ಸಾರಾಯಿ ದಂಧೆ ಎಗ್ಗಿಲ್ಲದೆ ಸಾಗುತ್ತಿರುವ ಬಗ್ಗೆ ಬಹುತೇಕ ದೂರುಗಳು ಬಂದಿವೆ. ಎರಡು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಧಾರವಾಡ ಜಿಲ್ಲೆಯ ಅಬಕಾರಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಾಕೀತು ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಅವರು ಅಬಕಾರಿ ಅಧಿಕಾರಿಗಳನ್ನು ಕರೆಯಿಸಿದ್ದು, “ಸಾರಾಯಿ ದಂಧೆ ಎಗ್ಗಿಲ್ಲದೆ ಸಾಗುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಜಾಗೃತಿ ವಹಿಸಿ, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಬೇಕು” ಎಂದು ಖಡಕ್ ಎಚ್ಚರಿಕೆ ನೀಡಿದರು.
“ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮದ್ಯ ಮಾರಾಟದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳಬೇಕು. ಕಳೆದ 7 ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ” ಎಂದು ಕಲಘಟಗಿ ತಾಲೂಕಿನ ಮಹಿಳೆಯರು ಆರೋಪಿಸಿದರು.
ಗ್ರಾಮೀಣ ಕೂಲಿಕಾರರ ಸಂಘಟಕಿ ನಿಂಗಮ್ಮ ಸವಣೂರ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ನಾವೆಲ್ಲ ಸೇರಿಕೊಂಡು 2015 ರಿಂದ ಮದ್ಯ ನಿಷೇಧ ಆಂದೋಲನವನ್ನು ಸಕ್ರಿಯವಾಗಿ ನಡೆಸುತ್ತಿದ್ದೇವೆ. ಕರ್ನಾಟಕದ ಹಳ್ಳಿಗಳಲ್ಲಿ ಅಕ್ರಮ ಅಂಗಡಿಗಳ ಮೂಲಕ ಮದ್ಯದ ಮಾರಾಟವನ್ನು ನಿಲ್ಲಿಸಲು ಹೈಕೋರ್ಟ್ ಆದೇಶವನ್ನು ತಕ್ಷಣವೇ ಜಾರಿಗೊಳಿಸಿಬೇಕು. ಸಾರಯಿಯಿಂದ ಮಹಿಳೆಯರಿಗೆ ಭಾರೀ ಸಮಸ್ಯೆ ಉಂಟಾಗುತ್ತಿದೆ. 8ನೇ ತರಗತಿಯ ಚಿಕ್ಕ ವಯಸ್ಸಿನ ಮಕ್ಕಳೂ ಕುಡಿಯಲು ಪ್ರಾರಂಭಿಸಿರುವುದು ಸೋಜಿಗ ಎನಿಸಿದರೂ ನಿಜವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಮದ್ಯ ಸಾಗಾಟಕ್ಕೆ ಬಸ್ಸಿನಲ್ಲಿ ಅನುಮತಿ ನೀಡುವಂತೆ ಆಗ್ರಹ
“ಅಕ್ರಮ ಸಾರಾಯಿ ದಂಧೆ ಇರುವ ಗ್ರಾಮಗಳ ಪಟ್ಟಿಯನ್ನು ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಅಬಕಾರಿ ಇಲಾಖೆಗೆ ಹಲವು ಬಾರಿ ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.