ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಬೆಂಗಳೂರಿನ 1ನೇ ಸಿಸಿಹೆಚ್ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಮಾಜಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಅವರನ್ನು 14 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಆದೇಶಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಮಾಜಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಅವರನ್ನು ವಶಕ್ಕೆ ಪಡೆದು ಸತತ 11 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಅಲ್ಲದೇ ಅವರ ನಿವಾಸ ಸೇರಿದಂತೆ 8 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಗೆಸ್ಟ್ ಹೌಸ್ ಮೇಲೂ ದಾಳಿ ನಡೆಸಿದ್ದರು. ಇದೇ ವೇಳೆ ಅಲ್ಲೇ ಇದ್ದ ಮಾಜಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಅವರನ್ನು ವಶಕ್ಕೆ ಪಡೆದಿದ್ದರು. ಸತತ ವಿಚಾರಣೆಯ ನಂತರ ಮಂಜುನಾಥ್ ಗೌಡ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು, ಅವರನ್ನು 1ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಅಕ್ರಮ ಗಾಂಜಾ ಸಾಗಾಟ: ಇಬ್ಬರ ಬಂಧನ
ಪ್ರಕರಣದ ಹಿನ್ನೆಲೆ
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ 2018ರಲ್ಲಿ ಪ್ರಕರಣ ದಾಖಲಾಗಿತ್ತು. ಆ ವೇಳೆ ಮಂಜುನಾಥ್ ಗೌಡ ಅವರನ್ನು ಎಸಿಬಿ ಬಂಧಿಸಿತ್ತು. ಆದರೆ ಚಾರ್ಜ್ ಶೀಟ್‌ನಲ್ಲಿ ಮಂಜುನಾಥ್ ಗೌಡ ಅವರ ಹೆಸರನ್ನೇ ಕೈಬಿಡಲಾಗಿತ್ತು. ಬಳಿಕ ಇಡಿ ಮಧ್ಯ ಪ್ರವೇಶಿಸಿದ್ದು, ಇಸಿಐಆರ್ ದಾಖಲು ಮಾಡಿ, ತನಿಖೆಗೆ ಮುಂದಾಗಿತ್ತು. ಈ ತನಿಖೆಗೆ ಹೈಕೋರ್ಟ್ ಮೂಲಕ ಮಂಜುನಾಥ್ ಗೌಡ ತಡೆಯಾಜ್ಞೆ ತಂದಿದ್ದರು. ನಿರಂತರ ಕಾನೂನು ಹೋರಾಟದ ಬಳಿಕ ಹೈಕೋರ್ಟ್ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಇಡಿ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು.