ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ್ದ ಸುಂಕ ಸಮರದಿಂದ ನೆಲಕಚ್ಚಿದ್ದ ಷೇರುಪೇಟೆ ಸೂಚ್ಯಂಕ ಇಂದು (ಏ.10) ಕೊಂಚ ಚೇತರಿಕೆ ಕಂಡಿದೆ.
ಜಗತ್ತಿನ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕದ ನೂತನ ಸುಂಕ ಹೇರಿಕೆ ಪ್ರಕ್ರಿಯೆಗೆ ಟ್ರಂಪ್ 90 ದಿನಗಳ ತಾತ್ಕಾಲಿಕ ವಿರಾಮ ಘೋಷಿಸಿದ್ದಾರೆ. ಇದರಿಂದ ಇಂದಿನ ಆರಂಭಿಕ ವಹಿವಾಟಿನಲ್ಲಿಯೇ ಏಷ್ಯಾದ ಷೇರುಗಳು ಏರಿಕೆ ಕಂಡಿವೆ.
ಜಪಾನ್‌ನ ಷೇರುಪೇಟೆ ಶೇ. 8.8ರಷ್ಟು ಜಿಗಿದಿದೆ. ಆಸ್ಟ್ರೇಲಿಯಾ ಸೂಚ್ಯಂಕ ಶೇ.5.1ರಷ್ಟು ಜಿಗಿದರೆ, ದಕ್ಷಿಣ ಕೊರಿಯಾ ಷೇರುಪೇಟೆ ಶೇ. 5.2ರಷ್ಟು ಏರಿಕೆಯಾಗಿದೆ. ಹಾಂಗ್ ಕಾಂಗ್ ಸೂಚ್ಯಂಕವು ಶೇ.4ರಷ್ಟು ಏರಿಕೆಯಾಗಿದೆ. ಶಾಂಘೈ ಮಾರುಕಟ್ಟೆಗಳೂ ಚೇತರಿಕೆ ಕಂಡಿವೆ. ಮಹಾವೀರ ಜಯಂತಿ ಹಿನ್ನೆಲೆ ಸಾರ್ವಜನಿಕ ರಜೆ ಇರುವುದರಿಂದ ಭಾರತೀಯ ಷೇರು ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ.
ಅಮೆರಿಕ ಸರಕುಗಳ ಮೇಲಿನ ಸುಂಕವನ್ನು ಚೀನಾ ಶೇ.34ರಿಂದ ಶೇ.84ಕ್ಕೆ ಹೆಚ್ಚಿಸಿದ್ದಕ್ಕೆ ಪ್ರತಿಯಾಗಿ, ಟ್ರಂಪ್ ನಿನ್ನೆ ಚೀನಾ ಸರಕುಗಳ ಮೇಲಿನ ಸುಂಕವನ್ನು ಶೇ.125ಕ್ಕೆ ಹೆಚ್ಚಿಸಿದ್ದಾರೆ. ಇದೀಗ ಸುಂಕ ಪ್ರಕ್ರಿಯೆಗೆ ವಿರಾಮ ನೀಡಿರುವುದು ಕೆಲವು ದೇಶಗಳಿಗೆ ತಾತ್ಕಾಲಿಕ ಪರಿಹಾರ ದೊರೆತರೂ ಚೀನಾ ಹಾಗೂ ಅಮೆರಿಕ ನಡುವಿನ ವ್ಯಾಪಾರ ಯುದ್ಧ ಹೆಚ್ಚುತ್ತಲೇ ಇದೆ. ಇದು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎನ್ನುತ್ತಾರೆ ವಿಶ್ಲೇಷಕರು.
ಇದನ್ನೂ ಓದಿ: ಅಮೆರಿಕ ದಾಳಿ ಮಾಡಿದರೆ ಪರಮಾಣು ಅಸ್ತ್ರ ಬಳಕೆ: ಇರಾನ್ ಎಚ್ಚರಿಕೆ
ಸದ್ಯ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿರುವ ಭಾರತ ಸೇರಿದಂತೆ 75 ದೇಶಗಳಿಗೆ ಸುಂಕ ಕಡಿಮೆ ಮಾಡುವುದಾಗಿ ಟ್ರಂಪ್ ಹೇಳಿದ್ದು, 90 ದಿನಗಳ ವಿರಾಮದ ನಂತರ ಯಾವ ರೀತಿ ಸುಂಕ ನೀತಿ ರೂಪಿಸಲಿದ್ದಾರೆ ಎಂದು ಕಾದುನೋಡಬೇಕಿದೆ.