ಉಳ್ಳಾಲ ಕಡಲ ಕಿನಾರೆಯಲ್ಲಿರುವ ತ್ಯಾಜ್ಯ ಘಟಕವನ್ನು ತೆರವುಗೊಳಿಸಲು ಆಗ್ರಹಿಸಿ ಉಳ್ಳಾಲ ನಗರ ಸಭೆಯ ವಿರುದ್ದ ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ವತಿಯಿಂದ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್ ಮಾತನಾಡಿ, “ಉಳ್ಳಾಲದ ಕಡಲ ಕಿನಾರೆಗೆ ದೇಶದ ಮೂಲೆಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಆ ಪ್ರವಾಸಿಗರು ಬೀಚ್ ಪ್ರವೇಶಿಸುವಾಗ ಮೂಗು ಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿಯನ್ನು ಇಲ್ಲಿನ ನಗರ ಸಭೆ ಮಾಡಿದೆ. ನಗರ ಮುಖ್ಯ ರಸ್ತೆ ಬದಿಯಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಸುಂದರವಾದ ಕಡಲ ಕಿನಾರೆಯಲ್ಲಿ ದುರ್ನಾತ ಬೀರುತ್ತಿದೆ. ಮೂಕ ಪ್ರಾಣಿಗಳು ಆ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಗಳನ್ನು ಎಳೆದುಕೊಂಡು ಹೋಗಿ ಎಲ್ಲೆಂದರಲ್ಲಿ ಬಿಸಾಕುತ್ತಿವೆ. ತ್ಯಾಜ್ಯ ಘಟಕದ ಹತ್ತಿರ ಜನವಸತಿ ಪ್ರದೇಶ ಇದ್ದು ಮನೆಯಿಂದ ಹೆೊರಬರದ ಪರಿಸ್ಥಿತಿ ಉಂಟಾಗಿದೆ” ಎಂದು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ಹತ್ತಿರದಲ್ಲೇ ಸಾರ್ವಜನಿಕ ಶೌಚಾಲಯ ಇದ್ದರೂ ಘಟಕದ ದುರ್ನಾತದಿಂದ ಪ್ರವಾಸಿಗರು ಉಪಯೋಗ ಮಾಡಲಾಗದೆ ಪಾಳುಬಿದ್ದಿದೆ. ಇಷ್ಟೆಲ್ಲಾ ಅವ್ಯವಸ್ಥೆಗಳ ಆಗರವಾಗಿರುವ ಈ ತ್ಯಾಜ್ಯ ಘಟವನ್ನು ಕೂಡಲೇ ಇಲ್ಲಿಂದ ವರ್ಗಾಯಿಸಬೇಕು. ಇಲ್ಲವಾದಲ್ಲಿ ಉಳ್ಳಾಲ ನಗರ ಸಭೆಯ ಮುಂಭಾಗ ತಂದು ಸುರಿಯತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮಂಗಳೂರು | ಬಂಜಾರ ಸಮುದಾಯ ಸಂಘಟನೆಯಲ್ಲಿ ಸಂತ ಸೇವಾಲಾಲ್ ಪಾತ್ರ ಅಪಾರ: ಉಳ್ಳಾಲ್
ಪ್ರವಾಸಿಗರಿಗೆ ಡಿವೈಎಫ್ಐ ಕಾರ್ಯಕರ್ತರು ಮಾಸ್ಕ್ ವಿತರಣೆ ಮಾಡಿದರು. ಡಿವೈಎಫ್ಐ ಉಳ್ಳಾಲ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಕೋಶಾಧಿಕಾರಿ ಅಶ್ಫಾಕ್ ಅಲೇಕಳ, ಮುಖಂಡರಾದ ಅಮೀರ್ ಉಳ್ಳಾಲಬೈಲ್, ರಿಯಾಝ್ ಮಂಗಳೂರು, ನೌಫಲ್ ಅಲೇಕಳ, ಖಲೀಲ್ ಉಳ್ಳಾಲಬೈಲ್ ಉಪಸ್ಥಿತರಿದ್ದರು.
