ಆರ್‌ಬಿಐ(RBI) ಈ ವರ್ಷ ಸತತ ಎರಡನೇ ಬಾರಿಗೆ ಪ್ರಮುಖ ಬಡ್ಡಿದರಗಳನ್ನು ಪರಿಷ್ಕರಿಸಿದೆ. ತನ್ನ ರೆಪೋ ದರ(Repo Rate)ವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದ್ದು, ಈ ಮೂಲಕ ರೆಪೋ ದರ ಶೇ. 6.25ರಿಂದ ಶೇ. 6ಕ್ಕೆ ಇಳಿದಿದೆ.
“ಕಳೆದ ಫೆಬ್ರವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲೂ 25 ಮೂಲಾಂಕಗಳಷ್ಟು ಬಡ್ಡಿದರವನ್ನು ಇಳಿಸಲಾಗಿತ್ತು. ಈಗ ಮತ್ತೊಮ್ಮೆ ರೆಪೋ ದರ ಕಡಿಮೆ ಮಾಡಲು ಹಣಕಾಸು ನೀತಿ ಸಮಿತಿಯು ಸರ್ವಾನುಮತದಿಂದ ಒಪ್ಪಿಕೊಂಡಿದೆ” ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರ್‌ಬಿಐ ರೆಪೋ ದರ ಇಳಿಸಿರುವುದರಿಂದ, ಬ್ಯಾಂಕ್‌ಗಳಿಗೆ ಸಾಲದ ವೆಚ್ಚ ಕಡಿಮೆ ಆಗಲಿದ್ದು, ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಅನುವು ಮಾಡಿಕೊಡುತ್ತದೆ. ಸಾಲಗಳ ಮೇಲಿನ ಇಎಂಐಗಳ ಮೊತ್ತ ಕಡಿಮೆ ಮಾಡುತ್ತದೆ ಎಂದು ವರದಿ ತಿಳಿಸಿದೆ. ಇದರಿಂದ ಮನೆ, ವಾಹನ ಮತ್ತು ವೈಯಕ್ತಿಕ ಸಾಲಗಾರರಿಗೆ ತುಸು ಲಾಭವಾಗಲಿದೆ.
ಇದನ್ನೂ ಓದಿ: ಆರ್‌ಬಿಐ ಮುಖ್ಯ ಕಚೇರಿಗೆ ಬಾಂಬ್ ಬೆದರಿಕೆ
ಆರ್ಬಿಐನಿಂದ ಸಾಲ ಪಡೆಯಲು ಬ್ಯಾಂಕುಗಳು ತೆರಬೇಕಿರುವ ಬಡ್ಡಿದರವೇ ರಿಪೋ ರೇಟ್. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಈ ಅಸ್ತ್ರ ಪ್ರಯೋಗಿಸುತ್ತದೆ. ಬೆಲೆ ಏರಿಕೆ ಆಗುವ ಸಂದರ್ಭಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣದ ಹರಿವು ಕಡಿಮೆ ಮಾಡಲು ಆರ್‌ಬಿಐ ರೆಪೋ ದರ ಹೆಚ್ಚಿಸುತ್ತದೆ. ಹಣದುಬ್ಬರ ನಿಯಂತ್ರಣದಲ್ಲಿದ್ದರೆ, ಮತ್ತು ಆರ್ಥಿಕತೆಗೆ ಪುಷ್ಟಿ ಸಿಗುವ ಅವಶ್ಯಕತೆ ಇದೆ ಎನಿಸಿದಲ್ಲಿ ಆಗ ಬ್ಯಾಂಕಿಂಗ್ ವಲಯಕ್ಕೆ ಹೆಚ್ಚು ಹಣದ ಹರಿವು ಬೇಕಾಗುತ್ತದೆ. ಆಗ ರೆಪೋ ದರವನ್ನು ಇಳಿಸಲಾಗುತ್ತದೆ.