ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಒಕ್ಕೂಟ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಚಿಕ್ಕಬಳ್ಳಾಪುರ ಘಟಕ ಪ್ರತಿಭಟನೆ ನಡೆಸಿತು.
ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಶಿಡ್ಲಘಟ್ಟ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದೆ. ಪೆಟ್ರೋಲ್, ಡೀಸೆಲ್ ಮೇಲೆ 2ರೂ ಸುಂಕ ಹೆಚ್ಚಿಸಿದೆ. ಜತೆಗೆ ಅಡುಗೆ ಅನಿಲದ ಬೆಲೆಯನ್ನೂ ಸಿಲೆಂಡರ್‌ಗೆ 50ರೂ ಏರಿಕೆ ಮಾಡಲಾಗಿದೆ. ಕೂಡಲೇ ಈ ಜನವಿರೋಧಿ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿತು.
ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಂ. ಮುನಿವೆಂಕಟಪ್ಪ ಎಂ ಪಿ ಮಾತನಾಡಿ, “ಕೇಂದ್ರ ಸರ್ಕಾರ ದಿಢೀರನೆ ಡೀಸೆಲ್, ಪೆಟ್ರೋಲ್ ಮತ್ತು ಅನಿಲದ ಬೆಲೆಯನ್ನು ಏರಿಸಿರುವುದು ಆಘಾತಕಾರಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಅತ್ಯಂತ ಕಡಿಮೆ ಇದ್ದು, ದೇಶದಲ್ಲಿ ಮಾತ್ರ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಲಾಗಿದೆ. ಇದರಿಂದಾಗಿ ಒಂದೇ ದಿನದಲ್ಲಿ 30,000 ಕೋಟಿ ರೂ ಕೇಂದ್ರ ಸರ್ಕಾರದ ಖಜಾನೆಗೆ ಬಂದಿದೆ ಎಂದು ವರದಿಗಳು ಹೇಳುತ್ತಿವೆ. ಅದೇ ರೀತಿ ಬಡವರಿಗೆ ಆಸರೆಯಾಗಿರುವ ಅಡುಗೆ ಅನಿಲದ ಬೆಲೆಯನ್ನೂ ಏರಿಸಲಾಗಿದೆ. ಇದರಿಂದ 7200 ಕೋಟಿ ಹಣ ಇಂದು ಕೇಂದ್ರ ಸರ್ಕಾರಕ್ಕೆ ತಲುಪಿದೆ. ಜನಸಾಮಾನ್ಯರು ಬದುಕಿಗೆ ಈ ಅಗತ್ಯ ವಸ್ತುಗಳ ಬೆಲೆ ಏರಿಕೆ ಭಾರವಾಗಿದೆ. ಇದರ ಪರಿಣಾಮ ಎಲ್ಲಾ ಹಂತದಲ್ಲೂ ಬೆಲೆ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹೋಟೆಲ್ ತಿಂಡಿ ಬೆಲೆ, ಜನಸಾಮಾನ್ಯ ಉಪಯೋಗಿಸುವ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರುತ್ತದೆ. ತಕ್ಷಣ ಕೇಂದ್ರ ಸರ್ಕಾರ ಈ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು” ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಕಾಂ ಜಿ ಸಿದ್ದಗಂಗಪ್ಪನವರು ಮಾತನಾಡಿ, “ಕೇಂದ್ರ ಸರ್ಕಾರ ರಾತ್ರೋರಾತ್ರಿ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕಿಗೆ ಬರೆ ಎಳಿದಿದೆ. ಒಂದು ಕಡೆ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿರುವ ಬಗ್ಗೆ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಬೆಲೆ ಏರಿಕೆ ವಿರುದ್ಧ ಮಾತನಾಡದೆ ಇರುವುದು ಖಂಡನೀಯ. ಆದರೆ ಬಿಜೆಪಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ಕ್ರಮವನ್ನು ಸಮರ್ಥನೆ ಮಾಡುತ್ತಿರುವುದು ನಾಚಿಕೆಗೇಡುತನ” ಎಂದು ಖಂಡಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಅಡ್ಕಸ್ಥಳ ಕಬೀರ್‌ಗೆ ʼಸಾಹಿತ್ಯ ವಿಭೂಷಣʼ ಪ್ರಶಸ್ತಿ
ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಮುಖಂಡ ಜಯರಾಮರೆಡ್ಡಿ, ಬಿ ಎನ್ ಮುನಿಕೃಷ್ಣಪ್ಪ, ಬಿ ಸಾವಿತ್ರಮ್ಮ, ಡಿ ಅಶ್ವಥ್ ನಾರಾಯಣ, ಜಿ ಕೃಷ್ಣಪ್ಪ ಡಿ.ಟಿ ಮುನಿಸ್ವಾಮಿ, ಗುಡಿಬಂಡೆಯ ವೆಂಕಟರಾಜು, ಚಿಂತಾಮಣಿ ಆನಂದ್, ಚನ್ನರಾಯಪ್ಪ ಮುಂತಾದವರು ಇದ್ದರು.