ಹಿಡನ್‌ ಅಜೆಂಡಾ | ಅಡೊಲೊಸೆನ್ಸ್‌ ಎಂಬ ನೆಟ್‌ಫ್ಲಿಕ್ಸ್‌ ಸಿರೀಸ್ ಹುಟ್ಟುಹಾಕಿದ ಪ್ರಶ್ನೆಗಳ ಸುತ್ತ

Date:

Advertisements

ಮನಃಶಾಸ್ತ್ರದ ಕ್ಷೇತ್ರದಲ್ಲಿ ಇರವ ಹೆಚ್ಚಿನವರ ಪ್ರಕಾರ ಸಮಾಜ ಒಂದು ಮಾನಸಿಕ ಆರೋಗ್ಯದ ಬಿಕ್ಕಟ್ಟಿನಿಂದ ಹಾದುಹೋಗುತ್ತಿದೆ, ಅದನ್ನು ಒಪ್ಪಿಕೊಳ್ಳುವುದು ಮೊದಲನೆಯ ಕೆಲಸ. ಇದಕ್ಕೆ ಪರಿಹಾರಗಳನ್ನು ಸಾಂಸ್ಥಿಕವಾಗಿ ಹುಡುಕುವುದು, ಮಾನಸಿಕ ಆರೋಗ್ಯದ ವಲಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳೆಲ್ಲ ಇದರ ಬಗ್ಗೆ ಸಾಮೂಹಿಕವಾಗಿ ಚರ್ಚೆ ನಡೆಸುವುದು, ಕೈಗೊಳ್ಳಬಹುದಾದ ಸಂಭಾವ್ಯ ಕ್ರಮಗಳನ್ನು ಮುಂದಿಡುವುದು, ಆ ಕ್ರಮಗಳ ಬಗ್ಗೆ ಬಹಿರಂಗ ಚರ್ಚೆ ನಂತರ ಅವುಗಳ ಅನುಷ್ಠಾನ.


ಕಳೆದ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ಅಡೊಲೊಸೆನ್ಸ್‌ ಎಂಬ ಸಿರೀಸ್‌ ಬಿಡುಗಡೆ ಆಯಿತು. ಬಂದ ಕೆಲವೇ ವಾರಗಳಲ್ಲಿ ಕೋಟ್ಯಂತರ ಜನರು ನೋಡಿದರು, ಲಕ್ಷಾಂತರ ಜನ ಅದರ ಬಗ್ಗೆ ಮಾತನಾಡಿದರು, ಸಾಮಾಜಿಕ ಜಾಲತಾಣಗಳಲ್ಲಿ ಬರೆದರು. ಆ ಲಿಮಿಟೆಡ್‌ ಸಿರೀಸ್‌ನಲ್ಲಿ ಕಂಡುಬಂದ ಅಭಿನಯ, ಕ್ಯಾಮೆರಾ ಬಳಸಿದ್ದರ ರೀತಿ, ನಿರ್ದೇಶನ, ಬರಹದ ಬಗ್ಗೆ ಸುಮಾರು ಬರೆಯಲಾಗಿದೆ. ಸಿನೆಮಾ ಎಂಬ ಕಲೆಯ ಬಗ್ಗೆ ಬರೆಯುತ್ತಿಲ್ಲವಾದುದರಿಂದ ಆ ವಿಷಯಗಳ ಬಗ್ಗೆ ನಾನು ಬರೆಯುವುದಿಲ್ಲ.

ಅದರ ನಿರ್ಮಿಸಿದವರು ಅದೊಂದು ಅಜೆಂಡಾ ಸಿರೀಸ್‌ ಎಂದು ಹೇಳಿಕೊಂಡಿದ್ದಾರೆ. ಇಂತಹ ವಿಷಯಗಳ ಬಗ್ಗೆ ಜನರು ಮಾತನಾಡಬೇಕು, ಇದೊಂದು ಸಮಸ್ಯೆ ಎಂಬುದನ್ನು ಸಮಾಜ ಒಪ್ಪಿಕೊಳ್ಳಬೇಕು ಎಂಬುದು ಅವರ ಉದ್ದೇಶವಾಗಿರಬಹುದು. ಅವರು ಪರಿಹಾರಗಳನ್ನು ನೀಡುವುದಿಲ್ಲ. ಪರಿಹಾರ ನೀಡುವ ಅವಶ್ಯಕತೆಯು ಇಲ್ಲ.

Advertisements

ಈಗ ನಾನು ಬರೆಯಲು ಪ್ರಯತ್ನಿಸುತ್ತಿರುವುದು ಯಾವುದೋ ಒಂದು ಸಮಸ್ಯೆಯನ್ನು ಡೀಲ್‌ ಮಾಡುವುದು ಹೇಗೆ? ಅದಕ್ಕೆ ಉತ್ತರಗಳೇನು? ಈ ಸಿರೀಸ್‌ ನೋಡಿದ ನಂತರ ನನ್ನ ಸ್ನೇಹಿತರೊಬ್ಬರು ನನಗೆ ಕರೆ ಮಾಡಿ, ಹಾಗಾದರೆ ಏನು ಮಾಡಬೇಕು, ಇದಕ್ಕೆ ಉತ್ತರ(ಪರಿಹಾರ)ಗಳೇನು ಎಂದು ಕೇಳಿದರು. (ನಾನೊಬ್ಬ ರಾಜಕೀಯ ಕಾರ್ಯಕರ್ತನಾಗಿರುವುದರಿಂದ ನನಗೆ ಕೇಳಿದರು) ತಕ್ಷಣಕ್ಕೆ ಉತ್ತರ ಹೊಳೆಯಲಿಲ್ಲ. ಅಂದಹಾಗೆ ಆ ಸಿರೀಸ್‌ನ ಹೆಸರೇ ಸೂಚಿಸುವಂತೆ, ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಅವರು ಎದುರಿಸುವ, ಕೈಗೊಳ್ಳುವ ಹಿಂಸೆಯ ಬಗ್ಗೆ ಈ ಸಿರೀಸ್‌ಅನ್ನು ಮಾಡಲಾಗಿದೆ. ಇದಕ್ಕೆ ಒಂದು ಉತ್ತರವಿಲ್ಲ, ಹಲವಾರು ಉತ್ತರಗಳಿವೆ, ಒಂದೊಂದಾಗಿ ಪರಿಶೀಲಿಸುವ ಪ್ರಯತ್ನ ಮಾಡುವೆ.

ಮೊದಲನೆಯದಾಗಿ, ಇಂತಹ ಒಂದು ಸಮಸ್ಯೆ ಇದೆ ಎಂದು ಗುರುತಿಸುವುದು. ಅದರ ಬಗ್ಗೆ ಮಾತನಾಡುವುದು. ಏಕೆಂದರೆ ಕೆಲವು ವಿಷಯಗಳ ಬಗ್ಗೆ ಮಾತನಾಡಲು ಹೆಚ್ಚಿನವರಿಗೆ ಹಿಂಜರಿಕೆ ಇರುತ್ತದೆ. ಆ ಹಿಂಜರಿಕೆಗೆ ಕಾರಣ; ಇತರರು ಅದರ ಬಗ್ಗೆ ಮಾತನಾಡದೇ ಇರುವುದು. ಹಾಗೂ ಆಯಾ ಸಮಾಜಗಳಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡುವುದು ಟಾಬೂ ಆಗಿರುತ್ತದೆ, ಅಂದರೆ ಅದರ ಬಗ್ಗೆ ಮಾತನಾಡುವುದೇ ನಿಷಿದ್ಧವಾಗಿರುತ್ತದೆ. ನಮ್ಮ ಸಮಾಜದಲ್ಲಿ ಲೈಂಗಿಕತೆಯೂ ಅಂತಹ ಒಂದು ನಿಷಿದ್ಧ ವಿಷಯ. ಅದರ ಬಗ್ಗೆ ಮಾತನಾಡುವ ರೂಢಿಯನ್ನು ನಾವು ಬೆಳೆಸಿಕೊಂಡಿಲ್ಲ. ಆ ವಿಷಯದ ಬಗ್ಗೆಯೇ ನಾವು ಮಾತನಾಡಲು ಹಿಂಜರಿಯುವಾಗ, ಆ ವಿಷಯದಲ್ಲಿ ಕಂಡುಬರುವ ಸಮಸ್ಯೆಗಳ ಬಗ್ಗೆ ಹೇಗೆ ಮಾತನಾಡಬಹುದು? ಪರಿಹಾರ ಸಿಗುವುದು ಆಯಾ ಸಮಸ್ಯೆಗಳನ್ನು ಒಟ್ಟಾರೆ ಸಮಾಜವಾಗಿ ಅಂತಹ ಒಂದು ಸಮಸ್ಯೆ ಇದೆ ಎಂದು ಒಪ್ಪಿಕೊಂಡಾಗ ಮಾತ್ರ. ಕೆಲವೊಮ್ಮೆ ಒಪ್ಪಿಕೊಂಡಾಗಲೂ ಅದಕ್ಕೆ ಪರಿಹಾರ ಸಿಗದೇ ಇರಬಹುದು. ಅಥವಾ ಹಲವಾರು ಉತ್ತರಗಳು ಮೇಲೆ ಬಂದು, ಯಾವುದು ಸರಿ ಎಂದು ಸಂಘರ್ಷ ಉಂಟಾಗಬಹುದು. ಆದರೂ, ಮಾತನಾಡಬೇಕಾದದ್ದೂ ಕಡ್ಡಾಯವೇ ಆಗಿದೆ. ಅಡೊಲೊಸೆನ್ಸ್‌ ಸಿರೀಸ್‌ ಒಂದು ಕೊಲೆಯ ಸುತ್ತ ನಡೆದಿರುವುದ್ದಾದರೂ, ಅದು ಉದ್ದೇಶಿಸಿದ್ದು, ಹದಿಹರೆಯದ ಮಕ್ಕಳ ಲೈಂಗಿಕತೆಯ ಬಗ್ಗೆ, ಅಲ್ಲಿ ಆಗುವ ಡೇಟಿಂಗ್‌ ಲೆಕ್ಕಾಚಾರಗಳ ಬಗ್ಗೆ, ಸಾಮಾಜಿಕ ಜಾಲತಾಣಗಳು ಇದರ ಬಗ್ಗೆ ಅವರದ್ದೇ ಆದ ಲೋಕ ಸೃಷ್ಟಿಸಿದ್ದ ಬಗ್ಗೆ.

860 sc adolescence netflix ep 1 c

ಎರಡನೆಯದಾಗಿ. ಆಯಾ ವಿಷಯವನ್ನು, ಅವು ಹುಟ್ಟುಹಾಕಿದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು. ಅವುಗಳ ಕಾರಣಗಳನ್ನು ಹುಡುಕುವುದು. ಆಯಾ ಸಮಸ್ಯೆಗಳ ತೀವ್ರತೆಯನ್ನು ಅರಿಯುವುದು. ಅಡೊಲೊಸೆನ್ಸ್ ಎಂಬ ಸಿರೀಸ್‌ ಹುಟ್ಟುಹಾಕಿದ ಪ್ರಶ್ನೆಗಳಿಗೆ ಸೀಮಿತಗೊಳಿಸಿದಾಗ; ಹದಿಹರೆಯದ ಮಕ್ಕಳ ಸಮಸ್ಯೆ ಎಂದಿನಿಂದಲೂ ಇದೆಯಲ್ಲವಾ? ಇದೇನು ಹೊಸದಾ? ಖಂಡಿತವಾಗಿಯೂ ಅಲ್ಲ. ನಮ್ಮ ಸಮಾಜ ಯಾವ ರೀತಿಯಲ್ಲಿ ಸಾಂಪ್ರದಾಯಿಕತೆಯನ್ನು ನಮ್ಮ ಮೇಲೆ, ಮಕ್ಕಳ ಮೇಲೆ ಹೇರುತ್ತದೆ. ಅದರಿಂದ ಅವರು ಅನುಭವಿಸುವ ಕ್ಷೋಭೆಗಳೂ ಅನಾದಿಕಾಲದಿಂದಲೂ ನಡೆದುಕೊಂಡೇ ಬಂದಿದ್ದು. ಇದು ಇದ್ದಿದ್ದೇ, ಇದರಲ್ಲಿ ಹೊಸದು ಏನೂ ಇಲ್ಲ ಎಂದುಕೊಳ್ಳಬಹುದೇ? ಅದನ್ನು ಆಳವಾಗಿ ಪರಿಶೀಲಿಸಿದಾಗ ಮಾತ್ರ ನಮಗೆ ಉತ್ತರ ದೊರಕುವುದು. ಸಾಮಾಜಿಕ ಜಾಲತಾಣಗಳ ಹುಟ್ಟು ಈ ಸಮಸ್ಯೆಗಳನ್ನು ಯಾವ ರೀತಿ ಪ್ರಭಾವ ಬೀರಿವೆ, ಮುಖ್ಯವಾಹಿನಿಯ ಮಾಧ್ಯಮಗಳು, ಸಿನೆಮಾಗಳು, ರೀಲ್‌ಗಳು ಯಾವ ರೀತಿಯಲ್ಲಿ ಇದನ್ನು ಅಡ್ರೆಸ್‌ ಮಾಡಿವೆ? ಸಾಮಾಜಿಕ ಜಾಲತಾಣಗಳಲ್ಲಿ ಯಾರೆಲ್ಲ ಪ್ರಭಾವಿ ವ್ಯಕ್ತಿಗಳು ಇದರ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ? ಆಂಡ್ರ್ಯೂ ಟೇಟ್‌ ಯಾರು? ಅವನು ನಿಜಕ್ಕೂ ಏಕೆ ಅಷ್ಟು ಲಕ್ಷಾಂತರ ಜನರನ್ನು ಪ್ರಭಾವಿಸುವ ವ್ಯಕ್ತಿ ಆದ? ಆಯಾ ಕ್ಷೇತ್ರದ ಜನರು, ವೈಯಕ್ತಿಕವಾಗಿ, ಸಾಂಸ್ಥಿಕವಾಗಿ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರಾ? ಮಾಡದೇ ಇದ್ದರೆ, ಅವರು ಇದರ ಬಗ್ಗೆ ಕೆಲಸ ಮಾಡುವಂತೆ ಮಾಡುವುದು ಹೇಗೆ?

ಅರ್ಥಮಾಡಿಕೊಳ್ಳುವುದರ ಭಾಗವಾಗಿಯೇ, ಹೊಸ ಬೆಳವಣಿಗೆಗಳ ಬಗ್ಗೆ ಕಣ್ಣಿಟ್ಟುರುವುದು. ಸಮಾಜ ಬದಲಾದಂತೆ, ಹೊಸ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಲೇ ಹೋಗುತ್ತದೆ. ಕೆಲವು ಸಮಸ್ಯೆಗಳು ಎಪಿಡೆಮಿಕ್‌ ಅಥವಾ ಸಾಂಕ್ರಾಮಿಕವಾಗಿ ಆಗಿದ್ದರೆ, ಕೆಲವು ಎಂಡೆಮಿಕ್‌ ಆಗಿರುತ್ತದೆ, ಆಯಾ ಪ್ರದೇಶಕ್ಕೆ ಸೀಮಿತವಾಗಿದ್ದು ನಿಧಾನಕ್ಕೆ ಬೇರೆಡೆ ಹರಡುತ್ತಿರುತ್ತವೆ. ಒಂದು ಸಮಾಜವಾಗಿ ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳುವಾಗ, ಬೇರೆ ಪ್ರದೇಶದ ಜೀವನಶೈಲಿಯನ್ನು ಅನುಕರಣೆ ಮಾಡುವ ಪ್ರಯತ್ನ ಮಾಡುತ್ತಿರುವಾಗ ನಾವು ಕಳೆದುಕೊಳ್ಳುತ್ತಿರುವುದೇನು? ಪಡೆದುಕೊಳ್ಳುತ್ತಿರುವುದೇನು? ಈ ಬದಲಾವಣೆಯ ಸಮಯದಲ್ಲಿ ಯಾವೆಲ್ಲ ಕ್ಷೋಬೆಗೆ ನಾವು ಒಳಗಾಗಲಿದ್ದೇವೆ ಎಂಬುದನ್ನು ಮೊದಲೇ ಊಹಿಸುವ, ಅದನ್ನು ತಡೆಗಟ್ಟಲು ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ನಮಗೆ ಮೊದಲೇ ಉತ್ತರಗಳು, ಥಿಯಾರೆಟಿಕ್‌ ಉತ್ತರಗಳಾದರೂ ಇರಬೇಕು.

ಸದ್ಯಕ್ಕೆ ಅಡೊಲೆಸೆನ್ಸ್‌ ಎಂಬ ಸಿರೀಸ್‌ ಹುಟ್ಟುಹಾಕಿದ ಪ್ರಶ್ನೆಗಳನ್ನೇ ನೋಡಿದಾಗ, ಬದಲಾಗುತ್ತಿರುವ ಸಮಾಜ, ಸಂಸ್ಕೃತಿ, ಆಚರಣೆಗಳು, ಸಂಬಂಧ ಇತ್ಯಾದಿಗಳ ಬಗ್ಗೆ ನೋಡಬೇಕಾಗುತ್ತದೆ. ಹಿಂದೆ ಎಲ್ಲಾ ಚೆನ್ನಾಗಿದ್ದವು ಎಂದು ಹೇಳಲು ಆಗುವುದಿಲ್ಲವಾದರೂ ಈಗ ಆದ ಬದಲಾವಣೆಗಳು ಏನು ಎಂಬುದನ್ನು ನೋಡಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳು ಬಂದ ಮೇಲೆ, ನಗರೀಕರಣ ಹೆಚ್ಚಾಗುತ್ತಿರುವ ಸಮಯದಲ್ಲಿ, ನಮ್ಮ ಭಾಷೆಯೂ ಬದಲಾಗುತ್ತಿರುವ, ನಾವು ನೋಡುವ ಸಿನಮಾಗಳು, ನಮ್ಮ ಸಾಂಸ್ಕೃತಿಕ ಐಕಾನ್‌ಗಳು ಬದಲಾಗುತ್ತಿರವ ಸಮಯದಲ್ಲಿ, ಸಂಬಂಧಗಳ ಹೊಸಹೊಸ ಪರಿಕಲ್ಪನೆಗಳು ಹುಟ್ಟಿಕೊಳ್ಳುತ್ತಿರುವ ಹೊತ್ತಿನಲ್ಲಿ ನಮ್ಮ ನೈತಿಕತೆಯನ್ನು ಬದಿಗಿಟ್ಟು ಈ ಬದಲಾವಣೆಗಳನ್ನು ನೋಡಬೇಕಾಗುತ್ತದೆ. ನೈತಿಕತೆಯನ್ನು ಬದಗಿಟ್ಟು ಎಂದರೆ? ಇಂಗ್ಲೀಷಿನಲ್ಲಿ ethical ಮತ್ತು morality ಎಂಬ ಎರಡು ಪದಗಳಿವೆ. ಕನ್ನಡದಲ್ಲಿ ಎರಡಕ್ಕೂ ಸಾಮಾನ್ಯವಾಗಿ ನೈತಿಕತೆ ಎಂತಲೇ ಬಳಸುತ್ತೇವೆ. ಎಥಿಕ್ಸ್‌ ಎಂಬುದು ಎಂದಿಗೂ ಬದಲಾಗುವುದಿಲ್ಲ, ಆದರೆ ಮೊರಾಲಿಟಿ ಆಯಾ ಸಾಮಾಜಿಕ ಸಂರಚನೆಗೆ, ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾಗುತ್ತದೆ. ನಾವು ಒಂದು ವೇಳೆ ನಮ್ಮ ನೈತಿಕ ಮೌಲ್ಯಗಳನ್ನು ಪಕ್ಕಕ್ಕಿರಿಸದೇ ಈ ವಿಷಯಗಳನ್ನು ನೋಡಿದಾಗ, ಪರಿಶೀಲಿಸಿದಾಗ ಆಯಾ ಸನ್ನಿವೇಶಗಳನ್ನು, ಘಟನೆಗಳನ್ನು, ಅಲ್ಲಿ ಪಾಲ್ಗೊಂಡ ವ್ಯಕ್ತಿಗಳನ್ನು ಜಜ್‌ ಮಾಡುತ್ತೇವೆ; ಅವರು ತಪ್ಪು ಅಥವಾ ಸರಿ ಎಂದು ಘೋಷಿಸುತ್ತೇವೆ. ಆಗ ನಮಗೆ ಸಮಸ್ಯೆ ಏನೆಂದು ಅರ್ಥೈಸಿಕೊಳ್ಳುವುದು ಕಷ್ಟ.

ಬದಲಾಗುತ್ತಿರುವ ಒಂದೊಂದು ವಿದ್ಯಮಾನಗಳನ್ನು ಪ್ರತ್ಯೇಕವಾಗಿಯೂ ಅರ್ಥೈಸಿಕೊಳ್ಳುವುದು ಅತ್ಯಗತ್ಯ, ನಗರೀಕರಣ ಹೆಚ್ಚುತ್ತಿರುವ ಸಮಯದಲ್ಲಿ, ಈ ವಿದ್ಯಮಾನ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಿದೆ, ನುಡಿಗಟ್ಟು ಬದಲಾಗುತ್ತಿರುವುದರಿಂದ ಹಾಗೂ ಭಾಷೆಯೂ ಬದಲಾಗುತ್ತಿರುವುದರಿಂದ, ನಮ್ಮ ಸಾಂಸ್ಕೃತಿಕ ವಲಯವೂ ಗೊಂದಲ ಹುಟ್ಟಿಸುವ ಸಮಯದಲ್ಲಿ ಮಕ್ಕಳ ಮೇಲೆ, ಸಂಬಂಧಗಳ ಮೇಲೆ ಆದ ಪರಿಣಾಮಗಳೇನು ಎಂಬುದಕ್ಕೆಲ್ಲ ಉತ್ತರಗಳನ್ನು ಸಾಂಸ್ಥಿಕವಾಗಿ ಹುಡುಕಬೇಕಾಗುತ್ತದೆ.

ಸಮಸ್ಯೆ ಇರುವುದು ಇದನ್ನು ನೋಡುವುದರಲ್ಲಿ, ಬದಲಾವಣೆಯ ಸಮಯದಲ್ಲಿ ಯಾವುದನ್ನು ನೋಡಬೇಕು, ಯಾವ ಕಥೆಯನ್ನು ಹೇಳಬೇಕು, ಯಾವ ಸಿನೆಮಾ ಮಾಡಬೇಕು ಎಂಬ ಪ್ರಶ್ನೆಗೆ ಸರಳ ಉತ್ತರಗಳಿಲ್ಲ. ಏಕೆಂದರೆ ನಮ್ಮದು ಅತ್ಯಂತ ಕಾಂಪ್ಲೆಕ್ಸ್‌ ಆದ ಸಮಾಜ. ಒಂದೆಡೆ ಕುಲ ಗೋತ್ರ ನೋಡಿ, ಕುಟುಂಬಗಳು ಸೇರಿ ಮಾಡುತ್ತಿರುವ ಮದುವೆಗಳು, ಅತ್ಯಂತ ಸಾಂಪ್ರದಾಯಿಕವಾಗಿ ಕೌಟುಂಬಿಕ ಸಂಬಂಧಗಳೂ, ಪಿತೃಪ್ರಧಾನ ವ್ಯವಸ್ಥೆಯ ಎಲ್ಲಾ ಕಟ್ಟುಪಾಡುಗಳನ್ನು ಗಟ್ಟಿಗೊಳಿಸುವ ಶಕ್ತಿಗಳು ಹೆಚ್ಚಾಗುತ್ತಿರುವ ಸಮಯದಲ್ಲಿಯೇ, ಎಷ್ಟೊಂದು ಸಂಗಾತಿಗಳು ಮದುವೆಯನ್ನೇ ಮಾಡಿಕೊಳ್ಳದೇ ಸಹಜೀವನವನ್ನು ಅತ್ಯಂತ ಸಹಜವಾಗಿ ನಡೆಸುತ್ತಿದ್ದಾರೆ. ಇವೆರಡೂ ಒಂದೇ ಭೌಗೋಳಿಕ ವಲಯದಲ್ಲಿ, ಒಂದೇ ಕಾಲದಲ್ಲಿ ನಡೆಯುತ್ತಿವೆ. ಸಹಜೀವನ ನಡೆಸುತ್ತಿರುವವರೂ ನಮ್ಮವರೇ, ಸಾಂಪ್ರದಾಯಿಕ ಕುಟುಂಬವನ್ನು ನಡೆಸುತ್ತಿರುವವರೂ ನಮ್ಮವರೇ. ಅಂಥ ಸಮಯದಲ್ಲಿ ಯಾವುದರ ಬಗ್ಗೆ ಬರೆಯಬೇಕು? ಅದಕ್ಕಿಂತ ಮುಖ್ಯವಾಗಿ ನಮ್ಮ ನೈತಿಕತೆಯನ್ನು ಬಿಟ್ಟು ಇವನ್ನು ಅರ್ಥೈಸಿಕೊಳ್ಳುವುದು ಹೇಗೆ? ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಉತ್ತರಗಳು ಸಾಧ್ಯವೇ?

Untitled design 4 9

ಸರಿಯಾದ ಪ್ರಶ್ನೆಗಳನ್ನು ಹಾಕಿಕೊಂಡಲ್ಲಿ ಉತ್ತರಗಳು ಸಾಧ್ಯ. ಉತ್ತರಗಳಿಗಿಂತಲೂ, ಇವನ್ನು ಅರ್ಥೈಸಿಕೊಳ್ಳುವುದಕ್ಕಿಂತಲೂ ಮುಖ್ಯವಾಗಿ ನೋಡುವುದನ್ನು ಕಲಿತುಕೊಳ್ಳಬೇಕಿದೆ. ಸಮಾಜ ಒಂದೇ ದಿಕ್ಕಿನಲ್ಲಿ ಸಾಗುತ್ತಿಲ್ಲ, ಒಂದೆಡೆ ಆಧುನಿಕತೆಯ ಕಡೆಗೆ ಎಳೆಯುತ್ತಿರುವ ನ್ಯಾಚುರಲ್‌ ಶಕ್ತಿಗಳು ಇದ್ದರೆ, ಇನ್ನೊಂದೆಡೆ ಸಾಂಪ್ರದಾಯಿಕವಾದ ಪಿತೃಪ್ರಧಾನವಾದ ಸಮಾಜದ ಕಡೆಗೆ ಎಳೆಯುವ ಶಕ್ತಿಗಳೂ ಅಷ್ಟೇ ಶಕ್ತಿಯುತವಾಗಿವೆ. ನಾವು ಸಮಾಜ ಸಾಗುವ ದಿಕ್ಕನ್ನು ನೋಡುತ್ತಿರುವಾಗ, ಅದನ್ನು ಅರ್ಥೈಸಿಕೊಳ್ಳುತ್ತಿರುವಾಗ ನಮ್ಮ ನೈತಿಕತೆಯೂ ನಮ್ಮನ್ನು ಕುರುಡರನ್ನಾಗಿಸುವ ಶಕ್ತಿ ಹೊಂದಿರುತ್ತದೆ, ಪಾಶ್ಚಾತ್ಯದ ಎಲ್ಲವೂ ಒಳ್ಳೆಯವು ಅಥವಾ ಅಲ್ಲ ಎನ್ನುವುದಾಗಲೀ, ಈ ಹಿಂದೆ ಇದ್ದ, ಇನ್ನೂ ಗಟ್ಟಿಯಾಗಿ ಊರಿರುವ ಕೌಟುಂಬಿಕ ಸಂಬಂಧಗಳು ಒಳ್ಳೆಯವು ಅಥವಾ ಅಲ್ಲ ಎಂಬ ಎರಡೂ ನಿಲುವುಗಳು ನಮ್ಮ ನೋಟಕ್ಕೆ ಅಡ್ಡಿಯಾಗಬಲ್ಲವು.

ಅಡೊಲೊಸೆನ್ಸ್‌ ಸಿರೀಸ್‌ ಮುಂದಿಟ್ಟಿರುವ, ಹದಿಹರೆಯದ ಮತ್ತು ಯುವಜನರು ಅನುಭವಿಸುತ್ತಿರುವ ಕ್ಷೋಭೆಗೆ ಇನ್ನೇನೂ ಮಾಡಲು ಸಾಧ್ಯವಿಲ್ಲವೇ? ಒಬ್ಬ ರಾಜಕೀಯ ವ್ಯಕ್ತಿಯಾಗಿ, ರಾಜಕೀಯ ಸಂಘಟನೆಯ ಭಾಗವಾಗಿ ಏನು ಮಾಡಬೇಕು?

ಖಂಡಿತ ಸಾಧ್ಯವಿದೆ. ಸಾಂಸ್ಕೃತಿಕ ಜಾಗತೀಕರಣದ ಸಮಯದಲ್ಲಿ ನಮ್ಮ ಸಾಂಸ್ಕೃತಿಕ ವಲಯ ಹೇಗಿರಬೇಕು, ಯಾವ ಸಾಹಿತ್ಯ ಓದಬೇಕು ಎಂಬುದರ ಬಗ್ಗೆ ರಾಜಕೀಯ ಸಂಸ್ಥೆಗಳು ಮಾಡಬೇಕಾದದ್ದು, ಮಾಡಬಹುದಾದದ್ದು ಬಹಳಷ್ಟಿದೆ. ಹೊಸಹೊಸ ವಿಚಾರಗಳನ್ನು ಕಂಡುಕೊಳ್ಳುತ್ತ, ಹೊಸ ಜೀವನಶೈಲಿಯನ್ನು ಅನುಕರಣೆ ಮಾಡುತ್ತ, ಅದನ್ನು ಒಂದು ರೀತಿಯಲ್ಲಿ ನಮ್ಮದಾಗಿಸುವ ವಿದ್ಯಮಾನ ನಡೆಯುತ್ತಿರುವಾಗ, ಅನೇಕರು ಅಲ್ಲಿ ಫಿಟ್‌ ಆಗುವುದಿಲ್ಲ, ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ಗೊಂದಲ ಉಂಟಾಗುವುದು ಸಹಜ. ಈ ಒಂದು ಹೊಸ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಲ್ಲಿ ವಿಫಲರಾದವ ಮನಸ್ಥಿತಿ ಏನು? ಎಷ್ಟು ಜನರಿಗೆ ತಮ್ಮ ಸ್ನೇಹಿತರ, ಕುಟುಂಬದ ಬೆಂಬಲ ಗುಂಪು ಇದೆ? ಮನಃಶಾಸ್ತ್ರದ ಕ್ಷೇತ್ರದಲ್ಲಿ ಇರವ ಹೆಚ್ಚಿನವರ ಪ್ರಕಾರ ಸಮಾಜ ಒಂದು ಮಾನಸಿಕ ಆರೋಗ್ಯದ ಬಿಕ್ಕಟ್ಟಿನಿಂದ ಹಾದುಹೋಗುತ್ತಿದೆ, ಅದನ್ನು ಒಪ್ಪಿಕೊಳ್ಳುವುದು ಮೊದಲನೆಯ ಕೆಲಸ.

ಇದಕ್ಕೆ ಪರಿಹಾರಗಳನ್ನು ಸಾಂಸ್ಥಿಕವಾಗಿ ಹುಡುಕುವುದು, ಮಾನಸಿಕ ಆರೋಗ್ಯದ ವಲಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳೆಲ್ಲ ಇದರ ಬಗ್ಗೆ ಸಾಮೂಹಿಕವಾಗಿ ಚರ್ಚೆ ನಡೆಸುವುದು, ಕೈಗೊಳ್ಳಬಹುದಾದ ಸಂಭಾವ್ಯ ಕ್ರಮಗಳನ್ನು ಮುಂದಿಡುವುದು, ಆ ಕ್ರಮಗಳ ಬಗ್ಗೆ ಬಹಿರಂಗ ಚರ್ಚೆ ನಂತರ ಅವುಗಳ ಅನುಷ್ಠಾನ. ಇದನ್ನು ಸರಕಾರ ಮಾಡಬೇಕೆಂದರೆ, ಮೊದಲು ನಾವು ಮಾತನಾಡಬೇಕು. ಇಷ್ಟೆಲ್ಲ ಮಾಡಿದರೂ ಉತ್ತರಗಳು ಸಿಗದೇ ಹೋಗಬಹುದು, ಧರ್ಮ, ಅಧ್ಯಾತ್ಮ ಮುಂತಾದವುಗಳು ಈ ವಿಷಯದಲ್ಲಿ ಯಾವ ರೀತಿಯಲ್ಲಿ ಪ್ರಭಾವಿಸುತ್ತವೆ, ಇನ್ನೂ ಹೆಚ್ಚಿನ ವಿಷಯಗಳು ಇವುಗಳೊಂದಿಗೆ ಹೇಗೆ ತಳಕು ಹಾಕಿಕೊಂಡಿವೆ ಎಂಬ ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಸರಿಯಾದ ಪ್ರಶ್ನೆಗಳನ್ನು ಕೇಳುವುದು, ಹೊಸಹೊಸ ಪ್ರಶ್ನೆಗಳನ್ನು ಮುಕ್ತವಾಗಿ ಸ್ವಾಗತಿಸುವುದೇ ಈಗ ಮಾಡಬೇಕಿರುವ ಕೆಲಸ.

WhatsApp Image 2023 05 02 at 1.02.32 PM
ರಾಜಶೇಖರ್‌ ಅಕ್ಕಿ
+ posts

ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಜಶೇಖರ್‌ ಅಕ್ಕಿ
ರಾಜಶೇಖರ್‌ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X