ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದ ಉತ್ತರ ಪತ್ರಿಕೆಗಳನ್ನು ‘ಡಿ’ ಗ್ರೂಪ್ ನೌಕರನಿಂದ ಮೌಲ್ಯಮಾಪನ ಮಾಡಿದ್ದಾರೆ ಎಂಬ ಆರೋಪ ಮಧ್ಯಪ್ರದೇಶದ ಸರಕಾರಿ ಕಾಲೇಜೊಂದರಲ್ಲಿ ಕೇಳಿಬಂದಿದೆ. ‘ಡಿ’ ಗ್ರೂಪ್ ಮೌಲ್ಯಮಾಪನ ಮಾಡುತ್ತಿರುವ ಘಟನೆಯ ವಿಡಿಯೋ ವೈರಲ್ ಆಗಿದ್ದು, ಕಾಲೇಜಿನ ಪ್ರಾಂಶುಪಾಲ ಮತ್ತು ಓರ್ವ ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿದೆ.
ಮಧ್ಯಪ್ರದೇಶದ ಪೈಪರಿಯಲ್ಲಿರುವ ಭಗತ್ ಸಿಂಗ್ ಸರ್ಕಾರಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಉತ್ತರ ಪತ್ರಿಕೆಗಳನ್ನು ‘ಡಿ’ ಗ್ರೂಪ್ ಮೌಲ್ಯಮಾಪನ ಮಾಡುತ್ತಿರುವುದನ್ನು ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಂಡಿದ್ದು, ಸ್ಥಳೀಯ ಶಾಸಕರು ಮತ್ತು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ. ಬಳಿಕ, ಕಾಲೇಜಿನ ಪ್ರಾಂಶುಪಾಲ ರಾಕೇಶ್ ವರ್ಮ ಮತ್ತು ಪ್ರಾಧ್ಯಾಪಕ ರಾಮ್ ಗುಲಾಂ ಪಟೇಲ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಚಿಂಚ್ವಾಡದ ರಾಜಾ ಶಂಕರ್ ಶಾ ವಿಶ್ವದವಿದ್ಯಾಲಯವು ಪ್ರಾಧ್ಯಾಪಕ ರಾಮ್ ಗುಲಾಂ ಪಟೇಲ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಭಗತ್ ಸಿಂಗ್ ಕಾಲೇಜಿಗೆ ನೇಮಿಸಿತ್ತು. ಆದರೆ, ಅವರು ಮೌಲ್ಯಮಾಪನದ ಕೆಲಸವನ್ನು ‘ಡಿ’ ಗ್ರೂಪ್ ನೌಕರನಿಂದ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಮಾನತುಗೊಂಡ ಪ್ರಾಂಶುಪಾಲ ರಾಕೇಶ್ ವರ್ಮ, “ರಾಮ್ ಗುಲಾಂ ಪಟೇಲ್ ಅವರನ್ನು ಮೌಲ್ಯಮಾಪನ ಕಾರ್ಯಕ್ಕೆ ನೇಮಿಸಲಾಗಿತ್ತು. ಅವರು ತಮ್ಮ ಕೆಲಸವನ್ನು ಬೇರೆ ನೌಕರನಿಂದ ಮಾಡಿದ್ದಾರೆ. ಆದರೆ, ಪ್ರಕರಣದಲ್ಲಿ ನನ್ನನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ” ಎಂದು ಹೇಳಿಕೊಂಡಿದ್ದಾರೆ.
ತಮ್ಮ ಅಮಾನತು ಆದೇಶವನ್ನು ಹಿಂಪಡೆಯುವಂತೆ ಪ್ರೌಢ ಶಿಕ್ಷಣ ಮಂಡಳಿಗೆ ಪತ್ರ ಬರೆದಿರುವುದಾಗಿಯೂ ಅವರು ಹೇಳಿದ್ದಾರೆ.