದ್ದು ಹೋರಾಟದ ಬಗ್ಗೆ ಸಹಾನುಭೂತಿ ಹೊಂದಿದ್ದ ಉಪವಿಭಾಗಾಧಿಕಾರಿ ವೇದಮೂರ್ತಿ ಅವರೂ ರಜ ಹಾಕಿದರು. ಹೋರಾಟವನ್ನು ʻನಿಭಾಯಿಸುವʼ ಹೊಣೆ ಬೀದರ್ ತಹಸೀಲ್ದಾರ್ ಮತ್ತು ಅಡಿಶನಲ್ ಎಸ್ಪಿ ನರಸಪ್ಪ ಇವರದ್ದಾಯಿತು. ನಿವೃತ್ತಿಯ ಅಂಚಿನಲ್ಲಿದ್ದ ನರಸಪ್ಪ ಅವರ ನಡವಳಿಕೆ ಒಂದು ರೀತಿ ಅಸ್ಥಿರ ಎನ್ನುವಂತೆ ಇರುತ್ತಿತ್ತು. ತಾನೊಬ್ಬ ಕವಿ ಎಂಬ ಭ್ರಮೆಯಲ್ಲಿ ಅವರು ಬರೆಯುತ್ತಿದ್ದ ಏನೇನೋ ಸಾಲುಗಳನ್ನು ಬೀದರ್ನ ಕೆಲವು ಪತ್ರಿಕೆಗಳು ಆಗೀಗ ಪ್ರಕಟಿಸಿ ಅವರ ಭ್ರಮೆಗೆ ಗಾಳಿ ಹಾಕುತ್ತಿದ್ದವು. ಅವರು ಅಕ್ಟೋಬರ್ 10ರ ಬೆಳಿಗ್ಗೆ ದೊಡ್ಡ ಯುದ್ಧಕ್ಕೆ ಬಂದವರಂತೆ ಇದ್ದಬದ್ದ ಪೊಲೀಸ್ ಪಡೆಗಳನ್ನೆಲ್ಲಾ ಒಗ್ಗೂಡಿಸಿಕೊಂಡು ಕೊಳಾರದ ʻಮೂಡಿʼಯಲ್ಲಿ (ಮುಖ್ಯ ರಸ್ತೆಯ ತಿರುವಿನಲ್ಲಿ) ಜಮಾಯಿಸಿದ್ದರು. 9ನೇ ತಾರೀಕಿನಂದೇ ಎಲ್ಲ ಹಳ್ಳಿಗಳಲ್ಲಿ ಪೊಲೀಸರ ಓಡಾಟ ಜೋರಾಗಿತ್ತು: ಹೋರಾಟಕ್ಕೆ ಹೋಗದಂತೆ ಜನರಲ್ಲಿ ಭಯ ಉಂಟುಮಾಡುವುದು ಮತ್ತು ಹೊರ ಊರುಗಳಿಂದ ಬಂದಿದ್ದ ಕಾರ್ಯಕರ್ತರು ಕಂಡರೆ ಎತ್ಹಾಕಿಕೊಂಡು ಹೋಗಿ ಕೂಡಿ ಹಾಕುವುದು ಅವರ ಉದ್ದೇಶವಾಗಿತ್ತು. ಹಾಗಾಗಿ ಹೊರಗಿನಿಂದ ಬಂದಿದ್ದ ಮುಂದಾಳುಗಳು ಮತ್ತು ಕಾರ್ಯಕರ್ತರು ತಮತಮಗೆ ವಹಿಸಿದ್ದ ಹಳ್ಳಿಗಳಲ್ಲಿ ಮುಚ್ಚುಮರೆಯಲ್ಲೇ ಕೆಲಸ ಮಾಡಬೇಕಾಯಿತು. ಎರಡು ದಿನ ಇರುವಾಗ ಕವಿರಂ ರಾಜ್ಯಾಧ್ಯಕ್ಷ ಬಂಜಗೆರೆ ಜಯಪ್ರಕಾಶ್ (ಜೆಪಿ) ಅವರೂ ಬಂದು ಸೇರಿಕೊಂಡರು. ಅಕ್ಟೋಬರ್ 9ರ ರಾತ್ರಿ ರಾಜ್ಯ ಸಮಿತಿ ಸದಸ್ಯರು, ಹೊರಗಿನಿಂದ ಬಂದಿದ್ದ ಮತ್ತು ಸ್ಥಳೀಯ ಪ್ರಮುಖ ಕಾರ್ಯಕರ್ತರು ಸೇರಿ ಮರುದಿನದ ಹೋರಾಟದ ಸಿದ್ಧತೆಗಳನ್ನು ಸಮೀಕ್ಷೆ ಮಾಡಿ, ಕೊನೇ ಹಂತದ ತಯಾರಿಗಳನ್ನು ಪ್ಲಾನ್ ಮಾಡಲಾಯಿತು.

ಅಕ್ಟೋಬರ್ 10ನೇ ತಾರೀಕು ಬೆಳಗಾಗುತ್ತಿದ್ದಂತೆ ಎಲ್ಲೆಲ್ಲೂ ಪೊಲೀಸರು ಜೀಪುಗಳಲ್ಲಿ ಸುತ್ತುತ್ತ ಜನರಿಗೆ ಬೆದರಿಕೆ ಹಾಕತೊಡಗಿದರು. ಒಂದು ರೀತಿ ಉದ್ವೇಗದ ವಾತಾವರಣ ಎಲ್ಲೆಡೆ ಭಾಸವಾಗುತ್ತಿತ್ತು. ಎಲ್ಲ ಹಳ್ಳಿಗಳಿಂದ ಹತ್ತೂವರೆಗೆಲ್ಲಾ ಜನರು ಬಂದು ಕೊಳಾರ ಮೂಡಿಯಲ್ಲಿ ನೆರೆಯತೊಡಗಿದರು. ಜೆಪಿ ಕೊಳಾರ ಹಳ್ಳಿಯೊಳಗೆ ಮತ್ತು ಪ್ರಧಾನ ಕಾರ್ಯದರ್ಶಿ ಉಜ್ಜನಿಗೌಡ ಹಜ್ಜರಗಿಯಲ್ಲಿ ಇದ್ದುಕೊಂಡು ಪರಿಸ್ಥಿತಿಯನ್ನು ಅವಲೋಕಿಸುತ್ತ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ನಾನು ಮೂಡಿಯಲ್ಲೇ ಇದ್ದು ಎಲ್ಲರನ್ನೂ ಮಾತಾಡಿಸುತ್ತ ಧೈರ್ಯ, ಹುಮ್ಮಸ್ಸು ತುಂಬುವ ಕೆಲಸ ಮಾಡುತ್ತಿದ್ದೆ. ಬೀದರ್ನ ಎಲ್ಲ ಪತ್ರಕರ್ತರೂ ವಾರ್ತಾ ಇಲಾಖೆಯ ವಾಹನದಲ್ಲಿ ಬಂದು ಕಾಯುತ್ತಿದ್ದರು. ಸಾಮಾನ್ಯವಾಗಿ ಇಂಥ ಹೋರಾಟಗಳಲ್ಲಿ ಪೊಲೀಸ್ ಅಧಿಕಾರಿಗಳು ಮುಂದಾಳುಗಳನ್ನು ಮೊದಲು ಬಂಧಿಸಿ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು, ನಂತರ ಜನರ ಮೇಲೆ ಲಾಠಿ ಬೀಸುತ್ತಾರೆ. ಅದೇ ರೀತಿ ನನ್ನನ್ನೂ ಕರೆದೊಯ್ದು ಜೀಪಿನಲ್ಲಿ ಕೂರಿಸಿಕೊಂಡರು. ಆದರೆ ಸ್ವಲ್ಪ ಹೊತ್ತಿನೊಳಗೆ ನಾನು ಅಲ್ಲಿದ್ದ ಸಿಬ್ಬಂದಿಯ ಕಣ್ಣು ತಪ್ಪಿಸಿ ಪುನಃ ಜನರ ನಡುವೆ ಹೋಗಿ ಸೇರಿಕೊಂಡೆ.
ʼವೀರಾಧಿವೀರʼ ನರಸಪ್ಪ !
ಸುಮಾರು ಒಂದು ಸಾವಿರದಷ್ಟು ಜನರು ಸೇರಿದ್ದರು, ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿದ್ದರು. ಕವಿರಂ ಮತ್ತು ಹೋರಾಟ ಸಮಿತಿಯ ಎಲ್ಲ ಮುಂದಾಳುಗಳೂ ಬಂದು ಸೇರಿದರು. ಜನರನ್ನು ರಸ್ತೆಯ ಒಂದೇ ಮಗ್ಗುಲಲ್ಲಿ ಸಾಲು ಮಾಡಿ, “ಪ್ರತಿಭಟನಾ ಮೆರವಣಿಗೆ ಶಾಂತಿಯುತವಾಗಿರಬೇಕು, ಕಲ್ಲು ತೂರುವುದು ಮುಂತಾಗಿ ಯಾವುದೇ ಅಹಿತಕರ ಘಟನೆಗಳಿಗೆ ದಾರಿ ಮಾಡಕೂಡದು …” ಮುಂತಾಗಿ ನಿರ್ದೇಶನಗಳನ್ನು ಮತ್ತೊಮ್ಮೆ ನೀಡಿ, ಹನ್ನೊಂದು ಗಂಟೆಯ ಹೊತ್ತಿಗೆ ಮೆರವಣಿಗೆ ಹೊರಡಿಸಲಾಯತು. ತಕ್ಷಣವೇ ನರಸಪ್ಪ, ಯಾವುದೇ ನಿಷೇಧಾಜ್ಞೆ ಇರದಿದ್ದರೂ ವೀರಾಧಿವೀರನಂತೆ ʻಛಾರ್ಜ್!ʼ ಎಂದು ಆದೇಶ ಕೊಟ್ಟುಬಿಟ್ಟರು. ಕಾನೂನು ಪ್ರಕಾರ ಲಾಠಿ ಚಾರ್ಜ್ ಆದೇಶವನ್ನು ನಾಗರಿಕ ಅಧಿಕಾರಿ – ಇಲ್ಲಿ ಹಾಜರಿದ್ದ ತಹಸೀಲ್ದಾರ್ – ಕೊಡಬೇಕಿತ್ತು. ಆದರೆ ತಹಸೀಲ್ದಾರ್ ಆದೇಶ ಕೊಡಲಿಲ್ಲ ಎಂದು ಪತ್ರಕರ್ತರಿಂದ ಆಮೇಲೆ ತಿಳಿಯಿತು. ನನ್ನನ್ನು ಬಂಧಿಸಲು ಬಂದಾಗ ಮಹಿಳೆಯರೂ ಸೇರಿದಂತೆ ಜನರು ನನ್ನ ಸುತ್ತ ಕೋಟೆ ಕಟ್ಟಿಕೊಂಡು ಬಹಳ ಹೊತ್ತು ತಡೆದರು. ಆದರೆ ಪೊಲೀಸರು ಅವರನ್ನೆಲ್ಲ ನಿರ್ದಯವಾಗಿ ಬಡಿದು ಚದುರಿಸಿದರು. ಎಷ್ಟು ಬಡಿದಿದ್ದರು ಮತ್ತು ಜನರು ಎಷ್ಟು ದಿಟ್ಟವಾಗಿ ಪ್ರತಿರೋಧ ತೋರಿದ್ದರು ಎಂದರೆ, ಅಲ್ಲೆಲ್ಲ ಬಳೆ ಚೂರುಗಳು ಚೆಲ್ಲಾಡಿದ್ದವು, ಕಂಟೆಪ್ಪ ಕೋಟೆ ಎಂಬ ಬಡ ರೈತರ ಎರಡೂ ಕೈಗಳು ಬಾತುಕೊಂಡು ಒಂದು ವಾರವಾದರೂ ಅಂಕುಡೊಂಕಾಗಿ ಕಾಣುತ್ತಿದ್ದವು.
ನನ್ನನ್ನು ಒಬ್ಬ ಪೇದೆ ಕಂಕುಳಿನಿಂದ, ಮತ್ತೊಬ್ಬರು ಕಾಲನ್ನು ಹಿಡಿದು ಅಂತರಿಕ್ಷದಲ್ಲಿ ಅಡ್ಡಡ್ಡಲಾಗಿ ಕೆಡವಿಕೊಂಡು, ಸುತ್ತಲೂ ಆರು ಜನ ಪೊಲೀಸರು ನಿಂತು ಒಂದೇ ಸಮನೆ ಲಾಠಿಗಳಿಂದ ಹೊಡೆದರು. ಸಂತ್ರಸ್ತ ಹಳ್ಳಿಗಳಲ್ಲೊಂದಾದ ಬಕಚೌಡಿಯವರಾದ ಶಂಕರ್ ಎಂಬ ಸರ್ಕಲ್ ಇನ್ಸ್ಪೆಕ್ಟರ್ ʻಲೇ, ಹೊಡಿಬೇಡಿ ಹೊಡಿಬೇಡಿʼ ಎಂದು ತಡೆಯಲು ನೋಡಿದರು. ಆದರೆ ಪೊಲೀಸರು ಅವರ ಮಾತಿಗೆ ಬೆಲೆ ಕೊಡಲಿಲ್ಲ. ದೇಹದ ಮುಂಭಾಗದಲ್ಲಿ ತೊಡೆಯಿಂದ ಪಾದದ ತನಕ ಯಥೇಚ್ಛ ಹೊಡೆದರು; ಮುಖ್ಯವಾಗಿ ಮೊಣಕಾಲಿನ ಮಂಡಿ ಚಿಪ್ಪಿಗೆ ಸಿಕ್ಕಾಪಟ್ಟೆ ಹೊಡೆದರು, ಅದರಿಂದಾದ ಡ್ಯಾಮೇಜಿನಿಂದಾಗಿ ನನಗೆ ಈಗ ನೆಲದ ಮೇಲೆ ಕೂರುವುದು, ಮೆಟ್ಟಿಲುಗಳನ್ನು ಹತ್ತಿಳಿಯುವುದು ಸಾಧ್ಯವಾಗುತ್ತಿಲ್ಲ. ಆಮೇಲೆ ನನ್ನನ್ನು ಬೋರಲಾಗಿ ಹಿಡಿದುಕೊಂಡು ಪುನಃ ಹೊಡೆದರು. ನಂಬುವುದು ಕಷ್ಟ: ಒಂದೆರಡಲ್ಲ, ಹತ್ತಿಪ್ಪತ್ತಲ್ಲ, ನೂರಾರು ಏಟುಗಳು. ನಾನು ಮನಸ್ಸು ಗಟ್ಟಿ ಮಾಡಿಕೊಂಡು ಸಹಿಸಿದೆ. ʻಎಲ್ಲೋ ಒಂದು ಐವತ್ತು ಏಟು ಬಿದ್ದಿರಬಹುದು, ಸಾಲದು, ಇನ್ನೂರು ಏಟಾದರೂ ಬೀಳಬೇಕಿತ್ತು, ಎಷ್ಟು ಸಹಿಸಿಕೊಳ್ಳಬಲ್ಲೆ ಎಂದು ನೋಡಬೇಕಿತ್ತುʼ ಎಂದು ಮನಸ್ಸಿನಲ್ಲಿ ಅಂದುಕೊಂಡೆ. ಆದರೆ ಮಾರನೇ ದಿನ ನಮ್ಮನ್ನೆಲ್ಲ ಜೈಲಿಗೆ ಹಾಕಿದಾಗ ನೋಡಿದರೆ ಕಾಲುಗಳು ತೊಡೆಯಿಂದ ಪಾದದ ತನಕ ರಕ್ತ ಹೆಪ್ಪುಗಟ್ಟಿ ಕರ‍್ರಗಾಗಿ ಹೋಗಿದ್ದವು.
ಯುವಕರ, ಮಹಿಳೆಯರ ದಿಟ್ಟ ಪ್ರತಿರೋಧ
ನಮ್ಮ ಬಹುಪಾಲು ಕಾರ್ಯಕರ್ತರಿಗೆ ಸಾಕಷ್ಟು ಲಾಠಿ ಏಟುಗಳು ಬಿದ್ದವು. ಜೆಪಿಯನ್ನು ಚಿಕ್ಕಮಠ ಎಂಬ ಎಸ್ಸೈ ಕೊಳಾರದ ಮಧ್ಯದ ಚೌಕದಲ್ಲಿ ನಿಲ್ಲಿಸಿಕೊಂಡು ಎಷ್ಟು ಹೊಡೆದನೆಂದರೆ, ಒಂದು ಲಾಠಿ ತುಂಡಾಗಿ ಇನ್ನೊಂದನ್ನು ತರಿಸಿಕೊಂಡು ಮನಸ್ವಿಯಾಗಿ ಹೊಡೆದ. ಇದನ್ನು ತಪ್ಪಿಸಲು ಪ್ರಯತ್ನಿಸಿದ ಜನರೂ ಏಟುಗಳನ್ನು ತಿಂದರು. ಆದರೆ ನಂತರ ಹಳ್ಳಿಯ ಯುವಕರು ಪೊಲೀಸರಿಗೆ ಚೆನ್ನಾಗಿ ಚಳ್ಳೆಹಣ್ಣು ತಿನ್ನಿಸಿದರು. ಮೂಡಿಯ ಪಕ್ಕದಲ್ಲಿ ಒಂದು ಎಕರೆಯಷ್ಟು ಹೊಲ ಉಳುಮೆಯಾಗಿದ್ದು ಮಳೆಯಿಂದ ಕೆಸರಾಗಿತ್ತು. ಅದರ ಹಿಂಭಾಗದಲ್ಲೊಂದು ಮಾವಿನ ತೋಪಿತ್ತು. ಅಲ್ಲಿ ಜಮಾಯಿಸಿದ ಯುವಕರು ಪೊಲೀಸರ ಮೇಲೆ ಕಲ್ಲಿನ ಮಳೆಗರೆದರು. ಪೊಲೀಸರು ಅವರನ್ನು ಅಟ್ಟಿಸಿಕೊಂಡು ಹೋಗಿ ಕೆಸರಿನಲ್ಲಿ ಬೂಟುಗಳು ಹೂತು ಸಿಕ್ಕಿಬಿದ್ದು ಕಲ್ಲೇಟು ತಿನ್ನಬೇಕಾಯಿತು. ಯುವಕರ ದಿಟ್ಟತನ ಎಷ್ಟಿತ್ತೆಂದರೆ ಪೊಲೀಸರು ಸಿಡಿಸಿದ ಅಶ್ರುವಾಯು ಸೆಲ್ಗಳನ್ನು ಎತ್ತಿ ಪುನಃ ಅವರ ಕಡೆಗೇ ಎಸೆಯುತ್ತಿದ್ದರು.
ಮಹಿಳೆಯರದ್ದು ಇನ್ನೊಂದು ಬಗೆಯ ದಿಟ್ಟತನ. ಲಾಠಿ ಚಾರ್ಜ್ ಬಿರುಸಾದೊಡನೆ ಎಲ್ಲ ಮಹಿಳೆಯರೂ ಹಳ್ಳಿಗಳ ಕಡೆ ಓಡತೊಡಗಿದರು. ಆಗ ಹಜ್ಜರಗಿಯ ಶಾಂತಮ್ಮಕ್ಕ ನಿಂತುಕೊಂಡು, “ಏ ರಂ…ರಾ! ಅವರನ್ನೆಲ್ಲ ಹುಲಿ ಬಾಯಿಗೆ ಹಾಕಿ ನಾವು ಓಡಿಹೋಗೋದೇನ್ರೇ? ಬರ‍್ರಿ!” ಎಂದು ಕೂಗಿದೊಡನೆ ಎಲ್ಲ ಮಹಿಳೆಯರೂ ವಾಪಸ್ ಜಮಾಯಿಸಿಬಿಟ್ಟರು. ಪೊಲೀಸರಿಗೆ “ಮಾ ಸೂರರಿದ್ದೀರಿಲ್ಲ? ಬರ‍್ರಿ, ಅದೇಟ ಹೊಡೀತೀರಿ ನಮಗೂ ಹೊಡೀರಿ ಬರ‍್ರಿ… ” ಎಂದು, “ಸೆರಗು ಸೊಂಟಕೆ ಸುತ್ತಿಕೊ ತಂಗ್ಯಮ್ಮ…” ಎಂಬ ಹಾಡಿನಂತೆ, ನರಸಪ್ಪನಿಗೆ ಸವಾಲೊಡ್ಡಿ ನಿಂತುಬಿಟ್ಟರು. ಅಷ್ಟು ಹೊತ್ತಿಗೆ ಪೊಲೀಸರೂ ಹೈರಾಣಾಗಿದ್ದರು. ನರಸಪ್ಪ ಸದ್ಯಕ್ಕೆ ತನ್ನ ಪಡೆಗಳನ್ನು ಹೊರಡಿಸಿಕೊಂಡು ವಾಪಸ್ ಹೋದರು. ಆದರೆ ಮಾರನೇ ದಿನ ಕೊಳಾರ ಮತ್ತು ಹಜ್ಜರಗಿಯಲ್ಲಿ ಪೊಲೀಸರು ಮನೆಮನೆಗೆ ನುಗ್ಗಿ ಕಾರ್ಯಕರ್ತರಿಗಾಗಿ ಹುಡುಕಾಡಿದರು. ಬಹುತೇಕ ಗಂಡಸರು ಮನೆ ತೊರೆದಿದ್ದರು, ಹಾಗಾಗಿ ಪೊಲೀಸರು ಮಹಿಳೆಯರನ್ನು ಬೆದರಿಸುವ ಪ್ರಯತ್ನ ಮಾಡಿದರು.
ಶಾಂತವಾಗಿ ಪ್ರತಿಭಟಿಸುತ್ತಿದ್ದ ಜನರ ಮೇಲೆ ಯಾವುದೇ ಪ್ರಚೋದನೆ ಇಲ್ಲದೆ ಪೊಲೀಸರು ನಿರ್ದಯವಾಗಿ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಶೆಲ್ ದಾಳಿ ನಡೆಸಿದರೆಂದು ಬೀದರ್ನಲ್ಲೂ ರಾಜ್ಯದ ಇತರೆಡೆಗಳಲ್ಲೂ ಪತ್ರಿಕೆಗಳು ಖಂಡಿಸಿ ಬರೆದವು. ಪ್ರಜಾವಾಣಿ ಪತ್ರಿಕೆಯು ಅಕ್ಟೋಬರ್ 12ರಂದು ದೀರ್ಘವಾದ ಅಗ್ರ ಸಂಪಾದಕೀಯ ಪ್ರಕಟಿಸಿ, ಬೀದರ್ ಮಾಲಿನ್ಯದ ಆಳ ಅಗಲಗಳನ್ನು ವಿವರಿಸಿ, ನ್ಯಾಯಯುತವೂ ಶಾಂತಿಯುತವೂ ಆಗಿದ್ದ ಪ್ರತಿಭಟನೆಯ ಮೇಲಿನ ಪೊಲೀಸ್ ದೌರ್ಜನ್ಯವನ್ನು ತೀಕ್ಷ್ಣವಾಗಿ ಖಂಡಿಸಿತು. ಅಲ್ಲದೆ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಮಾಲಿನ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದೂ, ಹೋರಾಟಗಾರರ ಮೇಲಿನ ಪೊಲೀಸ್ ಕೇಸ್ಗಳನ್ನು ಹಿಂಪಡೆಯಬೇಕೆಂದೂ ಒತ್ತಾಯಿಸಿತು. ಟೈಮ್ಸ್ ಆಫ್ ಇಂಡಿಯದ ಹಿರಿಯ ವರದಿಗಾರ್ತಿ ಚಂದ್ರಿಕಾ ಅವರು ಭೇಟಿ ಕೊಟ್ಟು ಮಾಡಿದ ಸಚಿತ್ರ ವರದಿ ಆ ಪತ್ರಿಕೆಯ ರಾಷ್ಟ್ರೀಯ ಆವೃತ್ತಿಯಲ್ಲಿ ಭಾನುವಾರದ ವಿಶೇಷ ಪುರವಣಿಯಲ್ಲಿ ಪ್ರಕಟವಾಯಿತು.
ಹೀಗೆ 10ನೇ ತಾರೀಕು ಹಿಂಗಾರು ಮಳೆಯ ಜೊತೆಗೆ ಒಂದು ಗಂಟೆ ಕಾಲ ಲಾಠಿಗಳ ಮಳೆ ಸುರಿಸಿ, 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. ಮಧ್ಯಾಹ್ನದ ನಂತರ ಕೋರ್ಟಿಗೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಜೈಲಿಗೆ ಹಾಕಲಾಯಿತು. ಹೊರಗಿನಿಂದ ಬಂದ ಕಾರ್ಯಕರ್ತರಲ್ಲಿ ನಾಲ್ವರು ಮಹಿಳೆಯರು ಸಹ ಬಂಧನಕ್ಕೊಳಗಾದರು. ಜೆಪಿಗೆ ತೀವ್ರವಾದ ಡಯಾಬಿಟಿಸ್ ಇದ್ದುದರಿಂದ ಕೋರ್ಟ್ ಆದೇಶದಂತೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು; ಆದರೆ ಅವರ ಎರಡೂ ಕೈಗಳಿಗೆ ಸರಪಳಿ ಹಾಕಿ ಮಂಚಕ್ಕೆ ಕಟ್ಟಿ, ಒಬ್ಬ ಪೇದೆಯನ್ನು ಕಾವಲಿಗೆ ಇಟ್ಟರು! ಇದನ್ನು ನೋಡಿ ನಮ್ಮ ರಾಜ್ಯ ಸಮಿತಿ ಸದಸ್ಯ ಬಿ.ಜಿ. ಸಿದ್ಬಟ್ಟೆಯವರ ಮಡದಿ, ಜೆಪಿಯ ಕವಿತೆಗಳನ್ನು ಬಹುವಾಗಿ ಮೆಚ್ಚುತ್ತಿದ್ದ, ಸ್ವತಃ ಬರಹಗಾರ್ತಿಯೂ ಆಗಿದ್ದ ಕಾಲೇಜು ಉಪನ್ಯಾಸಕಿ ಯಶೋದಮ್ಮ ಅವರಂತೂ ಕಣ್ಣೀರು ಸುರಿಸಿದರು; ಜನರೆಲ್ಲ ಪೊಲೀಸರಿಗೆ ಸಾಕಷ್ಟು ಛೀಮಾರಿ ಹಾಕಿದರು. ಆದರೆ ಜಿಲ್ಲಾ ಪೊಲೀಸ್ ಮತ್ತು ಸಿವಿಲ್ ಅಧಿಕಾರಿಗಳ ವರ್ತನೆಯನ್ನು ನಾಗರಿಕ ಅಥವಾ ಕಾನೂನಿನ ನಡವಳಿಕೆಯ ಬದಲು ಕಂಪನಿಗಳ ಹಣದ ಥೈಲಿ ನಿರ್ದೇಶಿಸುತ್ತಿತ್ತಲ್ಲ. ಹಾಗಾಗಿ ಇದೆಲ್ಲ ಮಾಫಿಯಾಯಿತು.
ಕೋರ್ಟಿನಲ್ಲಿ 27 ಜನರ ಮೇಲೆ ಕೇಸ್ ಹಾಕಲಾಗಿತ್ತು; ಅಲ್ಲದೆ, ನಮ್ಮನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ 12ರಂದು ಹಳೇ ಬಸ್ ಸ್ಟಾಂಡ್ ಬಳಿ ರಸ್ತೆ ತಡೆ ನಡೆಸಿದ ಮಾರುತಿ ಭಾವಿದೊಡ್ಡಿ, ಹಜ್ಜರಗಿಯ ಹಿರೇ ಮನುಷ್ಯ ಶರಣಯ್ಯಾ ಸ್ವಾಮಿ, ಕೊಳಾರದ ಕೆಲವು ಯುವಕರು ಸೇರಿದಂತೆ ಏಳೆಂಟು ಜನರನ್ನು ಸಹ ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಎಲ್ಲರಿಗೂ ಜಾಮೀನು ದೊರೆತ ನಂತರ ಕೇಸು ಎರಡು ವರ್ಷಕ್ಕೂ ಹೆಚ್ಚು ಕಾಲ ನಡೆಯಿತು. ಅದನ್ನು ರಾಮ್ ರತನ್ ಎಂಬ ಅತಿ ಹಿರಿ ವಯಸ್ಸಿನ ವಕೀಲರ ಕಿರಿಯ ಸಹೋದ್ಯೋಗಿಗಳಾಗಿದ್ದ ಗೋಡಬೋಲೆ ಮತ್ತು ಮಾಣಿಕರಾವ್ ಪಾಟೀಲ್ ಎಂಬ ಯುವ ವಕೀಲರು (ವಿಶೇಷವಾಗಿ ಮಾಣಿಕರಾವ್ ಪಾಟೀಲ್) ಆರಂಭದಿಂದ ಕಡೆಯವರೆಗೂ ಉಚಿತವಾಗಿ ನಡೆಸಿಕೊಟ್ಟರು.
ಜಾಮೀನು ದೊರೆತರೂ ಜೈಲು ತಪ್ಪಲಿಲ್ಲ !
ಅಕ್ಟೋಬರ್ 11ರಂದು ಹಳ್ಳಿಗರು ಶೂರಿಟಿ ನೀಡಿದ ನಂತರ ಎಲ್ಲರಿಗೂ ಜಾಮೀನು ದೊರೆತಿತ್ತು. ಆದರೆ ಇಷ್ಟರಿಂದಲೇ ಜಿಲ್ಲಾಡಳಿತಕ್ಕೆ ಕಂಪನಿಗಳ ಥೈಲಿಯ ಋಣ ತೀರಲಿಲ್ಲವೇನೋ! ಜಾಮೀನು ದೊರೆತು ಎಲ್ಲರೂ ಜೈಲಿನಿಂದ ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಜೈಲಿನ ಗೇಟಿಗೇ ಪೊಲೀಸ್ ವ್ಯಾನ್ ತಂದು ನಿಲ್ಲಿಸಿದರು; ಮಹಿಳೆಯರನ್ನು ಮಾತ್ರ ಬಿಡುಗಡೆ ಮಾಡಿ, ನಮ್ಮೆಲ್ಲರನ್ನೂ ಪುನಃ ವ್ಯಾನಿಗೆ ತುಂಬಿಸಿಕೊಂಡರು. ಹೀಗೆ ನಮ್ಮನ್ನು ಮತ್ತೆ ಬಂಧಿಸಿ ಸಾಗಿಸಿದ್ದು ಜನರಿಗೆ ತಿಳಿಯದಂತೆ ವ್ಯಾನಿನ ಕಿಟಕಿಗಳನ್ನೆಲ್ಲ ಹೊರಗಿನಿಂದ ಟಾರ್ಪಲಿನಿಂದ ಭದ್ರವಾಗಿ ಮುಚ್ಚಿ ಕರೆದೊಯ್ಯಲಾಯಿತು. ಹಿಂಬಾಲಿಸಿ ಬರಬಹುದಾದ ಪತ್ರಿಕಾ ಮಿತ್ರರು ಅಥವಾ ಹಳ್ಳಿಗರಿಗೆ ದಾರಿ ತಪ್ಪಿಸಲು ಎಲ್ಲೆಲ್ಲೋ ಸುತ್ತಿ ಕೊನೆಗೆ ಜನವಾಡಾ ಠಾಣೆಗೆ ಒಯ್ದು ಕೂಡಿದರು.
ನಾಯಕ್ ಎಂಬ ಡಿವೈಎಸ್ಪಿ ಜೆಪಿಯನ್ನು ತನ್ನ ಮೇಜಿನ ಮುಂದೆ ನಿಲ್ಲಿಸಿಕೊಂಡು ಕಾರಣವೇ ಇಲ್ಲದೆ, ಕೇವಲ ತನ್ನ “ಪೌರುಷ” ಮೆರೆಯುವುದಕ್ಕೆ ಏನೇನೋ ಕೂಗಾಡಿದರು; ಕಂಪನಿಯವರಿಂದ ತಿಂದಿದ್ದನ್ನು ಮಾತುಗಳಲ್ಲಿ ಕಾರಿಕೊಂಡರು. ತನ್ನ ರಿವಾಲ್ವರ್ ತೆಗೆದು ಆಡಿಸುತ್ತ, “ಎನ್ಕೌಂಟರ್ ಮಾಡಿಬಿಡ್ತೀನಿ ಹೂಂ! ಲೆಟ್ ಎನ್ಕ್ವೈರಿ ಫಾಲೋ (ಆಮೇಲೆ ಬೇಕಾದರೆ ವಿಚಾರಣೆ ನಡೆಯಲಿ)” ಎಂದೆಲ್ಲ ಹೂಂಕರಿಸಿದರು. ರಾತ್ರಿಯೆಲ್ಲ ಠಾಣೆಯಲ್ಲೇ ಇರಿಸಿಕೊಂಡು, ಮಾರನೇ ದಿನ ತಹಸೀಲ್ದಾರ್ ಕಡೆಯಿಂದ ಐಪಿಸಿ 107 ಕೇಸು ದಾಖಲಿಸಿ, ಯಾವುದೇ ವಿಚಾರಣೆಯನ್ನೂ ನಡೆಸದೆ ಪುನಃ ಜೈಲಿಗೆ ಹಾಕಿದರು. ಜಿಲ್ಲಾಡಳಿತದ ಕುತಂತ್ರಿ ಬುದ್ಧಿ ಯಾವ ಮಟ್ಟಕ್ಕೆ ಇಳಿದಿತ್ತೆಂದರೆ, ನಮ್ಮ ಮೇಲೆ 107 ಕೇಸ್ ಹಾಕಿ ಜೈಲಿಗೆ ಕಳಿಸಿದ ತಹಸೀಲ್ದಾರರನ್ನು ಕೂಡ ಮೂರು ದಿನ ಅದೃಶ್ಯ ಮಾಡಿಬಿಟ್ಟಿತು!

ಡಿಸಿ ಕಚೇರಿಯೆದುರು ಹಸು-ಕರು ಕಳೇಬರ
10ನೇ ತಾರೀಕು ಹೋರಾಟ, 11ಕ್ಕೆ ಜಾಮೀನು, ಪುನಃ ಬಂಧನ, 12ರಂದು ಪುನಃ ಜೈಲು. ಜಾಮೀನು ಪಡೆದು ಹೊರಗೆ ಬರೋಣವೆಂದರೆ 107 ಕೇಸ್ ಹಾಕಿದ್ದ ತಹಸೀಲ್ದಾರರೇ ನಾಪತ್ತೆ! ಜಿಲ್ಲಾಡಳಿತದ ಈ ಗತಿಗೇಡಿ ನಡವಳಿಕೆಗೊಂದು ಇತಿ ಕಾಣಿಸಲೇಬೇಕಿತ್ತು. ಬಂಧನಕ್ಕೆ ಒಳಗಾಗದೆ ಹಳ್ಳಿಗಳಲ್ಲೇ ಉಳಿದಿದ್ದ ಕವಿರಂ ಸಂಗಾತಿಗಳು ರೈತರೊಂದಿಗೆ ಚರ್ಚಿಸಿ, ಎಲ್ಲ ಹಳ್ಳಿಗಳಿಗೂ ಸುದ್ದಿ ಕಳಿಸಿ, 12ರಂದೇ ಜಿಲ್ಲಾಧಿಕಾರಿ ಕಚೇರಿಯೆದುರು ಟೆಂಟ್ ಹಾಕಿ ಸುರಿವ ಮಳೆಯಲ್ಲೇ ಧರಣಿ ಆರಂಭಿಸಲಾಯಿತು. ಕಂಪನಿಗಳ ಮತ್ತು ಅಧಿಕಾರಿಗಳ ದುರಾದೃಷ್ಟವೋ ಎಂಬಂತೆ ಅದೇ ರಾತ್ರಿ ಕೊಳಾರದಲ್ಲಿ ಒಂದು ಹಸು ಮತ್ತು ಒಂದು ಎಮ್ಮೆ ಕರು ಸತ್ತು ಹೋದವು. ಜನರು ಅವುಗಳನ್ನು ಟ್ರಾಲಿಯಲ್ಲಿ ಹೇರಿಕೊಂಡು ತಂದು ಜಿಲ್ಲಾಧಿಕಾರಿ ಕಚೇರಿಯ ಗೇಟಿನೆದುರು ಹಾಕಿದರು. ಹೋಗುಬರುವವರೆಲ್ಲ ಅದನ್ನು ನೋಡಿ ಆಡಳಿತಗಾರರಿಗೆ ಹಿಡಿಶಾಪ ಹಾಕಿದರು. ದಿನವಿಡೀ ಅಲ್ಲೇ ಬಿದ್ದಿದ್ದ ಅವು ಕಾರ್ಖಾನೆಗಳ ಮಾಲಿನ್ಯದ ಸಮಸ್ಯೆಯನ್ನು ಜಗಜ್ಜಾಹೀರು ಮಾಡಿದವು.
ಪ್ರತಿದಿನ ಬೆಳಿಗ್ಗೆ ಹತ್ತೂವರೆಗೆ ಧರಣಿ ಶುರುವಾಗುತ್ತಿತ್ತು; ಮಹಿಳೆಯರು ಮನೆಗೆಲಸ ಮುಗಿಸಿ ಹನ್ನೆರಡು ಗಂಟೆಗೆ ಸರಿಯಾಗಿ ಹಾಜರಾಗುತ್ತಿದ್ದರು. ಪೊಲೀಸ್ ಅಧಿಕಾರಿಗಳನ್ನು ಕಂಡಾಗ ವಿಶೇಷವಾಗಿ ಮಹಿಳೆಯರು ರೋಷಾವೇಶದಿಂದ ಧಿಕ್ಕಾರ ಕೂಗುತ್ತಿದ್ದರು. ಎಸ್ಸೈ ಚಿಕ್ಕಮಠನನ್ನು ಕಂಡರಂತೂ ತರಹೇವಾರಿ ಧಿಕ್ಕಾರ ಕೂಗಿ ಸಾಕುಸಾಕೆಂಬಷ್ಟು ಕಾಡಿದರು. ಜೆಪಿಯನ್ನು ಸರಪಳಿಯಿಂದ ಆಸ್ಪತ್ರೆಯ ಮಂಚಕ್ಕೆ ಕಟ್ಟಿಹಾಕಿದ್ದಕ್ಕೂ ಎಲ್ಲಾ ಕಡೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಮಾಲಿನ್ಯದ ವಿರುದ್ಧ, ಹಾಗೂ ಕಂಪನಿ, ಪೊಲೀಸ್ ಮತ್ತು ಸರ್ಕಾರದ ವಿರುದ್ಧ ಜನರ ರೋಷ ಮುಗಿಲು ಮುಟ್ಟಿತು. ದಿನದಿಂದ ದಿನಕ್ಕೆ ಧರಣಿ ಬಲಗೊಳ್ಳುತ್ತ ಬಂತು. ನಾವು ಬಿಡುಗಡೆ ಮಾಡುತ್ತಿದ್ದ ಹೋರಾಟದ ಸುದ್ದಿಗಳು ಬೀದರ್ನಲ್ಲೂ, ಕೆಲವು ರಾಜ್ಯ ಮಟ್ಟದ ಪತ್ರಿಕೆಗಳಲ್ಲೂ ಪ್ರತಿದಿನ ಪ್ರಕಟವಾಗುತ್ತಿದ್ದವು. ಜಿಲ್ಲಾಡಳಿತದ ಮೇಲೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲೆ ಸಾರ್ವಜನಿಕ ಒತ್ತಡ ತೀವ್ರವಾಯಿತು.
ಇದನ್ನೂ ಓದಿ ಜೋಳಿಗೆ | ಬೀದರ್ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ ಭಾಗ 3
ಬೀದರ್ ಬಂದ್ ಕರೆ – ಕಾರ್ಖಾನೆಗೆ ಬೀಗ
ನಮ್ಮನ್ನು ಜೈಲುಪಾಲು ಮಾಡಿದ್ದಲ್ಲದೆ ಜಾಮೀನು ನೀಡದಂತೆಯೂ ಜಿಲ್ಲಾಡಳಿತ ಕುತಂತ್ರ ಮಾಡಿದ್ದರ ವಿರುದ್ಧ ಜೈಲಿನಲ್ಲಿ ನಾವು ಜಾಮೀನಿಗೆ ಅರ್ಜಿ ಹಾಕುವುದಿಲ್ಲವೆಂದೂ ನಮ್ಮನ್ನು ಬೇಷರತ್ ಬಿಡುಗಡೆ ಮಾಡಬೇಕೆಂದೂ ಪಟ್ಟು ಹಿಡಿದೆವು. ಮೂರು ದಿನ ಕಳೆದರೂ ಬಿಡುಗಡೆಯ ಸೂಚನೆ ಕಾಣದಿದ್ದಾಗ ಮಾರನೇ ದಿನದಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಜೈಲಿನ ಅಧಿಕಾರಿಗಳಿಗೆ ತಿಳಿಸಿ ಪತ್ರಿಕೆಗಳಿಗೂ ಸುದ್ದಿ ನೀಡಿದೆವು. ನಮ್ಮೊಂದಿಗೆ ಸೌಜನ್ಯದಿಂದಲೇ ನಡೆದುಕೊಂಡಿದ್ದ ಜೈಲು ಅಧಿಕಾರಿಗಳು ಉಪವಾಸ ಬೇಡವೆಂದು ಮನವಿ ಮಾಡಿದರೂ ನಾವು ಜಗ್ಗಲಿಲ್ಲ. ಘೋಷಿಸಿದ್ದಂತೆ ಮರುದಿನ ಬೆಳಿಗ್ಗೆ ನಾವು ನಾಶ್ಟಾ ತೆಗೆದುಕೊಳ್ಳದೆ ಉಪವಾಸ ಆರಂಭಿಸಿಯೇ ಬಿಟ್ಟೆವು. ಅಲ್ಲದೆ, ಅದರ ಮರುದಿನ (ಅಕ್ಟೋಬರ್ 17ರಂದು) ಬೀದರ್ ಬಂದ್ಗೆ ಕರೆ ನೀಡಿ ವ್ಯಾಪಕ ಪ್ರಚಾರ ಆಗುವಂತೆ ನೋಡಿಕೊಂಡೆವು. ಆದಾಗಲೇ ಮಾಲಿನ್ಯದ ಪ್ರಕೋಪ ಬೀದರ್ ನಗರಕ್ಕೂ ತೀವ್ರವಾಗಿ ತಟ್ಟಿತ್ತಾದ್ದರಿಂದ, ಸಣ್ಣಪುಟ್ಟ ʻಚಾ ದುಕಾನ್ʼಗಳೂ ಮೊದಲ್ಗೊಂಡು, ಬೀದರ್ ಬಂದ್ ನೂರಕ್ಕೆ ನೂರು ಯಶಸ್ವಿಯಾಗುವುದು ಖಾತ್ರಿಯಾಗಿತ್ತು. ಮತ್ತೊಂದೆಡೆ, ಬೀದರ್ ಜಿಲ್ಲೆಯ ಹಿರಿಯ ರಾಜಕೀಯ ನಾಯಕರೂ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ಭೀಮಣ್ಣಾ ಖಂಡ್ರೆಯವರನ್ನು ʻಇಷ್ಟೊಂದು ನ್ಯಾಯಯುತವಾದ ರೈತರ ಹೋರಾಟಕ್ಕೆ ನೀವೇಕೆ ಬೆಂಬಲ ನೀಡುತ್ತಿಲ್ಲ?ʼ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಾಗಲೇ ಸಮಸ್ಯೆಯ ಬಗ್ಗೆ ಅರಿವಿದ್ದ ಅವರು ಕೂಡಲೇ ಧರಣಿಯ ಬಳಿ ಬಂದು ಬೆಂಬಲ ಘೋಷಿಸಿದ್ದಲ್ಲದೆ, ಡಿಸಿಯನ್ನು ಭೇಟಿ ಮಾಡಿ, ಸಂಜೆಯೊಳಗೆ ಕಾರ್ಖಾನೆಗಳನ್ನು ಬಂದ್ ಮಾಡಿಸದಿದ್ದರೆ ತಾನೇ ಐದು ಸಾವಿರ ಜನರೊಂದಿಗೆ ಹೋಗಿ ಕಾರ್ಖಾನೆಗೆ ಬೀಗ ಹಾಕುವುದಾಗಿ ತೀಕ್ಷ್ಣ ಎಚ್ಚರಿಕೆ ನೀಡಿದರು.
ಹೀಗೆ ಎಲ್ಲಾ ರೀತಿಯಿಂದಲೂ ಎಲ್ಲಾ ಕಡೆಯಿಂದಲೂ ಒತ್ತಡ ಬಂದ ಫಲವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆ ಬಂದ್ ಮಾಡಲು ವಿಶೇಷ ಆದೇಶದೊಂದಿಗೆ ಹಿರಿಯ ಅಧಿಕಾರಿಗಳನ್ನು ವಿಮಾನದ ಮೂಲಕ ಕಳಿಸಿಕೊಟ್ಟಿತು. ಸಂಜೆ 4 ಗಂಟೆಯ ಹೊತ್ತಿಗೆ ಭೀಮಣ್ಣಾ ಖಂಡ್ರೆಯವರೊಂದಿಗೆ ಡಿಸಿ ಮತ್ತು ಮಾ.ನಿ.ಮಂಡಳಿ ಅಧಿಕಾರಿಗಳು ಹೋಗಿ ಸಾಂಕೇತಿಕವಾಗಿ ಎಸ್ಓಎಲ್ ಕಾರ್ಖಾನೆಗೆ ಬೀಗ ಜಡಿದರು. ಇತ್ತ 107 ಕೇಸಿನಲ್ಲಿ ನಮ್ಮನ್ನೂ ಸಂಜೆಯೊಳಗೆ ಬೇಷರತ್ತಾಗಿ ಬಿಡುಗಡೆ ಮಾಡಲಾಯಿತು. ರೈತರ, ಯುವಕರ ಉತ್ಸಾಹ ಮೇರೆ ಮೀರಿತು. ಜೈಲಿನಿಂದ ನನ್ನನ್ನೂ ಜೆಪಿಯನ್ನೂ ಹೆಗಲ ಮೇಲೆ ಹೊತ್ತುಕೊಂಡು ಜೈಕಾರ ಹಾಕುತ್ತಾ ಧರಣಿಯ ಸ್ಥಳಕ್ಕೆ ಮೆರವಣಿಗೆ ನಡೆಸಿದರು. ಖಂಡ್ರೆಯವರೂ ಅಲ್ಲೇ ಇದ್ದರು. ಬೆಂಗಳೂರಿನಿಂದ ಮಾನವ ಹಕ್ಕು ಚಳವಳಿಗಾರ ಪ್ರೊ. ನಗರಿ ಬಾಬಯ್ಯನವರೂ ಬಂದಿದ್ದರು. ಸಂಭ್ರಮದ ವಿಜಯೋತ್ಸವ ಆಚರಣೆ ನಡೆಯಿತು. ಖಂಡ್ರೆಯವರು ನನ್ನನ್ನು ಹೊಗಳಿ, ʻನೇತಾವೋಂ ಕಾ ನೇತಾʼ (ನಾಯಕರ ನಾಯಕ) ಎಂದು ಘೋಷಿಸಿಬಿಟ್ಟರು! ಬಾಬಯ್ಯನವರು ತನಗೆ ಮಗಳು-ಅಳಿಯ ಉಡುಗೊರೆಯಾಗಿ ನೀಡಿದ್ದ ಹೊಸ ವಾಚನ್ನು ನನಗೆ ಬಳುವಳಿಯಾಗಿ ನೀಡಿ ಖಂಡ್ರೆಯವರಿಂದ ನನ್ನ ಕೈಗೆ ಕಟ್ಟಿಸಿದರು. ಎಲ್ಲೆಡೆ ಸಂಭ್ರಮ ಉಕ್ಕಿ ಹರಿಯುತ್ತಿತ್ತು. ಇಡೀ ಬೀದರ್ ನಗರವೇ ಸಂಭ್ರಮಪಟ್ಟಂತೆ ನಮಗೆ ಭಾಸವಾಯಿತು.
ಪರಸ್ಪರ ಅಭಿನಂದನೆಗಳನ್ನು ವಿನಿಮಯ ಮಾಡಿಕೊಂಡು, ಖಂಡ್ರೆಯವರಿಗೂ ಧನ್ಯವಾದ ಸಲ್ಲಿಸಿ ಎಲ್ಲರೂ ಹಳ್ಳಿಗಳಿಗೆ ತೆರಳಿದೆವು. ಕೊಳಾರದಲ್ಲಿ ವಿಜಯೋತ್ಸವದ ಮೆರವಣಿಗೆ ಮತ್ತು ಜನರನ್ನು ಅಭಿನಂದಿಸಲು ಚುಟುಕಾದ ಸಭೆ ನಡೆಸಿ, ನಿಜಾಂಪುರದಲ್ಲಿ ಎಲ್ಲರೂ ಸೇರಿಕೊಂಡೆವು. ರಾತ್ರಿ ಬಹು ಹೊತ್ತಿನವರೆಗೆ ಯಾರೂ ಮನೆಗಳಿಗೆ ಹೋಗದೆ, ಬಸವೇಶ್ವರ ಚೌಕದಲ್ಲೇ ನೆರೆದಿದ್ದರು. ಗುಲಾಲ್ಗಳ (ಕುಂಕುಮ ಮತ್ತಿತರ ಬಣ್ಣಗಳ ಪುಡಿ) ತೂರಾಟ ನಡೆಯಿತು. ನಮಗೆಲ್ಲ ಸಿಹಿಯೂಟ ದೊರೆಯಿತು. ಮಾರನೇ ದಿನ ಅಲ್ಲಿ ಮತ್ತೊಮ್ಮೆ ವಿಜಯೋತ್ಸವದ ಸಭೆ ನಡೆಯಿತು. ಪಕ್ಕದ ಹಜ್ಜರಗಿ, ಕಮಾಲಪೂರ ಮತ್ತು ಬೆಳ್ಳೂರಿನ ಉತ್ಸಾಹಿಗಳೂ ಅಲ್ಲಿಗೇ ಬಂದು ಕೂಡಿಕೊಂಡರು. ಅಲ್ಲಿ ಹಳ್ಳಿಗರು ನಮಗೆಲ್ಲರಿಗೂ ಹೊಸ ಬಟ್ಟೆಗಳನ್ನು ʻಐಯಾರಿʼ (ಉಡುಗೊರೆ) ಮಾಡಿದರು.

ಮುಗಿದ ಒಂದು ಅಧ್ಯಾಯ – ಮುಗಿಯದ ಹೋರಾಟ
ಇಲ್ಲಿಗೆ ಈ ಹೋರಾಟದ ಒಂದು ಸುದೀರ್ಘ ಅಧ್ಯಾಯ ಮುಗಿದಂತಾದರೂ ಅದಕ್ಕೆ ಪೂರ್ಣ ವಿರಾಮ ಬೀಳಲಿಲ್ಲ. ಇಷ್ಟೆಲ್ಲ ಲಾಠಿ ಚಾರ್ಜ್, ಜೈಲು ಎಲ್ಲ ಆದಮೇಲೆ ಇನ್ನು ನಾವು ಬೀದರ್ಗೆ ಹಿಂದಿರುಗುವುದಿಲ್ಲ ಎಂದು ಹಳ್ಳಿಗರು ಭಾವಿಸಿದ್ದರಂತೆ. ಆದರೆ ಒಂದು ವಾರದೊಳಗೆ ನಾನು ಹಳ್ಳಿಗಳಲ್ಲಿ ಪುನಃ ಹಾಜರಾದೆ. ಇದು ಜನರಲ್ಲಿ ಕವಿರಂ ಮತ್ತು ನಮ್ಮಗಳ ಬಗ್ಗೆ ಮತ್ತಷ್ಟು ವಿಶ್ವಾಸ ಮೂಡಿಸಿತು. ಗಾಳಿಯ ಮಾಲಿನ್ಯ ತಗ್ಗಿಸಲು ಚಿಮಣಿಗಳಿಗೆ ಫಿಲ್ಟರ್ಗಳನ್ನು ಅಳವಡಿಸುವುದಾಗಿಯೂ, ಮಾಲಿನ್ಯದ ನೀರಿನ ಶುದ್ಧೀಕರಣಕ್ಕೆ ಕೊಳಾರದಲ್ಲಿ ಸಾಮೂಹಿಕ ಶುದ್ಧೀಕರಣ ಘಟಕ ಸ್ಥಾಪಿಸುವುದಾಗಿಯೂ, ಅಲ್ಲಿಯವರೆಗೂ ತ್ಯಾಜ್ಯವನ್ನು ಟ್ಯಾಂಕರ್‌ಗಳಲ್ಲಿ ತುಂಬಿಸಿ ಪಟ್ಟಂಚೆರುವುನಲ್ಲಿರುವ ಸಾಮೂಹಿಕ ಶುದ್ಧೀಕರಣ ಘಟಕಕ್ಕೆ ಸಾಗಿಸುವುದಾಗಿಯೂ ಕಂಪನಿಗಳು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡವು. ಸಾಮೂಹಿಕ ಶುದ್ಧೀಕರಣ ಘಟಕಕ್ಕಾಗಿ ಕೈಗಾರಿಕಾ ಪ್ರದೇಶದಲ್ಲಿ 30 ಎಕರೆ ಜಾಗ ಮಂಜೂರು ಮಾಡಿ, ಅಂದಿನ ಪರಿಸರ ಮಂತ್ರಿ ಬಸವರಾಜ ಶಿವಣ್ಣವರ್ ಅವರು ಘಟಕಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿಸಿದರು. ಟ್ಯಾಂಕರ್ಗಳಲ್ಲಿ ಮಾಲಿನ್ಯದ ನೀರಿನ ಸಾಗಾಟವೂ ಶುರುವಾಯಿತು. ಇದು ಕೆಲ ಮಂದಿ ಸ್ಥಳೀಯ ಪ್ರಭಾವಿಗಳಿಗೆ ಕಂಪನಿಗಳಿಂದ ಹೊಸ ಗುತ್ತಿಗೆಗಳನ್ನು ಪಡೆದುಕೊಳ್ಳಲು ಇನ್ನೊಂದು ದಾರಿಯನ್ನೂ ತೆರೆಯಿತು ಎಂದು ಬೇರೆ ಹೇಳಬೇಕಾಗಿಲ್ಲ!
ಕಂಪನಿಗಳು ಸದ್ಯ ಬಂದ್ ಆಗುವುದಿಲ್ಲ ಅಂತಾದಮೇಲೆ ಸ್ಥಳೀಯರಿಗೆ ಹೆಚ್ಚು ಖಾಯಂ ಉದ್ಯೋಗ ನೀಡಬೇಕು, ಹಳ್ಳಿಗಳ ಅಭಿವೃದ್ಧಿಗಾಗಿ ಪಂಚಾಯ್ತಿಗೆ ಹಣಕಾಸಿನ ದೇಣಿಗೆ ನೀಡಬೇಕು ಎಂಬಂತಹ ಇತರ ಹಕ್ಕೊತ್ತಾಯಗಳನ್ನು ಮುನ್ನೆಲೆಗೆ ತರಲು ಕವಿರಂ ಸಲಹೆಯಂತೆ ಹೋರಾಟ ಸಮಿತಿ ಪ್ರಯತ್ನ ಶುರು ಮಾಡಿತು. ಆದರೆ ಜಿಲ್ಲೆಯ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ಕೈಗೂಡುವುದು ಸುಲಭಸಾಧ್ಯವಿರಲಿಲ್ಲ. ಸ್ವಲ್ಪ ಸಮಯ ಮಾಲಿನ್ಯದ ಸಮಸ್ಯೆ ತಗ್ಗಿದಂತೆ ಕಾಣುತ್ತಿತ್ತು. ಆದರೆ ಅದು ಹೊಸದೊಂದು ರೂಪದಲ್ಲಿ ಕಾಣಿಸಿಕೊಂಡಿತು. ಮಾಲಿನ್ಯದ ನೀರನ್ನು ಟ್ಯಾಂಕರುಗಳಲ್ಲಿ ಪಟ್ಟಂಚೆರುವುಗೆ ಸಾಗಿಸುವುದಾಗಿ ಹೇಳಿದ್ದ ಕಂಪನಿಗಳು, ಅದಕ್ಕಾಗಿ ಪ್ರತಿ ಟ್ಯಾಂಕರ್‌ಗೆ 3,000 ರೂ. ಖರ್ಚು ಮಾಡುವ ಬದಲು ಐದಾರು ನೂರು ರೂ.ಗಳಲ್ಲೇ ಬಗೆಹರಿಸುವ ಯತ್ನ ಮಾಡಿದರು. ಗುತ್ತಿಗೆದಾರರು ನೀರನ್ನು ರಾತ್ರಿ ಹೊತ್ತಿನಲ್ಲಿ ಬೀದರ್ ಸುತ್ತಮುತ್ತಲಲ್ಲೇ ನಿರ್ಜನ ಪ್ರದೇಶಗಳಲ್ಲಿ ಸುರಿಯಲು ಶುರು ಮಾಡಿದರು. ಮೊದಮೊದಲು ಚಿದ್ರಿ, ಕಪಲಾಪೂರ, ಆಣದೂರು ಮುಂತಾಗಿ ಸ್ವಲ್ಪ ದೂರದಲ್ಲಿ ಚೆಲ್ಲುತ್ತಿದ್ದವರು ಕ್ರಮೇಣ ಕೊಳಾರ ಪ್ರದೇಶದ ಸುತ್ತಮುತ್ತಲಲ್ಲೇ ಕಾಲುವೆಗಳಲ್ಲಿ, ಹಳೆಯ ಬಾವಿಯ ಹೊಂಡಗಳಲ್ಲಿ, ಕೆರೆಯ ಬದಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಚೆಲ್ಲಲು ಶುರು ಮಾಡಿದರು.
(ಮುಂದಿನ ಭಾಗದಲ್ಲಿ ಮುಂದುವರಿಯುವುದು)

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ