ಜನವರಿಯಲ್ಲಿ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂಬೈ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಾಂದ್ರಾ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಆರೋಪಿ ಬಾಂಗ್ಲಾದೇಶಿ ಪ್ರಜೆ ಮೊಹಮ್ಮದ್ ಶರೀಫುಲ್ ಇಸ್ಲಾಂ ವಿರುದ್ಧ ಸಾಕ್ಷ್ಯಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಸೈಫ್ ಅಲಿ ಖಾನ್ ಮೇಲೆ ದಾಳಿ: ಆರೋಪಿ ಬಂಧನ
ಜನವರಿ 16ರಂದು ಬಾಂದ್ರಾ ಪ್ರದೇಶದ 12ನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ 54 ವರ್ಷದ ಖಾನ್ ಅವರ ಮೇಲೆ ಚಾಕುವಿನಿಂದ ಇರಿಯಲಾಗಿತ್ತು. ನಂತರ ನಟನಿಗೆ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಐದು ದಿನಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಜನವರಿ 19ರಂದು, ನೆರೆಯ ಥಾಣೆಯ ಶರೀಫುಲ್ ಇಸ್ಲಾಂ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ನಟನ ಬೆನ್ನುಮೂಳೆಯ ಬಳಿ ಸಿಲುಕಿದ್ದ ಚಾಕುವಿನ ತುಂಡು ಮತ್ತು ಅಪರಾಧದ ಸ್ಥಳದಲ್ಲಿ ಕಂಡುಬಂದ ಚಾಕುವಿನ ತುಂಡು ಆರೋಪಿಯಿಂದ ವಶಪಡಿಸಿಕೊಂಡ ಆಯುಧಕ್ಕೆ ಹೊಂದಿಕೆಯಾಗುತ್ತದೆ ಎಂದು ಪೊಲೀಸರು ಕಳೆದ ವಾರ ಇಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆರೋಪಿಯ ಜಾಮೀನು ಅರ್ಜಿಯನ್ನು ವಿರೋಧಿಸಿರುವ ಪೊಲೀಸರು, ಅಪರಾಧವು ತುಂಬಾ “ಗಂಭೀರ ಸ್ವರೂಪದ್ದಾಗಿದೆ” ಮತ್ತು ಆರೋಪಿಯ ವಿರುದ್ಧ “ಬಲವಾದ ಪುರಾವೆಗಳು” ಲಭ್ಯವಿದೆ ಎಂದು ಹೇಳಿದ್ದಾರೆ.
