"ನಾವು ಮನೆಮನೆಗೆ ಹೋದಾಗ ಯಾರಾದರೂ ಮನೆಯಲ್ಲಿ ಇರದೆ ಇದ್ದರೆ, ಅವರನ್ನು ಸಮೀಕ್ಷೆಯಿಂದ ಬಿಟ್ಟುಬಿಡಲು ಸಾಧ್ಯವಿಲ್ಲ. ಅದಕ್ಕಾಗಿ ಬಾಪೂಜಿ ಕೇಂದ್ರದಲ್ಲಿ ಒಬ್ಬರನ್ನು ಕೂರಿಸುತ್ತೇವೆ" ಎಂದು ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ತಿಳಿಸಿದರು
ಪರಿಶಿಷ್ಟ ಜಾತಿ ಮೀಸಲಾತಿ ಉಪವರ್ಗೀಕರಣಕ್ಕಾಗಿ (ಒಳಮೀಸಲಾತಿಗಾಗಿ) ಮನೆಮನೆ ಸಮೀಕ್ಷೆ ಮಾಡುವುದು ಖಚಿತ. ಯಾವುದೇ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು ಎಂದು ಒಳಮೀಸಲಾತಿ ಜಾರಿಯ ಶಿಫಾರಸ್ಸಿಗಾಗಿ ನೇಮಿಸಿರುವ ಏಕಸದಸ್ಯ ಆಯೋಗದ ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಪ್ರತಿಕ್ರಿಯಿಸಿದ್ದಾರೆ.
‘ಗ್ರಾಮ ಪಂಚಾಯಿತಿಯ ಬಾಪೂಜಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿಯವರು ತಮ್ಮ ಉಪಜಾತಿಗಳ ನೋಂದಣಿ ಮಾಡಿಕೊಳ್ಳಬೇಕಿದೆ, ಮನೆಮನೆಯ ಸರ್ವೇ ಸಾಧ್ಯತೆ ಇಲ್ಲ’ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದ್ದು, ಸಮುದಾಯಗಳ ವಾಟ್ಸಾಪ್ ಗ್ರೂಪ್ ಗಳಲ್ಲಿ ವರದಿಯ ತುಣುಕು ಹರಿದಾಡಿದೆ. ಈ ಸಂಬಂಧ ಏರ್ಪಟ್ಟಿರುವ ಗೊಂದಲಗಳಿಗೆ ಜಸ್ಟಿಸ್ ದಾಸ್ ಸ್ಪಷ್ಟನೆ ನೀಡಿದ್ದಾರೆ.
‘ಈದಿನ.ಕಾಮ್’ ಜೊತೆ ಮಾತನಾಡಿದ ಅವರು, “ಇಂತಹ ವರದಿಗಳನ್ನು ನಂಬಬಾರದು. ಈಗಾಗಲೇ ಸಮೀಕ್ಷೆಗಾಗಿ ಸರಳವಾದ ಪ್ರಶ್ನಾವಳಿಯನ್ನು ಸಿದ್ಧಪಡಿಸಿದ್ದೇವೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರದ ಕುರಿತು ಇರುವ ಗೊಂದಲಕ್ಕೆ ಸ್ಪಷ್ಟನೆಯನ್ನು ಪಡೆಯುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದೇವೆ. 30,000ಕ್ಕೂ ಹೆಚ್ಚು ಗಣತಿದಾರರನ್ನು ಗುರುತಿಸಿದ್ದೇವೆ. ಅವರು ಮನೆಮನೆಗೆ ಹೋಗಿ ಮಾಹಿತಿ ಸಂಗ್ರಹ ಮಾಡುತ್ತಾರೆ. ಪರಿಶಿಷ್ಟ ಜಾತಿಯ ಹದಿನೆಂಟೂವರೆ ಲಕ್ಷ ಕುಟುಂಬಗಳನ್ನು ಈಗಾಗಲೇ ಗುರುತಿಸಿದ್ದೇವೆ. ನಾಲ್ಕೈದು ಲಕ್ಷ ಕುಟುಂಬಗಳನ್ನು ಗುರುತಿಸುವುದು ಬಾಕಿ ಉಳಿದಿದೆ. ಹೀಗಾಗಿ ಮನೆಮನೆಗೆ ತೆರಳುವುದು ಖಚಿತ ಎಂದು ತಿಳಿಸಿದರು.
ನಾವು ಮನೆಮನೆಗೆ ಹೋದಾಗ ಯಾರಾದರೂ ಮನೆಯಲ್ಲಿ ಇರದೆ ಇದ್ದರೆ, ಅವರನ್ನು ಸಮೀಕ್ಷೆಯಿಂದ ಬಿಟ್ಟುಬಿಡಲು ಸಾಧ್ಯವಿಲ್ಲ. ಅದಕ್ಕಾಗಿ ಬಾಪೂಜಿ ಕೇಂದ್ರದಲ್ಲಿ ಒಬ್ಬರನ್ನು ಕೂರಿಸುತ್ತೇವೆ. ಒಂದು ವಾರ ಕಾಲ ಅವರು ಟೇಬಲ್‌ನಲ್ಲಿ ಇರುತ್ತಾರೆ. ಗಣತಿದಾರರು ಬಂದಾಗ ಮನೆಯಲ್ಲಿ ಇರದೆ ಇರುವವರು ಕೇಂದ್ರಕ್ಕೆ ಬಂದು ತಮ್ಮ ಜಾತಿಯನ್ನು ನೋಂದಾಯಿಸಬಹುದು ಎಂದು ಮಾಹಿತಿ ನೀಡಿದರು.
“ಮತ್ತೊಂದು ಕಡೆ, ತಾವು ಇರುವಲ್ಲಿಯೇ ಜಾತಿಯನ್ನು ನೋಂದಾಯಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಆಧಾರ್ ಕಾರ್ಡ್ ನಂಬರ್, ರೇಷನ್ ಕಾರ್ಡ್ ನಂಬರ್, ಜಾತಿ ದೃಢೀಕರಣ ಪತ್ರದ ನಂಬರ್ ಮೂಲಕ ಲಾಗ್ ಇನ್ ಆಗಿ, ಆನ್ ಲೈನ್‌ನಲ್ಲಿ ಮಾಹಿತಿಯನ್ನು ನೀಡುವ ವ್ಯವಸ್ಥೆಯನ್ನೂ ಮಾಡುತ್ತಿದ್ದೇವೆ. ಆ ಮೂಲಕ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ನಡೆದಿದೆ. ಏನೂ ಗೊತ್ತಿಲ್ಲದೆ ಬರೆಯುವ ಅಪ್ರಯೋಜಕ ವರದಿಗಳ ಬಗ್ಗೆ ಸಮುದಾಯಗಳು ಕಿವಿಗೊಡಬಾರದು” ಎಂದು ಮನವಿ ಮಾಡಿದರು.
ಇದನ್ನೂ ಓದಿರಿ: ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ತರಾಟೆ; ಮೋದಿ ಸರ್ಕಾರಕ್ಕೆ ಎಚ್ಚರಿಕೆಯ ಪಾಠ: ಸಿದ್ದರಾಮಯ್ಯ
ಗಣತಿದಾರರಿಗೆ ಇನ್ನೊಂದು ವಾರದಲ್ಲಿ ತರಬೇತಿ ನೀಡುತ್ತೇವೆ. ಆಡಿಯೊ ಮತ್ತು ವಿಡಿಯೊ ಮಾಡಿಯೂ ಗಣತಿದಾರರಿಗೆ ಮಾರ್ಗದರ್ಶನ ನೀಡುತ್ತೇವೆ. ಎಲ್ಲ ಇಲಾಖೆಗಳವರು ಶೇ.75ರಷ್ಟು ಮಾಹಿತಿಯನ್ನು ಈಗಾಗಲೇ ನೀಡಿದ್ದಾರೆ. ಪರಿಶಿಷ್ಟ ಸಮುದಾಯಗಳ ಉದ್ಯೋಗ ಮಾಹಿತಿ ಲಭ್ಯವಾಗಿದೆ. ಸಮುದಾಯಗಳ ಶೈಕ್ಷಣಿಕ ಸ್ಥಿತಿಗತಿ ತಿಳಿಯುತ್ತೇವೆ. ಹೆಚ್ಚು ಶಿಕ್ಷಣ ಪಡೆದವರನ್ನು ಒಂದು ಗುಂಪು ಮಾಡುತ್ತೇವೆ. ಕಡಿಮೆ ಶೈಕ್ಷಣಿಕ ಪ್ರಗತಿ, ಮತ್ತಷ್ಟು ಕಡಿಮೆ ಶೈಕ್ಷಣಿಕ ಪ್ರಗತಿ ಸಾಧಿಸಿರುವವರನ್ನು ಬೇರೆ ಬೇರೆ ಗುಂಪುಗಳನ್ನಾಗಿ ವಿಂಗಡಿಸುತ್ತೇವೆ. ಸಮೀಕ್ಷೆಯ ಪ್ರಕ್ರಿಯೆ ಶುರುವಾಗಿದೆ. ಒಂದೊಂದೇ ವಿಚಾರವನ್ನು ಅಂತಿಮ ಮಾಡುತ್ತಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಎಲ್ಲ ತಯಾರಿ ಮುಗಿಯುತ್ತದೆ. ಮುಂದಿನ ತಿಂಗಳ ಮೊದಲ ವಾರ ಮನೆಮನೆಗೆ ನಾವು ಭೇಟಿ ನೀಡಲಿದ್ದೇವೆ ಎಂದರು.
ನಗರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಸುಮಾರು 3 ಲಕ್ಷ ಕುಟುಂಬಗಳು ಎಲ್ಲಿವೆ ಎಂಬ ಅಂದಾಜು ಸಿಕ್ಕಿದೆ. ಬೆಂಗಳೂರಿನಲ್ಲೇ 1100 ಸ್ಲಮ್‌ಗಳಿವೆ. ಬಹುತೇಕ ಪರಿಶಿಷ್ಟ ಸಮುದಾಯಗಳ ಜನಸಂಖ್ಯೆ ಈ ಪ್ರದೇಶಗಳಲ್ಲೇ ಇದೆ. ಸ್ಲಮ್‌ಗಳಲ್ಲಿ ಅಷ್ಟೇ ಅಲ್ಲದೆ ಬೇರೆಡೆ ಇರುವವರು ಸರ್ಕಾರದ ಅನೇಕ ಸಾಮಾಜಿಕ ಕಾರ್ಯಕ್ರಮಗಳ ಫಲಾನುಭವಿಗಳಾಗಿದ್ದಾರೆ. ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಅವರು ಗುಟ್ಟಾಗಿ ಬದುಕುತ್ತಿರಬಹುದು. ಈ ಎಲ್ಲ ಮಾಹಿತಿ ಇಟ್ಟುಕೊಂಡು ಮನೆಮನೆಗೂ ನಾವು ಹೋಗುತ್ತೇವೆ. ಮೂರ್ನಾಲ್ಕು ಮಾರ್ಗಗಳ ಮೂಲಕ ಸರ್ವೇ ನಡೆಸುತ್ತೇವೆ. ಯಾವುದೇ ಮಾರ್ಗದ ಮೂಲಕವಾದರೂ ತಮ್ಮ ಜಾತಿಯನ್ನು ಪರಿಶಿಷ್ಟ ಸಮುದಾಯಗಳು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
