ಚಾಮರಾಜನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸಂಜೀವಿನಿ ಸ್ವ ಸಹಾಯ ಸಂಘಗಳು ಉತ್ಪಾದಿಸಿರುವ ಉತ್ಪನ್ನಗಳ ಎರಡು ದಿನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಗಣ್ಯರು ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳು, ಸಂಘದ ಚಟುವಟಿಕೆಗಳು ಕಾರ್ಯ ವಿಧಾನಗಳನ್ನು ಆಸಕ್ತಿಯಿಂದ ತಿಳಿದುಕೊಂಡರು. ಮಾರಾಟ ಮಾಡಲು ಇಡಲಾಗಿದ್ದ ಸಿಹಿ ತಿನಿಸುಗಳು, ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ತಂಪು ಪಾನೀಯವನ್ನು ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ ” ಮಹಿಳಾ ಸ್ವ ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲು ಬದ್ದರಾಗಿದ್ದೇವೆ. ಇಂತಹ ವಸ್ತುಪ್ರದರ್ಶನ ಮಾರಾಟ ಮೇಳಗಳು ಮಹಿಳಾ ಸ್ವ ಸಹಾಯ ಸಂಘಗಳು ತಯಾರು ಮಾಡಿದ ವಸ್ತುಗಳಿಗೆ ಮಾರಾಟ ಮಾಡಲು ಸೂಕ್ತವಾಗಿವೆ. ಮಹಿಳಾ ಸಂಘಗಳು ತಯಾರಿಸಿದ ಉತ್ಪನ್ನಗಳಿಗೆ ಆನ್ ಲೈನ್ ಮಾರುಕಟ್ಟೆ ಒದಗಿಸಲಿದ್ದೇವೆ.

ಇಂದು ಆನ್ ಲೈನ್ ನಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಮಹಿಳೆಯರಿಗೆ ಅವರೇ ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಉತ್ತೇಜಿಸವ ಸಲುವಾಗಿ ಆನ್ ಲೈನ್ ಮೂಲಕ ಮುಕ್ತ ಅವಕಾಶ ಮಾಡಿಕೊಡಬೇಕಿದೆ. ಎಂಎಸ್ಐಎಲ್ ಲೇಬಲ್ ಮೂಲಕವು ಮಾರುಕಟ್ಟೆ ಒದಗಿಸುವ ಚಿಂತನೆ ಮಾಡಲಿದ್ದೇವೆ. ಮಹಿಳೆಯರು ಸ್ವಾವಲಂಬಿಗಳಾಗಲು ನೆರವು ನೀಡುವ ಉದ್ದೇಶ ಹೊಂದಿದ್ದೇವೆ ” ಎಂದರು.
ಎರಡು ದಿನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕೈಮಗ್ಗದ ಬಟ್ಟೆಗಳು, ಸೀರೆ, ಬ್ಯಾಗ್, ಅಲಂಕಾರಿಕ ವಸ್ತುಗಳು, ಜೇನು, ನಲ್ಲಿಕಾಯಿ ಉತ್ಪನ್ನ, ಮಸಾಲ ಪದಾರ್ಥಗಳು, ಹಪ್ಪಳ, ಉಪ್ಪಿನಕಾಯಿ, ಪೂಜಾ ಬುಟ್ಟಿ, ತಂಪು ಪಾನೀಯಗಳು, ಆಹಾರ ತಿನಿಸುಗಳ ಮಳಿಗೆಗಳು ಸೇರಿದಂತೆ ಇತರೆ ವಸ್ತುಗಳ ಮಳಿಗೆಗಳು ಗಮನಸೆಳೆಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಿಲ್ಲೆಯ ಇಂದೂಧರ ಹೊನ್ನಾಪುರ, ಹರಿಹರ ಆನಂದ ಸ್ವಾಮಿ ಸೇರಿದಂತೆ 15 ಮಂದಿ ಸಾಧಕರಿಗೆ ‘ ಅಂಬೇಡ್ಕರ್ ಪ್ರಶಸ್ತಿ ‘

ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕಿರಣ್ ಪಡ್ನೇಕರ್ಸೇ ಸೇರಿದಂತೆ ಇನ್ನಿತರರು ಮೇಳದಲ್ಲಿ ಇದ್ದರು.