ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ನಾವು ಮೂವರೂ ಫಾರೆಸ್ಟ್ ರೇಂಜರ್ ಅಣ್ಣಪ್ಪನವರ ಡೇರದ ಮುಂಭಾಗದಲ್ಲಿ ಒಂದು ಡಿಸೆಂಬರ್ ರಾತ್ರೆ ಬೆಂಕಿಯ ಸುತ್ತಲೂ ಕುಳಿತು ಹರಟುತ್ತಿದ್ದೆವು. ನಾನು ರುದ್ರನಗರದ ಜಿಲ್ಲೆಯ ಮುಖ್ಯ ವೈದ್ಯ. ನನ್ನ ಸ್ನೇಹಿತ ಡಾಕ್ಟರ್ ನಾರಾಯಣರಾವ್, M.Sc., Ph.D., ರುದ್ರನಗರದ ಕಾಲೇಜಿಗೆ ಹೊಸದಾಗಿ ನೇಮಕವಾಗಿದ್ದ ಭೂಶಾಸ್ತ್ರದ ಪ್ರೊಫೆಸರು. ನಾವಿಬ್ಬರೂ ಬೆಂಗಳೂರು ಕಾಲೇಜಿನಲ್ಲಿ ಜೊತೆಗೆ ಓದಿ ಎಂ.ಎಸ್ಸಿ. ಪ್ಯಾಸು ಮಾಡಿದವರು. ನಾನು ಡಿಗ್ರಿ ತೆಗೆದುಕೊಂಡ ಮೇಲೆ ಮೆಡಿಕಲ್ ಕಾಲೇಜಿಗೆ ಹೋದೆ. ನಾರಾಯಣರಾವ್ ವಿಲಾಯತಿಗೆ ಹೋಗಿ ಭೂಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದು ಈಚೆಗೆ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರಾಗಿ ನೇಮಿಸಲ್ಪಟ್ಟು ನಾನು ನೌಕರಿ ಮಾಡುತ್ತಿದ್ದ ಜಿಲ್ಲೆಗೇ ಬಂದ. ಸಾಮಾನ್ಯವಾಗಿ ನಾವುಗಳು ಸಾಯಂಕಾಲಗಳಲ್ಲಿ ಕಬ್ಬಿನಲ್ಲಿ ಕಲೆಯುತ್ತಿದ್ದೆವು. ಈ ಸಲ ಕ್ರಿಸ್‌ಮಸ್‌ನಲ್ಲಿ ಒಂದು ವಾರವೋ, ಹತ್ತು ದಿವಸವೋ ರಜ ತೆಗೆದುಕೊಂಡು ಘಾಟಿ ಪ್ರದೇಶದಲ್ಲಿ ಶಿಕಾರಿಗೆ ಹೋಗೋಣವೆಂದು ನಿಶ್ಚಯ ಮಾಡಿಕೊಂಡೆವು. ಜಿಲ್ಲಾ ಫಾರೆಸ್ಟ್ ಆಫೀಸರ್ ಅಣ್ಣಪ್ಪನವರಿಗೆ ಈ ನಮ್ಮ ಉದ್ದೇಶವನ್ನು ತಿಳಿಸಲಾಗಿ, ಅವರು ಬಹಳ ಉತ್ಸಾಹದಿಂದ ನಮ್ಮೊಂದಿಗೆ ತಾವೂ ಸೇರುವುದಾಗಿ ಹೇಳಿ, ನಾವುಗಳು ಅವರ ಅತಿಥಿಗಳಾಗಿರಬೇಕೆಂದು ಬಲವಂತಪಡಿಸಿದರು.
ಶಿಕಾರಿಯಾತ್ರೆಯು ಯಶಸ್ವಿಯಾಗಿ ನಡೆಯಿತು. ಅಂದರೆ, ನಮಗೆ ಪ್ರತಿದಿನವೂ ವ್ಯಾಯಾಮ, ವಿನೋದ, ಊಟಉಪಚಾರಗಳು, ನಿದ್ರೆ, ಸುಂದರವಾದ ವನಪ್ರದೇಶಗಳ ವಿಹಾರ ಇವೆಲ್ಲಾ ಯಥೇಚ್ಛವಾಗಿ ಲಭಿಸಿದವು. ನಮ್ಮಿಂದ ಅರಣ್ಯ ಮೃಗಗಳಿಗೆ ಹೆಚ್ಚು ಹಿಂಸೆಯೂ ಆಗಲಿಲ್ಲ. ನಾವು ಆ ಮೃಗಗಳಿಗಿಂತ ಒಂದು ದಿವಸವೋ ಕೆಲವು ತಾಸುಗಳೋ ಹಿಂದೆಯೋ ಮುಂದೆಯೋ ಇರುತ್ತಿದ್ದೆವೇ ಹೊರತು ಅವುಗಳಿಗೆ ನಮ್ಮ ಭೇಟಿಯಾಗಲಿಲ್ಲ. ಪ್ರತಿ ದಿನವೂ ಬೆಳಿಗ್ಗೆ ಸಾಹಸಿಗಳಾದ ನಮಗೆ ಯೋಗ್ಯವಾದ ಫಲಾಹಾರವಾದ ನಂತರ ಮಧ್ಯಾಹ್ನದವರೆಗೂ ಬಂದೂಕುಗಳನ್ನು ಹೊತ್ತುಕೊಂಡು ”ಅಕ್ಕೋ! ಅಲ್ಲಿ ನೋಡಿ ಹುಲಿ ಹೆಜ್ಜೆ”; “ಇಲ್ಲಿ ನೋಡಿ! ಕಿರುಬದ ಹಿಕ್ಕೆ”- ಹೀಗೆ ನಮ್ಮ ಉತ್ಸಾಹವನ್ನು ಹುರಿಮಾಡತಕ್ಕ ಮಾತುಗಳನ್ನು ಲಾಲಿಸುತ್ತ ತಿರುಗಾಡುವುದು; ಮಧ್ಯಾಹ್ನ ನದಿ, ಅಥವಾ ಕೆರೆ, ಅಥವಾ ಇತರ ರಮ್ಯವಾದ ಪ್ರದೇಶದಲ್ಲಿ ಸಿದ್ಧವಾಗಿರುವ ಧಡವತಿಯಾದ ಊಟವನ್ನು ಸ್ವೀಕರಿಸಿ, ಸಂಜೆಯವರೆಗೂ ಮರದ ನೆರಳಿನಲ್ಲಿಯೋ, ಡೇರೆಯಲ್ಲೋ ಹಾಕಿರುವ ಕ್ಯಾಂಪ್ ಮಂಚಗಳ ಮೇಲೆ ಮಲಗುವುದು. ಸಂಜೆಗೆ ಮುಂಚೆ ಹೊರಟು ಪುನಃ ಬೆಳಗ್ಗಿನ ಪಾಠವನ್ನೇ ಪಠಿಸುವುದು. ರಾತ್ರೆ ಗಡದ್ದು ಭೋಜನವಾದ ಮೇಲೆ ಡೇರೆಯ ಮುಂದೆ ನಮ್ಮ ಸಿಬ್ಬಂದಿಯಿಂದ ಎಬ್ಬಿಸಿದ ಉರಿಯ ಸುತ್ತಲೂ ಕುಳಿತು ನಿದ್ರೆ ಬರುವವರೆಗೂ ಚುಟ್ಟ ಸೇದುತ್ತಾ ಹರಟೆ ಹೊಡೆಯುವುದು. ನಿದ್ರೆಯ ಬರುವಿಕೆಯಿಂದ ಮಾತುಗಳು ವಿರಳವಾಗುತ್ತಾ ಬಂದಮೇಲೆ ಎದ್ದು ಡೇರೆಯೊಳಕ್ಕೆ ಬಂದು ಮಲಗುವುದು. ಇದರಲ್ಲಿ ದುಷ್ಟವಾದ ವರ್ತನೆಯೇನಾದರೂ ಉಂಟೆ ? ಋಷಿಗಳು ಪೂರ್ವ ಕಾಲದಲ್ಲಿ ದಂಡಕಾರಣ್ಯ ಮೊದಲಾದೆಡೆಗಳಲ್ಲಿ ಹೀಗೆಯೇ ಕಾಲಕ್ಷೇಪ ಮಾಡುತ್ತಿದ್ದರೋ ಏನೋ!
ಈ ಪ್ರಕಾರ ಆರೇಳು ದಿನಗಳು ಕಳೆದನಂತರ ನಾವು ಮೂವರೂ ಮೇಲೆ ಹೇಳಿದಂತೆ ಬೆಂಕಿಯ ಸುತ್ತಲೂ ಕುಳಿತು ಮಾತನಾಡುತ್ತಿದ್ದೆವು.
ಅಣ್ಣಪ್ಪನವರು, ”ಹಿಂದಿನವರು ವನದೇವತೆಯೆಂದು ಹೇಳುತ್ತಿದ್ದರಲ್ಲ. ಅದು ಕೇವಲ ಭ್ರಮೆಯಲ್ಲ. ಪ್ರತಿಯೊಂದು ಕಾಡಿನಲ್ಲೂ ಒಂದು ಆತ್ಮ, ಒಂದು ಸ್ವರೂಪ ಇದೆ. ಸಾವಧಾನದಿಂದ, ಪ್ರೀತಿಯಿಂದ ಅರಣ್ಯದ ಸೇವೆಯನ್ನು ಮಾಡುವ ಉಪಾಸಕನಿಗೆ ಆ ವ್ಯಕ್ತಿಯು ಪ್ರತ್ಯಕ್ಷವಾಗುತ್ತೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ತನ್ನ ಸ್ವಭಾವದ ತಿಳಿವಳಿಕೆಯನ್ನು…” ಹೀಗೆ ಹೇಳುತ್ತಾ ಅರ್ಧೋಕ್ತಿಯಲ್ಲೇ ಮಾತನ್ನು ನಿಲ್ಲಿಸಿ, ಮುಖವನ್ನು ಮೇಲಕ್ಕೆತ್ತಿ, ಬಲಗೈಯನ್ನು ಮುಂದೆ ಚಾಚಿ-
”ಇದೋ, ಕೇಳಿ; ಇದು ಆಕೆಯ ಧ್ವನಿ” ಎಂದು ಸುಮ್ಮನಾದರು. ಅರಣ್ಯದಲ್ಲಿ ಎಲ್ಲಿಯೋ ಮಂದವಾಗಿ ಸಂಚರಿಸುತ್ತಿದ್ದ ಗಾಳಿಯಲ್ಲಿ ಮರಗಳ ಎಲೆಗಳಿಂದ ಮತ್ತು ರೆಂಬೆಗಳಿಂದ ಒಂದು ದೀರ್ಘವಾದ ಮಧುರ ಸ್ವರವು ಬರುತ್ತಿತ್ತು.
“ನಾನು ಕಣ್ಣು ಮುಚ್ಚಿಯಾದರೂ ಧ್ವನಿಯಿಂದ, ಗಂಧದಿಂದ, ಹೇಳಲಿಕ್ಕಾಗದ ಇತರ ಗುರ್ತುಗಳಿಂದ ‘ಇದು ಇಂಥ ಅರಣ್ಯ’ವೆಂದು ಹೇಳಬಲ್ಲೆ” ಎಂದರು ಅಣ್ಣಪ್ಪನವರು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ನನಗೆ ಏನೋ ಜ್ಞಾಪಕಕ್ಕೆ ಬಂದು ನಗು ಬಂತು. ನಾನು ವಿದ್ಯಾರ್ಥಿಯಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೃಹವೈದ್ಯ(House Surgeon)ನಾಗಿದ್ದಾಗ ಶಸ್ತ್ರ ಶಾಸ್ತ್ರದಲ್ಲಿ ಅದ್ವಿತೀಯರೆಂದು ಹೆಸರು ಪಡೆದಿದ್ದ ಒಬ್ಬ ಮಹಾನುಭಾವರ ಶಿಷ್ಯನಾಗಿದ್ದೆ. ಅವರ ಖ್ಯಾತಿಯನ್ನು ಕೇಳಿ ಬಹುದೂರದಿಂದ ರೋಗಿಗಳು ಅವರಲ್ಲಿ ಚಿಕಿತ್ಸೆಗೆ ಬರುತ್ತಿದ್ದರು. ಅವರು ರೋಗದ ಪ್ರತಿಯೊಂದು ಚಿಹ್ನೆಯನ್ನು ಏಕಾಗ್ರತೆಯಿಂದ ಪರಿಶೀಲಿಸುವುದರಲ್ಲಿ ರೋಗಿಯ ಮುಖಭಾವವನ್ನು ಒಂದೊಂದು ವೇಳೆ ದೃಷ್ಟಿಸಿ ನೋಡುತ್ತಿರಲಿಲ್ಲ. ಇದರ ಫಲವಾಗಿ ರೋಗದ ವ್ಯಕ್ತಿತ್ವ ಚೆನ್ನಾಗಿ ಜ್ಞಾಪಕದಲ್ಲಿದ್ದರೂ, ರೋಗಿಯ ವ್ಯಕ್ತಿತ್ವ ಒಂದೊಂದು ವೇಳೆ ಮರೆತುಹೋಗುತ್ತಿತ್ತು. ಈ ನಮ್ಮ ಗುರುಗಳು ಒಂದು ಸಲ ಒಬ್ಬ ನಾಟುಕೊಟ್ಟಿ ಸಾಹುಕಾರನ ಬೆನ್ನುಫಣಿಯನ್ನು ತಮ್ಮ ಅಮೋಘವಾದ ಶಸ್ತ್ರಪ್ರಯೋಗದಿಂದ ವಾಸಿ ಮಾಡಿದರು. ಅನೇಕ ವರ್ಷಗಳ ನಂತರ ಆ ಸಾಹುಕಾರನಿಗೆ ತಿರುಗಿ ಅದೇ ವ್ಯಾಧಿ. ಪುನಃ ನಮ್ಮ ಗುರುಗಳಲ್ಲೇ ಬಂದ. ಕೈಮುಗಿದು, “ತಿರುಗಿ ಬಂದೆ. ನನ್ನ ಜ್ಞಾಪಕವಿದೆಯೇ” ಎಂದ. ಅವನ ಜ್ಞಾಪಕ ನಮ್ಮ ಗುರುಗಳಿಗೆ ಬಂದ ಹಾಗೆ ಕಾಣಲಿಲ್ಲ. ಅವರು ಔದಾಸೀನ್ಯದಿಂದ ತಲೆಯನ್ನಲ್ಲಾಡಿಸಿ, “ಎಲ್ಲಿ ನಿಮ್ಮ ವ್ಯಾಧಿ ನೋಡೋಣ” ಎಂದು ಆ ಹುಣ್ಣನ್ನು ನೋಡಿದರು. ಕೂಡಲೆ ಪೂರ್ವ ಪರಿಚಯ ಅವರಿಗೆ ಹೊಳೆಯಿತು. ”ಓಹೋ! ಷಣ್ಮುಗಂ ಚೆಟ್ಟಿಯಾರೇ! ನಿಮ್ಮಲ್ಲಿ ಎಲ್ಲರೂ ಚೆನ್ನಾಗಿದ್ದಾರೆಯೇ” ಎಂದರು. ಇದೂ ನಮ್ಮ ಅಣ್ಣಪ್ಪನವರ ವನಧ್ವನಿ ವಿವೇಕದಂತೆಯೇ ಒಂದು ವಿಶೇಷ ವಿವೇಕವಲ್ಲವೇ?
ನಾರಾಯಣರಾವ್ ನನ್ನ ಮುಖವನ್ನು ನೋಡುತ್ತಿದ್ದವನು “ಏನು ತಮಾಷೆ?” (What’s the fun?) ಎಂದ.
ನನ್ನ ನಗುವಿನ ನಿಜವಾದ ಕಾರಣವನ್ನು ಹೇಳಿದರೆ, ಅಣ್ಣಪ್ಪನವರ ವಿಚಾರದಲ್ಲಿ ಅವಿನಯವಾಗಬಹುದು. ಅದಕ್ಕೋಸ್ಕರ-
“ಮೇಧಾವಿಗಳಾಗಿರುವವರು- ಅದರಲ್ಲೂ ಭಾವನಾಶಕ್ತಿ ಬಲವಾಗಿರುವವರು- ಬಹುಕಾಲ ಏಕಾಕಿಯಾಗಿ ಅರಣ್ಯ, ನದಿ, ಬೆಟ್ಟಗುಡ್ಡ ಪ್ರದೇಶಗಳಲ್ಲಿ ಜೀವನ ಮಾಡುತ್ತಿದ್ದರೆ, ಪ್ರಕೃತಿಗೆ ತಮ್ಮ ಜೀವದಿಂದ ಜೀವ ತುಂಬಿ, ಮರ, ನೀರು, ಬಂಡೆ ಇವುಗಳಲ್ಲಿ ಸ್ನೇಹ ಬೆಳೆಸುವ ಸಂಭವವುಂಟು. The poet’s eye, ಇತ್ಯಾದಿ” ಎಂದೆ.
ನಾರಾಯಣರಾವ್ ಸ್ವಲ್ಪ ಹೊತ್ತು ಸುಮ್ಮನಿದ್ದು, ಆಮೇಲೆ “ಅಣ್ಣಪ್ಪನವರ ಅನುಭವದ ವನದೇವತೆಗಳು ಸತ್ಯವೆಂದು ನನ್ನ ಮತ. ಯಾರದು ಸತ್ಯ, ಯಾರದು ಭ್ರಮೆ ಎಂದು ನಿರ್ಧರಿಸುವುದು ಹ್ಯಾಗೆ? ಅನುಭವವನ್ನು ಅನುಭವಿಸಿದವನೇ ಬಲ್ಲ. ಇನ್ನೊಬ್ಬನು ತಾನು ನೋಡಲಿಲ್ಲವೆಂದರೆ ಅದು ಇಲ್ಲವಾಗುತ್ತದೆಯೋ? ಕೆಲವು ಸಂಗತಿಗಳು ವಾದಕ್ಕೆ ವಿಷಯವಲ್ಲ. ಇವು- Scientific method-ಪ್ರತ್ಯಕ್ಷ, ಅನುಮಾನ, ಪರೀಕ್ಷೆ, ಪ್ರಮಾಣ ಇವುಗಳಿಗೆ ಸಿಕ್ಕುವುದಿಲ್ಲ. There are more things in heaven and earth,” ಹೀಗೆಂದು ಸುಮ್ಮನಾದನು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
”ನಿಮ್ಮ ಅನುಭವದಲ್ಲಿ ಅಂಥದು ಏನಾದರೂ ಬಂದಿತ್ತೆ?” ಎಂದು ಕೇಳಿದರು ಅಣ್ಣಪ್ಪನವರು.
ನಾರಾಯಣರಾವ್ ಸ್ವಲ್ಪಹೊತ್ತು ಸುಮ್ಮನಿದ್ದು, ಅನಂತರ ‘ಹೌದು’ ಎಂದನು.
“ನಮಗೆ ಹೇಳಬಹುದಾದ ಅನುಭವವೇ? ಹಾಗಿದ್ದರೆ ದಯವಿಟ್ಟು ಹೇಳಿ, ನಾವು ಮೂವರೂ ಆತ್ಮ ಸ್ನೇಹಿತರು ತಾನೆ?”
ನಾರಾಯಣರಾವ್ ಸ್ವಲ್ಪ ತನ್ನಲ್ಲೇ ವಿಚಾರಮಾಡಿ, ಆಮೇಲೆ,
“ನನ್ನ ಅನುಭವ ನನಗೆ ಬಂದದ್ದು ಇದೇ ಘಾಟಿಯ ಅರಣ್ಯದಲ್ಲಿ. ಈ ಸನ್ನಿವೇಶ, ಈ ಹೊತ್ತು, ಈ ಸ್ನೇಹಿತರು- ಇವುಗಳಿಗಿಂತ ಅನುಕೂಲವಾದ ವಾತಾವರಣ ಆ ಕತೆಗೆ ದೊರೆಯಲಾರದು. ನಾನು ಹೇಳುವುದು ನಿಜವಾಗಿ ನಡೆದದ್ದೋ, ಕನಸೋ, ನನಗೇ ಚೆನ್ನಾಗಿ ವಿಮರ್ಶೆಗೆ ಬಂದಿಲ್ಲ. ಇದನ್ನೂ ಒಂದು ಕತೆಯೆಂದೇ ಭಾವಿಸಿ, ಇದರಿಂದ ಕೆಲವು ಕಾಲ ವಿನೋದದಲ್ಲೋ, ವಿಸ್ಮಯದಲ್ಲೋ ಸಾಗಿದರೆ ನನಗೆ ಅದೇ ಸಂತೋಷ” ಎಂದು ಹೇಳಿದನು.
ಆಳುಗಳು ಇನ್ನು ಕೆಲವು ಒಣಸೌದೆ ತುಂಡುಗಳನ್ನು ಬೆಂಕಿಗೆ ಹಾಕಿ ಉರಿ ಮಾಡಿದರು. ನಾವು ಹೊಸ ಚುಟ್ಟಾಗಳನ್ನು ಹೊತ್ತಿಸಿ, ಕತೆಯನ್ನು ಕೇಳಲು ಮನಕೊಟ್ಟೆವು.
*
ನಾನು ಹೇಳುವ ಕತೆ ನಡೆದು ಆರು ವರ್ಷವಾಯಿತು. M.Sc. ಪ್ಯಾಸು ಮಾಡಿದ್ದೆ. ಮುಂದೇನು ಮಾಡಬೇಕೆಂಬುದೇ ದೊಡ್ಡ ಸಮಸ್ಯೆ. ‘ಭೂಶಾಸ್ತ್ರದಲ್ಲಿ ಡಾಕ್ಟರೇಟು ತೆಗೆದುಕೊಳ್ಳೋಣ. ನಮ್ಮ ಘಾಟಿ ಪ್ರದೇಶಗಳಲ್ಲಿ ಕೈಗಾರಿಕೆಗೆ ಬೇಕಾಗುವ ಅದರುಗಳು ಎಲ್ಲೆಲ್ಲಿ ಎಷ್ಟೆಷ್ಟು ಇವೆ ಎಂಬುದನ್ನು ಶಾಸ್ತ್ರೀಯವಾಗಿ ಕ್ಷೇತ್ರಪರೀಕ್ಷೆಯಿಂದ ವಿಮರ್ಶೆಮಾಡಿದರೆ, ಅದರಿಂದ ನನ್ನ ಡಾಕ್ಟರೇಟ್ thesisಗೂ ವಿಷಯ ಸಿಗುವುದಲ್ಲದೆ, ಅಥವಾ ಯಾರು ಬಲ್ಲರು?- ಯಾರಾದರೂ ಭಾರಿ ಬಂಡವಾಳಸ್ತರು ಅದುರು ಸಂಬಂಧವಾದ ಕೈಗಾರಿಕೆಯ ಕಾರ್ಖಾನೆ ಮಾಡುವುದಾದರೆ, ಆ ಸಾಹಸದಲ್ಲಿ ನನಗೂ ಒಂದು ಸ್ಥಾನ ಸಿಕ್ಕಬಹುದು. ಅಲ್ಲದೆ, ಇದು ನಾನು ಕಲಿತ ಶಾಸ್ತ್ರ ಘಾಟಿಯ ಕಾನುಗಳಲ್ಲಿ ಸುತ್ತಿ ಕ್ಷೇತ್ರ ಪರೀಕ್ಷೆ ಮಾಡುವುದಕ್ಕೆ ಹಣ ಬೇಕಾಗಿಲ್ಲ. ಶಾಸ್ತ್ರಜ್ಞಾನ, ಬಲವಾದ ದೇಹ, ಉತ್ಸಾಹ ಇವುಗಳಿದ್ದರೆ ಸಾಕು. ನನಗೆ ಅರಣ್ಯ ಪ್ರದೇಶಗಳಲ್ಲಿ ಸಂಚಾರ ಮಾಡುವುದೆಂದರೆ ಇಷ್ಟ.’ ಹೀಗೆ ಯೋಚನೆ ಮಾಡಿ ನಾನು ನನ್ನ ಕೆಲಸಕ್ಕೆ ಸಂಬಂಧಪಟ್ಟ ಸುತ್ತಿಗೆ, ಭೂತಕನ್ನಡಿ, ಮೊದಲಾದ ಸಾಮಾನುಗಳ ಚೀಲವನ್ನು ಹೆಗಲಿಗೆ ಹಾಕಿ ಕಾಡು ಸುತ್ತುವುದಕ್ಕೆ ತಕ್ಕ ಒರಟು ಉಡುಪುಗಳನ್ನು ಧರಿಸಿ ಒಂದು ‘ಕಂಪಾಸ್’ (compass), ಒಂದು ನೀರಿನ ಶೀಷೆ, ಒಂದು ಬಲವಾದ ಕೋಲು, ಇವುಗಳನ್ನು ಒದಗಿಸಿಕೊಂಡು ಹೊರಟೆ. ರೈಲು ಹೋಗುವವರೆಗೂ ರೈಲಿನಲ್ಲಿ ಪ್ರಯಾಣ ಮಾಡಿ, ನಂತರ ಪಾದಚಾರಿಯಾಗಿ ಅರಣ್ಯದಲ್ಲಿ ನುಗ್ಗಿದೆ. ಒಂದು ನಕಾಶೆ ಒಂದು ಜೇಬಿನಲ್ಲಿ, ಮತ್ತೊಂದರಲ್ಲಿ ದಿಕ್ಕೂಚಿ. ನನ್ನ ನಿತ್ಯಕಟ್ಟೆ ಈ ರೀತಿಯಿತ್ತು: ಮಧ್ಯಾಹ್ನದವರೆಗೂ ತಿರುಗುವುದು, ಸಿಕ್ಕಬಹುದಾದ ಅದುರುಗಳ ಮಾದರಿಗಳನ್ನು ಸುತ್ತಿಗೆ, ಕುಲ್ಲುಳಿಗಳ ಸಹಾಯದಿಂದ ಸಂಗ್ರಹಿಸುವುದು; ಮಧ್ಯಾಹ್ನ ಹತ್ತಿರದಲ್ಲಿರುವ ಯಾವುದಾದರೂ ಹಳ್ಳಿಗೆ ಹೋಗಿ, ಅಲ್ಲಿನ ಮುಖಂಡನ ಮನೆಯಲ್ಲಿ ಊಟ, ವಿಶ್ರಾಂತಿಗೆ ಜಾಗ ಬೇಡುವುದು; ಸಾಯಂಕಾಲ ನಾಲ್ಕು ಘಂಟೆಗೆ ಅದೇ ರೀತಿ ತಿರುಗಾಡಿ, ರಾತ್ರಿ ಅದೇ ಗ್ರಾಮವನ್ನಾಗಲಿ, ಮತ್ಯಾವುದಾದರೂ ಗ್ರಾಮವನ್ನಾಗಲಿ ಸೇರುವುದು. ಈ ಮಲೆನಾಡಿನಲ್ಲಿ ಗ್ರಾಮವೆಂದರೆ ನಾಲ್ಕು ಮನೆ-ಸಾಹುಕಾರ, ಜೀತದ ಆಳುಗಳು. ನಾನು ಮೊದ ಮೊದಲು ಊಟಕ್ಕೆ ದುಡ್ಡು ಕೊಡಲು ಹೋದೆ. ಯಾರೂ ತೆಗೆದುಕೊಳ್ಳವಲ್ಲರು. ಕೆಲವರು ಬಹಳ ಕೋಪಗೊಂಡರು. ಆಮೇಲೆ, ಊಟದ ಹೊತ್ತಿಗೆ ಹೋಗುವುದು; ನಾನು ಪರಸ್ಥಳದವನೆಂದು ಹೇಳುವುದು; ಇಷ್ಟೇ ಸಾಕಾಗಿತ್ತು.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಹೀಗೆ ಹತ್ತಾರು ದಿವಸಗಳು ಸಂಚಾರ ಮಾಡಿದೆ. ಒಂದು ಸಾಯಂಕಾಲ ಆಯಾಸಪಟ್ಟು, ಒಂದು ಎತ್ತರವಾದ ಪ್ರದೇಶದ ತಲೆಯಂತಿದ್ದ ಒಂದು ಬಂಡೆಯ ಮೇಲೆ ಕುಳಿತು, ನನ್ನ ನೀರಿನ ಶೀಷೆಯ ನೀರನ್ನು ಕುಡಿದು, ಪಶ್ಚಿಮ ದಿಕ್ಕಿನಲ್ಲಿ ನನ್ನ ಕಣ್ಣಿನ ಕೆಳಗೆ ಹಸುರು ಸಮುದ್ರದಂತೆ ನೋಡುವಷ್ಟು ದೂರವೂ ವಿಸ್ತರಿಸಿಕೊಂಡಿದ್ದ ಕಾನನವನ್ನು ನೋಡುತ್ತಿದ್ದೆ. ಅಸ್ತಮಯ ಸಮಯ. ಪ್ರಕೃತಿಯ ಸೊಬಗಿಗೆ ಬೆರಗಾದ ನನಗೆ ಕಾಲವ್ಯಯದ ಯೋಚನೆಯೇ ಬರಲಿಲ್ಲ. ಪಶ್ಚಿಮವು ಒಂದು ಕುರುಕ್ಷೇತ್ರದಂತೆ ನನಗೆ ಭಾವನೆಯೊಂದು ಹುಟ್ಟಿತು. ಮಹಾಭಾರತದಲ್ಲಿನ ಹಲವು ಶ್ಲೋಕಗಳು ನೆನಪಿಗೆ ಬಂದವು. ಕೊನೆಗೆ ರಕ್ತದಲ್ಲಿ ತೊಯ್ದ ಮೇಘಗಳ ಮಧ್ಯದಲ್ಲಿ ಕರ್ಣನ ತಂದೆಯು ಮರೆಯಾದನು. ಆಗ ನನಗೆ ಓಹೋ! ಹೊತ್ತಾಯಿತು!! ಆದುಂಬಿಗೆ ಇನ್ನೂ ಮೂರು ಮೈಲಿ ದೂರವಿದೆ!!! ಕತ್ತಲಾಗುವುದರೊಳಗಾಗಿ ಸೇರಿಕೊಳ್ಳಬೇಕೆಂಬ ಜ್ಞಾನ ಬಂತು. ನಾನು ಕುಳಿತಿದ್ದ ಬಂಡೆಯಿಂದ ಎದ್ದು, ಅರಣ್ಯಕ್ಕೆ ಇಳಿದು, ಅಲ್ಲಿ ಆದುಂಬಿ ದಿಕ್ಕೆಂದು ನನಗೆ ತೋರಿದ ಕಡೆಗೆ ಮುಖ ಮಾಡಿಕೊಂಡು, ಕೈಲಾದಷ್ಟು ತ್ವರೆಯಾಗಿ ನಡೆದೆ. ಆ ದಟ್ಟವಾದ ಮರಗಳ ಕೆಳಗೆ ಬಹುಬೇಗ ಕತ್ತಲಾಯಿತು. ಕಾಡಿನಲ್ಲಿ ಒಂದು ವಿಚಿತ್ರವುಂಟು. ನೀವು ಬಲ್ಲಿರಷ್ಟೆ? ಎತ್ತ ತಿರುಗಿದರೂ ಇದೇ ದಾರಿ. ಇದೇ ಸಾಲುಮರಗಳು ಎಂಬ ಭ್ರಮೆ ಬರುತ್ತೆ. ಕತ್ತಲಲ್ಲಿ ನನ್ನ ಕಂಪಾಸನ್ನು ರಂಜಕದ ಕಡ್ಡಿ ಬೆಳಕಿನಲ್ಲಿ ನೋಡಿದೆ. ನಾನು ಇಂಥ ಕಡೆ ಇದ್ದೇನೆಂಬುದು ಗೊತ್ತಿಲ್ಲದ ನನಗೆ ಕಂಪಾಸಿನ ನೇತೃತ್ವ ಕೆಲಸಕ್ಕೆ ಬರಲಿಲ್ಲ; ಕಡ್ಡಿಗಳೂ ತೀರಿಹೋಗುತ್ತ ಬಂದವು. ಜನಗಳು ‘ನಿಶ್ಯಬ್ದವಾದ ಅರಣ್ಯ’ ಎಂದು ಹೇಳುವುದುಂಟು. ಇದು ಶುದ್ಧ ಸುಳ್ಳು. ರಾತ್ರಿಯಲ್ಲಿ ಗಾಳಿ ಬೀಸಿದರೆ ಪ್ರತಿಯೊಂದು ಮರಕ್ಕೂ ಒಂದು ಧ್ವನಿಯುಂಟು. ಕೆಲ ಧ್ವನಿಗಳು ಧೀರ; ಕೆಲವು ದೀನ; ಮತ್ತೆ ಕೆಲವು ಕರುಣ-ನಮ್ಮ ಅಣ್ಣಪ್ಪನವರು ಹೇಳಿದ್ದು ಅನುಭವಸಿದ್ದವಾದ ಸತ್ಯ.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?
ಸ್ವಲ್ಪದರಲ್ಲೇ ಪೂರಾ ಕತ್ತಲಾಯ್ತು. ಮೇಲೆ ನೋಡಿದರೆ ಮರಗಳ ಮರೆಯಿಂದ ನಕ್ಷತ್ರಗಳು ಕಾಣವು. ಎಲ್ಲಿ ನೋಡಿದರೂ ಮರಗಳೇ. ದೂರದಲ್ಲಿ, ಹತ್ತಿರದಲ್ಲಿ, ಸುತ್ತಮುತ್ತಲು ಮೃಗಗಳ ಸುಳಿವು ಮತ್ತು ಕೂಗಿನ ಶಬ್ದಗಳು ಬರತೊಡಗಿದವು. ನನ್ನ ಕಣ್ಣಿಗೆ ಅವುಗಳು ಕಾಣುವುದಿಲ್ಲ; ಅವುಗಳ ಕಣ್ಣಿಗೆ ನಾನು ಚೆನ್ನಾಗಿ ಕಾಣುತ್ತೇನೆ. ಹೀಗೆ ಚಿಂತಿಸುವ ನನಗೆ ಭಯವುಂಟಾಯಿತು. ಇನ್ನು ಮುಂದೆ ಹೋಗಿ ಪ್ರಯೋಜನವಿಲ್ಲ. ಅನುಕೂಲವಾದ ಯಾವುದಾದರೂ ಒಂದು ಮರದ ಕವಲಿನಲ್ಲಿ ಕುಳಿತು ರಾತ್ರಿಯನ್ನು ಕಳೆಯೋಣವೆಂದು ತೋರಿತು. ಆದರೆ ಆ ದೆವ್ವಮರಗಳನ್ನು ಏರುವುದಾದರೂ ಹ್ಯಾಗೆ? ಕೊನೆಗೆ ಅಷ್ಟು ಅಸಾಧ್ಯವಲ್ಲದ, ಹರಡಿದ ರೆಂಬೆಗಳುಳ್ಳ ಒಂದು ಮರವು ನನ್ನ ಕೊನೆಯ ರಂಜಕದ ಕಡ್ಡಿಯ ಹೊಳಪಿನಲ್ಲಿ ಕಂಡುಬಂತು. ಬಹಳ ಪ್ರಯಾಸದಿಂದ ಅದನ್ನು ಹತ್ತಿ ಅಲ್ಲಿ ತಡಕಾಡಿ, ಕೊನೆಗೆ ಆ ಮರದ ಕವಲಿನಲ್ಲಿ ಕುಳಿತೆ. ಬಹುದೂರ ನಡೆದು ಬಳಲಿದ್ದ ನನಗೆ ಸ್ವಲ್ಪಕಾಲವಾದ ಮೇಲೆ ನಿದ್ರೆ ಬಂದುಬಿಟ್ಟಿತು.

ಹೀಗೆ ಎಷ್ಟು ಹೊತ್ತು ನಿದ್ರಿಸುತ್ತಿದ್ದೆನೋ ನನಗೆ ಗೊತ್ತಿಲ್ಲ. ಇದ್ದಕ್ಕಿದ್ದ ಹಾಗೇ ಎಚ್ಚರವಾಯಿತು. ಒಂದೇ ದುಂಡಿಯಮೇಲೆ ಭಾರ ಬಿಟ್ಟು ಕುಳಿತಿದ್ದ ನೋವಿನ ದೆಸೆಯಿಂದ ಅಷ್ಟು ಗಾಢನಿದ್ರೆ ಇದ್ದಿರಲಾರದು. ಕುದುರೆ ಹೆಜ್ಜೆ ಸದ್ದಿನಿಂದ ಎಚ್ಚರವಾಯಿತೆಂದು ನನ್ನ ಭಾವನೆ-ಮೂಡಲಲ್ಲಿ ಸ್ವಲ್ಪ ಮರಗಳು ವಿರಳತೆಯಿಂದ ಆಕಾಶದಲ್ಲಿ ಮೂರು ನಾಲ್ಕು ಮಾರು ಮೇಲೆ, ಅರ್ಧಕ್ಕೆ ಸ್ವಲ್ಪ ಕಿರಿದಾದ ಚಂದ್ರ ಕಾಣುತ್ತಿತ್ತು. ಕುದುರೆಯ ಸಪ್ಪಳ ಸಮೀಪಕ್ಕೆ ಬಂತು. ನನ್ನ ಮರದ ಕೆಳಗೇ ಹತ್ತಿರವೇ ಸಾಗಿಬಂತು. ನಂತರ ಕುದುರೆ, ಅದರ ಸವಾರ ನನ್ನ ಮರದ ಮುಂದಿನ ದಾರಿಯಲ್ಲೇ ಸರಿದರು. ಸೊಗಸಾದ ಮಾನ್ ದೇಶದ ಕುದುರೆ; ಅರೆಗತ್ತಲಲ್ಲಿ ಅದರ ಬಣ್ಣ ಅಷ್ಟು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆದರೂ, ಅದು ತೇಲಿಯಾಕುಮೇದು- ಇಂಗ್ಲೀಷಿನಲ್ಲಿ ‘ಬೇ’ ಎನ್ನುತ್ತಾರಲ್ಲ- ಆ ಬಣ್ಣ. ತಲೆಯನ್ನು ಭಲೆ ಗರ್ವದಿಂದ ನಾಗರಹೆಡೆಯ ಹಾಗೆ ಎತ್ತಿಕೊಂಡು, ಹೆಜ್ಜೆಹೆಜ್ಜೆಗೂ ಕಾಲನ್ನು ಮಂಡಿಯ ಮಟ್ಟಕ್ಕೆ ಎತ್ತಿ ನೆಲವನ್ನು ತಿರಸ್ಕರಿಸಿ ತುಳಿಯುವಂತೆ ನಡೆಯುತ್ತಿತ್ತು. ಆ ಕುದುರೆಗೆ ತನ್ನ ರೂಪು, ಶಕ್ತಿ, ಜಾತಿ ಇವುಗಳ ಗರ್ವವೋ, ಅಥವಾ ಮೇಲೆ ಕುಳಿತಿರುವ ನಾಯಕನ ಸಂಬಂಧದ ದರ್ಪವೋ, ಯಾರು ಬಲ್ಲರು? ಆಗ ಅವನ ಮುಖದ ಗಂಡು ಸೊಬಗನ್ನು ನಾನು ನೋಡಲು ಅವಕಾಶವಾಗದಿದ್ದರೂ, ಅವನ ಧೀರ ಠೀವಿ, ಅವನ ವಿಶಾಲವಾದ ಎದೆ, ಆ ದೊಡ್ಡ ಕುದುರೆಯನ್ನು ತನ್ನ ಅಂಗಗಳಲ್ಲಿ ಒಂದೋ ಎಂಬಂತೆ ಆಳುತ್ತಿರುವ ಚಂದ, ಇವುಗಳು ಚೆನ್ನಾಗಿ ಕಾಣುತ್ತಿದ್ದವು. ಇವನು ಧರಿಸಿದ್ದದ್ದು ಶಿವಾಜಿ ಪಠಗಳಲ್ಲಿ ಕಾಣುತ್ತೆಯಲ್ಲ- ಅಂಥ ಅಂಗರೇಖು, ಮತ್ತು ತಲೆಪಾಗು; ಅವನ ಬಲಭುಜದ ಮೇಲಿನಿಂದ ಬಂದ ಒಂದು ಪಟ್ಟಿಗೆ ಕಟ್ಟಿದ್ದ ಒಂದು ‘ತಲವಾರು’ ನಮೂನೆ ಕತ್ತಿ ಅವನ ಎಡಗಡೆ ತೊಡೆಯ ಮಗ್ಗುಲಲ್ಲಿ ನೇತಾಡುತ್ತಿತ್ತು. ಕುದುರೆಯು ದೊಡ್ಡ ನಡಿಗೆಯಲ್ಲಿ ನನ್ನ ಮರದ ಮುಂದೆ ಹೋಗುವಾಗ ಇದನ್ನೆಲ್ಲಾ ನೋಡಿದೆ. ಕನಸಿರಬಹುದೇ ಎಂದು ಕಣ್ಣು ಒರೆಸಿಕೊಂಡು ಕಣ್ಣು ಮರೆಯಾಗುವವರೆಗೂ ನೋಡಿದೆ. ಯಾಕೆಂದರೆ ಆ ತರಹದ ಡ್ರೆಸ್ಸನ್ನು ನಾನು ನಾಟಕಗಳಲ್ಲಿ, ಚಿತ್ರಗಳಲ್ಲಿ ನೋಡಿದ್ದೆನೇ ಹೊರತು, ಸಾಮಾನ್ಯ ಜೀವನದಲ್ಲಿ ಕಂಡಿರಲಿಲ್ಲ. ಅದೂ ಅಲ್ಲದೆ, ನಿಶಿರಾತ್ರಿಯಲ್ಲಿ ಕುದುರೆ ಸವಾರ ದಟ್ಟವಾದ ಘಾಟಿ ಅರಣ್ಯದ ಮಧ್ಯದಲ್ಲಿ ಎಲ್ಲಿಗೆ ಹೊರಟಿರಬಹುದು? ಹೀಗೆ ನಾನು ಆಶ್ಚರ್ಯಪಡುತ್ತಿರುವಲ್ಲೇ ಆ ರಾಹುತನು ಮರಗಳಲ್ಲಿ ಮರೆಯಾದ. ನನಗೆ ತೋರಿತು-ಈತ ಯಾವುದೋ ಊರಿಗೋ ಹಳ್ಳಿಗೋ ಹೋಗುತ್ತಾನೆ. ಇವನ ಹಿಂದೆ ಹೋದರೆ ನಾನು ಇವತ್ತು ರಾತ್ರೆಯನ್ನೆಲ್ಲಾ ಈ ಹಾಳು ಮರದ ಕವಲಿನಲ್ಲಿ ತಪಸ್ಸುಮಾಡಿ ಕಳೆಯಬೇಕಾದ್ದಿಲ್ಲ. ಅಲ್ಲದೆ ಒಬ್ಬನೇ ಇರುವುದಕ್ಕಿಂತ ಆಯುಧಪಾಣಿಯಾದ ಮನುಷ್ಯನು ಕೂಗು ದೂರದಲ್ಲಾದರೂ ಇರುವುದು ಲೇಸು. ಆ ಮನುಷ್ಯನು ತಮಾಷೆ ಡ್ರೆಸ್ಸು ಹಾಕಿದ್ದರೂ ಕಳ್ಳನೆಂದು ಊಹಿಸಲಿಕ್ಕೂ ಸಾಧ್ಯನಲ್ಲ. ಹೀಗೆಂದುಕೊಂಡು ನಾನು ಮರದಿಂದ ಇಳಿದೆ. ಅಷ್ಟು ಹೊತ್ತಿಗೆ ಸವಾರನು ಕಣ್ಮರೆಯಾಗಿದ್ದರೂ, ಚೆನ್ನಾಗಿ ಕೇಳುತ್ತಿದ್ದ ಕುದುರೆಯ ಕಾಲಿನ ಸದ್ದನ್ನು ಅನುಸರಿಸಿ ನಾನೂ ದೊಡ್ಡ ಹೆಜ್ಜೆಯಿಟ್ಟು ಮುಂದೆ ನಡೆದೆ. ಸುಮಾರು ಒಂದು ಮೈಲಿಯ ದೂರ ನಡೆದಮೇಲೆ ಸ್ವಲ್ಪ ಬೈಲು ಸ್ಥಳ ಬಂತು. ಸವಾರನೂ, ವಾಹನವೂ ಚೆನ್ನಾಗಿ ಕಾಣಲಿಕ್ಕೆ ಹತ್ತಿದರು. ಅವರ ಸಮೀಪಕ್ಕೆ ಹೋಗದೇ, ಅವರನ್ನೇ ಹಿಂಬಾಲಿಸಿದೆನು. ಹಾಗೆಯೇ ಇನ್ನೆರಡು ಮೂರು ಮೈಲಿಗಳ ದೂರ ನಡೆದೆವು. ಒಂದು ಸಣ್ಣ ಹಳ್ಳವನ್ನು ದಾಟಿದೆವು. ಆಮೇಲೆ ಎದುರಿಗಿರುವ ಮೇಡು ಪ್ರದೇಶದಲ್ಲಿ ಮರಗಳ ಸಂದಿನಲ್ಲಿ ಹಲವು ದೀಪಗಳು ಮಿಣುಗುತ್ತಿದ್ದುದನ್ನು ಕಂಡೆ, ಇಲ್ಲೊಂದು ಅಲ್ಲೊಂದು ಕಾಣುತ್ತಿದ್ದ ದೀಪಗಳ ವಿರಳತೆಯನ್ನು ನೋಡಿದರೆ, ದೊಡ್ಡ ಊರು ಇದ್ದಿರಬೇಕು. ಆ ಊರಿನಲ್ಲಿ ಪ್ರವೇಶಿಸಿದ ನನ್ನ ಸವಾರನ ಹಿಂದೆ ನಾನೂ ಹೊರಟೆ. ನಾಯಿಗಳು ಬೊಗಳಲಿಕ್ಕೆ ಹತ್ತಿದವು. ಇಬ್ಬರು ಆಯುಧಪಾಣಿಗಳಾದ ಮನುಷ್ಯರು ಎತ್ತಲಿಂದೋ ಬಂದು ಕೋಲುಗಳಿಂದಲೋ ಭರ್ಜಿಗಳಿಂದಲೋ ಕುದುರೆಗೆ ಅಡ್ಡಗಟ್ಟಿ- ‘ಯಾರು? ನಿಲ್ಲು’ ಎಂದರು. ಆಗ ಸವಾರನು ಬಗ್ಗಿ ಏನನ್ನೋ ಹೇಳಿ, ಅವರಿಗೆ ತನ್ನ ಕಿಸೆಯಿಂದ ಏನನ್ನೋ ತೆಗೆದುಕೊಟ್ಟನು. ಅವರು ಕೈಮುಗಿದು ಹಿಂಜರಿದರು. ನಾನು ಮುಂದೆ ಹೋಗಲಾಗಿ ನನ್ನನ್ನು ಆ ಸವಾರನ ಆಳೆಂದು ತಿಳಿದಿರಬೇಕು; ತಂಟೆಯಿಲ್ಲದೆ ಹೋಗಬಿಟ್ಟರು. ನಾನು ಹೋಗುತ್ತಿರುವ ಹಾಗೆಯೇ ಅವರು ಏನೋ ಮಾತನಾಡಿಕೊಂಡದ್ದನ್ನು ನೋಡಿದೆ- ನೋಡಿದೆ, ಆದರೆ ಕೇಳಲಿಕ್ಕಾಗಲಿಲ್ಲ-ಒಬ್ಬನು ಏನೋ ಹೇಳಿದ್ದಕ್ಕೆ ಮತ್ತೊಬ್ಬನು ಆಶ್ಚರ್ಯದಿಂದ ತಲೆಯೆತ್ತಿ ಕುದುರೆ ಹೋದ ದಿಕ್ಕಿನ ಕಡೆ ನೋಡಿದನು. ಆಮೇಲೆ ಇಬ್ಬರೂ ಸ್ವಲ್ಪ ನಕ್ಕರು. ನಾನು ಮುಂದೆ ಹೊರಟೆ. ಆ ಊರಿನಲ್ಲಿ ಮುನಿಸಿಪಾಲಿಟಿ-ಕೊನೆಗೆ ಯೂನಿಯನ್ ಕೂಡ-ಇದ್ದಿರಲಾರದು. ಯಾಕೆಂದರೆ ದೊಡ್ಡ ಮನೆಗಳಿದ್ದರೂ, ಬೀದಿಯಲ್ಲಿ ದೀಪಗಳೇ ಇಲ್ಲ; ಮನೆಗಳ ನೆರಳಿನಿಂದ ಕೆಳಗೆ ಕಗ್ಗತ್ತಲೆ. ನನ್ನ ಸವಾರನು ರಾಜಮಾರ್ಗದಿಂದ ಒಂದು ಗಲ್ಲಿಗೆ ತಿರುಗಿ, ಒಂದು ಮನೆಯ ಮುಂದೆ ನಿಂತು ಕುದುರೆಯಿಂದ ಇಳಿದು ಕುದುರೆಯನ್ನು ಲಗಾಮಿನಿಂದ ಮನೆಯ ಮುಂದಿದ್ದ ಒಂದು ಕಂಬಕ್ಕೆ ಕಟ್ಟಿದನು. ಮನೆಯ ಬಾಗಿಲನ್ನು ತಟ್ಟಿದನು. ಸ್ವಲ್ಪ ಹೊತ್ತು ಯಾವ ಪ್ರತ್ಯುತ್ತರವೂ ಬರಲಿಲ್ಲ. ಆಮೇಲೆ ಒಳಗಡೆ ಯಾರೋ ದೀಪ ಹಚ್ಚಿದಂತೆ ಬೆಳಕು ಕಂಡಿತು. ನಂತರ ಬಾಗಿಲ ಹತ್ತಿರ ಬಂದು,
“ಯಾರು, ಅದು?”
“ನಾನು, ಲಕುಮಿ.”
ಬಹಳ ಗಂಭೀರವಾದ ಸ್ವರ. ಒಳಗಿದ್ದವರು ಆಶ್ಚರ್ಯದಿಂದ ಶ್ವಾಸವನ್ನು ಒಳಕ್ಕೆ ಎಳೆದುಕೊಂಡಂತೆ ಕೇಳಿಸಿತು. ಕೂಡಲೆ ಬಾಗಿಲು ತೆಗೆದು,
”ಅಯ್ಯೋ ನನ್ನ ದಣಿ! ತಾವೇ? ಹೀಗೆ ಬರಬಹುದೇ? ಒಳಕ್ಕೆ ದಯಮಾಡಿ” ಎಂಬುವುದರೊಳಗಾಗಿ ಸವಾರನು ಮನೆಯೊಳಕ್ಕೆ ಹೋದನು. ಬಾಗಿಲು ಹಾಕಿ ಅಗಣಿ ಹಾಕಿದ ಸದ್ದು ಕೇಳಿಸಿತು. ಸಣ್ಣ ಮನೆ; ಒಳಗಿನ ಸದ್ದು ಸ್ಪಷ್ಟವಾಗಿ ಕೇಳುತ್ತಿತ್ತು.
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
“ದಣಿಯವರು ಇಷ್ಟುಹೊತ್ತಿಗೆ ಈ ಗಡೀ ಊರಿಗೆ ಬರಬಹುದೇ? ಏನಾದರೂ ಆದರೆ ಏನು ಅನಾಹುತ, ಏನು ಅಪಖ್ಯಾತಿ.”
ಇದು ಒಬ್ಬ ಬೇರೇ ಹೆಂಗಸಿನ ಧ್ವನಿ; ದನಿಯಿಂದ ಗಣಿಸುವುದಾದರೆ ಆಕೆಗೆ ನಲ್ವತ್ತು, ಐವತ್ತು ವರ್ಷಗಳಿರಬಹುದು.
“ನಾನು ಬರುತ್ತೇನೆಂದು ಹೇಳಿದ್ದೆ; ಬಂದಿದ್ದೇನೆ. ಲಕುಮಿಯನ್ನು ಕರೆದುಕೊಂಡು ಹೋಗುವುದಕ್ಕೆ ಬಂದಿದ್ದೇನೆ. ಈ ಸರು ಹೊತ್ತಿನಲ್ಲಿ ನಿಮ್ಮ ಪಾಳೆಯಗಾರರು ನಿಮ್ಮನ್ನು ಬೀಳ್ಕೊಡಬೇಕಾಗಿಯೂ ಇಲ್ಲ, ನಾನು ಅವರ ಅಪ್ಪಣೆಯನ್ನು ಕೇಳಬೇಕಾಗಿಯೂ ಇಲ್ಲ. ಸಿದ್ದವಾಗು ಲಕುಮಿ.”
ಅವರು ಆಡುತ್ತಿದ್ದ ಮಾತನ್ನು ನನ್ನ ಭಾಷೆಯಲ್ಲಿ ಹೇಳುತ್ತಿದ್ದೇನೆ- ಅದು ಕನ್ನಡವೇ, ಆದರೆ ನಾವಾಡುವ ಕನ್ನಡವಲ್ಲ. ಅಲ್ಲವೇ ಅಲ್ಲವೆನ್ನುವ ಹಾಗೂ ಇಲ್ಲ-ಹಳೆಗನ್ನಡವೆಂದು ಈಗಿನ ಲೇಖಕರು ಬರೆಯುತ್ತಾರಲ್ಲ, ಆ ವಿಜಾತೀಯ ಮತದ ಮಾತೂ ಅಲ್ಲ-ನಾಟಕದಲ್ಲಿ ಆಡುವ, ಜೀವನದಲ್ಲಿ ಎಲ್ಲೂ ಕೇಳದ ಬಣ್ಣದ ಮಾತು ಅಲ್ಲ- ನನಗೆ ಸುಲಭವಾಗಿ ಅರ್ಥವಾಗುತ್ತಿತ್ತು. ನಾವಾಡುವ ಮಾತಿಗೂ ಆ ಮಾತಿಗೂ, ಮೊಮ್ಮಗಳಿಗೂ ಅಜ್ಜಿಗೂ ಇರುವ ಹೋಲಿಕೆ ಇರುವಂತೆ ನನಗೆ ತೋರಿತು.
ನನಗೆ- ಇದು ಯಾವ ಊರು? ನಾನು ಮ್ಯಾಪಿನಲ್ಲಿ ಈ ಸುತ್ತಿನಲ್ಲಿ ಯಾವ ಗ್ರಾಮಗಳನ್ನೂ ನೋಡಿದ ಹಾಗಿಲ್ಲವಲ್ಲ? ಇದು ಯಾವ ನಾಡಿನ ಸವಿಗನ್ನಡ? ಸ್ವಲ್ಪ ವಿಜಾತೀಯವಾಗಿದ್ದರೂ ಕಿವಿಗೆ ಎಷ್ಟು ಇಂಪಾಗಿದೆ-ಎಂದು ತೋರುತ್ತಿತ್ತು.
“ಕುಮಾರರ ಜೀವ ಅಮೂಲ್ಯವಾದದ್ದು. ನಾವು ಬಡವರು, ಆದರೆ ನಮಗೂ ಧರ್ಮ ಉಂಟು. ತಾವು ಈ ವೇಳೆ ಏಕಾಕಿಯಾಗಿ ಬರತಕ್ಕದ್ದೂ ಅಲ್ಲ, ನಾನು ತಮ್ಮ ಸಂಗಡ ಈ ರೀತಿಯಾಗಿ ಕದ್ದು ಬರತಕ್ಕವಳೂ ಅಲ್ಲ, ತಾವು ತಮ್ಮ ಧರ್ಮವನ್ನು ಮರೆತು ನನ್ನನ್ನೂ ಬಹಳ ಹಗುರಳನ್ನಾಗಿ ನೋಡುವಂತೆ ಕಾಣುತ್ತೆ.”
“ಲಕುಮಿ, ನನ್ನ ಕುಲದೇವತೆಯ ಸಾಕ್ಷಿಯಾಗಿ ಹೇಳುತ್ತೇನೆ, ಕೇಳು. ನೀನು ಆವತ್ತು ನನ್ನ ಜೀವವನ್ನು ರಕ್ಷಿಸಿದೆ-ಗಾಯಗೊಂಡಿದ್ದ ನನ್ನನ್ನು ಮನೆಯಲ್ಲಿ ಗೋಪ್ಯವಾಗಿ ಕಾಪಾಡಿ, ಆರೈಕೆ ಮಾಡಿದೆ. ನೀನು ಮರೆತಿರಬಹುದು-ಆದರೆ ಅದು ನನ್ನ ಜೀವದ ಮೇಲೆ ಕೆತ್ತಿದೆ. ಆವತ್ತು ನಾನು ಗಾಯವಡೆದು, ಬಳಲಿ, ಬಾಯಾರಿ, ಜೀವದ ಮೇಲಿನ ಆಶೆಯನ್ನು ಬಿಟ್ಟು-ಸಾಯುವುದಕ್ಕೆ ಮುಂಚೆ ನನ್ನನ್ನು ಸುಡುತ್ತಿರುವ ದಾಹವನ್ನು ತೀರಿಸಿಕೊಳ್ಳೋಣವೆಂದು ನಿಮ್ಮೂರಿನ ಕೆರೆಗೆ ಇಳಿದದ್ದು, ಸ್ವಲ್ಪ ಕಾಲದಲ್ಲೇ ನನ್ನನ್ನು ಅರಸುತ್ತಿದ್ದ ತುರುಕರು ದೌಡಾಯಿಸಿ ಬಂದದ್ದು, ಅಲ್ಲಿ ನೀರಿಗೆ ಬಂದಿದ್ದ ನೀನು ಅಲ್ಲಿದ್ದ ಚೊಂಬಿನ ಹಿಂದೆ ನೀರಿನಲ್ಲಿ ಅವಿತುಕೊಳ್ಳಲು ನನಗೆ ಸಂಜ್ಞೆಮಾಡಿದ್ದು, ನಾನು ಹಾಗೆ ಮಾಡುವುದರೊಳಗಾಗಿ ಆ ಯಮದೂತರು ಅಲ್ಲಿಗೆ ಬಂದು ನಿನ್ನನ್ನು “ಯಾರಾದರೂ ಪೆಟ್ಟುತಿಂದ ಸಿಪಾಯಿಯು ಇಲ್ಲಿಗೆ ಬಂದಿದ್ದನೇ?” ಎಂದು ಕೇಳಿದ್ದು, ನೀನು ಸುಮ್ಮನಿರಲು, ಹೇಳದಿದ್ದರೆ ಕೊಲ್ಲುವುದಾಗಿ ನಿನ್ನನ್ನು ಹೆದರಿಸಿದ್ದು; ನಿನ್ನ ಧೈರ್ಯ, ನಿನ್ನ ಕಾರುಣ್ಯ- ಇವುಗಳನ್ನು ನಾನು ಮರೆತರೆ ನನ್ನ ಜಾತಿಗೆ, ನನ್ನ ವಂಶಕ್ಕೇ ಅಪಮಾನವಲ್ಲವೇ? ಅಂದಿನಿಂದ ಇಂದಿನವರೆಗೂ ಯಾವಾಗಲೂ ನಿನ್ನ ಚಿಂತೆಯೇ; ನಿನ್ನ ಮಹದುಪಕಾರದ ಭಾರವನ್ನು ಯಾವ ರೀತಿ ನಿವಾರಿಸುವೆನೆಂಬ ಯೋಚನೆಯೇ! ಕೇವಲ ಕೃತಜ್ಞತೆಯಲ್ಲ. ಕೃತಜ್ಞತೆಯಲ್ಲಿ ಪ್ರಾರಂಭವಾದ ಪ್ರೀತಿ ನನ್ನ ಯಾವಜ್ಜೀವವನ್ನೂ ಆವರಿಸಿಬಿಟ್ಟಿದೆ. ನಿನ್ನನ್ನು ಬಿಟ್ಟಿರಲಾರೆ. ಇಲ್ಲಿಗೆ ಬಂದದ್ದು ನನ್ನ ಜೀವಕ್ಕೆ ಅಪಾಯವಲ್ಲವೇ? ನನ್ನ ಜೀವಕ್ಕಿಂತ ನೂರುಮಡಿ ಪ್ರಿಯವಾದ ನಿನಗೋಸ್ಕರ ಹೋಗುವ ಈ ಅಪಾಯ ನನಗೆ ಬಹಳ ಹಿತವಾಗಿದೆ! ನಾನು ನಿನ್ನನ್ನು ಕರೆದುಕೊಂಡು ಹೋಗಿ, ನಮ್ಮ ತಾಯಿಯವರ ಹತ್ತಿರ ಬಿಟ್ಟು, ಅನಂತರ ನಿನ್ನನ್ನು ಕ್ರಮವಾದ ರೀತಿಯಲ್ಲಿ ಲಗ್ನ ಮಾಡಿಕೊಳ್ಳುತ್ತೇನೆ.”
ನನಗೆ ಈ ಮಿತಸಂಭಾಷಣೆಯನ್ನು ಕೇಳಲು ಇಷ್ಟವಿಲ್ಲದಿದ್ದರೂ, ಹೋಗಲು ಬೇರೆ ಸ್ಥಳ ತೋರದೆ ಅಲ್ಲೇ ನಿಂತೆ.
“ಲಗ್ನವೆಂದರೆ ಏನು ಸ್ವಾಮಿ? ತಾವು ರಾಜಪುತ್ರರು. ನಾವು ವೇಶೈಯರು. ತಮ್ಮ ಸೇವೆ ಮಾಡುವುದೇ ನಮ್ಮ ಪುಣ್ಯ” -ಇದು ಸ್ವಲ್ಪ ವಯಸ್ಸಾದ ಹೆಣ್ಣು ದ್ವನಿಯ ಮಾತು.
ಗದ್ದದ ಸ್ವರದಿಂದ, ತರುಣ ವ್ಯಕ್ತಿಯು,
”ಅಮ್ಮಾ, ಮಹಾನುಭಾವರು ಪ್ರೀತಿಗೆ ಆಡುವ ಮಾತು. ಅವರು ನನ್ನನ್ನು ಅನುಗ್ರಹಿಸುವುದಾದರೆ ದಿನವಹಿ ಅವರ ಕಾಲು ತೊಳೆದು, ಆ ತೀರ್ಥದಿಂದ ನನ್ನ ಜನ್ಮವನ್ನು ಪಾವನಮಾಡಿಕೊಳ್ಳುತ್ತೇನೆ. ಆ ಪುಣ್ಯ ಕೇಳಿದ್ದೇನೆಯೇ? ನನ್ನನ್ನು ನೀನು ಪಾಳೆಯಗಾರರಿಗೆ ಕೊಡುವುದಾಗಿ ಒಪ್ಪಿದ್ದೀಯಲ್ಲ, ಮಾತನ್ನು ತಪ್ಪಲಿಕ್ಕಾಗುತ್ತದೆಯೇ?”
ನನ್ನ ಸವಾರನು ನಕ್ಕನು.
”ನಿಮ್ಮ ಮಾತಿನ ಭಂಗವೂ ಬೇಡ, ನಿಮ್ಮ ಧರ್ಮದ ಲೋಪವೂ ಬೇಡ. ನಾನು ಬಲವಂತದಿಂದ ಲಕುಮಿಯನ್ನು ಎತ್ತಿಕೊಂಡು ಹೋದರೆ, ನೀವು ಅದನ್ನು ತಡೆಗಟ್ಟುವುದು ಹ್ಯಾಗೆ? ನಿಮ್ಮ ತಪ್ಪಿತವೇನು?”
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಹೀಗೆ ಅವಳು ಮಾತನಾಡುತ್ತಿರುವಲ್ಲಿ, ಹೊರಗೆ ಕಟ್ಟಿದ್ದ ಕುದುರೆಯು ತಲೆಯನ್ನೆತ್ತಿ ಕಿವಿಯನ್ನು ನೆಟ್ಟಗೆ ಮಾಡಿ, ಕೆನೆಯಿತು. ಅಷ್ಟರಲ್ಲೇ ನಾಯಿಗಳ ಬಗುಳಿನ ಅವಾಂತರವೆದ್ದಿತು. ನಾನು ತಿರುಗಿ ನೋಡಲಾಗಿ ಒಬ್ಬ ಸಿಪಾಯಿಯು ಎಡಗೈಯಲ್ಲಿ ಗುರಾಣಿ, ಬಲಗೈಯಲ್ಲಿ ಬತ್ತಲೆಯ ಕತ್ತಿಯನ್ನು ಹಿಡಿದುಕೊಂಡು ಓಡಿಬಂದನು. ಅವನ ಕಣ್ಣಿಗೆ ಬೀಳಬಾರದೆಂದು ನಾನು ಜಗುಲಿಯ ಮೂಲೆಯಲ್ಲಿ ಮೈಯನ್ನು ಸಂಕುಚಿಸಿಕೊಂಡು ಅವಿತು ನಿಂತೆ. ಮಸುಕಾದ ಬೆಳದಿಂಗಳು ಅವನ ಮುಖದ ಮೇಲೆ ಬಿದ್ದದ್ದರಲ್ಲಿ ಅವನ ನೆತ್ತಿಯ ಮೇಲೆ ತಗುಲಿದ್ದ ನೀಳವಾದ ಗಾಯದ ನೆತ್ತರಿನಿಂದ ಅವನ ಕೂದಲು, ಹುಬ್ಬು, ಮುಖ ಎಲ್ಲವೂ ಬೊಂಕೆಯಾಗಿ ಕೆನೆಗಟ್ಟಿದಂತೆ ತೋರುತ್ತಿದ್ದವು. ಅವನ ಕೈಲಿದ್ದ ಖಡ್ಗವೂ ಅದನ್ನು ಹಿಡಿದ ಅವನ ಮುಷ್ಟಿಯೂ ರಕ್ತಮಯವಾಗಿದ್ದವು. ಅವನ ಬಲವಾದ ಬಿಗಿಗಟ್ಟಿನ ಶರೀರವು ಬಹಳ ಆಯಾಸದಿಂದ ಬಳಕುತ್ತಿತ್ತು. ದೀರ್ಘ ನಿಶ್ವಾಸದಿಂದ ಅವನು ಅಗಲವಾದ ಎದೆಯು ಬಿರಿಯುವಂತೆ ಉಬ್ಬಿ ಇಳಿಯುತ್ತಿತ್ತು. ಅವನು ನನ್ನನ್ನು ನೋಡಲಿಲ್ಲ. ನೆಟ್ಟನೆ ಬಾಗಿಲಿಗೆ ಹೋಗಿ ಕದವನ್ನು ಕತ್ತಿಯ ಹಿಡಿಯಿಂದ ಗಟ್ಟಿಯಾಗಿ ತಟ್ಟಿ-
“ಕುಮಾರ, ದಣಿ” ಎಂದು ಕೂಗಿದನು. ಕೂಡಲೆ ಬಾಗಿಲು ಹಾರ ತೆಗೆದು ನನ್ನ ಸವಾರನು ಅವಸರದಿಂದ ಈಚೆಗೆ ಬಂದನು. ಕೋಪದ ಧ್ವನಿಯಲ್ಲಿ,
“ಏನು ಮಲ್ಲನಾಯಕ, ನಾನು ನಿನ್ನ ಬಂದಿಯೋ? ಅಥವಾ ನಾನು ಮಗುವೇ? ನನ್ನ ಮೇಲೆ…”
ಅಷ್ಟರಲ್ಲೇ ಆ ಯೋಧನ ಮುಖವನ್ನೂ ಅವನ ಅವಸ್ಥೆಯನ್ನೂ ನೋಡಿ, ಅವನ ಕೋಪವು ಹಾರಿ ಹೋಯಿತು.
“ಏನಿದು? ಗಾಯ? ಎಲ್ಲಿ? ಯಾಕೆ? ಬಹಳ ನೊಂದಿದ್ದಿ-ಬಹಳ ಬಳಲಿದ್ದಿ.”
ಹೀಗೆಂದು ಆದ್ರ್ರಧ್ವನಿಯಿಂದ ಉಚ್ಚರಿಸಿ ಅವನ ತೋಳನ್ನು ಹಿಡಿದು, ಮುಖವನ್ನು ನೋಡಿದನು. ಮಲ್ಲನಾಯಕನು:
“ಕತೆಗೆ ಕಾಲವಿಲ್ಲ. ರಣಡೌಲಾಖಾನನ ಸವಾರರು ಇದೋ ಬರುತ್ತಾರೆ. ನಾನು ಹ್ಯಾಗೋ ತಪ್ಪಿಸಿಕೊಂಡು ನಿಮ್ಮನ್ನು ಎಚ್ಚರಿಸಲು ಬಂದೆ. ನನ್ನ ಕುದುರೆ ಸತ್ತಿತು. ಅಡ್ಡಕಟ್ಟಲು ಬಂದ ಒಬ್ಬ ಸವಾರ ನನಗೆ ಈ ಬಿರುದನ್ನು ಕೊಟ್ಟ” ಎಂದು ತಲೆಯಮೇಲಿನ ಗಾಯವನ್ನು ತೋರಿ- “ಅವನು ಆ ಮೆಹನತ್ತನ್ನು ಕೊಚ್ಚಿಕೊಳ್ಳಲು ಅವನನ್ನು ಯಮಪಟ್ಟಣಕ್ಕೆ ಕಳಿಸಿದೆ. ಆಮೇಲೆ ನನಗೆ ಗೊತ್ತಿರುವ ಸೀಳು ದಾರಿಯಲ್ಲಿ ಇಲ್ಲಿಗೆ ಬಂದೆ.”
ಇದನ್ನು ಓದಿದ್ದೀರಾ?: ಪ. ರಮಾನಂದರ ಕತೆ | ಬಾಳ್ವೆಯ ಮಸಾಲೆ
“ನಾನು ಇಲ್ಲಿರುವುದು ನಿನಗೆ ಹ್ಯಾಗೆ ಗೊತ್ತು? ರಣಡೌಲಾಖಾನನಿಗೆ ಹ್ಯಾಗೆ ಗೊತ್ತು?”
ಮಲ್ಲನಾಯಕನು ನಕ್ಕನು. ಆ ರಕ್ತಪುಂಜವಾದ ಮುಖದಿಂದ ಆ ನಗು ಈಚೆಗೆ ಬಂದದ್ದು ವಿಜಾತೀಯವಾಗಿತ್ತು.
“ನಾನೂ ಪ್ರಾಯದವನಾಗಿದ್ದೆ. ದಣಿ; ಈಗಲೂ ಅಷ್ಟು ಮುದುಕನಲ್ಲ. ತಾವು ಈ ಹಾಳು ಗಡೀ ಊರಿನ ಹತ್ತಿರ ಬಿಡಾರ ಮಾಡಿದಾಗಲೇ ಊಹಿಸಿದೆ. ತಾವು ನಿಶಿರಾತ್ರಿಯಲ್ಲಿ ಎದ್ದು, ಕುದುರೆಗೆ ತಾವೇ ಖೋಗೀರು ಹಾಕಿಕೊಂಡು ಹೊರಟಾಗ ಪೂರ್ತಾ ಮಂದಟ್ಟಾಯಿತು. ಗಡಿಗೆ ಹತ್ತಿರದಲ್ಲೇ ತುರುಕರ ನಿಲ್ದಾಣವಿದೆ; ಕುಮಾರರು ಅಲ್ಲಿ ಇಲ್ಲಿ ಓಡಾಡುವುದು ಸಮನಲ್ಲ. ದಣಿ ಪ್ರಾಯದ ಧರ್ಮದಿಂದ, ಹುಟ್ಟು ಧೈರ್ಯದಿಂದ ದುಡುಕಿದರೆ, ನನಗೆ ಬುದ್ದಿಯಿಲ್ಲವೇ? ಅರ್ಧ ತಾಸು ಬಿಟ್ಟುಕೊಂಡು ದಣಿಯ ದಾರಿಯನ್ನೇ ಹಿಡಿದು ಅವರ ಸೇವೆಗೆ ಸಿದ್ಧವಾಗಿರೋಣವೆಂದು ಹೊರಟೆ. ಸ್ವಲ್ಪ ದೂರ ಬರುವುದರಲ್ಲಿ ಕುದುರೆಗಳ ಸದ್ದು ಕೇಳಿಸಿತು. ನಾನು ನಿಂತು ಕೇಳಿದೆ. ತಾವು ತಾವರೆಕೋಟೆಗೆ ಬರುವ ‘ಬಾತ್ಮಿ’ ಬಂದು, ದಾರಿ ಕಾಯುವುದಕ್ಕೂ, ತಾವರೆಕೋಟೆಗೇ ಹೋಗಿ ನಿಮ್ಮನ್ನು ಹಿಡಿದು ಒಯ್ಯುವುದಕ್ಕೂ ತುರುಕರು ಪಾಳೆಯದಿಂದ ರಾಹುತರನ್ನು ಕಳಿಸಿರುವುದಾಗಿ ಮಂದಟ್ಟಾಯಿತು. ಈ ವಿಪತ್ತನ್ನು ತಮಗೆ ತಿಳಿಸಿ, ತಮ್ಮನ್ನು ಬೇರೇ ಮಾರ್ಗದಿಂದ ಕರೆದುಕೊಂಡು ಹೋಗೋಣವೆಂದು ಬರುತ್ತಿರುವಲ್ಲಿ ತುರುಕರ ಗುಂಪಿನ ಮುಂದಾಳುಗಳಾದ ಇಬ್ಬರು ದುರಾತ್ಮರು ನನ್ನ ಸುಳಿವು ಕಂಡುಕೊಂಡು ನನ್ನನ್ನು ಹಿಡಿಯಬಂದರು. ಒಬ್ಬನನ್ನು ನಾನು ಕೊಂದೆ. ಮತ್ತೊಬ್ಬನು ನನ್ನ ಕುದುರೆಯನ್ನು ತುಪಾಕಿಯಿಂದ ಹೊಡೆದ. ನಾನು ಕೊರಕಲಲ್ಲಿ, ಪೊದೆಯಲ್ಲಿ ಕುದುರೆ ಬರಲು ಸಾಧ್ಯವಿಲ್ಲದ ಸೀಳು ದಾರಿಯಲ್ಲಿ ಓಡಿ ಬಂದೆ. ನನಗೆ ದಾಹವಾಗುತ್ತೆ, ನಿಲ್ಲಲಾರೆ-“

ಆ ಮಾತಿಗೆ ಮನೆಯೊಳಗಿನಿಂದ ಒಬ್ಬ ಹುಡುಗಿ ಕೈಯಲ್ಲಿ ನೀರಿನ ಚೊಂಬನ್ನು ಹಿಡಿದುಕೊಂಡು ಈಚೆಗೆ ಬಂದಳು. ಆಕೆಯೇ ಮಾತಾಡಿದ ತರುಣಿ ಇದ್ದಿರಬೇಕು. ಆಕೆಯ ಮುಖ ನನಗೆ ಸ್ಪಷ್ಟವಾಗಿ ಕಾಣದಿದ್ದರೂ, ಆಕೆಯ ಪ್ರತಿಯೊಂದು ಭಾವದಲ್ಲಿಯೂ, ಚಲನೆಯಲ್ಲಿಯೂ, ಚೇಷ್ಟೆಯಲ್ಲಿಯೂ, ಆಕೆಯ ಯೌವನ ಲಾವಣ್ಯ ಸಂಪನ್ನೆ ಎಂದು ಕಾಣುತ್ತಿತ್ತು.
ಮಲ್ಲನಾಯಕನು ನೀರನ್ನು ಇಸುಕೊಂಡು ಬಹಳ ಆತುರದಿಂದ ಕುಡಿದನು. ನಂತರ ಮುಂಗೈಯಿಂದ ಕಣ್ಣುಗಳನ್ನು ಒರೆಸಿಕೊಂಡು-ಅವು ಬಹುಶಃ ರಕ್ತದಿಂದ ಮಸುಕಾಗಿದ್ದಿರಬಹುದೆಂದು ನನ್ನ ಊಹೆ-ಆಕೆಯ ಕದ ನೀಡಿದನು.
“ಭಲೆ ನನ್ನ ತಾಯಿ, ಅಷ್ಟಲ್ಲದೆ ನಮ್ಮ ದೊರೆಯ ಮಗ ನಿಮಗೋಸ್ಕರ ಈ ಪಾಡು ಪಡುತ್ತಾರೆಯೇ ಭಗವಂತ ನಿಮ್ಮನ್ನು…”
ಅಷ್ಟು ಹೊತ್ತಿಗೆ ಸುತ್ತುಮುತ್ತಲೂ ಎಲ್ಲಾ ಕಡೆಯಲ್ಲೂ ಕೋಲಾಹಲವೆದ್ದಿತು. “ಯೋ ಅಲ್ಲಾ ಯಾರ್ ದೀನ್ ದೀನ್” ಎಂಬು ಕೂಗುಗಳೂ, ”ಅಯ್ಯೋ, ಅಪ್ಪಾ, ಕುಯ್ಯೋ, ಮರ್‍ರೋ” ಎಂಬ ಗೋಳ್ಕರೆಯೂ ಎಲ್ಲ ಕಡೆಯಲ್ಲೂ ಕೇಳಿಬಂದು ಸಮೀಪ ಸಮೀಪಕ್ಕೆ ಬರುವಂತೆ ಇದ್ದವು. ಇನ್ನೊಂದು ಕಡೆ- “ಎಲ, ಎಲಾ, ಹೊಡೆ, ತಿವಿ, ಕೊಲ್ಲು” ಎಂಬ ಆಕ್ರೋಶವೂ ಕೇಳಿಬಂತು. ಇದರಿಂದ ಪಾಳೆಯಗಾರನ ಪಡೆಯು ಗ್ರಾಮರಕ್ಷಣೆಗಾಗಿ ಹೊರಬಿದ್ದು ತುರುಕರ ಮುನ್ನಡೆಯನ್ನು ತಡೆಗಟ್ಟಲು ಯತ್ನಿಸುತ್ತಿದೆಯೆಂದು ನನ್ನ ಊಹೆ- ಕ್ಷಣಕ್ಷಣಕ್ಕೂ ಗಲಾಟೆ ಹೆಚ್ಚಾಯಿತು. ಎಲ್ಲೋ ಒಂದು ಕಡೆ ಮನೆಗಳಿಗೆ ಬೆಂಕಿ ಬಿದ್ದು ಧಗ್ಗೆಂದು ಜ್ವಾಲೆಗಳು ಮೇಲೆದ್ದು ಕಿಡಿಗಳು ಎಲ್ಲಾ ಕಡೆಗಳಲ್ಲೂ ಹಾರಲಿಕ್ಕೆ ಹತ್ತಿದವು. ತುರುಕರ ಆರ್ಭಟ ಹೆಚ್ಚಾಗುವಂತೆಯೂ, ಅವರನ್ನು ಎದುರಿಸುತ್ತಿದ್ದವರ ಪ್ರತಿಭಟನೆ ಕುಗ್ಗುತ್ತಿರುವಂತೆಯೂ ಕಂಡಿತು.
ಇದನ್ನು ಓದಿದ್ದೀರಾ?: ವಿ.ಜಿ. ಶ್ಯಾನಭಾಗರ ಕತೆ | ದೇವದಾಸಿ
ಕುಮಾರನೂ, ಯುವತಿಯೂ, ಮಲ್ಲನಾಯಕನೂ ಗಲಾಟೆ ಬರುವ ಕಡೆ ತಿರುಗಿ ನಿಂತರು. ಕುದುರೆಯು ಬೆದರಿಯೋ, ರೋಷಗೊಂಡೋ ಅದೇ ಕಡೆ ತಲೆಯೆತ್ತಿ ನೋಡುತ್ತಿತ್ತು. ಒಬ್ಬ ನಡುಪ್ರಾಯದ ಹೆಂಗಸು ಗಾಬರಿಯಾಗಿ, ಅಳುತ್ತಾ ಬಾಗಿಲಲ್ಲಿ ನಿಂತಿದ್ದಳು. ಜಗುಲಿಯ ಮೂಲೆಯಲ್ಲಿ ನಿಂತಿದ್ದ ನನ್ನನ್ನು ಯಾರೂ ನೋಡಲಿಲ್ಲ. ಈ ವಿಚಿತ್ರ ಸಂಘಟನೆಗಳು- ಈಗಿನ ಕಾಲದಲ್ಲೂ ಉಂಟೇ ? ನಮ್ಮನ್ನಾಳುವ ಮಹಾಸ್ವಾಮಿಗಳ ಆಳ್ವಿಕೆಯಲ್ಲಿ ತುರುಕರ ಹಾವಳಿ, ಕೊಲೆ, ದೊಂಬಿ, ಲೂಠಿ ಇವುಗಳ ಅಸಂಭವತೆ, ಅಸಾಧ್ಯತೆ, ಇವುಗಳು ನನಗೆ ಹೊಳೆಯಲಿಲ್ಲ. ಈ ಗಲಾಟೆಯಲ್ಲಿ ನನ್ನ ರಕ್ಷಣೆಯನ್ನು ನಾನು ಯಾವ ರೀತಿ ಮಾಡಿಕೊಂಡೇನೆಂಬ ಚಿಂತೆಯೊಂದೇ ಮುಖ್ಯವಾಗಿ ತುಂಬಿತು. ನನ್ನ ಜಿಯಾಲಾಜಿಕಲ್ ಸಾಮಗ್ರಿಗಳ ಚೀಲದಲ್ಲಿನ ಸುತ್ತಿಗೆಯನ್ನು ತೆಗೆದು ಹಿಡಿದುಕೊಂಡು నింతే.
ಪ್ರತಿನಿಮಿಷವೂ ಕೋಲಾಹಲ ಹೆಚ್ಚುತ್ತಾ ಬಂತು. ಊರಿಗೆ ಅನೇಕ ಕಡೆಗಳಲ್ಲಿ ಶತ್ರುಗಳು ನುಗ್ಗಿರಬೇಕು. ಅನೇಕ ಕಡೆಗಳಲ್ಲಿ ಮನೆಗಳು ಹತ್ತಿಕೊಂಡು ಉರಿಯುತ್ತಿದ್ದಿರಬೇಕು. ಹೆಂಗಸರ, ಮಕ್ಕಳ ಚೀರೋಣ, ಗೋಳಾಟ, ಬೀಳುವ ಮನೆಗಳ ಭಯಂಕರವಾದ ಶಬ್ದ, ಹೊಗೆ, ಕಿಡಿಗಳು ಎಲ್ಲಾ ಕಡೆಗಳಿಂದಲೂ ಎಲ್ಲವನ್ನೂ ವ್ಯಾಪಿಸಿದಂತಿತ್ತು. ಆಗ ನಾನು ನಿಂತಿದ್ದ ಮನೆಯ ಎದುರಿನಲ್ಲಿದ್ದ ಮನೆ ಧುಪ್ಪೆಂದು ಕುಸಿದುಬಿದ್ದು ಅದರಿಂದ ಜ್ವಾಲೆಯೂ ಧೂಳೂ, ಹೊಗೆ ಮಿಶ್ರವಾದ ಕಿಡಿಗಳೂ, ಬೀದಿಯನ್ನು ತುಂಬಿಸಿ, ಒಂದು ಘೋರವಾದ ಬೆಳಕಿನಲ್ಲಿ ಎಲ್ಲವನ್ನೂ ಕಾಣುವಂತೆ ಮಾಡಿದವು. ಬೀದಿಯ ಇನ್ನೊಂದು ಕೊನೆಯಿಂದ ಜನಗಳು ಕೂಡಿಕೊಂಡು ನುಗ್ಗಿ ಬರುವ ಸದ್ದು ಕೇಳುತ್ತಾ ಬಂತು.
ಮಲ್ಲನಾಯಕನು, ಬಹಳ ಕಾತುರದಿಂದ ಹೇಳಿದನು:
“ದಣಿ, ಕುದುರೆಯನ್ನು ಏರಿ ಈ ಕಡೆ ನೀವು ಬಂದ ದಾರಿಯಲ್ಲಿ ಹೋಗಿ. ತಡಮಾಡಬೇಡಿ. ಅಲ್ಲಿ ಇನ್ನೂ ದಾರಿ ತೆರೆದಿದೆ ಅಂತ ಕಾಣುತ್ತೆ. ನಿಮ್ಮ ಹೆಣ್ಣನ್ನು ಕರೆದುಕೊಂಡು ಹೋಗಿ. ನಿಮ್ಮ ಪಾದಕ್ಕೆ ಬಿದ್ದು ಬೇಡುತ್ತೇನೆ. ನಿಮ್ಮ ದಮ್ಮಯ್ಯ ಹೋಗಿ.”
ಹೀಗೆಂದು ಕುದುರೆಯನ್ನು ಬಿಚ್ಚಿದನು. ಕುಮಾರನು-
“ನಾನು ಆಕೆಯನ್ನು ಇಲ್ಲಿ ಸಾಯಲಿಕ್ಕೆ ಬಿಡಲಾರೆ. ಕರೆದುಕೊಂಡು ಹೋಗುತ್ತೇನೆ. ದೇವರು ಮಾಡಿಸಿದ್ದಾಗಲಿ. ಆದರೆ ನೀನೋ? ಅವಳ ತಾಯಿ?” ಇದಕ್ಕೆ ಉತ್ತರವೋ ಎಂಬಂತೆ ಒಂದು ತುಪಾಕಿಯ ಸದ್ದು ಕೇಳಿಸಿತು. ಬಾಗಿಲಲ್ಲಿ ನಿಂತಿದ್ದ ಹೆಂಗಸು ಚಿಟ್ಟನೆ ಚೀರಿ, ತನ್ನ ಎದೆಗೆ ಎರಡು ಕೈಗಳನ್ನು ಹಾಕಿ, ಕೆಳಗೆ ಬಿದ್ದಳು.
ಮಲ್ಲನಾಯಕನು ಆಕೆಯ ಕಡೆ ತಿರುಗಿ ನೋಡಿದನು. ಇದೇ ಕುಮಾರನ ಪ್ರಶ್ನೆಗೆ ಜವಾಬೆಂದು ಅವನ ಮನಸ್ಸಿಗೆ ತೋರಿರಬಹುದು. ಆದರೆ ಅವನು ಹೇಳಿದ್ದು,
“ನನ್ನ ಒಡೆಯ, ನಾನು ಈ ಸಂದುಗೊಂದಿನಲ್ಲಿ ಹ್ಯಾಗಾದರೂ ತಪ್ಪಿಸಿಕೊಳ್ಳುತ್ತೇನೆ. ನನ್ನನ್ನು ಯಾರೂ ಅಷ್ಟು ಹುಷಾರಾಗಿ ಹುಡುಕಲಾರರು.”
ಇದನ್ನು ಓದಿದ್ದೀರಾ?: ಕುಲಕರ್ಣಿ ಶ್ರೀನಿವಾಸರ ಕತೆ | ಹೊಸಬಾಯಿ
ಹೀಗೆಂದು ಕುಮಾರನಿಗೆ ಪುನಃ ಒತ್ತಾಯಪಡಿಸಿದನು. ಕುಮಾರನು ಅರ್ಧ ಮನಸ್ಸಿನಿಂದ ನಿಂತಹಾಗೆ ಇನ್ನೊಂದು ಗುಂಡು ಆ ಹುಡುಗಿಗೆ ಎಲ್ಲೋ ತಗಲಿ, ಆಕೆಯು ಅಸ್ಪಷ್ಟವಾಗಿ ಚೀರಿದಳು. ಕುಮಾರನು ಆಕೆಯನ್ನು ಎತ್ತಿ ಖೋಗೀರಿನ ಮೇಲೆ ಇರಿಸಿ, ತಾನೂ ಹಾರಿ ಆಕೆಯ ಹಿಂದೆ ಕುಳಿತನು. ಕುದುರೆಯು ಒಂದೇ ನೆಗೆತಕ್ಕೆ ಆ ಬೀದಿಯಿಂದ ಆಚೆಗೆ ಹೊರಟು ಕಣ್ಮರೆಯಾಯಿತು.
ಇತ್ತ ಮಲ್ಲನಾಯಕನು ತನಗೆ ತಾನೇ,
“ದೇವರು ಅವರನ್ನು ಚೆನ್ನಾಗಿಡಲಿ. ಈ ತುರುಕರನ್ನು ನಾನು ತುಸು ಹೊತ್ತು ತಡೆದರೆ, ನಮೊರೆಯ ಸುಖವಾಗಿ ಪಾರಾಗುತ್ತಾರೆ. ನನ್ನ ಒಂದು ಜೀವ ಕೊಳ್ಳಬೇಕಾದರೆ, ಆ ತುರುಕರ ಅನೇಕ ಜೀವ ಬೇಕು.”
ಎಂದುಕೊಂಡು ಕೈ ಹಾಕಿ ಮುಷ್ಟಿಯಲ್ಲಿ ಖಡ್ಗವನ್ನು ಸಿದ್ಧವಾಗಿ ಹಿಡಿದು ಬೀದಿಯ ಮಧ್ಯದಲ್ಲಿ ಹಲ್ಲೆ ಮಾಡುವರ ಅಭಿಮುಖವಾಗಿ ನಿಂತನು. ಆಯಿತು. ಅವರೂ ಬಂದರು. “ದೀನ್ ದೀನ್” ಎಂದು ಆರ್ಭಟಿಸುತ್ತಾ ಕತ್ತಿಗಳನ್ನೂ ಭರ್ಜಿಗಳನ್ನೂ ಆಡಿಸುತ್ತಾ ಬಂದರು. ಕೆಲವು ಕತ್ತಿಗಳು ರಕ್ತಮಯವಾಗೂ ಇದ್ದವು. ಮಲ್ಲನಾಯಕ ಒಬ್ಬನೇ ನಿಂತಿರುವುದನ್ನು ನೋಡಿ ಆ ಗುಂಪಿನ ಪೈಕಿ ಒಬ್ಬನೇ ಕತ್ತಿಯನ್ನು ಝಳಪಿಸುತ್ತಾ ಮುಂದೆ ಬಂದನು. ಕತ್ತಿಗೆ ಕತ್ತಿ ತಗುಲಿದ ಶಬ್ದ ಮಾತ್ರ ನನಗೆ ಕೇಳಿಸಿತು. ಆ ತುರುಕ ಸತ್ತು ಕೆಳಗೆ ಬಿದ್ದದ್ದನ್ನು ಕಂಡೆ. ಮಲ್ಲನಾಯಕ ಹಾಗೆಯೇ ಎರಡನೆಯವನನ್ನೂ ಕೊಂದ; ಮೂರನೆಯವನೂ ಮಲ್ಲನಾಯಕನೂ ಇಬ್ಬರೂ ಕೆಳಕ್ಕೆ ಬಿದ್ದರು. ಆ ಧೀರ ಸ್ವಾಮಿಭಕ್ತನಿಗೆ ವೀರಸ್ವರ್ಗ ಖಂಡಿತವೆಂದು ನನಗೆ ತೋರಿತು.
-ತುರುಕರ ತಂಡವು ತಮ್ಮ ಕದನದ ಕೂಗುಗಳನ್ನು ಕೂಗುತ್ತ ರಭಸದಿಂದ ಮುಂದೆ ಹೊರಟು ಹೋಯಿತು. ಅದರಲ್ಲಿ ಇಬ್ಬರು ಮಾತ್ರ ಹಿಂದೆ ನಿಂತು, ಲೂಟಿಯ ಉದ್ದೇಶದಿಂದಲೋ, ಏನೋ ಕಾಣೆ, ನಾನಿದ್ದ ಮನೆಗೆ ನುಗ್ಗಲು ಉದ್ಯುಕ್ತರಾದರು. ಒಬ್ಬನು ಬಾಗಿಲಿಗೆ ಅಡ್ಡಲಾಗಿ ಬಿದ್ದಿದ್ದ ಆ ಹೆಂಗಸಿನ ಕಾಲನ್ನು ಹಿಡಿದು ಈಚೆಗೆ ಸೆಳೆದ. ಆಕೆಗೆ ಇನ್ನೂ ಸ್ವಲ್ಪ ಜೀವವಿತ್ತು. ಅಯ್ಯೋ ಎಂದು ಕಿರಿಚಿಕೊಂಡಳು. ಆ ಪಾಪಿಯು ತನ್ನ ಕೈಲಿದ್ದ ಕತ್ತಿಯಿಂದ ಅವಳ ತಲೆಯ ಮೇಲೆ ಹೊಡೆದ. ಅದುವರೆಗೂ ಅದೃಷ್ಟವಶಾತ್ ಯಾರ ಕಣ್ಣಿಗೂ ಕಾಣಿಸಿಕೊಳ್ಳದೆ ಅವಿತುಕೊಂಡಿದ್ದ ನಾನು ಇದನ್ನು ಸಹಿಸಲಾರದೆ-
“ಅಯ್ಯೋ ಪಾಪಿ” -ಎಂದು ಈಚೆಗೆ ಬಂದೆ. ಅವನು ನನ್ನನ್ನು ನೋಡಿ ಕತ್ತಿಯನ್ನು ಎತ್ತಿಕೊಂಡು ನನ್ನ ಮೇಲೆ ನುಗ್ಗಿದ. ನಾನು ನನ್ನ ಕೈಯಲ್ಲಿದ್ದ ಸುತ್ತಿಗೆಯನ್ನು ನನ್ನ ಬಲವನ್ನೆಲ್ಲಾ ಹಾಕಿ ಅವನ ತಲೆಗೆ ಎಸೆದೆ. ಅವನು ಕೆಳಕ್ಕೆ ಬೀಳುವ ಹೊತ್ತಿನಲ್ಲೇ ಅವನ ಅನುಯಾಯಿಯು ಬಂದು ನನ್ನ ತಲೆಯ ಮೇಲೆ ದೊಣ್ಣೆಯಿಂದ ಹೊಡೆದ. ನನಗೆ ಕಣ್ಣೆದುರಿಗೆ ಕಿಡಿಗಳು ಹಾರಿದ ಹಾಗಾಗಿ ಪ್ರಜ್ಞೆ ತಪ್ಪಿತು.
*
ನನಗೆ ಎಚ್ಚರವಾದಾಗ ಬೆಳಗ್ಗೆ, ಏಳು ಗಂಟೆಯ ಸಮಯ. ಎಳೆಬಿಸಿಲು ನನ್ನ ಮುಖದ ಮೇಲೆ ಹೊಳೆದು ನನ್ನನ್ನು ಎಬ್ಬಿಸಿತು. ರಾತ್ರೆಯ ಅಪಘಾತಗಳು, ದುರಂತಗಳು ದೇವರ ದಯದಿಂದ ಬರೀ ಸ್ವಪ್ನ-ಆದರೆ ಎಷ್ಟು ಭಯಂಕರವಾಗಿದ್ದವು ಎಂದುಕೊಂಡೆ. ಆ ದೊರೆಮಗ, ಆ ಹುಡುಗಿ, ಆ ಧೀರ ಅಂಗರಕ್ಷಕ, ಆ ಪ್ರೀತಿ, ಆ ಧರ್ಮಸಂಕಟ, ಆ ಆತ್ಮತ್ಯಾಗ -ಇದೆಲ್ಲ ಬರೀ ಕನಸೆ? ಯಾವುದು ಕನಸು? ಯಾವುದು ಸತ್ಯ? ನಮ್ಮ ಜೀವನವೆಂಬುದೇ ಕನಸಲ್ಲವೆಂದು ಏನು ಖಾತರಿ? ಹೀಗೆಂದುಕೊಂಡು ಕಣ್ಣು ಬಿಟ್ಟೆ. ಮನೋಹರವಾದ ಪ್ರಾತಃಕಾಲ. ತಂಗಾಳಿ ಬೀಸುತ್ತಿತ್ತು. ಸೂರ್ಯನ ಕೆಂಗಿರಣಗಳು ಹುಲ್ಲು, ಮೆಳೆಗಳ ಮೇಲಿನ ಇಬ್ಬನಿಯನ್ನು ರತ್ನಗಳನ್ನಾಗಿ ಮಾಡುತ್ತಿದ್ದವು.
ಇದನ್ನು ಓದಿದ್ದೀರಾ?: ಎ.ಆರ್. ಕೃಷ್ಣಶಾಸ್ತ್ರಿ ಅವರ ಕತೆ | ಬಂಗಲಿಯ ವಾಸ
ನನ್ನ ಮೈ ಕೈ ಎಲ್ಲಾ ನೋವು, ತಲೆಯ ಹಿಂಭಾಗದಲ್ಲಿ ಯಾಕೋ ಬಹಳ ನೋವು. ಮುಟ್ಟಿ ನೋಡಲಾಗಿ ಗುಪ್ಪಟೆ ಎದ್ದಿತ್ತು. ರಾತ್ರಿ ನಾನು ಕುಳಿತಿದ್ದ ಮರವೆಲ್ಲೆಂದು ನೋಡಿದೆ. ನಾನು ಮಲಗಿದ್ದ ಸ್ಥಳದ ಹತ್ತಿರವೇ ಒಂದು ದೊಡ್ಡ ಮರವಿತ್ತು; ಅದರಲ್ಲಿ ನಾನು ರಾತ್ರಿ ಕುಳಿತಿದ್ದ ಕವಲಿನಂಥ ಕವಲೂ ಇತ್ತು. ನಾನು ರಾತ್ರಿ ನಿದ್ರೆಯಲ್ಲಿ ಅಲ್ಲೇ ಕೆಳಕ್ಕೆ ಬಿದ್ದಿರಬಹುದೇ? ಅಶ್ವಾರೂಢ ಕುಮಾರನ ಹಿಂದೆ ದಾರಿ ನಡೆದದ್ದು, ತಾವರೆಕೋಟೆಗೆ ಹೋದದ್ದು, ಅಲ್ಲಿನ ಭೀಕರ ಅನುಭವಗಳು- ಇವೆಲ್ಲ ಮರದಿಂದ ಜಾರಿ ನೆಲಕ್ಕೆ ಬಿದ್ದು ತಲೆ ತಗುಲಿಸಿಕೊಂಡದ್ದರ ಭ್ರಾಂತ ವಿಡಂಬನವೇ? ಹೀಗೆಂದುಕೊಂಡು ಎದ್ದು ಕುಳಿತೆ. ನಾನು ರಾತ್ರೆಯನ್ನು ಕಳೆದ ಜಾಗ ಯಾವದೋ ಪಾಳುಐರ ನಿವೇಶನವಿದ್ದಿರಬೇಕು. ಅಲ್ಲಲ್ಲಿ ಮನೆಯ ತಳಹದಿಯ ಗುಪ್ಪೆಗಳಿದ್ದವು. ನಾನು ರಾತ್ರೆ ಕುಳಿತಿದ್ದ ಮರ ಅಂಥ ಒಂದು ಗುಡ್ಡೆಯ ಮಗ್ಗುಲಿನಲ್ಲಿತ್ತು. ನಾನು ಬಿದ್ದು ತಲೆಯನ್ನು ತಗುಲಿಸಿಕೊಂಡದ್ದು ಬಹಳ ಕರಗಿ ಹೋಗಿ ಮೊಟಕಾಗಿದ್ದ ಒಂದು ಮೋಟು ಗೋಡೆಯ ಮೇಲೆ, ನನ್ನ ಸುತ್ತಿಗೆಯು ನಾಲ್ಕು ಮಾರು ಆಚೆಗೆ ಬಿದ್ದಿತ್ತು. ಆ ಸಭ್ಯ ಆಯುಧದಿಂದ ರಾತ್ರಿ ಮ್ಲೇಚ್ಛವಧೆಯನ್ನು ಮಾಡಿದ್ದನ್ನು ನೆನೆದು ಸ್ವಲ್ಪ ನಕ್ಕೆ. ಆಮೇಲೆ ಅಲ್ಲಿ ಹರಿಯುತ್ತಿದ್ದ ಹಳ್ಳದಲ್ಲಿ ಮುಖವನ್ನು ತೊಳೆದುಕೊಂಡು ನಾನು ಎಲ್ಲಿದ್ದೇನೆಂಬುದನ್ನು ನಿರ್ಧರಿಸಲಿಕ್ಕೆ ಹತ್ತಿರದಲ್ಲಿದ್ದ ಒಂದು ಗುಡ್ಡವನ್ನು ಏರಿದೆನು. ಅಲ್ಲಿಂದ ನೋಡಲಾಗಿ, ಆದುಂಬಿಯ ಮನೆಗಳು ಎರಡು ಮೂರು ಕೋವಿನ ಆಚೆಗೆ ಕಂಡವು. ನಾಲ್ಕು-ಐದು ಮೈಲಿಗಿಂತ ದೂರವಿರಲಿಲ್ಲ.

ಆದುಂಬಿಗೆ ಬಂದೆ. ಅಲ್ಲಿನ ಕರ್ಣಿಕರಾದ ಶೇಷಣ್ಣನವರು ನನ್ನ ಹಳೇ ಸ್ನೇಹಿತರು. ಆ ಸುತ್ತುಮುತ್ತಿನಲ್ಲಿ ಐದು ಆರು ಮೈಲಿಗಳ ದೂರದಲ್ಲಿ ಎಲ್ಲಿದ್ದರೂ ನಾನು ಅವರ ಮನೆಗೆ ಹೋಗಿ ತಂಗುವ ಪದ್ಧತಿ. ನಾನು ಅವರಿಗೆ ನನ್ನ “geological specimens’ ತೋರಿಸಿ, ಅವುಗಳ ಕಥೆಯನ್ನು ಹೇಳುವುದು; ಅವರು ನನಗೆ ಸ್ಥಳಪುರಾಣ, ಕಾಡುಗಳಲ್ಲಿನ ಪುಣ್ಯಕ್ಷೇತ್ರಗಳ ಮಹಾತ್ಮ, ಇವುಗಳನ್ನು ಹೇಳುವುದು. ನಾನು ಹೇಳುವುದೂ ಅವರಿಗೆ ಸಹ ಕಲ್ಲುಮಣ್ಣುಗಳ ಮಹಾತ್ಮೆಯ ಪುರಾಣವೆಂತಲೇ ಕಂಡಿರಬೇಕು. ಅವರು ನನ್ನನ್ನು ಊರ ಬಾಗಿಲಲ್ಲಿ ಕಂಡು ”ಏನು ಸರ್, ಇಷ್ಟು ಹೊತ್ತಿನಲ್ಲೇ ಬಂದುಬಿಟ್ಟಿರಿ? ರಾತ್ರಿ ಎಲ್ಲಿ ತಂಗಿದ್ದಿರಿ?” ಎಂದರು.
ಇದನ್ನು ಓದಿದ್ದೀರಾ?: ‘ಶ್ರೀ ಸ್ವಾಮಿ’ಯವರ ಕತೆ | ಬೀಬೀ ನಾಚ್ಚಿಯಾರ್
ನಾನು- “ಏನು ಹೇಳಲಿ, ದಾರಿತಪ್ಪಿ ಇಲ್ಲಿಂದ ಐದಾರು ಮೈಲಿ ದೂರದಲ್ಲಿ ಕಾಡಿನಲ್ಲಿ ರಾತ್ರಿಯೆಲ್ಲಾ ಬಿದ್ದಿದ್ದೆ ನೋಡಿ. ನಡುಕಾಡಿನಲ್ಲೂ ಅಲ್ಲ. ಇಲ್ಲಿಗೆ ಒಂದು ಕೊಂಬು ಕೂಗಿನ ದೂರದಲ್ಲಿ, ಯಾವುದೋ ಹಾಳು ಗ್ರಾಮದ ಮುರುಕು ಗೋಡೆ ಮಧ್ಯದಲ್ಲಿ ರಾತ್ರಿಯನ್ನು ಕಳೆದೆ. ಅದು ಏನು ಗ್ರಹಚಾರ ನೋಡಿ.”
ಕರ್ಣಿಕರು ನನ್ನ ಕಡೆ ವಿಸ್ಮಯದಿಂದ ನೋಡಿ- “ಪಾಳುಗ್ರಾಮ? ಯಾವ ಪಾಳುಗ್ರಾಮ? ಈ ಊರಿನ ಈಶಾನ್ಯಕ್ಕೆ ಆ ಗುಡ್ಡದ ಹಿಂದಿರುವ ಗ್ರಾಮವೆ? ಅಲ್ಲಿ ಒಂದು ಹಳ್ಳ ಹರಿಯುತ್ತೆ, ಪಾಳು ಗೋಡೆಗಳ ಹಿಂದೆ ಹಳೇ ಹುಣಿಸೇ ಮರಗಳಿವೆ, ಆ ಗ್ರಾಮವೇ?”
ಆ ವರ್ಣನೆಯು ಅನೇಕ ಹಾಳುಗ್ರಾಮಗಳಿಗೆ ಅನ್ವಯಿಸಬಹುದು; ನನ್ನ ಹಾಳುಗ್ರಾಮಕ್ಕೂ ಅನ್ವಯಿಸಿತು. ಹೌದೆಂದೆ.
ಅವರು ಕೂಡಲೆ ನನ್ನ ಕೈಯನ್ನು ಹಿಡಿದು- “ಆ ಪಾಳು ತಾವರೆಕೋಟೆಯೆಂಬ ದೊಡ್ಡ ಪಾಳ್ಯಪಟ್ಟಿನ ಕಸಬೆಯಾಗಿತ್ತು. ಅದರ ಇತಿಹಾಸ ಬಹಳ ವಿಚಿತ್ರವಾದದ್ದು. ನನ್ನಲ್ಲಿದೆ, ಬನ್ನಿ ಓದಿ ಹೇಳುತ್ತೇನೆ” ಎಂದರು.
ನಾನು: ”ಬಾಯಿಮಾತಿನಲ್ಲಿ ಹೇಳಿ ಸಾಕು. ಓದಿ ಹೇಳಬೇಡಿ. ನಿಮ್ಮ ಪೌರಾಣಿಕರು ಅವರ ಗ್ರಾಮದ ಹಲ್ಲಿಯನ್ನು ಮಹಾಮಕರವೆಂದೂ, ನೀರ ಹಾವನ್ನು ಆದಿಶೇಷನೆಂದೂ ವರ್ಣಿಸುವ ವಾಡಿಕೆ. ಆದರೆ ಮೊದಲು ನಿಮ್ಮ ಧರ್ಮಕ್ಕೆ ಒಂದು ಕಪ್ಪು-ಅಲ್ಲ ಎರಡು ಮೂರು ಕಪ್ಪುಗಳೂ-ಕಾಫಿ ಕೊಡಿ.”
ಕಾಫಿ ಉಪ್ಪಿಟ್ಟು ಆದಮೇಲೆ ಕರ್ಣಿಕರು ನನ್ನ ಕಡೆ ನೋಡಿ,
“ನೀವು ರಾತ್ರೆಯನ್ನು ಕಳೆದದ್ದು ತಾವರೆಕೋಟೆ ಪಾಳಿನಲ್ಲಿ. ಇವತ್ತು ಆಷಾಢ ಬಹುಳ ಷಷ್ಠಿ. ನಿನ್ನೆ ಪಂಚಮಿ. ನೀವು ಸುಖವಾಗಿ ನಿದ್ರೆ ಮಾಡಿದಿರ?”
ನನ್ನ ಕನಸಿನ ಕಥೆಯನ್ನು ಅವರಿಗೆ ಹೇಳಲು ನನಗೆ ಇಷ್ಟವಾಗಲಿಲ್ಲ- ಅವತ್ತೇ ಅದೂ ಅವರ ಗುರ್ತಿನವರಿಗೆಲ್ಲಾ ಪ್ರಕಟವಾಗಿ, ಸ್ಥಳಪುರಾಣದ ಉತ್ತರಕಾಂಡವಾಗುತ್ತೆ. ಪುರಾಣಪುರುಷನಾಗಲು ನನಗೆ ಲಜ್ಜೆ ಬಾಧಿಸಿತು.
“ಹೂ, ಚೆನ್ನಾಗಿ ನಿದ್ರೆ ಮಾಡಿದೆ. ಅಂದರೆ ನಾನು ಕುಳಿತಿದ್ದ ಮರದಿಂದ ನೆಲಕ್ಕೆ ಉರುಳಿದ ಮೇಲೆ ಸೊಗಸಾದ ನಿದ್ದೆ ಬಂತು, ಅಂದರೆ ಆ ತಾವರೇಕೋಟೆಯ ಸ್ಥಳಪುರಾಣವೇನು?”
ಇದನ್ನು ಓದಿದ್ದೀರಾ?: ಹ.ಪೀ. ಜೋಶಿ ಅವರ ಕತೆ | ಕಿಚ್ಚಿನ ಕಾವಲು
ಎದ್ದುಹೋಗಿ ಒಳಗಿನಿಂದ ಒಂದು ಓಲೆಕಟ್ಟನ್ನು ತಂದರು.
“ಹೆದರಬೇಡಿ, ನಾನು ಇದನ್ನು ಓದುವುದಿಲ್ಲ, ನನ್ನ ಜ್ಞಪ್ತಿ ಸಹಾಯಕ್ಕಾಗಿ ತಂದಿದ್ದೇನೆ! ಇತಿಹಾಸ ಹೀಗೆ ಹೇಳುತ್ತೆ: ವಿಜಯನಗರದ ತಿರುಮಲರಾಯರ ಕಾಲದಲ್ಲಿ ತಾವರೆಕೋಟೆ ಬಿಜಾಪುರಕ್ಕೂ ವಿಜಯನಗರಕ್ಕೂ ಮಧ್ಯ ಗಡಿಯ ಒಂದು ಪ್ರಬಲವಾದ ಪಾಳ್ಯಪಟ್ಟಾಗಿತ್ತು. ಆ ಪಾಳ್ಯಗಾರನು ಸುಲ್ತಾನರಿಗೂ, ಚಕ್ರವರ್ತಿಗಳಿಗೂ ಸಮಯೋಚಿತವಾಗಿ ಸೇವೆಯನ್ನು ಮಾಡಿ, ಉಭಯತ್ರರಿಗೂ ಸಮಯೋಚಿತವಾಗಿ ದ್ರೋಹವನ್ನು ಮಾಡಿ ಉಭಯತ್ರರಿಂದ ಆಗಾಗ್ಗೆ ಪ್ರಯೋಜನವನ್ನು ಪಡೆಯುತ್ತಿದ್ದರೂ, ಯಾರೊಬ್ಬರ ನಂಬಿಕೆಗೂ ಅರ್ಹನಾಗಿರಲಿಲ್ಲ. ಇಂಥವನಿಗೆ ಅದೃಷ್ಟ ತಪ್ಪಿದರೆ ವಿನಾಶವೇ ಸಿದ್ದ. ಇವನ ಕಾಲ ಬಂದಾಗ- ಆಷಾಢ ಬಹುಳ ಪಂಚಮಿ ಅರ್ಧ ರಾತ್ರಿಯಲ್ಲಿ ಬಿಜಾಪುರದ ಸೈನ್ಯಾಧಿಪತಿ ರಣಡೌಲಾಖಾನನು ತಾವರೆಕೋಟೆಗೆ ನುಗ್ಗಿ, ಅಲ್ಲಿದ್ದ ಗಂಡು, ಹೆಣ್ಣು, ಶಿಶುವೆಂದು ನೋಡದೆ ಎಲ್ಲರನ್ನೂ ಕೊಂದು, ಊರನ್ನು ಸುಟ್ಟು ಸಂಪೂರ್ಣವಾಗಿ ನಾಶಮಾಡಿದನು. ಕಾರಣ ಸ್ಪಷ್ಟವಾಗಿ ಗೊತ್ತಿಲ್ಲ. ಪಾಳೆಯಗಾರನು ಬಿಜಾಪುರದ ಮೇಲೆ ದಾಳಿಗಾಗಿ ವಿಜಯನಗರದ ಸೇನಾಧಿಪತಿಗಳ ಸಂಗಡ ಮಸಲತ್ತು ಮಾಡುತ್ತಿದ್ದದ್ದು ರಣಡೌಲಾಖಾನನಿಗೆ ತಿಳಿಯಬಂತೆಂದು ಊಹೆ. ಸ್ಥಳಪುರಾಣದಲ್ಲಿ ಹೇಳುತ್ತಾರೆ- ಯಾವದೋ ನಕ್ಷತ್ರದಲ್ಲಿ ಹುಟ್ಟಿದವರು ಆಷಾಢ ಪಂಚಮಿ ರಾತ್ರಿ ತಣ್ಣೀರಿನಲ್ಲಿ ಮುಳುಗಿ ಆ ಪಾಳು ನಿವೇಶನಕ್ಕೆ ಹೋದರೆ ತಾವರೆಕೋಟೆಯ ವಿನಾಶಕ್ರಮವನ್ನು ನೋಡಬಹುದು-ಎಂದು. ಅಂದರೆ ಯಾರೂ ಪರೀಕ್ಷೆ ಮಾಡಿ ನೋಡಲಿಲ್ಲ. ನಿಮ್ಮ ನಕ್ಷತ್ರವ್ಯಾವುದು?”
“ನಾನು ಜಾತಕವನ್ನೇ ಬರೆಸಲಿಲ್ಲ”ವೆಂದೆ. ಇಷ್ಟೇ ಕತೆ.
ಹೀಗೆಂದು ನಾರಾಯಣರಾವ್ ಸುಮ್ಮನಾದರು. ನಾವೆಲ್ಲರೂ ಎದ್ದು ಮಲಗುವುದಕ್ಕೆ ಹೋದೆವು.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ; ಜೀವನ: 1948)

ನವರತ್ನ ರಾಮರಾಯರ ‘ತಾವರೆಕೋಟೆ’
‘ಕೆಲವು ನೆನಪುಗಳು’ ಪುಸ್ತಕದ ಮೂಲಕ ಪ್ರಸಿದ್ಧಿಗೆ ಬಂದ ನವರತ್ನ ರಾಮರಾಯರು (1877-1961) ಬರೆಯಲು ಆರಂಭಿಸಿದ್ದು ಬಹಳ ತಡವಾಗಿ. ಅವರ ಮೊದಲ ಕಥೆ ‘ಲಕ್ಷ್ಮಣರಾಯನ ಭಾಗ್ಯ’ ಪ್ರಬುದ್ಧ ಕರ್ಣಾಟಕದಲ್ಲಿ 1932ರಲ್ಲಿ ಪ್ರಕಟವಾಯಿತು. ಈ ಕಥೆ ತಕ್ಷಣ ಜನರ ಗಮನ ಸೆಳೆಯಿತೆಂಬುದಕ್ಕೆ ಅದು ಅನಕೃ ಅವರ “ಕಾಮನಬಿಲ್ಲು” (1933), ದೇ.ಜ.ಗೌ. ಅವರ “ಹೊಸಗನ್ನಡ ಕಥಾಸಂಗ್ರಹ” (1957) ಮೊದಲಾದ ಪ್ರಾತಿನಿಧಿಕ ಕಥಾಸಂಗ್ರಹಗಳಲ್ಲಿ ಸ್ಥಾನ ಪಡೆದುದೇ ಸಾಕ್ಷಿ. 1951ರಲ್ಲಿ ಅವರ ನಾಲ್ಕು ಕಥೆಗಳ ಏಕೈಕ ಸಂಗ್ರಹ “ಸಣ್ಣ ಕತೆಗಳು” ಪ್ರಕಟವಾಯಿತು. ಆಮೇಲೂ ‘ಕಳ್ಳತನ, ಕೆಲವು ಕಳ್ಳರು’ ಎಂಬುದೊಂದು ಕಥೆ ‘ನಡೆದು ಬಂದ ದಾರಿ’ಯ ಎರಡನೆಯ ಸಂಪುಟದಲ್ಲಿ ಬಂದಿದೆ. ರಾಮರಾಯರು ಬರೆದದ್ದು ಇಷ್ಟೇ ಕಥೆಗಳನ್ನು. ಆದರೂ ಅಂದಿನ ಮತ್ತು ಇಂದಿನ ಕಥೆಗಳ ಸಂದರ್ಭದಲ್ಲಿಟ್ಟು ನೋಡಿದಾಗ ರಾಮರಾಯರ ಕಥೆಗಳು ಅತ್ಯಂತ ವಿಶಿಷ್ಟವಾಗಿ ಕಾಣುತ್ತವೆ. ವಿಶೇಷವಾಗಿ ಅವರ ಕಥೆಗಳ ವಸ್ತು ಮತ್ತು ನಿರ್ವಹಣೆ ನಮ್ಮ ಗಮನ ಸೆಳೆಯುತ್ತವೆ.
‘ಲಕ್ಷ್ಮಣರಾಯನ ಭಾಗ್ಯ’ವನ್ನು ಕುರಿತು ಅನಕೃ ತಮ್ಮ ಟಿಪ್ಪಣಿಯಲ್ಲಿ ಬರೆಯುತ್ತ, ಅಪಕ್ವ ಪ್ರಣಯ ಕಥೆಗಳೇ ಸಮೃದ್ಧವಾಗಿ ಪ್ರಕಟವಾಗುತ್ತಿದ್ದ ಕಾಲದಲ್ಲಿ ಇದೊಂದು ತೀರ ಹೊಸ ವಸ್ತುವನ್ನು ಒಳಗೊಂಡ ಕಥೆ ಎಂದಿದ್ದಾರೆ. ಇದು ನಿಜ. ಆದರೂ ‘ಲಕ್ಷ್ಮಣರಾಯನ ಭಾಗ್ಯ’, ‘ತಣ್ಣೀರು’, ‘ಕಳ್ಳತನ, ಕೆಲವು ಕಳ್ಳರು’ ಈ ಕತೆಗಳು ಅವರ “ಕೆಲವು ನೆನಪುಗಳು” ಗ್ರಂಥದಿಂದ ಎತ್ತಿಕೊಂಡ ಭಾಗಗಳಂತೆ ಕಾಣುತ್ತವೆ. ಕತೆಗಾರಿಕೆಯ ದೃಷ್ಟಿಯಿಂದ ಸ್ವಲ್ಪ ಸಡಿಲವಾಗಿದ್ದರೂ, ವ್ಯಾಪಕ ಅನುಭವ, ಆಳವಾದ ತಿಳಿವಳಿಕೆ, ಸರಳ ನಿರೂಪಣೆಗಳಿಂದ ಈ ಕಥನಗಳು ಆಕರ್ಷಕವಾಗಿವೆ. ಆದರೆ ‘ತಾವರೆಕೋಟೆ’ ತೀರಾ ಬೇರೆ ರೀತಿಯ ಕಥೆ; ಅಂದಿಗೂ ಇಂದಿಗೂ ವಿಶಿಷ್ಟ ಎನ್ನಬಹುದಾದ ಬರವಣಿಗೆ; ಅವರ ಕಥೆಗಳಲ್ಲೆಲ್ಲ ಸಣ್ಣಕತೆಯ ಸ್ವರೂಪದ ದೃಷ್ಟಿಯಿಂದ ಅತ್ಯಂತ ಪರಿಪೂರ್ಣವಾದುದು. ಯಾಕೋ ಈ ಕಥೆ ವಿಮರ್ಶಕರ ಗಮನವನ್ನು ಸೆಳೆದಿಲ್ಲ.
‘ತಾವರೆಕೋಟೆ’ ಮೊದಲು ಪ್ರಕಟವಾದದ್ದು ಜೀವನ ಪತ್ರಿಕೆಯಲ್ಲಿ, 1948ರಷ್ಟು ಈಚೆಗೆ. ನವೋದಯ ಕಾಲದ ‘ಇಂದಿರೆಯೊ ಅಲ್ಲವೋ?’ದಂಥ ಕನಸಿನ ಕಥೆಗಳಿಗೆ ಮತ್ತು ಈಚಿನ ನವ್ಯಕಥೆಗಳಲ್ಲಿಯ ಫ್ಯಾಂಟಸಿಗಳಿಗೆ ನಡುವೆ ನಿಲ್ಲುವ ಕಥೆ ಇದು. ನವೋದಯದ ಕನಸಿನ ಕಥೆಗಳಲ್ಲಿ ವಾಸ್ತವ ಮತ್ತು ಕನಸುಗಳು ಪ್ರತ್ಯೇಕವಾಗಿಯೇ ಇರುತ್ತವೆ. ನವ್ಯ ಕಥೆಗಳಲ್ಲಿ ಫ್ಯಾಂಟಿಸಿ ವಾಸ್ತವದ ಭಾಗವಾಗಿಯೇ ಬರುತ್ತದೆ. ‘ತಾವರೆಕೋಟೆ’ಯಲ್ಲಿ ವಾಸ್ತವ ಮತ್ತು ಕನಸುಗಳ ನಡುವಿನ ಗೆರೆಗಳನ್ನು ಅತ್ಯಂತ ಸಹಜವಾದ ರೀತಿಯಲ್ಲಿ ಜಾಣತನದಿಂದ ಅಳಿಸಿಹಾಕಲಾಗಿದೆ. ಇದೇ ಬಗೆಯ ಕಥಾವಸ್ತುವನ್ನು ಹೊಂದಿದ ಶ್ರೀನಿವಾಸರ ‘ಸೋಜಿಗದ ಹೊಳಲು’ (‘ನವರಾತ್ರಿ 2’, 1944) ಎಂಬ ಕಥನಕವನದೊಂದಿಗೆ ಈ ಕಥೆಯನ್ನು ಹೋಲಿಸಿ ನೋಡಿದರೆ ಇದರ ಅನನ್ಯತೆ ಇನ್ನೂ ಎದ್ದು ಕಾಣುತ್ತದೆ. ಶ್ರೀನಿವಾಸರು ಇದನ್ನು ಸಣ್ಣಕತೆಯಾಗಿ ಬರೆಯುತ್ತಿರಲಿಲ್ಲ.
“ಯಾವುದು ಸತ್ಯ, ಯಾವುದು ಭ್ರಮೆ ಎಂದು ನಿರ್ಧರಿಸುವುದು ಹೇಗೆ?”, “ನಾನು ಹೇಳುವುದು ನಡೆದದ್ದೋ ಕನಸೋ ನನಗೇ ಚೆನ್ನಾಗಿ ವಿಮರ್ಶೆಗೆ ಬಂದಿಲ್ಲ”, “ಯಾವುದು ಕನಸು? ಯಾವುದು ಸತ್ಯ? ನಮ್ಮ ಜೀವನವೆಂಬುದೇ ಕನಸಲ್ಲವೆಂದು ಏನು ಖಾತರಿ?” ಕಥೆಯಲ್ಲಿ ನಿರೂಪಕನ ಮುಖದಿಂದ ಬರುವ ಈ ಮಾತುಗಳು ‘ತಾವರೆಕೋಟೆ’ಯ ಕೇಂದ್ರವಸ್ತುವನ್ನು ಸೂಚಿಸುತ್ತವೆ. ವಾಸ್ತವ ಮತ್ತು ಕನಸುಗಳ ನಡುವಿನ ಅಂತರ ಅಳಿಸಿಹೋಗಿದೆಯಷ್ಟೇ ಅಲ್ಲ, ಇಡೀ ಜೀವನವೇ ಒಂದು ಕನಸಾಗಿರಬಹುದು ಎಂಬ ಸೂಚನೆಯು ಕಥೆಯಲ್ಲಿ ಅಸ್ಪಷ್ಟವಾಗಿ ಕಾಣಿಸಿಕೊಂಡಿದೆ.
ಕಥೆಯ ಮೊದಲ ಭಾಗ ಮುಖ್ಯ ಕಥೆಗೆ ತಕ್ಕದಾದ ವಾತಾವರಣವನ್ನು ನಿರ್ಮಿಸುತ್ತದೆ. ಮುಖ್ಯ ಕಥೆ ನಡೆದ ಘಾಟಿಯ ಅರಣ್ಯದಲ್ಲೇ ರಾತ್ರಿಯ ಹೊತ್ತಿನಲ್ಲಿ ನಿರೂಪಕ ತನ್ನ ಅನುಭವವನ್ನು ನಿರೂಪಿಸುತ್ತಾನೆ. ಅದಕ್ಕೆ ಪೀಠಿಕೆಯಾಗಿ ಆ ಅನುಭವವನ್ನು ಹೋಲುವ ಒಂದೆರಡು ಉದಾಹರಣೆಗಳೂ ಬರುತ್ತವೆ. ಅಣ್ಣಪ್ಪನವರು ವನದೇವತೆಯ ಬಗ್ಗೆ ಹೇಳುವ ಮಾತುಗಳು, ಕತೆಗಾರ ತನ್ನ ವೈದ್ಯ ಗುರುಗಳ ಬಗ್ಗೆ ಹೇಳುವ ಪ್ರಸಂಗ-ಮುಂದೆ ನಿರೂಪಕ (ನಾರಾಯಣರಾವ್) ಹೇಳುವ ಕಥೆ ಕೇವಲ ಒಂದು ಆಕಸ್ಮಿಕ ಅನುಭವವಲ್ಲ ಎಂದು ಸೂಚಿಸುತ್ತದೆ.
ಈ ಬಗೆಯ ಆರಂಭದಿಂದ ಕಥೆಯಲ್ಲಿ ಎರಡು ಸ್ತರಗಳು ಉಂಟಾಗುತ್ತವೆ, ಒಂದು: ಇಂದಿನ ವಾಸ್ತವದ ಚೌಕಟ್ಟು; ಎರಡು: ಕನಸಿನಲ್ಲಿ ಕಾಣಿಸುವ ಇತಿಹಾಸ. ಇತಿಹಾಸ ಕನಸಾಗಿ ಇಂದಿನ ವಾಸ್ತವದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆ ಕಾಣಿಸಿಕೊಳ್ಳುವಾಗ ಇತಿಹಾಸ ಮತ್ತು ಇಂದುಗಳು, ಕನಸು ಮತ್ತು ವಾಸ್ತವಗಳು ಒಂದು ಇನ್ನೊಂದರ ಭ್ರಮೆ ಹುಟ್ಟಿಸುತ್ತವೆ. ಆದರೆ ಇತಿಹಾಸ ಇಂದಿನ ಮೇಲೆ, ಕನಸು ವಾಸ್ತವದ ಮೇಲೆ ಮಾಡಬಹುದಾದ ಪರಿಣಾಮವನ್ನು ಕುರಿತು ಕಥೆ ಏನನ್ನೂ ಹೇಳುವುದಿಲ್ಲ.
ಮುಖ್ಯವಾಗಿ ಕಥೆಯಲ್ಲಿ ನಮ್ಮನ್ನು ಆಕರ್ಷಿಸುವ ಅಂಶ ಕನಸು ಮತ್ತು ವಾಸ್ತವಗಳು ಬೇರೆಯಲ್ಲ ಎಂಬಂತೆ ಅವುಗಳನ್ನು ಜೋಡಿಸಿರುವ ಅಸಾಧಾರಣ ಕೌಶಲ ಮತ್ತು ಈ ಕೌಶಲದ ಹಿಂದಿನ ಪ್ರಯತ್ತರಹಿತ ಸಹಜತೆ.
ಕನಸಿನ ಆರಂಭದಲ್ಲೇ ಈ ಮಾತನ್ನು ಗಮನಿಸಬಹುದು. ಕನಸು ಆರಂಭವಾಗುವ ಮೊದಲು ನಿರೂಪಕ ಗಿಡದ ಮೇಲೆ ಕುಳಿತಂತೆಯೇ ನಿದ್ದೆ ಹೋಗುತ್ತಾನೆ. ಆಮೇಲೆ ”ಇದ್ದಕ್ಕಿದ್ದ ಹಾಗೆಯೇ ಎಚ್ಚರವಾಯಿತು” ಎನ್ನುತ್ತಾನೆ. ಇದೇ ಕನಸು ಆರಂಭವಾಗುವ ಸೂಚನೆ. “ಕುದುರೆ ಹೆಜ್ಜೆ ಸದ್ದಿನಿಂದ ಎಚ್ಚರವಾಯಿತೆಂದು ನನ್ನ ಭಾವನೆ” ಎಂದು ನಿರೂಪಕ ಕೊಡುವ ವಿವರಣೆ ಸಂದಿಗ್ಧವಾಗಿದೆ. ಎಚ್ಚರ ವಾಸ್ತವದ ಸಂಕೇತವಾದರೆ, ಕುದುರೆ ಹೆಜ್ಜೆಯ ಸದ್ದು ಕನಸಿನದು. ಮುಂದೆ ನಡೆಯುವದೆಲ್ಲ ಕನಸೇ ಆದರೂ, ನಿರೂಪಕ ಅದನ್ನೆಲ್ಲ ಎಚ್ಚರದಲ್ಲೇ ವಿಮರ್ಶಿಸುತ್ತಾ ಹೋಗುತ್ತಾನೆ. ಉದಾಹರಣೆಗೆ ಕುದುರೆ ಸವಾರನ ಪೋಷಾಕಿನ ಬಗೆಗಿನ ಅವನ ವಿವರಣೆಯನ್ನು ನೋಡಬಹುದು.
ಕನಸು ಕೂಡಾ ವಾಸ್ತವ, ಕಲ್ಪನೆಗಳ ಮಿಶ್ರಣವಾಗಿದೆ. ವಿಜಯನಗರ, ವಿಜಾಪುರ, ರಣಡೌಲಾಖಾನ ಮುಂತಾದ ಐತಿಹಾಸಿಕ ವಾಸ್ತವ ವಿವರಗಳನ್ನೊಳಗೊಂಡು ಒಂದು ಕಲ್ಪನಾರಮ್ಯವಾದ ಪ್ರಣಯ ಸಾಹಸಗಳ ಕಥೆಯೇ ನಮ್ಮೆದುರು ನಡೆಯುತ್ತದೆ. ಆದರೆ ಈ ಕಾಲ್ಪನಿಕ ಕಥೆ ಐತಿಹಾಸಿಕವಾಗಿ ವಾಸ್ತವ, ನಿಜ ಎನಿಸುವಂತೆ ವಿವರಗಳನ್ನು ಹೊಂದಿಸಲಾಗಿದೆ. ಕಥೆಯ ಮುಖ್ಯ ಧಾಟಿಗೆ ಇದು ಅನುಗುಣವಾಗಿಯೇ ಇದೆ.
ಕುದುರೆ ಸವಾರನನ್ನು ಬೆನ್ನು ಹತ್ತಿ ಹೊರಡುವ ನಿರೂಪಕ ಹೀಗೆ ಇತಿಹಾಸವನ್ನು / ಕನಸನ್ನು ಪ್ರವೇಶಿಸುತ್ತಾನೆ. ಆದರೆ ಕನಸಿನಲ್ಲೂ ಅವನು ಇಂದಿನವನೇ; ಮತ್ತು ಎಚ್ಚರದ ಸ್ಥಿತಿಯಲ್ಲೇ ಇರುತ್ತಾನೆ. ಕನಸಿನ ಐತಿಹಾಸಿಕ ಕಥೆಯಲ್ಲಿ ಅವನು ಕ್ರಮೇಣ ಒಂದಾಗುತ್ತ ಕೊನೆಗೆ ತನ್ನ ಚೀಲದಲ್ಲಿದ್ದ ಸುತ್ತಿಗೆಯನ್ನು ತೆಗೆದುಕೊಂಡು ಪ್ರತ್ಯಕ್ಷವಾಗಿ ಹೊಡೆದಾಟದಲ್ಲಿ ಭಾಗವಹಿಸುವ ಮಟ್ಟಿಗೆ ಸೇರಿಕೊಳ್ಳುತ್ತಾನೆ. ನಿರೂಪಕ ಹೀಗೆ ಸುತ್ತಿಗೆಯಿಂದ ಹೊಡೆದಾಗ ಹೊಡೆಸಿಕೊಂಡ ವ್ಯಕ್ತಿ ಕೆಳಗುರುಳುವ, ನಂತರ ಇನ್ನೊಬ್ಬನ ಹೊಡೆತದಿಂದ ನಿರೂಪಕ ಪ್ರಜ್ಞೆ ತಪ್ಪಿ ಕೆಳಗೆ ಬೀಳುವ ಸಂಗತಿಗಳು ಇಲ್ಲಿ ಮುಖ್ಯವಾಗಿವೆ. ಇವು ಮತ್ತೆ ವಾಸ್ತವ-ಕನಸುಗಳ ನಡುವೆ ಗೊಂದಲ ಹುಟ್ಟಿಸುತ್ತವೆ. ಮುಸ್ಲಿಂ ಯೋಧರು ಮತ್ತು ಅವರ ಕತ್ತಿಗಳೊಂದಿಗೆ ನಿರೂಪಕ ಮತ್ತು ಅವನ ಸುತ್ತಿಗೆ ತಾಕಲಾಡುತ್ತವೆ. ಆ ಮೂಲಕ ಕನಸು-ವಾಸ್ತವಗಳು ಇತಿಹಾಸ-ಇಂದುಗಳು ತಾಕಲಾಡುತ್ತವೆ.
ಹೀಗೆ ಕನಸಿನಲ್ಲಿ ಪ್ರಜ್ಞೆ ತಪ್ಪಿದ ನಿರೂಪಕ ವಾಸ್ತವದಲ್ಲಿ ಎಚ್ಚರಗೊಳ್ಳುತ್ತಾನೆ. ಆದರೆ ಅವನು ಕಂಡದ್ದು ಬರಿ ಕನಸಲ್ಲ ಎಂಬಂತೆ ವಿವರಗಳಿವೆ. ಅವನು ಮರದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದೆಯಾದರೂ ಆ ಪೆಟ್ಟು ಕನಸಿನ ಮುಸ್ಲಿಂ ಯೋಧನ ಹೊಡೆತದಿಂದ ಉಂಟಾಗಿರಬಹುದೆಂಬ ಸಾಧ್ಯತೆಯೂ ಇದೆ. ಹಾಗೆಯೇ ಸ್ವಲ್ಪ ದೂರದಲ್ಲಿ ಸಿಡಿದು ಬಿದ್ದಿರುವ ಸುತ್ತಿಗೆ ಅವನು ಮರದಿಂದ ಕೆಳಕ್ಕೆ ಬಿದ್ದಾಗ ಬಿದ್ದಿತ್ತೋ, ಕನಸಿನಲ್ಲಿ ಅದನ್ನು ಹಿಡಿದು ಹೊಡೆದಾಡಿದಾಗ ಪೆಟ್ಟಿನಿಂದ ಮೂರ್ಛೆ ಹೋದಾಗ ಬಿದ್ದಿತ್ತೋ ಎಂಬ ಅನುಮಾನ ಹುಟ್ಟಿಸುತ್ತದೆ.
ಹೀಗೆ ಇಡೀ ಅನುಭವ ಬರಿಯ ಒಂದು ಕನಸೋ, ಅಥವಾ ರಹಸ್ಯಪೂರ್ಣವಾದ ಒಂದು ನೈಜ ಅನುಭವವೋ ಎಂಬ ಸಂದಿಗ್ಧತೆಯನ್ನು ಕತೆ ಉದ್ದಕ್ಕೂ ಉಳಿಸಿಕೊಂಡು ಬರುತ್ತದೆ. ಕೊನೆಗೆ ನಿರೂಪಕ ತಾನು ರಾತ್ರಿಯನ್ನು ಕಳೆದ ಮರದ ಸುತ್ತಲೂ ಕಾಣುವ ಹಳೆಯ ಊರಿನ ಅವಶೇಷಗಳು ಮತ್ತೆ ಇತಿಹಾಸವನ್ನು ವಾಸ್ತವಕ್ಕೆ ತರುತ್ತವೆ. ಕರಣಿಕ ಶೇಷಣ್ಣನವರು ಹೇಳುವ ತಾವರೆಕೋಟೆಯ ಸ್ಥಳಪುರಾಣ ಕನಸಿನ ಘಟನೆಗೆ ಇತಿಹಾಸದ ವಾಸ್ತವವನ್ನು ಕಲ್ಪಿಸುತ್ತದೆ. ಇದೆಲ್ಲ ಕನಸಿನಲ್ಲಿ ಕಂಡ ಕಥೆ ಎನಿಸಿದರೂ ನಿರೂಪಕನಿಗೆ ನಿಜ ಯಾವುದೆಂದು ಗೊಂದಲವಾಗುತ್ತದೆ. ಈ ಅನುಭವದ ಬಗ್ಗೆ ಅವನಿಗೆ ಒಂದು ಬಗೆಯ ಹಗುರ ವಿನೋದದ ಭಾವವೇ ಇದೆ. ಎಚ್ಚರವಾದಾಗ ದೂರ ಬಿದ್ದಿದ್ದ ಸುತ್ತಿಗೆಯನ್ನು ನೋಡಿ “ಆ ಸಭ್ಯ ಆಯುಧದಿಂದ ರಾತ್ರಿ ಮ್ಲೇಚ್ಛವಧೆಯನ್ನು ಮಾಡಿದ್ದನ್ನು ನೆನೆದು” ನಗುತ್ತಾನೆ. ಶೇಷಣ್ಣನವರು ಮಾಡುವ ಹಾಳು ಗ್ರಾಮದ ವರ್ಣನೆಯನ್ನು ಕೇಳಿ “ಆ ವರ್ಣನೆಯು ಅನೇಕ ಹಾಳು ಗ್ರಾಮಗಳಿಗೆ ಅನ್ವಯಿಸಬಹುದು. ನನ್ನ ಹಾಳು ಗ್ರಾಮಕ್ಕೂ ಅನ್ವಯಿಸಿತು. ಹೌದೆಂದೆ” ಎನ್ನುತ್ತಾನೆ. ತನ್ನ ಕನಸಿನ ಕಥೆ ಹೇಳಿದರೆ ಅದೂ ಸ್ಥಳಪುರಾಣದ ಉತ್ತರಕಾಂಡವಾಗಿ ತಾನೊಬ್ಬ ಪುರಾಣ ಪುರುಷನಾದೇನೆಂದು ಅವನಿಗೆ ಲಜ್ಜೆಯಾಗುತ್ತದೆ. ಈ ವಿನೋದದ ವಿವರಗಳು ತಮ್ಮಷ್ಟಕ್ಕೇ ಸೊಗಸಾಗಿರುವದರ ಜೊತೆಗೆ, ಕನಸು-ವಾಸ್ತವಗಳ ನಡುವಿನ ಗೊಂದಲ ತೀರಾ ಗಂಭೀರವಾಗದಂತೆ ತಡೆಯುತ್ತವೆ.
ಕಥೆಯ ಕೊನೆಯ ವಿವರವಂತೂ ಅತ್ಯಂತ ಕಲಾತ್ಮಕವಾದ ಮಿಂಚು ಎನ್ನಬೇಕು. ಆಷಾಢ ಪಂಚಮಿಯ ರಾತ್ರಿಯಲ್ಲಿಯೇ ತಾವರೆಕೋಟೆ ನಾಶವಾದದ್ದು; ಯಾವದೋ ನಕ್ಷತ್ರದಲ್ಲಿ ಹುಟ್ಟಿದವರು ಆ ರಾತ್ರಿ ಆ ಜಾಗೆಗೆ ಹೋದರೆ ತಾವರೆಕೋಟೆಯ ವಿನಾಶದ ಕ್ರಮವನ್ನು ನೋಡಬಹುದೆಂದು ಸ್ಥಳಪುರಾಣದ ವಿವರವೊಂದನ್ನು ಹೇಳುವ ಶೇಷಣ್ಣನವರು ನಿರೂಪಕನ ನಕ್ಷತ್ರವ್ಯಾವುದು ಎಂದು ಕೇಳುತ್ತಾರೆ. ತಾನು ಜಾತಕವನ್ನೇ ಬರೆಸಲಿಲ್ಲವೆಂದು ನಿರೂಪಕ ಹೇಳುತ್ತಾನೆ. ಇದು ನಿಜವಾಗಿರಬಹುದು. ಇಲ್ಲವೆ ಶೇಷಣ್ಣನವರಿಗೆ ಬೇಕೆಂದೇ ಕೊಟ್ಟ ಹಾರಿಕೆಯ ಉತ್ತರವಾಗಿರಬಹುದು. ಆದರೆ ಇದು ಕಥೆಯ ಮುಖ್ಯ ಸಂದಿಗ್ಧವನ್ನಂತೂ ಗಟ್ಟಿಗೊಳಿಸುತ್ತದೆ. ಸ್ಥಳಪುರಾಣದ ಹೇಳಿಕೆ ಒಂದು ಮೂಢನಂಬಿಕೆಯಂತೆ, ಕಟ್ಟುಕತೆಯಂತೆ ಕಂಡರೂ, ನಿರೂಪಕ ಆಷಾಢಪಂಚಮಿಯ ರಾತ್ರಿ ತಾವರೆಕೋಟೆಯ ವಿನಾಶಕ್ರಮವನ್ನು ನೋಡಿದ್ದಂತೂ ನಿಜ. ಆದರೆ ಅದು ಕನಸೋ ನಿಜವೋ ಹೇಳುವುದು ಕಷ್ಟ. ತೋರಿಕೆಗೆ ಕನಸೆಂದೇ ಕಂಡರೂ, ನಿರೂಪಕ ಅದನ್ನು ಕನಸೆಂದೇ ಭಾವಿಸಲು ಇಚ್ಛಿಸುತ್ತಿದ್ದರೂ, ಅನೇಕ ವಿವರಗಳು ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತವೆ.
ಈ ಸಂದಿಗ್ಧತೆಯನ್ನು ಸಾಧಿಸಲು ಕಥೆಯ ತುಂಬ ಪ್ರಯತ್ನವಿದ್ದರೂ ಎಲ್ಲಿಯೂ ಕಲೆಗಾರಿಕೆಯಲ್ಲಿ ಅಸಹಜತೆಯಾಗಲಿ, ಕಣ್ಣು ಕುಕ್ಕುವ ಚಮತ್ಕಾರವಾಗಲಿ ಇಲ್ಲವೆನ್ನುವುದು ಬಹಳ ಮಹತ್ವದ ಸಂಗತಿ. ಕನಸಿನಲ್ಲಿ ರಾಜಕುಮಾರ ತನ್ನ ಪ್ರೇಯಸಿಯ ಮುಂದೆ ತಾನು ಅವಳನ್ನು ಪ್ರೀತಿಸುವ ಕಾರಣಸಂದರ್ಭವನ್ನು ಹೇಳುವ ಅಸಹಜ ಪ್ರಸಂಗವೊಂದನ್ನು ಬಿಟ್ಟರೆ ಕಥೆ ತನ್ನ ಸರಳ ನಿರೂಪಣೆಯಲ್ಲಿ ಸಾಧಿಸಿರುವ ಸಹಜ ಕಲಾತ್ಮಕತೆ ಆಶ್ಚರ್ಯವನ್ನುಂಟುಮಾಡುತ್ತದೆ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)