ಮಂಗಳವಾರ ರಾಜ್ಯಾದ್ಯಂತ ಪದವಿಪೂರ್ವ ಶಿಕ್ಷಣ ಇಲಾಖೆಯ (ಪಿಯುಸಿ) ಫಲಿತಾಂಶ ಪ್ರಕಟವಾಗಿದ್ದು, ವಿಧ್ಯಾರ್ಥಿಗಳು ಫಲಿತಾಂಶದ ಸಂಭ್ರಮದಲ್ಲಿದ್ದಾರೆ. ಈ ನಡುವೆ ದಾವಣಗೆರೆಯ ಪ್ರತಿಷ್ಠಿತ ಹಲವು ಕಾಲೇಜುಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದು ವಿದ್ಯಾರ್ಥಿಗಳು ರ್ಯಾಂಕ್ ಗಳನ್ನು ಪಡೆದಿದ್ದಾರೆ. ಒಟ್ಟಾರೆ 2024-25ನೇ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶ 69.45 ಕ್ಕೆ ಕುಸಿದಿದ್ದು , ಕಳೆದ ಬಾರಿ ಶೇಕಡ 80.96 ರಷ್ಟು ದಾಖಲಾಗಿತ್ತು.
ದಾವಣಗೆರೆಯ ಪ್ರತಿಷ್ಠಿತ ಸರ್ ಎಂ ವಿ ಕಾಲೇಜಿನ ವಿದ್ಯಾರ್ಥಿನಿ ‘ಅದಿತಿ’ ವಿಜ್ಞಾನ ವಿಭಾಗದಲ್ಲಿ 597 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ವೈದ್ಯ ಹಿನ್ನಲೆಯ ಕುಟುಂಬದಿಂದ ಬಂದಿರುವ ಅವರು ಮುಂದೆ ವೈದ್ಯರಾಗಿ ಸೇವೆ ಸಲ್ಲಿಸುವ ಅಭಿಲಾಷೆಯಿದ್ದು, ಉತ್ತಮ ಓದು, ಪೋಷಕರ ಮತ್ತು ಬೋಧಕರ ಸಹಕಾರ ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ ಎಂದಿದ್ದಾರೆ.
ತಂದೆ ಇಲ್ಲದೆ, ಕಿವಿಯ ಆರೋಗ್ಯ ಸಮಸ್ಯೆಯಿಂದ ಬಳಲುವ ತಾಯಿ, ಕುಟುಂಬಕ್ಕೆ ಆಧಾರವಾಗಿರುವ ಅಣ್ಣನ ಸಣ್ಣ ಸಂಪಾದನೆಯಲ್ಲಿ ಪ್ರತಿನಿತ್ಯ ಹರಿಹರದಿಂದ ದಾವಣಗೆರೆಗೆ ಬಸ್ನಲ್ಲಿ ಸಂಚರಿಸಿ ಕಷ್ಟಪಟ್ಟು ಅಭ್ಯಾಸ ಮಾಡಿ, ಇಂಗ್ಲೀಷ್ ವಿಷಯದಲ್ಲಿ 93 ಅಂಕ ಪಡೆದು, ಉಳಿದೆಲ್ಲ ವಿಷಯದಲ್ಲಿ ಶೇಕಡ ನೂರಕ್ಕೆ ನೂರರಷ್ಟು ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ 593 (98.83) ಅಂಕ ಗಳಿಸಿರುವ ಸಾಕ್ಷಿ ಕೆ.ಎಲ್. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆಗೈದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪಿಯುಸಿಯಲ್ಲಿ ಅನುತ್ತೀರ್ಣ, ದಾವಣಗೆರೆ ಖಾಸಗಿ ಕಾಲೇಜು ವಿಧ್ಯಾರ್ಥಿನಿ ಆತ್ಮಹತ್ಯೆ.
‘ಕೇಂದ್ರದ ಪಠ್ಯಪುಸ್ತಕಗಳನ್ನು ಸತತವಾಗಿ ಅಭ್ಯಾಸ ಮಾಡುತ್ತಿದ್ದ ಸಾಕ್ಷಿ ಪ್ರತಿನಿತ್ಯ ಹರಿಹರದಿಂದ ದಾವಣಗೆರೆ ಸರ್ ಎಂ ವಿ ಕಾಲೇಜಿಗೆ ಓಡಾಡುತ್ತಲೇ ಮುಂಜಾನೆ ಎರಡು ಗಂಟೆ, ಸಂಜೆ ಐದು ಗಂಟೆ ವಿದ್ಯಾಭ್ಯಾಸದ ಜೊತೆಗೆ ಧ್ಯಾನವನ್ನು ಹವ್ಯಾಸ ಮಾಡಿಕೊಂಡಿದ್ದು ಹೆಚ್ಚು ಅಂಕಗಳಿಸಲು ಸಾಧ್ಯವಾಗಿದೆ. ಚಾರ್ಟೆಡ್ ಅಕೌಂಟೆಂಟ್ ವಿಭಾಗದಲ್ಲಿ ಹೆಚ್ಚಿನ ಅವಕಾಶಗಳಿದ್ದು ಸಿಎ ಮಾಡುವ ಕನಸು ಇದೆ’ ಎಂದಿದ್ದಾರೆ.
ಸರ್ ಎಂ ವಿ ಕಾಲೇಜಿನ ಎನ್.ಎಂ. ಜಯಲಕ್ಷ್ಮೀ, ರಾಹುಲ್ ಆರ್. ಮಠದ, ಸಿದ್ದಗಂಗಾ ಪಪೂ ಕಾಲೇಜಿನ ಎನ್. ರವಿಕಿರಣ ಹಾಗೂ ದಿ ಟೀಮ್ ಅಕಾಡೆಮಿ ಕಾಲೇಜಿನ ಸೃಜನ ಎಸ್. ಗೌಡ ವಿಜ್ಞಾನ ವಿಭಾಗದಲ್ಲಿ ತಲಾ 595 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಶ್ವಚೇತನ ಪಪೂ ಕಾಲೇಜಿನ ಜಿ.ವಿ. ಶ್ರೇಯಾ, ಸರ್.ಎಂ. ವಿ ಕಾಲೇಜಿನ ಎ. ನಂದನಾ ತಲಾ 594 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
ದಾವಣಗೆರೆಯ ಆರ್.ಜಿ. ಪಪೂ ಕಾಲೇಜಿನ ಧನ್ಯಾ ಎಂ. ಪಾಲ್ 589 ಅಂಕದೊಂದಿಗೆ ದ್ವಿತೀಯ ದವನ್ ಕಾಲೇಜಿನ ಅಮಿಷಾ ಪಿ. ಪದಗಳ್ 588 ಅಂಕ ಸಂಪಾದಿಸಿ ತೃತೀಯ ಸ್ಥಾನ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಜಗಳೂರಿನ ನಲಂದಾ ಪಪೂ ಕಾಲೇಜಿನ ಎಲ್. ಕಾವ್ಯ 565 ( ಶೇ. 94.16) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಜಗಳೂರಿನ ಸರ್ಕಾರಿ ಪಪೂ ಕಾಲೇಜಿನ ಕಾಲೇಜಿನ ಜಿ.ಜಿ. ಸಿದ್ದೇಶ್ 559 ಅಂಕದೊಂದಿಗೆ ದ್ವಿತೀಯ, ಅಥಣಿ ಸಂಯುಕ್ತ ಪಪೂ ಕಾಲೇಜಿನ ಕುಸುಮಾ ಎಸ್. ಮಾಳಿಗೇರ್ 557 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 3790 ವಿಧ್ಯಾರ್ಥಿಗಳಲ್ಲಿ 2296 ವಿಧ್ಯಾರ್ಥಿಗಳು (60.58) ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ.82.89 ರಷ್ಟು ಫಲಿತಾಂಶ ಲಭಿಸಿದ್ದು , 11402 ಅಭ್ಯರ್ಥಿಗಳ ಪೈಕಿ 9451 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ನೋಂದಾಯಿತ 3969 ವಿಧ್ಯಾರ್ಥಿಗಳಲ್ಲಿ 1561 ವಿದ್ಯಾರ್ಥಿಗಳು (ಶೇ.39.33) ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 21ನೇ ಸ್ಥಾನ ಪಡೆದು, ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದ 19161 ಅಭ್ಯರ್ಥಿಗಳ ಪೈಕಿ 13308 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.