ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಟೀಕಿಸಿದ ಸ್ಟಾಂಡ್ಅಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಅವರ ವಿಡಿಯೋವನ್ನು ಮರು ಹಂಚಿದ, ಅಪ್ಲೋಡ್ ಮಾಡಿದ ಕಾರಣಕ್ಕೆ ಯಾವುದೇ ವ್ಯಕ್ತಿಯ ವಿರುದ್ಧ ಪ್ರತೀಕಾರದ ಕ್ರಮ ಕೈಗೊಂಡಿಲ್ಲ ಎಂದು ಬಾಂಬೆ ಹೈಕೋರ್ಟ್ ಬುಧವಾರ ಹೇಳಿದೆ.
ಇತ್ತೀಚೆಗೆ ಕುನಾಲ್ ಕಾಮ್ರಾ ಕಾರ್ಯಕ್ರಮವೊಂದರಲ್ಲಿ ಏಕನಾಥ್ ಶಿಂದೆ ಅವರನ್ನು ತನ್ನ ಪಕ್ಷವನ್ನೇ ಇಬ್ಭಾಗ ಮಾಡಿದ ದ್ರೋಹಿ ಎಂದು ಹೇಳಿದ್ದರು. ಹಾಸ್ಯ ಕಾರ್ಯಕ್ರಮದಲ್ಲಿ ಎಲ್ಲಿಯೂ ಶಿಂದೆ ಹೆಸರನ್ನು ಉಲ್ಲೇಖಿಸದ ಕಾಮ್ರಾ ‘ಥಾಣೆಯ ನಾಯಕ’ ಎಂದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿವಸೇನೆ ಕಾರ್ಯಕರ್ತರು ಕಾರ್ಯಕ್ರಮ ನಡೆದ ಹೋಟೆಲ್ನ ಮೇಲೆ ದಾಳಿ ನಡೆಸಿದ್ದರು.
ಇದನ್ನು ಓದಿದ್ದೀರಾ? ಶಿಂದೆ ಟೀಕೆ ಪ್ರಕರಣ | ಎಫ್ಐಆರ್ ರದ್ದು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕುನಾಲ್ ಕಾಮ್ರಾ
ಶಿವಸೇನೆ ನಾಯಕರುಗಳು ಕಾಮ್ರಾಗೆ ಜೀವ ಬೆದರಿಕೆ ಹಾಕಿದ್ದರು. ಇವೆಲ್ಲವುದರ ನಡುವೆ ಕಾಮ್ರಾ ವಿರುದ್ಧ ಹಲವು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಸದ್ಯ ತನ್ನ ವಿರುದ್ಧ ದಾಖಲಾದ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ, ಇದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆರೋಪಿಸಿ ಕುನಾಲ್ ಕಾಮ್ರಾ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಹೋಟೆಲ್ ಅಕ್ರಮವಾಗಿದೆ ಎಂದು ಆರೋಪಿಸಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕೂಡ ಹ್ಯಾಬಿಟ್ಯಾಟ್ ಸ್ಟುಡಿಯೋ ಕಟ್ಟಡವನ್ನು ನೆಲಸಮ ಮಾಡಿದೆ.
ಕಾಮ್ರಾ ಮತ್ತು ಹಾಸ್ಯ ಕಾರ್ಯಕ್ರಮ ಚಿತ್ರೀಕರಿಸಿದ ಮುಂಬೈ ಹೋಟೆಲ್ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮವನ್ನು ಪ್ರಶ್ನಿಸಿ 25 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರು ಪಿಐಎಲ್ ಸಲ್ಲಿಸಿದ್ದು, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಂ.ಎಸ್ ಕಾರ್ಣಿಕ್ ಅವರ ಪೀಠವು ನಿರಾಕರಿಸಿದೆ.
“ತೊಂದರೆಗೆ ಒಳಗಾದ ವ್ಯಕ್ತಿ (ಕುನಾಲ್ ಕಾಮ್ರಾ) ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಅವರು ಬಡವರಲ್ಲ ಅಥವಾ ಅನಕ್ಷರಸ್ಥರಲ್ಲ. ನೀವು (ಪ್ರಸ್ತುತ ಪಿಐಎಲ್ ಅರ್ಜಿದಾರರು) ಅವರ ಪರವಾಗಿ ಏಕೆ ಹೋರಾಡುತ್ತಿದ್ದೀರಿ? ಅವರು ಪರಿಹಾರಕ್ಕಾಗಿ ಕ್ರಮ ಕೈಗೊಂಡಿದ್ದಾರೆ” ಎಂದು ಹೈಕೋರ್ಟ್ ಹೇಳಿದೆ.
ಕಾನೂನು ವಿದ್ಯಾರ್ಥಿ ಹರ್ಷವರ್ಧನ್ ಖಾಂಡೇಕರ್ ಸಲ್ಲಿಸಿದ ಪಿಐಎಲ್ ಅನ್ನು ವಿಚಾರಣೆ ನಡೆಸಲು ನಿರಾಕರಿಸಿದ ಹೈಕೋರ್ಟ್, ‘ಪ್ರತೀಕಾರಾತ್ಮಕ’ ಕ್ರಮ ಕೈಗೊಂಡಿರುವ ಯಾವುದೇ ನಿದರ್ಶನಗಳಿಲ್ಲ ಎಂದಿದೆ.
