ಈ ದಿನ ಸಂಪಾದಕೀಯ | ಪಕ್ಷಾಂತರಿಗಳನ್ನು ಶಿಕ್ಷಿಸುವ ಅಧಿಕಾರವನ್ನು ಜನ ತಮ್ಮ ಕೈಗೇ ತೆಗೆದುಕೊಳ್ಳಬೇಕಿದೆ

Date:

Advertisements

ಕಾಯಿದೆಯ ಬಲೆಯಿಂದ ತಪ್ಪಿಸಿಕೊಳ್ಳಲು ಒಂದು ನಿರ್ದಿಷ್ಟ ಪಕ್ಷದ ಶಾಸಕರು ಸಂಸದರಿಂದ ತಮ್ಮ ಸದಸ್ಯತ್ವಗಳಿಗೆ ರಾಜೀನಾಮೆ ಕೊಡಿಸಿ ಸದನಗಳ ಸರಳಬಹುಮತದ ಸಂಖ್ಯೆಯನ್ನೇ ತಮ್ಮ ಅಗತ್ಯಕ್ಕೆ ತಕ್ಕಂತೆ ಕುಗ್ಗಿಸುವ ಮತ್ತು ರಾಜೀನಾಮೆ ನೀಡಿದ ಸದಸ್ಯರಿಗೆ ತಮ್ಮ ಪಕ್ಷದ ಟಿಕೆಟ್ ನೀಡಿ ಅದೇ ಕ್ಷೇತ್ರದಲ್ಲಿ ಹೂಡಿ ಗೆಲ್ಲಿಸಿ ತರುವ ‘ಆಪರೇಷನ್ ಕಮಲ’ ದಂತಹ ಸೋಜಿಗದ ಜನತಂತ್ರ ವಿರೋಧಿ ಸಂಶೋಧನೆ ನಮ್ಮ ದೇಶದಲ್ಲಿ ಮಾತ್ರವೇ ಸಾಧ್ಯವಿದ್ದೀತು

ಪಕ್ಷಾಂತರ ನಿಷೇಧ ಕಾಯಿದೆಯ ಅಣಕ ಕುರಿತು ತಾನು ಅಸಹಾಯಕವೇನೂ ಅಲ್ಲ ಎಂದು ಸುಪ್ರೀಮ್ ಕೋರ್ಟು ಕಳೆದ ವಾರ ಸಾರಿದ್ದು ಗಮನಾರ್ಹ.

ಸ್ಪೀಕರ್ ನಿರ್ಧಾರವನ್ನೇ ತೆಗೆದುಕೊಳ್ಳದೆ ಕಾಲಹರಣ ಮಾಡಿದಲ್ಲಿ ತಾನು ಅಧಿಕಾರವಿಲ್ಲದವರಂತೆ ಮೂಕ ಪ್ರೇಕ್ಷಕನಾಗಿ ಕುಳಿತುಕೊಳ್ಳುವುದಿಲ್ಲ. ಪಕ್ಷಾಂತರದ ಪ್ರಕರಣಗಳನ್ನು ಹೇಗೆ ತೀರ್ಮಾನಿಸಬೇಕೆಂದು ಸ್ಪೀಕರ್ ಗಳಿಗೆ ಹೇಳುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲದಿರಬಹುದು. ಆದರೆ ಇಂತಿಷ್ಟು ನ್ಯಾಯಯುತ ಅವಧಿಯೊಳಗೆ ತೀರ್ಮಾನಿಸುವಂತೆ ಸೂಚಿಸುವ ಅಧಿಕಾರವಿದೆ ಎಂದು ಸುಪ್ರೀಮ್ ಕೋರ್ಟು ಇತ್ತೀಚೆಗೆ ಹೇಳಿದೆ.

ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿದ 10 ಮಂದಿ ಬಿ.ಆರ್.ಎಸ್. ಶಾಸಕರನ್ನು ಅನರ್ಹಗೊಳಿಸಬೇಕೆಂಬ ಬಿ.ಆರ್.ಎಸ್. ಅಹವಾಲನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಅನಿರ್ದಿಷ್ಟಾವಧಿ ಬಾಕಿ ಇಟ್ಟುಕೊಂಡು ಕುಳಿತಿದ್ದಾರೆ. ಈ ನಡೆಯನ್ನು ಬಿ.ಆರ್.ಎಸ್. ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿತ್ತು.

ಭಾರತದ ರಾಜಕಾರಣದಲ್ಲಿ ಪಕ್ಷಾಂತರಿಗಳನ್ನು ಗಳಿಗೆ ಗಳಿಗೆಗೆ ಬಣ್ಣ ಬದಲಿಸುವ ‘ಊಸರವಳ್ಳಿ’ಗಳು ಎಂದೂ ‘ಆಯಾ ರಾಮ್- ಗಯಾ ರಾಮ್’ ಗಳೆಂದೂ ಹಂಗಿಸುವುದುಂಟು. ಹಿಂದೀಯ ‘ಆಯಾ ರಾಮ್-ಗಯಾ ರಾಮ್ ‘ ಎಂಬತ್ತು-ತೊಂಬತ್ತರ ದಶಕಗಳ ದಿನಪತ್ರಿಕೆಗಳ ತಲೆಬರೆಹಗಳಾಗಿ ಬಳಕೆಯಾಗುತ್ತಿದ್ದವು. ಸಂಪಾದಕೀಯಗಳನ್ನು ಬರೆಯಲಾಗುತ್ತಿತ್ತು. ಭಾಷೆಗಳ ಗಡಿಯನ್ನು ದಾಟಿ ‘ಜನಪ್ರಿಯ’ವಾಗಿದ್ದ ಮೂದಲಿಕೆಯಿದು.

ಸಾರಾಂಶದಲ್ಲಿ ಹೇಳಬೇಕೆಂದರೆ ಶಾಸಕರು-ಸಂಸದರು ತಾವು ಆಯ್ಕೆಯಾಗಿದ್ದ ಪಕ್ಷವನ್ನು ತೊರೆದು ಮತ್ತೊಂದು ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ಬದಲಾಯಿಸುವುದನ್ನು ಪಕ್ಷಾಂತರವೆಂದು ಕರೆಯಲಾಯಿತು.

1967ರಲ್ಲಿ ಗಯಾ ಲಾಲ್ ಎಂಬ ಹರಿಯಾಣದ ಶಾಸಕ ಒಂದೇ ದಿನದಲ್ಲಿ ಮೂರು ಸಲ ಪಕ್ಷಾಂತರ ಮಾಡಿದ್ದ. ‘ಆಯಾ ರಾಮ್…’ ಕೊಂಕು ಮಾತು ಹುಟ್ಟಿದ್ದೇ ಈ ಮಹಾನುಭಾವನ ನಡವಳಿಕೆಯಿಂದ. ಸ್ಥಾನಮಾನ ಮತ್ತು ಹಣದ ಆಮಿಷಗಳಿಗೆ ಬಲಿಯಾಗಿ ಪಕ್ಷಾಂತರ ಮಾಡುವವರ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಜನತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ವ್ಯಾಧಿಯಾಗಿ ಪರಿಣಮಿಸಿತು. ನಿರ್ದಿಷ್ಟ ಪಕ್ಷವನ್ನು ಬೆಂಬಲಿಸಿದ್ದ ಮತದಾರರ ನಂಬಿಕೆಗೆ ದ್ರೋಹ ಬಗೆದು ಮತ್ತೊಂದು ಪಕ್ಷ ಸೇರುವುದು ಸರ್ವೇ ಸಾಮಾನ್ಯವಾಗಿ ಹೋಯಿತು.

1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಮತ್ತು 1967ರಲ್ಲಿ ನಡೆದ ನಾಲ್ಕನೆಯ ಸಾರ್ವತ್ರಿಕ ಚುನಾವಣೆಗಳ ನಡುವೆ 542 ಶಾಸಕರು ತಮ್ಮ ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ನೆಗೆದಿದ್ದರು.

1967ರಲ್ಲಿ ನಡೆದ ನಾಲ್ಕನೆಯ ಸಾರ್ವತ್ರಿಕ ಚುನಾವಣೆಗಳನ್ನು ದೇಶದ ಸ್ವಾತಂತ್ರ್ಯೋತ್ತರ ರಾಜಕೀಯ ಚರಿತ್ರೆಯಲ್ಲಿ ಮೈಲಿಗಲ್ಲು ಎಂದು ಗುರುತಿಸಲಾಗುತ್ತದೆ. ದೇಶದ ರಾಜಕೀಯ ಅಧಿಕಾರದ ಮೇಲೆ ಕಾಂಗ್ರೆಸ್ ಪಕ್ಷ ಹೊಂದಿದ್ದ ಏಕಸ್ವಾಮ್ಯವನ್ನು ಜನ ತಿರಸ್ಕರಿಸಿದ್ದ ಚುನಾವಣೆಗಳಿವು. 1967ರ ಫೆಬ್ರವರಿ-1968ರ ಮಾರ್ಚ್ ನಡುವಣ ಒಂದೇ ವರ್ಷದಲ್ಲಿ 438 ಪಕ್ಷಾಂತರ ಪ್ರಕರಣಗಳು ವರದಿಯಾಗಿದ್ದವು.

1967ರವರೆಗಿನ ಪಕ್ಷಾಂತರಗಳು ಕಾಂಗ್ರೆಸ್ ಪಕ್ಷದ ಪರವಾಗಿದ್ದವು. ಆನಂತರ ಪರಿಸ್ಥಿತಿ ಬದಲಾಯಿತು, 1967ರಲ್ಲಿ ಚುನಾವಣೆ ಎದುರಿಸಿದ 16 ರಾಜ್ಯಗಳ ಪೈಕಿ ಎಂಟರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಏಳರಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ವಿಫಲವಾಗಿತ್ತು. ಕೆಲವು ರಾಜ್ಯಗಳ ವಿಧಾನಸಭೆಗಳಲ್ಲಿ ಕಾಂಗ್ರೆಸ್ಸಿನ ಬಹುಮತ ಅಲ್ಪಮತವಾಗಿ ತಿರುಗಿತು. ಕಾರಣ ಕಾಂಗ್ರೆಸ್ಸಿಗರ ಪಕ್ಷಾಂತರ. ಮಂತ್ರಿಗಿರಿಯ ಅಧಿಕಾರ ಸಿಗಲಿಲ್ಲವೆಂದು ಅತೃಪ್ತ ಶಾಸಕರು ಪಕ್ಷಾಂತರ ಮಾಡುತ್ತಾರೆ. 1967ರ ನಂತರ ಪಕ್ಷಾಂತರ ಮಾಡುವ ಏಳು ರಾಜ್ಯಗಳ 210 ಶಾಸಕರ ಪೈಕಿ 116 ಮಂದಿಗೆ ಮಂತ್ರಿ ಸ್ಥಾನಗಳು ಗಿಟ್ಟುತ್ತವೆ.
.
1967-1972ರ ಸಾರ್ವತ್ರಿಕ ಚುನಾವಣೆಗಳ ನಡುವಣ 4000 ಮಂದಿ ವಿಧಾನಸಭೆ ಸದಸ್ಯರು ಮತ್ತು ಸಂಸದರ ಪೈಕಿ ಪಕ್ಷಾಂತರದ ಎರಡು ಸಾವಿರ ಪ್ರಕರಣಗಳು ವರದಿಯಾಗುತ್ತವೆ. ಮಂತ್ರಿಯಾಗುವ ಅಧಿಕಾರದ ಹಪಾಹಪಿಗೆ ಸಿಕ್ಕಿ ಶಾಸಕನೊಬ್ಬ ಐದು ದಿನಗಳಲ್ಲಿ ಐದು ಸಲ ಪಕ್ಷಾಂತರ ಮಾಡಿರುತ್ತಾನೆ.

ಪಕ್ಷಾಂತರದ ಸಂಬಂಧದ ಅವಾಂತರಗಳನ್ನು ಪರಿಶೀಲಿಸಲು 1968ರಲ್ಲಿ ಅಂದಿನ ಕೇಂದ್ರ ಗೃಹಮಂತ್ರಿ ಯಶವಂತರಾವ್ ಚವಾಣ್ ಅಧ್ಯಕ್ಷತೆಯ ಸಂಸದೀಯ ಸಮಿತಿಯೊಂದನ್ನು ರಚಿಸಲಾಗುತ್ತದೆ. ಈ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಪಕ್ಷಾಂತರ ನಿಷೇಧಕ್ಕೆ ಸಂವಿಧಾನ ತಿದ್ದುಪಡಿಗೆ 1973 ಮತ್ತು 1978ರಲ್ಲಿ ಮಸೂದೆಗಳನ್ನು ಮಂಡಿಸಲಾಗುತ್ತದೆ. 1973ರ ಮಸೂದೆಯ ಲೋಕಸಭಾ ಅವಧಿ ತೀರಿದ ಕಾರಣ ತಂತಾನೇ ರದ್ದಾಗುತ್ತದೆ. 1978ರ ಮಸೂದೆಯು ಮಂಡನೆಯ ಹಂತದಲ್ಲೇ ತೀವ್ರ ಪ್ರತಿಭಟನೆಯನ್ನು ಎದುರಿಸುತ್ತದೆ. ಅದನ್ನು ಹಿಂತೆಗೆದುಕೊಳ್ಳಲಾಗುತ್ತದೆ.

ಜನಾದೇಶವನ್ನು ತಿರುಚಿ ಸರ್ಕಾರಗಳನ್ನು ಉರುಳಿಸುವ ಮತ್ತು ಬೇರೆ ಸರ್ಕಾರಗಳನ್ನು ರಚಿಸುವ ಈ ವಿಕೃತಿಯನ್ನು ತಡೆಯಲು 1985ರಲ್ಲಿ ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಲಾಯಿತು.

ಆದರೆ ಈ ಕಾಯಿದೆಯನ್ನು ಇಡಿಯಾಗಿ ನೋಡಿದಾಗ ಇದರಲ್ಲಿ ಹಲವು ನ್ಯೂನತೆಗಳು- ಲೋಪದೋಷಗಳು ಕಂಡು ಬರುತ್ತವೆ. ಚತುರ ಪಕ್ಷಾಂತರಿಗಳು ಈ ಲೋಪದೋಷಗಳನ್ನು ಬಳಸಿಕೊಂಡು ರಂಗೋಲಿಯ ಕೆಳಗೆ ನುಸುಳುತ್ತ ಬಂದಿದ್ದಾರೆ.
ಭಾರತದ ರಾಜಕಾರಣ ಈ ಹೊಲಸು ರಾಡಿಯಲ್ಲಿ ಮುಳುಗೇಳುತ್ತ ಬಂದಿದೆ. ತಾನು ಗಂಗೆಯಷ್ಟೇ ಪವಿತ್ರ ಎಂದು ಕೊಚ್ಚಿಕೊಳ್ಳುತ್ತಿದ್ದ ಪಕ್ಷವಂತೂ ಹೊಸ ಹೊಸ ಬಗೆಯ ಪಕ್ಷಾಂತರಗಳನ್ನು ಕಂಡು ಹಿಡಿಯಿತು. ಅವುಗಳನ್ನು ದೇಶದ ಉದ್ದಗಲಗಳಲ್ಲಿ ಪ್ರಯೋಗಿಸಿ ಅಧಿಕಾರ ಹಿಡಿಯಿತು.ಅದು ಕಾಯಿದೆ ಬದ್ಧವೆನಿಸಿತು. ಈ ಪಕ್ಷಾಂತರಕ್ಕೆ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಆಗುವುದಿಲ್ಲ. ಎರಡನೆಯದಾಗಿ ಪಕ್ಷವೊಂದರ ಮೂರನೆಯ ಎರಡರಷ್ಟು ಶಾಸಕರು ಮತ್ತೊಂದು ಪಕ್ಷದೊಂದಿಗೆ ವಿಲೀನ ಆಗುವುದಾದರೆ, ಅಂತಹ ನಡೆಯೂ ಪಕ್ಷಾಂತರ ಎನಿಸಿಕೊಳ್ಳುವುದಿಲ್ಲ.

ಪಕ್ಷಾಂತರದ ಪ್ರಕರಣಗಳನ್ನು ತೀರ್ಮಾನಿಸುವ ಅಧಿಕಾರವನ್ನು ಪಕ್ಷಾಂತರ ನಿಷೇಧ ಕಾಯಿದೆಯು ಸಂಬಂಧಪಟ್ಟ ವಿಧಾನಮಂಡಲಗಳ ಸ್ಪೀಕರ್ ಅಥವಾ ಸಭಾಪತಿಗಳ ಕೈಗೆ ಕೊಟ್ಟಿದೆ. ನಿರ್ದಿಷ್ಟ ಶಾಸಕ ಅಥವಾ ಶಾಸಕರ ಗುಂಪು ಪಕ್ಷಾಂತರ ನಿಷೇಧ ಕಾಯಿದೆಯನ್ನು ಉಲ್ಲಂಘಿಸಿದೆ ಅಥವಾ ಉಲ್ಲಂಘಿಸಿದ್ದಾರೆ ಎಂದು ಸ್ಪೀಕರ್ ಅಥವಾ ಸಭಾಪತಿ ತೀರ್ಮಾನಿಸಿದರೆ ಮಾತ್ರ ಆ ಶಾಸಕ ಅಥವಾ ಶಾಸಕರು ತಮ್ಮ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಸ್ಪೀಕರ್ ಗಳು ಸಾಮಾನ್ಯವಾಗಿ ಆಳುವ ಪಕ್ಷಗಳಿಗೆ ಸೇರಿದವರೇ ಆಗಿರುತ್ತಾರೆ. ಸ್ಪೀಕರ್ ಆದ ನಂತರವೂ ಅವರು ತಾವು ಆರಿಸಿ ಬಂದ ಪಕ್ಷದ ಸದಸ್ಯರಂತೆಯೇ ವರ್ತಿಸುತ್ತಾರೆ. ತಾವು ಆರಿಸಿ ಬಂದ ಆಳುವ ಪಕ್ಷದ ಹಿತಾಸಕ್ತಿಗೇ ನಿಷ್ಠರಾಗಿರುತ್ತಾರೆ. ಪಕ್ಷಾಂತರ ಕುರಿತು ಅವರು ಕೈಗೊಳ್ಳುವ ತೀರ್ಮಾನಗಳು ಆಳುವ ಪಕ್ಷದ ಪರವಾಗಿಯೇ ಇರುತ್ತವೆ. ಎಷ್ಟೋ ಪ್ರಕರಣಗಳಲ್ಲಿ ಪುನಃ ಚುನಾವಣೆಗಳು ಸಮೀಪಿಸುವ ತನಕ ಪಕ್ಷಾಂತರ ಪ್ರಕರಣಗಳ ತೀರ್ಪುಗಳನ್ನು ಬಾಕಿ ಇರಿಸಿಬಿಡುತ್ತಾರೆ. ಹೀಗಾಗಿ ಈ ಅಧಿಕಾರವನ್ನು ಸ್ಪೀಕರ್ ಗಳ ಕೈಯಿಂದ ಕಿತ್ತುಕೊಂಡು ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಲ್ಲವೇ ಹೈಕೋರ್ಟುಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಕಾಯಂ ನ್ಯಾಯಾಧಿಕರಣದ ಇಲ್ಲವೇ ವಿಧಾನಮಂಡಲ- ಸಂಸತ್ತಿನ ಹೊರಗಿನ ನಿಷ್ಪಕ್ಷಪಾತ ವ್ಯವಸ್ಥೆಯೊಂದರ ವಿಚಾರಣೆ-ತೀರ್ಮಾನಕ್ಕೆ ಒಪ್ಪಿಸಬೇಕು ಎಂದು ಸುಪ್ರೀಮ್ ಕೋರ್ಟು 2017ರ ತೀರ್ಪೊಂದರಲ್ಲಿ ಸೂಚಿಸಿತ್ತು. ಹೀಗಾದರೆ ಮಾತ್ರವೇ ತ್ವರಿತ ಮತ್ತು ನಿಷ್ಪಕ್ಷಪಾತ ತೀರ್ಪುಗಳು ಹೊರಬೀಳುವುದು ಸಾಧ್ಯ ಎಂದು ವಿವರಿಸಿತ್ತು. 1990ರ ದಿನೇಶ್ ಗೋಸ್ವಾಮಿ ಚುನಾವಣಾ ಸುಧಾರಣ ಸಮಿತಿ ಕೂಡ ಇಂತಹುದೇ ಶಿಫಾರಸು ಮಾಡಿತ್ತು. ಸಂವಿಧಾನ ಪರಾಮರ್ಶೆ ಆಯೋಗ ಕೂಡ ಈ ಕ್ರಮವನ್ನು ಸೂಚಿಸಿತ್ತು.

ಸಮಾಜಘಾತಕ ಶಕ್ತಿಗಳು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತವೆ. ಪಕ್ಕಾ ಪಾತಕಿಗಳು ಮುಖ್ಯಧಾರೆಯ ರಾಜಕೀಯ ಪಕ್ಷಗಳಿಂದ ಪ್ರಜಾಪ್ರತಿನಿಧಿಗಳಾಗಿ ಆರಿಸಿಬಂದು ಶಾಸನಸಭೆಗಳಲ್ಲಿ ಕುಳಿತುಕೊಳ್ಳುತ್ತಾರೆ. ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರ ನಿರ್ಮೂಲನದ ಮಾತಾಡುತ್ತವೆ. ಆದರೆ ಜನಸಾಮಾನ್ಯರ ಕಷ್ಟದ ದುಡಿಮೆಯನ್ನು ಲೂಟಿ ಹೊಡೆದು ಇಲ್ಲವೇ ಎಲ್ಲ ಪ್ರಜೆಗಳಿಗೂ ಪಾಲಿರಬೇಕಾದ ನೈಸರ್ಗಿಕ ಸಂಪತ್ತನ್ನು ಸೂರೆ ಮಾಡಿ ತಮ್ಮ ಸಾಮ್ರಾಜ್ಯಗಳು- ಮಹಲುಗಳನ್ನು ಕಟ್ಟಿಕೊಂಡವರು ಈ ಪಕ್ಷಗಳ ಬಗಲುಗಳಲ್ಲಿ ಬೆಚ್ಚಗಿರುತ್ತಾರೆ. ಚುನಾವಣೆಗಳಲ್ಲಿ ಹಣಬಲ ತೋಳ್ಬಲಗಳು ಮೆರೆಯುತ್ತವೆ. ಅನೀತಿ ಅಕ್ರಮಗಳ ಕುರಿತು ಪಕ್ಷಗಳು ತಲೆಕೆಡಿಸಿಕೊಳ್ಳುವುದಿಲ್ಲ. ಗೆಲ್ಲುವುದೊಂದೇ ಗುರಿ. ಅಧಿಕಾರ ಹಿಡಿದ ನಂತರ ಚುನಾವಣೆಗೆ ಹಣ ನೀಡಿದವರ ಋಣ ತೀರಿಸಬೇಕಲ್ಲ. ಆಗ ಜನಹಿತ ಕಾಲಕಸವಾದರೂ ಚಿಂತೆಯಿಲ್ಲ.

ಕಾಯಿದೆಯ ಬಲೆಯಿಂದ ತಪ್ಪಿಸಿಕೊಳ್ಳಲು ಒಂದು ನಿರ್ದಿಷ್ಟ ಪಕ್ಷದ ಶಾಸಕರು ಸಂಸದರಿಂದ ತಮ್ಮ ಸದಸ್ಯತ್ವಗಳಿಗೆ ರಾಜೀನಾಮೆ ಕೊಡಿಸಿ ಸದನಗಳ ಸರಳಬಹುಮತದ ಸಂಖ್ಯೆಯನ್ನೇ ತಮ್ಮ ಅಗತ್ಯಕ್ಕೆ ತಕ್ಕಂತೆ ಕುಗ್ಗಿಸುವ ಮತ್ತು ರಾಜೀನಾಮೆ ನೀಡಿದ ಸದಸ್ಯರಿಗೆ ತಮ್ಮ ಪಕ್ಷದ ಟಿಕೆಟ್ ನೀಡಿ ಅದೇ ಕ್ಷೇತ್ರದಲ್ಲಿ ಹೂಡಿ ಗೆಲ್ಲಿಸಿ ತರುವ ಆಪರೇಷನ್ ಕಮಲ ದಂತಹ ಸೋಜಿಗದ ಜನತಂತ್ರ ವಿರೋಧಿ ಸಂಶೋಧನೆ ನಮ್ಮ ದೇಶದಲ್ಲಿ ಮಾತ್ರವೇ ಸಾಧ್ಯವಿದ್ದೀತು.

ಇಂತಹ ರಾಜಕೀಯ ಪಕ್ಷಗಳ ಮೇಲೆ ಮತದಾರನಿಗೆ ಯಾವ ನಿಯಂತ್ರಣವೂ ಇಲ್ಲ. ಐದು ವರ್ಷಗಳಿಗೊಮ್ಮೆ ಮತ ಹಾಕಿದ ನಂತರ ಅವನ ಬತ್ತಳಿಕೆ ಬರಿದೋ ಬರಿದು. ಮತದಾರ ಮತ್ತು ಜನಪ್ರತಿನಿಧಿಯ ನಡುವೆ ಭಾರೀ ಕಂದಕ ಬಾಯಿ ತೆರೆದಿದೆ. ರಾಜಕಾರಣ ಕೆಸರು ಕೊಳೆ ಕಳಂಕ ಅಸಹ್ಯ ಹೇಯ ಎಂಬ ಭಾವನೆ ಜನಸಾಮಾನ್ಯರಲ್ಲಿ ನೆಲೆಸಿದ್ದು ಅವರು ಅದರಿಂದ ದೂರ ದೂರ ಉಳಿಯುವಂತಾಗಿದೆ. ಜನಸಾಮಾನ್ಯರು ಹೀಗೆ ದೂರ ಉಳಿಯುವುದನ್ನೇ ಬಯಸುತ್ತದೆ ಪಟ್ಟಭದ್ರ ರಾಜಕಾರಣ. ಹೀಗಾಗಿ ಒಂದು ರೀತಿಯಲ್ಲಿ ಪ್ರಜ್ಞಾಪೂರ್ವಕವಾಗಿ ನೆಲೆಗೊಳಿಸಿಕೊಂಡಿರುವ ಜನದ್ರೋಹಿ ರಾಜಕೀಯ ಪರಿಭಾಷೆಯಿದು.

ನ್ಯಾಯಾಲಯ ಏನೇ ಹೇಳಲಿ, ನಾಚಿಕೆ ಬಿಟ್ಟ ಪಕ್ಷಾಂತರಿಗಳು ಮತ್ತು ಅವರನ್ನು ಖರೀದಿಸುವ ಲಜ್ಜೆಗೆಟ್ಟ ಪಕ್ಷಗಳಿಗೆ ತಾಕುವುದೇ ಇಲ್ಲ. ಪಕ್ಷಾಂತರಿಗಳನ್ನು ಶಿಕ್ಷಿಸುವ ಅಧಿಕಾರ ಮತದಾರರ ಕೈಯಲ್ಲಿದೆ. ಈ ಅಧಿಕಾರ ದಂಡವನ್ನು ಅವರೇ ಬೀಸಿ ಹಣಿಯಬೇಕಿದೆ.

Advertisements

ಇದನ್ನೂ ಓದಿ ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ತರಾಟೆ; ಮೋದಿ ಸರ್ಕಾರಕ್ಕೆ ಎಚ್ಚರಿಕೆಯ ಪಾಠ: ಸಿದ್ದರಾಮಯ್ಯ

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X