ಹಂಪಿ ಕನ್ನಡ ವಿಶ್ವವಿದ್ಯಾಲಯ( Hampi Kannada University)ದ 33ನೇ ಘಟಿಕೋತ್ಸವ ಮತ್ತು ನುಡಿಹಬ್ಬ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್, ಉನ್ನತಶಿಕ್ಷಣ ಸಚಿವ ಸಮಕುಲಾಧಿಪತಿ ಎಂ ಸಿ ಸುಧಾರಕರ್ ಅವರು ಏಪ್ರಿಲ್ 4ರಂದು ಕೃತಿಕಾ ಕೆ ಆರ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರದಾನ ಮಾಡಿದರು.
ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮಹಿಳಾ ಅಧ್ಯಯನ ವಿಭಾಗದಲ್ಲಿ ಡಾ. ಯರ್ರಿಸ್ವಾಮಿ ಈ. ಅವರ ಮಾರ್ಗದರ್ಶನದಲ್ಲಿ ‘ಕಾಫಿ ತೋಟದಲ್ಲಿನ ಮಹಿಳಾ ಕಾರ್ಮಿಕರು: ಬದುಕು ಮತ್ತು ಬವಣೆ'(ಚಿಕ್ಕಮಗಳೂರು ಜಿಲ್ಲೆಯನ್ನು ಅನುಲಕ್ಷಿಸಿ) ಎಂಬ ವಿಷಯದಲ್ಲಿ ಕೃತಿಕಾ ಕೆ ಆರ್ ನಡೆಸಿದ ಸಂಶೋಧನೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯು ಪಿಎಚ್‌ಡಿ ಪದವಿ ನೀಡಿದೆ.
ಚಿಕ್ಕಮಗಳೂರಿನ ಕಸಬಾ ಹೋಬಳಿ, ಧರಗುಣಿ ಗ್ರಾಮದ ಕಾಫಿ ತೋಟದ ಕಾರ್ಮಿಕರಾದ ರಮೇಶ್ ಕೆ ಎನ್ ಮತ್ತು ರೇಣುಕಾ ಎಂ ಕೆ ದಂಪತಿಯ ಮಗಳಾದ ಡಾ. ಕೃತಿಕಾ ಕೆ ಆರ್ ಅವರು ಚಿಕ್ಕಂದಿನಿಂದಲೂ ಬಹಳಷ್ಟು ಶ್ರಮವಹಿಸಿ ಓದನ್ನು ಮೈಗೂಡಿಸಿಕೊಂಡವರು. ಬಡಕುಟುಂಬದಲ್ಲಿ ಹುಟ್ಟಿದರೂ ಉನ್ನತಶಿಕ್ಷಣ ಪಡೆದು ಕುಟುಂಬಕ್ಕೆ, ಊರಿಗೆ, ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಪ್ರಾಥಮಿಕ ಶಿಕ್ಷಣ ಕಬ್ಬಿನಹಳ್ಳಿ ಸರ್ಕಾರಿ ಶಾಲೆಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಚಿಕ್ಕಮಗಳೂರಿನ ಮಲೆನಾಡು ವಿದ್ಯಾಸಂಸ್ಥೆಯಲ್ಲಿ, ಪದವಿಪೂರ್ವ ಶಿಕ್ಷಣವನ್ನು ನಗರದ ಸರ್ಕಾರಿ ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಚಿಕ್ಕಮಗಳೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು. ನಂತರ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಮಹಿಳಾ ಅಧ್ಯಯನ ವಿಷಯದಲ್ಲಿ ಎಂಎ ಪದವಿ ಪೂರ್ಣಗೊಳಿಸಿದರು.
ಈ ಬೀದಿಯಲ್ಲಿ ಒಂಟಿ ಮಹಿಳೆಯ ವಾಸ
ಕೃತಿಕಾ ಅವರು ಈ ನೆಲದ ಕಾಫಿ ತೋಟದ ಕಾರ್ಮಿಕರ ಕಷ್ಟಗಳನ್ನು ಹತ್ತಿರದಿಂದ ಬಲ್ಲವರಾಗಿದ್ದು ಮಹಿಳಾ ಕಾರ್ಮಿಕರ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಕಾನೂನಾತ್ಮಕ ಸಂಗತಿಗಳನ್ನು ಲಿಂಗಸಂಬಂಧಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ.
ಕುಟುಂಬಸ್ಥರು, ಸ್ನೇಹಿತರು ಸಂಭ್ರಮದಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.