ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೇಸ್ ವತಿಯಿಂದ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ಮಾತನಾಡಿ, “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಾ ಜನಸಾಮಾನ್ಯರ ಮೇಲೆ ತೆರಿಗೆಯ ಅಧಿಕ ಹೊರೆ ಹೊರಿಸುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಜೀವನ ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಮಾತನಾಡಿ, “ಬೆಲೆ ಏರಿಕೆಗಳು ಈಗಾಗಲೇ ಹಣದುಬ್ಬರ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ಸಾಮಾನ್ಯ ಜನರು, ರೈತರು, ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಭಾರಿ ಹೊರೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಉದ್ಯೋಗ ಸೃಷ್ಟಿ ಮಾಡುವುದನ್ನಾಗಲೀ, ಜನಸಾಮಾನ್ಯರ ಜೀವನ ಸರಳಗೊಳಿಸುವ ಕೆಲಸವನ್ನಾಗಲೀ ಮಾಡುತ್ತಿಲ್ಲ. ಬದಲಿಗೆ ಜನರಿಂದ ಮಿತಿಮೀರಿ ತೆರಿಗೆ ವಸೂಲು ಮಾಡುವ ಮೂಲಕ ಜನರನ್ನು ಸುಲಿಗೆ ಮಾಡಲು ಹೊರಟಿದೆ” ಎಂದರು.

ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಮಾತನಾಡಿ, “ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಯುವಂತೆ ನಿರ್ದೇಶನ ನೀಡಬೇಕು. ಇಲ್ಲವೇ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕೆಂದು” ಆಗ್ರಹಿಸಿದರು.
ಇದನ್ನೂ ಓದಿ: ಶಿವಮೊಗ್ಗ | ಕಲಾ ವಿಭಾಗದಲ್ಲಿ ನಿಬಾ ಅಹಮದಿಗೆ ಡಿಸ್ಟಿಂಕ್ಷನ್
ಪ್ರತಿಭಟನೆಯಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ವಿಜಯ ಕುಮಾರ್, ಕಾನೂನು ಸಲಹೆಗಾರ ಪೂರ್ಣೇಶ್, ಯುವ ಕಾಂಗ್ರೆಸ್ ವಿಧಾನ ಸಭಾ ಅಧ್ಯಕ್ಷ ಚರಣ್, ಪ್ರವೀಣ್, ಗಿರೀಶ್, ಸಕ್ಲೇನ್, ಪ್ರವೀಣ್, ಶಶಿಕುಮಾರ್, ಅಬ್ದುಲ್, ಸತ್ತರ್, ಮಲವಗೊಪ್ಪ ಶಿವು, ಆಕಾಶ್, ಅಶೋಕ್, ಕಾಶಿಫ್ ಬಾಲಾಜಿ, ಧನರಾಜ, ನಿಖಿಲ್ ಎಸ್ ಸಿ, ವಿಷ್ಣು ಕುಮಾರ್, ಅಕ್ಬರ್ ತೌಸೀಫ್ ಹಾಗೂ ನೂರಾರು ಯುವ ಕಾಂಗ್ರೆಸ್ ಪದಾಧಿಕಾರಿಗಳು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.