ಸ್ವಂತ ಮನೆ ಇಲ್ಲದೆ, ಮನೆ ಬಾಡಿಗೆಯನ್ನೂ ಕಟ್ಟಲಾಗದೆ ಒಂಟಿ ಮಹಿಳೆಯೊಬ್ಬರು ಬೀದಿಯಲ್ಲಿ ವಾಸ ಮಾಡುತ್ತಿರುವ ವಿದ್ರಾವಕ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ.
ಕೊಪ್ಪಳದ ತೆಗ್ಗಿನಕೇರಿ ಓಣಿಯಲ್ಲಿ ಬಾಡಿಗೆ ಮನೆಯಲ್ಲಿ ರತ್ನಮ್ಮ ಎಂಬಾಕೆ ವಾಸವಾಗಿದ್ದರು. ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಮಾನಸಿಕ ಅಸ್ವಸ್ಥ, ಮತ್ತೊಬ್ಬ ಮಗ ದುಶ್ಚಟಗಳ ದಾಸ. ಮನೆಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಈ ಮಹಿಳೆಗೆ ಜೀವನ ನಿರ್ವಹಣೆಯೇ ದುಸ್ತರವಾಗಿದೆ.
ಕಳೆದ ಕೆಲ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರನ್ನು ಒಂದು ವರ್ಷದಿಂದ ಬಾಡಿಗೆ ಕಟ್ಟದ ಕಾರಣಕ್ಕೆ ಮನೆ ಮಾಲಿಕರು ಹೊರ ಹಾಕಿದ್ದಾರೆ. ಇವರ ಜೀವನ ಸದ್ಯ ಬೀದಿಯಲ್ಲಿಯೇ. ಇಷ್ಟಾದರೂ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರತ್ನಮ್ಮ ಮೋಚಿ ಸಮಾಜದ ವಿಧವಾ ಮಹಿಳೆ ಇವರ ಮೂಲ ಕಸುಬು ಹಳೆಯ ಬಟ್ಟೆಗಳಿಂದ ಕೌದಿ ಹೊಲಿಯುವಿದು. ಆದರೆ, ಈಗ ಆ ಕಸುಬು ಮಾಯವಾಗಿದ್ದರಿಂದ ಪರ್ಯಾಯ ಕೆಲಸ ಬರುವುದಿಲ್ಲ. ಹೀಗಾಗಿ ಮನೆ ಕೆಲಸ ಮಾಡಿ ಜೀವ ಸಾಗಿಸುತ್ತಿದ್ದಳು. 2023ರಲ್ಲಿ ಆಶ್ರಯ ಮನೆಗಳಿಗಾಗಿ ಹೋರಾಟ ಮಾಡಿದಳು. ಮನೆ ಮಂಜೂರಾಗಿದ್ದರೂ ಹಕ್ಕು ಪತ್ರ ವಿತರಿಸಲು ನಗರಸಭೆ ಹಾಗೂ ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ.
ಆಶ್ರಯ ಯೋಜನೆಗಳು ತಲುಪಿದ್ದ ಯಾರಿಗೆ :
ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಕರ್ನಾಟಕ ಸರಕಾರದ ರಾಜೀವ ಗಾಂಧಿ ವಸತಿ ಯೋಜನೆ, ಡಾ.ಅಂಬೇಡ್ಕರ್ ವಸತಿ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ, ಇಂದಿರಾ ಆವಾಸ್ ಯೋಜನೆ, ಬಸವ ವಸತಿ ಯೋಜನೆ ಮುಂತಾದ ಯೋಜನೆಗಳು ನಿರಾಶ್ರಿತರಿಗಾಗಿ ಇದ್ದರೂ ಈ ಯೋಜನೆಗಳು ಯಾರಿಗೆ ತಲುಪುತ್ತಿವೆ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜೀವಗಾಂಧಿ ವಸತಿ ಯೋಜನೆ
ಇತ್ತಿಚೆಗೆ ಕೊಪ್ಪಳ ನಗರದ ನಿರಾಶ್ರಿತರಿಗೆಂದೇ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ 250ಕ್ಕೂ ಹೆಚ್ಚು ಆಶ್ರಯ ಮನೆಗಳು ಸರಕಾರದಿಂದ ಮಂಜೂರಾಗಿ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ಆದರೆ, ಆ ಮನೆಗಳು ನಿಜವಾದ ನಿರಾಶ್ರಿತರಿಗೆ ತಲುಪಿದವೆ? ಎಂದು ಅನುಮಾನ.
ಹೋರಾಟದ ಹೆಸರಲ್ಲಿ ಮಧ್ಯವರ್ತಿಗಳ ಪಾಲಾಗಿ ಈಗಾಗಲೇ ಆಶ್ರಯ ಮನೆ, ಹಾಗೂ ಸ್ವಂತ ಮನೆ ಇರುವವರ ಪಾಲಾಗಿವೆ ಎಂದು ಗುಮಾನಿ ಮಾತುಗಳೂ ಕೇಳಿ ಬರುತ್ತಿವೆ.
ರತ್ನಮ್ಮನಿಗೆ ತಾಯಮ್ಮನ ಗುಡಿಯ ಅಂಗಳ ಆಶ್ರಯ
ಬಾಡಿಗೆ ಕಟ್ಟಲಾಗದೆ 4 ದಿನಗಳಿಂದ ಭಾಗ್ಯನಗರ ರಸ್ತೆಯ ತಾಯಮ್ಮ ದೇವಸ್ಥಾನದ ಅಂಗಳದಲ್ಲಿ ರಸ್ತೆ ಪಕ್ಕದಲ್ಲಿ ಸಾಮಾನು ಸರಂಜಾಮುಗಳ ಜೊತೆ ರತ್ನಮ್ಮ ಕಾಲ ಕಳೆಯುತ್ತಿದ್ದಾರೆ. ಸಖಿ ಕೇಂದ್ರದವರು ‘ತಾತ್ಕಾಲಿಕ ಆಶ್ರಯ ಒದಗಿಸುತ್ತೇವೆ ಬನ್ನಿ’ ಎಂದು ಕರೆದರೂ ಪಟ್ಟ ಬಿಡದ ಮಹಿಳೆ ‘ಯಾರ್ದಾರ್ ನಾಕ ಮನಿ ಮುಸ್ರಿ ತಿಕ್ಕಿ ಹೊಟ್ಟಿ ತುಂಬಿಸ್ಕಳತೇನಿ ಅದ್ರ, ನನ್ಗ ಒಂದು ಸೂರ ಕೊಡ್ರಿ’ ಎಂದರು.
ಉಪವಿಭಾಗಾಧಿಕಾರಿಗಳ ನಿರ್ಲಕ್ಷ್ಯ :
ಹೊರತಟ್ನಾಳ ಗ್ರಾಮದ ಸರ್ವೆ ನಂ 32ರಲ್ಲಿ 16- 2 ಎ.ಗುಂ ರಾಜೀವಗಾಂಧಿ ವಸತಿ ಯೋಜನೆ ನಿವೇಶನ ಜಾಗ ಮಂಜುರಾಗಿದ್ದು, ನಿವೇಶನ ಹಂಚಿಕೆ ಕಡತಗಳು ಉಪವಿಭಾಗಾಧಿಕಾರಿಗಳ ಟೇಬಲ್ ಮೇಲೆ ಇರುವುದು. ರತ್ನಮ್ಮ ಬೀದಿಗೆ ಬಿದ್ದಿರುವ ಮಾಹಿತಿ ಇದ್ದರೂ ಸ್ಥಾನಿಕವಾಗಿ ಭೇಟಿ ಕೊಟ್ಟು ನಿರಾಶ್ರಿತ ಮಹಿಳೆಯ ಅಳಲನ್ನು ಕೇಳಲು ಪುರುಸತ್ತ ಇಲ್ಲವೆಂಬಂತೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ನಿವೇಶನ ಇಲ್ಲದೇ ಒಂಟಿ ವಿಧವೆ ದೇವಸ್ಥಾನದ ಅಂಗಳದಲ್ಲಿ ಸಾಮಾನು ಸರಂಜಾಮುಗಳೊಂದಿಗೆ ಬೀದಿಗೆ ಬಂದಿದ್ದರೂ ಜಿಲ್ಲಾಡಳಿತದ ನಿರ್ಲಕ್ಷ್ಯತೆ ಸ್ಪಷ್ಟವಾಗಿ ಕಾಣುತ್ತದೆ. ನಿರಾಶ್ರಿತ ಮಹಿಳೆ ಬಗ್ಗೆ ಪೋನ್ ಕರೆಯ ಮುಖಾಂತರ ತಿಳಿಸಲು ಯತ್ನಸಿದರೆ ಸ್ಪಂದಿಸುತ್ತಿಲ್ಲ. ಈ ವಿಷಯವಾಗಿ ಮಾತನಾಡಲು ‘ಈದಿನ.ಕಾಮ್‘ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.
ನಿವೇಶನ ವಂಚಿತ ಮಹಿಳೆ ಮಾತು :
ನಿರಾಶ್ರಿತ ಮಹಿಳೆ ರತ್ನಮ್ಮ ಈದಿನ.ಕಾಮ್ನೊಂದಿಗೆ ಮಾತನಾಡಿ, “ನಮ್ಗ ಮನಿ ಇಲ್ರಿ ಮಕ್ಳ ಇಬ್ರ ಅದಾರ. ಆದ್ರೆ, ಒಬ್ಗ ತಲಿ ಸರಿಯಿಲ್ಲ, ಇನ್ನೊಬ್ಬ ಕುಡ್ಕ, ಗಂಡ ಸತ್ತ ಹದ್ನಾರ ವರ್ಷ ಆತು. ನಮ್ಮ ಕಸ್ಬು ಕೌದಿ ಹೊಲಿತಿದ್ರ. ಈಗ ಕಸ್ಬು ನಾವ ಮಾಡಲ್ರಿ. ನಾಕಾರ ಮನಿ ಮುಸ್ರಿ ತಿಕ್ಕಿ ಕೆಲ್ಸ ಮಾಡಿ ಹೊಟ್ಟಿ ತುಂಬ್ಸಕೊಳ್ತೇನಿ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಿಸಿ ಕ್ಯಾಮರಾಗೆ ಸ್ಪ್ರೇ ಮಾಡಿ ಎಸ್‌ಬಿಐ ಎಟಿಎಂನಿಂದ ₹18 ಲಕ್ಷ ದರೋಡೆ
ಬಾಡ್ಗಿ ಮನ್ಯಾಗ ಇದ್ದೆ ವರ್ಷದಿಂದ ಬಾಡ್ಗಿ ಕಟ್ಟಿಲ್ಲ ಅಂತ ಮನಿ ಮಾಲಕ್ರ ಹೊರಗ್ ಹಾಕಿದ್ರ. ಹಂಗಾಗಿ ಎಲ್ಲಿ ಜಾಗ ಇಲ್ದಕ ಇಲ್ಲಿ ಅದೇನ್ರಿ. ಎರ್ಡು ವರ್ಷದಿಂದ ಮನಿಗೆ ಹೋರಾಟ ಮಾಡ್ದೆ. ಹೊರತಟ್ನಾಳದಾಗ ಜಾಗ ಕೊಟ್ಟಾರ. ಆದ್ರ, ಡಿಸಿ ಆಫಿಸ್ನರ್ ನನ್ಗ ಹಕ್ಕಪತ್ರ ಕೊಡವಲ್ರು. ಬಾಡ್ಗಿ ಮನಿಗೆ ತಿಂಗ್ಳಗೆ 5 ದಿಂದ 8 ಸಾವಿರಾ ಕಟ್ಬೇಕು. ಅಷ್ಟ ಬಾಡ್ಗಿ ಕಟ್ಟಾಕ ನನ್ಗ ಆಗಲ್ರಿ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿವೇಶನ ಹೋರಾಟಗಾರರು ಏನು ಹೇಳ್ತಾರೆ?
ಬಂಡಾಯ ಸಾಹಿತಿ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ‘ದುಬಾರಿ ಬಾಡಿಗೆ ಕಟ್ಟಲಾಗದೆ ಹಾಗೂ ವರ್ಷಗಳಿಂದ ಬಾಡಿಗೆ ಕಟ್ಟಲಾಗದ ಕಾರಣದಿಂದ ಮನೆ ಮಾಲಕರು ರತ್ನಮ್ಮನ್ನ ಹೊರ ಹಾಕಿದ್ದಾರೆ. 2 ವರ್ಷದಿಂದ ನಿವೇಶನಕ್ಕೆ ಹೋರಾಟ ಮಾಡಿದ್ಲು. ಆದ್ರೆ, ಬೀದಿಗೆ ಬಿದ್ದಿದ್ದಾಳೆ 4 ದಿನವಾದರೂ ಆ ಮಹಿಳೆ ಬಗ್ಗೆ ಅಧಿಕಾರಿಗಳು ಗಮನಹರಿಸಿ ಅವಳ ಕಷ್ಟಕ್ಕೆ ನೆರವಾಗಿಲ್ಲ. ಇದು ಖಂಡನೀಯ. ಸರಕಾರದಿಂದ ಮಂಜುರಾದ ನಿವೇಶನಗಳು ಬಡವರಿಗೆ ಸಿಗದೇ ಉಳ್ಳವರ ಪಾಲಾಗುತ್ತಿವೆ. ಇದರ ಬಗ್ಗೆಯೂ ಅಧಿಕಾರಿಗಳು ಕ್ರಮ ವಹಿಸಿದರೆ ಬಡವರಿಗೆ ನ್ಯಾಯ ಸಿಗುತ್ತದೆ’ ಎಂದರು.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್