- ನಾಡಪ್ರಭು ಕೆಂಪೇಗೌಡರ ದಕ್ಷ, ದೂರದೃಷ್ಟಿಯ, ಜನಾನುರಾಗಿ ಆಡಳಿತ ನಮ್ಮೆಲ್ಲರಿಗೂ ಮಾದರಿ
- 100ಕ್ಕೂ ಹೆಚ್ಚು ಕೆರೆ ಹಾಗೂ 65 ಪೇಟೆ ನಿರ್ಮಿಸಿದ ಕೆಂಪೇಗೌಡರು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿ
ರಾಜ್ಯದಲ್ಲಿ ಜೂನ್ 27ರಂದು ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ, ಗಣ್ಯರು ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಜಯಂತಿ ಆಚರಣೆ
ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯ ಮುಂಭಾಗದ ಉದ್ಯಾನದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಲಾರ್ಪಣೆ ಮಾಡಿ ಪುಷ್ಪನಮನ ಅರ್ಪಿಸಿದರು. ಜತೆಗೆ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಅರ್ಪಿಸಲಾಯಿತು.
ಈ ವೇಳೆ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್, ಉಪ ಆಯುಕ್ತ ಮಂಜುನಾಥ ಸ್ವಾಮಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಕಳೆದ ವರ್ಷ ₹117 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ ಬೆಂಗಳೂರು ಪೊಲೀಸರು
ಗಣ್ಯರ ಶುಭಾಶಯ ಟ್ವೀಟ್
“ನಾಡಪ್ರಭು ಕೆಂಪೇಗೌಡರ ದಕ್ಷ, ದೂರದೃಷ್ಟಿಯ, ಜನಾನುರಾಗಿ ಆಡಳಿತ ನಮ್ಮೆಲ್ಲರಿಗೂ ಮಾದರಿಯಾದುದ್ದು. ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರ ಜನ್ಮದಿನದಂದು ನಾಡಿನ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಿಗೆ ಅವರು ನೀಡಿರುವ ಕೊಡುಗೆಗಳನ್ನು ಹೆಮ್ಮೆಯಿಂದ ಸ್ಮರಿಸುತ್ತಾ, ನನ್ನ ಗೌರವ ನಮನ ಅರ್ಪಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
“ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. 100ಕ್ಕೂ ಹೆಚ್ಚು ಕೆರೆಗಳನ್ನು ಹಾಗೂ 65 ಪೇಟೆಗಳನ್ನು ನಿರ್ಮಿಸಿದ ಕೆಂಪೇಗೌಡರು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಆಡಳಿತದ ವೈಖರಿ ಇಂದಿಗೂ ನಮಗೆಲ್ಲಾ ಮಾದರಿ” ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯ ಹಾರ್ದಿಕ ಶುಭಾಶಯಗಳು. ಕೆಂಪೇಗೌಡರ ದೂರದೃಷ್ಟಿ, ಸಮರ್ಥ ಹಾಗೂ ಜನಪರ ಆಡಳಿತ ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿವೆ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
“ನಾಡಿನ ಸಮಸ್ತ ಜನತೆಗೆ, ಜಗತ್ತಿನೆಲ್ಲೆಡೆ ನೆಲೆಸಿರುವ ಕನ್ನಡಿಗರೆಲ್ಲರಿಗೂ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು. ನಾಡಪ್ರಭುಗಳು ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ, ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಮಾನವತಾವಾದಿ. ಅಭಿವೃದ್ಧಿ, ಶಾಂತಿ, ಸೌಹಾರ್ದತೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಗೋಣ. ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಬದ್ಧತೆಯಿಂದ ಶ್ರಮಿಸೋಣ” ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ್‌ಸ್ವಾಮಿ ಟ್ವೀಟ್ ಮಾಡಿದ್ದಾರೆ.