ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಬಿಜೆಪಿ ಜನಾಕ್ರೋಶ ಹೋರಾಟದಲ್ಲಿ ಅವರು ಮಾತನಾಡಿದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗಿದೆ. ಪ್ರಶಾಂತ್ ಪೂಜಾರಿ, ಆರ್‌ಎಸ್‌ಎಸ್ ರಾಜು, ರಾಜೇಶ್ ಕೋಟ್ಯಾನ್, ಪ್ರವೀಣ್ ಪೂಜಾರಿ, ಚರಣ್ ಪೂಜಾರಿ, ವಿಶ್ವನಾಥ್ ಹೀಗೆ ಅನೇಕ ಹಿಂದೂ ಕಾರ್ಯಕರ್ತರ ಕೊಲೆ ಪಿಎಫ್‌ಐ, ಎಸ್‌ಡಿಪಿಐ ಮೊದಲಾದ ಮುಸ್ಲಿಂ ಸಂಘಟನೆಗಳಿಂದ ನಡೆದಿದೆ” ಎಂದರು.
ಇದನ್ನು ಓದಿದ್ದೀರಾ? ಪಾಕ್ ಪರ ಘೋಷಣೆ ಆರೋಪ | ಜನಾಕ್ರೋಶಕ್ಕೆ ಮಣಿದ ಸರ್ಕಾರ, ಮೂವರು ಆರೋಪಿಗಳ ಬಂಧನ: ಆರ್ ಅಶೋಕ್
“ಈಗ ಕೊಡಗಿನ ವಿನಯ್ ಸೋಮಯ್ಯ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೂಗಳನ್ನು ಟಾರ್ಗೆಟ್ ಮಾಡುವುದು ಬಹಳ ದಿನ ನಡೆಯುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
“ಕೊಡಗಿನಲ್ಲಿ ಈ ಹಿಂದೆ ಟಿಪ್ಪು ಜಯಂತಿ ನಡೆದಾಗ ಕುಟ್ಟಪ್ಪ ಎಂಬುವರು ಹತ್ಯೆಯಾಗಿದ್ದರು. ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಬೇರೆ ಮಾಡಲು ಯತ್ನಿಸುತ್ತಿದೆ. ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದರೆ ಕರ್ನಾಟಕವನ್ನು ಪಾಕಿಸ್ತಾನಕ್ಕೆ ಕೊಟ್ಟುಬಿಡುತ್ತಾರೆ” ಎಂದರು.
“ಹಿಂದೆ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡುವುದು ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿತ್ತು. ಸಿದ್ದರಾಮಯ್ಯ ಸಿಎಂ ಆಗಿಯೇ ಇದ್ದರೆ ಕೊಡಗು ಕೂಡ ಹಳೆಯ ಕಾಶ್ಮೀರದಂತೆ ಆಗುತ್ತದೆ. ರಾಜ್ಯದಲ್ಲಿ ಯುವತಿಯರ ಮೇಲೆ ಅತ್ಯಾಚಾರ ನಡೆದರೂ ಇವೆಲ್ಲ ಮಾಮೂಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳುತ್ತಾರೆ. ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ನಾಯಕರು ಹೇಳಿದಂತೆ ಕೇಳುತ್ತಾರೆ. ವರ್ಗಾವಣೆ ಹಾಗೂ ಹಣಕ್ಕಾಗಿ ಪೊಲೀಸರು ಇಂತಹ ಕೆಲಸ ಮಾಡಬಾರದು” ಎಂದರು.
“ತೆರಿಗೆ ಹೆಚ್ಚಳ, ಬೆಲೆ ಏರಿಕೆಯಿಂದಾಗಿ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಸಚಿವರು, ಕಾಂಗ್ರೆಸ್ ಶಾಸಕರು ಜನರ ಬಳಿ ಬಂದರೆ, ಅವರಿಗೆ ಛೀಮಾರಿ ಹಾಕಬೇಕು. ಏನೂ ಇಲ್ಲವೆಂದರೂ ಇದೆ ಎಂದು ಹೇಳಿಕೊಳ್ಳಬೇಕು ಎಂದು ಸರ್ಕಾರ ಬಯಸುತ್ತದೆ. ಆಸ್ಪತ್ರೆಗಳಲ್ಲಿ ಔಷಧಿ ಇಲ್ಲವೆಂದರೂ, ಇದು ಬಹಳ ಉತ್ತಮ ಆಸ್ಪತ್ರೆ ಎಂದು ಹೊಗಳಬೇಕು ಎಂದು ಕಾಂಗ್ರೆಸ್ ನಾಯಕರು ಬಯಸುತ್ತಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಸರ್ಕಾರದಿಂದ ಪ್ರಮುಖ ನಾಯಕರ ಫೋನ್ ಕದ್ದಾಲಿಕೆ: ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪ
“ಸಿಎಂ ಸಿದ್ದರಾಮಯ್ಯ ಸಾಲ ಮಾಡಿ ಜನರ ಮೇಲೆ ಹೊರೆ ಹಾಕಿದ್ದಾರೆ. ಹಿಂದಿನ ಯಾವ ಮುಖ್ಯಮಂತ್ರಿಯೂ ಇಷ್ಟು ಸಾಲ ಮಾಡಿಲ್ಲ. ಜಿಗಣೆಯಂತೆ ಜನರ ರಕ್ತ ಹೀರುತ್ತಿದ್ದಾರೆ. ಸಿದ್ದರಾಮಯ್ಯ ಎಂದರೆ ಬಡವರ ರಕ್ತ ಹೀರುವ ರಕ್ತಾಸುರ. ಹೀಗೆ ಜನರಿಂದಲೇ ಹಣ ವಸೂಲಿ ಮಾಡಿ ಗ್ಯಾರಂಟಿ ನೀಡಲಾಗುತ್ತಿದೆ” ಎಂದರು.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಲವು ದಶಕದಿಂದ ರಾಜಕೀಯ ನಡೆಯುತ್ತಿದೆ. ಬಿಜೆಪಿ ಹೆಣವನ್ನು ಮುಂದಿಟ್ಟು ರಾಜಕೀಯ ನಡೆಸುತ್ತಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಬಿಜೆಪಿ ಅವಧಿಯಲ್ಲಾದ ಕೊಲೆಗಳ ಬಗ್ಗೆ ಯಾಕೆ ಮಾತನಾಡಲ್ಲ ಎಂದು ಪ್ರಶ್ನಿಸಲಾಗಿದೆ.
ಈ ಹಿಂದೆ 2018ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಬಿಜೆಪಿ ಇದೇ ರೀತಿ ಆರೋಪ ಮಾಡಿತ್ತು. ಆ ಸಂದರ್ಭದಲ್ಲಿ ಸರ್ಕಾರ ಕೋಮು ಸಂಘರ್ಷದಿಂದಾದ ಕೊಲೆಗಳ ಸಂಖ್ಯೆಯನ್ನು ಬಿಡುಗಡೆ ಮಾಡಿತ್ತು. ಮುಸ್ಲಿಂ ಸಂಘಟನೆಗಳ ದಾಳಿಯಿಂದಾಗಿ 11 ಹಿಂದೂಗಳು ಸಾವನ್ನಪ್ಪಿದರೆ, ಹಿಂದೂ ಸಂಘಟನೆಗಳ ದಾಳಿಯಿಂದ 13 ಮುಸ್ಲಿಮರು ಸಾವನ್ನಪ್ಪಿದ್ದಾರೆ.
ಕೋಮು ಸಂಘರ್ಷಣೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾದ ಬಿಜೆಪಿ ಪಟ್ಟಿಯಲ್ಲಿ ನಾಲ್ವರು ಹಿಂದೂಗಳು ಭೂ ವಿವಾದ, ಅಪಘಾತ, ಆತ್ಮಹತ್ಯೆಯಿಂದ ಸಾವನ್ನಪಿರುವುದು ಎಂದು ಅಂದಿನ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಇನ್ನು ಅಶೋಕ್ ಅವರು ತಿಳಿಸಿದಂತೆ ಕೊಡಗಿನಲ್ಲಿ ಕುಟ್ಟಪ್ಪ ಗಲಭೆಯಲ್ಲಿ ಹತ್ಯೆಯಾಗಿರುವುದಲ್ಲ, ಗಲಭೆ ವೇಳೆ ತಪ್ಪಿಸಿಕೊಂಡು ಓಡುವಾಗ ಜಾರಿ ಬಿದ್ದು ಮೃತಪಟ್ಟಿರುವುದು ಎಂದು ಸ್ಥಳೀಯರೇ ಹೇಳಿದ್ದಾರೆ. ಆದರೆ ಇಂದಿಗೂ ಬಿಜೆಪಿ ಈ ಸುಳ್ಳು ಮಾಹಿತಿಯನ್ನು ಮುನ್ನಲೆಗೆ ತಂದು ರಾಜಕೀಯ ಮಾಡುತ್ತಿದೆ, ಕೋಮು ಗಲಭೆ ಹುಟ್ಟಿಸುವ ಯತ್ನ ಮಾಡುತ್ತಿದೆ.
