ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಬಳಿಕ, ವಿರೋಧ ಪಕ್ಷದ ನಾಯಕ ಯಾರು ಎಂಬ ಪ್ರಶ್ನೆಗೆ ಬಿಜೆಪಿಯಲ್ಲಿ ಇನ್ನೂ ಉತ್ತರ ದೊರೆತಿಲ್ಲ. ಈ ನಡುವೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಸಲ್ಲಿಸಿದ್ದಾಗಿ ಹೇಳಿದ್ದರು. ಆ ಬಳಿಕ, ರಾಜೀನಾಮೆ ನೀಡಿಲ್ಲವೆಂದು ಹೇಳಿದ್ದರು. ಒಂದು ದಿನವಿಡೀ ರಾಜೀನಾಮೆ ಪ್ರಹಸನ ನಡೆಸಿದ್ದರು.
ಸದ್ಯ, ರಾಜ್ಯ ಕೇಸರಿ ಪಡೆ ನಾಯಕತ್ವದ ಕೊರತೆಯನ್ನು ಎದುರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಮುನ್ನಡೆಸುವವರು ಯಾರು ಎಂಬುದು ಗೊಂದಲದ ಗೂಡಾಗಿದೆ. ಈ ನಡುವೆ ನಾಮಕಾವಸ್ತೆ ನಾಯಕನಾಗಿರುವ ಕಟೀಲ್‌ಗೆ ಸಂಕಷ್ಟ ಎದುರಾಗಿದ್ದು, ಅವರು ತಮ್ಮ ಕ್ಷೇತ್ರವನ್ನೇ ಉಳಿಸಿಕೊಳ್ಳಲು ಕಸರತ್ತು ಮಾಡಬೇಕಾದ ಸಂದಿಗ್ಧತೆ ಎದುರಾಗಿದೆ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಿಂದುತ್ವವಾದಿ ಸ್ಥಳೀಯ ನಾಯಕ ಅರುಣ್ ಕುಮಾರ್ ಪುತ್ತಿಲ ಲೋಕಸಭಾ ಚುನಾವಣೆಯಲ್ಲಿ ಕಟೀಲ್‌ಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿವೆ. ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಪುತ್ತಿಲ ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸಿದ್ದರು. ಆದರೆ, ಅವರಿಗೆ ಬಿಜೆಪಿ ಟಿಕೆಟ್ ನಿರಕಾರಿಸಿತ್ತು. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಸ್ಥಾನ ಪಡೆದುಕೊಂಡು ಸೋತರು. ಅವರನ್ನು ಎದುರಿಸಲಾಗದ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಿತು.
ಇದೀಗ, ಪುತ್ತಿಲ ಅವರು ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಲಿದ್ದು, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಟೀಲ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಜಿಲ್ಲೆಯಲ್ಲಿ ಪುತ್ತಿಲ ಜನಪ್ರಿಯತೆ ಹೆಚ್ಚಾಗಿದ್ದು, ಅವರು ಸ್ಪರ್ಧಿಸಿದರೆ, ಕಟೀಲ್ ತಾವು ಗೆಲ್ಲುವುದು ಕಠಿಣವಾಗಲಿದೆ ಎಂದು ತಿಳಿದುಬಂದಿದೆ.
ವಿಧಾನಸಭಾ ಚುನಾವಣೆಯ ಬಳಿಕ ಹಿಂದುತ್ವವಾದಿ ಕರ್ಯಕರ್ತರು ಕಟೀಲ್ ಮತ್ತು ಸದಾನಂದಗೌಡರ ಭಾವಚಿತ್ರವಿದ್ದ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದರು. ಘಟನೆಗೆ ಸಂಬಂಧಿದ ಆರೋಪಿಗಳನ್ನು ಪೊಲೀಸರು ಬಂಧಿಸಿ, ಮನಸೋ ಇಚ್ಛೆ ಥಳಿಸಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರಿಗೆ ಬಿಜೆಪಿ ನಾಯಕರೇ ಕುಮ್ಮಕ್ಕು ನೀಡಿ ಥಳಿಸಿದ್ದರು ಎಂದೂ ಹೇಳಲಾಗಿದೆ. ಬಿಜೆಪಿ ನಾಯಕ ಈ ವರ್ತನೆ ಹಿಂದುತ್ವವಾದಿಗಳಿಗೆ ಬೇಸರ ಉಂಟುಮಾಡಿದೆ. ಮಾತ್ರವಲ್ಲದೆ, ಕಟೀಲ್ ಕೂಡ ಕ್ಷೇತ್ರದಿಂದ ದೂರ ಉಳಿದಿದ್ದು, ಅಲ್ಲಿನ ಜನರು ಕಟೀಲ್ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ. ಇನ್ನೊಂದು ಮೂಲದ ಪ್ರಕಾರ, ಈ ಬಾರಿ ನಳಿನ್ ಕುಮಾರ್ ಕಟೀಲ್‌ಗೆ ಈ ಬಾರಿ ಲೋಕಸಭಾ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಹಾಗೇನಾದರೂ ಕಟೀಲ್‌ಗೆ ಟಿಕೆಟ್ ಕೈ ತಪ್ಪಿದರೆ, ಅದು ಪುತ್ತಿಲ ಅವರಿಗೆ ವರದಾನವಾಗಬಹುದು ಎನ್ನಲಾಗುತ್ತಿದೆ.
ಈ ನಡುವೆ, ಪುತ್ತಿಲ ಅವರು ‘ಪುತ್ತಿಲ ಪರಿವಾರ’ ಎಂಬ ಸಂಘಟನೆಯನ್ನೂ ಆರಂಭಿಸಿದ್ದಾರೆ. ಸಂಘ ಪರಿವಾರದ (ಆರ್‌ಎಸ್‌ಎಸ್) ವಿರುದ್ಧ ಪುತ್ತಿಲ ಪರಿವಾರ ಸೆಣೆಸಾಡುತ್ತಿದೆ. ಪುತ್ತಿಲ ಜಿಲ್ಲೆಯಾದ್ಯಂತ ಓಡಾಟ ನಡೆಸುತ್ತಿದ್ದಾರೆ. ಹಿಂದುತ್ವವಾದಿ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಸಂಘಟನೆಯನ್ನು ಬಲಗೊಳಿಸುತ್ತಿದ್ದಾರೆ. ತಮ್ಮ ಪ್ರಭಾವವನ್ನು ಬಿಜೆಪಿಗರಿಗೆ ತೋರಿಸಲು ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಆರ್‌ಎಸ್‌ಎಸ್ ಲಾಠಿ ಕಸಿದುಕೊಂಡು ಬಿಜೆಪಿಯಲ್ಲಿ ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ: ಕಾಂಗ್ರೆಸ್ ಟೀಕೆ
ಲೋಕಸಭಾ ಚುನಾವಣೆಯಲ್ಲಾದರೂ ಬಿಜೆಪಿ ತಮಗೆ ಟಿಕೆಟ್ ನೀಡಬೇಕೆಂಬ ಬಯಕೆ ಪುತ್ತಿಲ ಅವರಲ್ಲಿದೆ. ಬಿಜೆಪಿ ಟಿಕೆಟ್ ನೀಡಿದ್ದರಿಂದ ಕಟೀಲ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಳಿಬಂದಿವೆ.
ಆದರೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ನಿರ್ಧಾರವನ್ನು ಪುತ್ತಿಲ ಬಹಿರಂಗ ಪಡಿಸಿಲ್ಲ. ಪರಿಸ್ಥಿತಿ ಮತ್ತು ಸಂದಂರ್ಭ ನೋಡಿಕೊಂಡು ತೀರ್ಮಾನಿಸುವುದಾಗಿ ಪುತ್ತಿಲ ಹೇಳುತ್ತಿದ್ದಾರೆ. ಒಂದು ವೇಳೆ, ಅವರು ಸ್ಪರ್ಧಿಸದರೆ, ಕಟೀಲ್‌ಗೆ ಕಠಿಣ ಸವಾಲೊಡ್ಡಲಿದ್ದಾರೆ.