ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ)ಯಡಿ ಕೂಲಿ ಹಣಪಡೆಯಲು ಗಂಡಸರಿಗೆ ಸೀರೆ ಉಡಿಸಿ, ಮಹಿಳೆಯರ ಲೆಕ್ಕದಲ್ಲಿ ದಾಖಲೆ ಸೃಷ್ಟಿಸಿ, ಹಣ ಲಪಟಾಯಿಸಲು ಸಂಚು ನಡೆಸಿದ್ದವನನ್ನು ಅಮಾನತುಗೊಳಿಸಲಾಗಿದೆ.
ಯಾದಗಿರಿ ಜಿಲ್ಲೆಯ ಮಲ್ದಾರ್ ಗ್ರಾಮದಲ್ಲಿ ಸಣ್ಣಲಿಂಗಪ್ಪ ಎಂಬುವವರ ಹೊಲದಲ್ಲಿ 3 ಲಕ್ಷ ರೂಪಾಯಿಗಳ ನಾಲಾ ಹೂಳೆತ್ತುವ ಕಾಮಗಾರಿ ಸಂದರ್ಭದಲ್ಲಿ ಗಂಡಸರಿಗೆ ಸೀರೆ ಉಡಿಸುವ ಮೂಲಕ ಹೆಂಗಸರ ಲೆಕ್ಕದಲ್ಲಿ ಹಣ ಲಪಟಾಯಿಸುವ ಸಂಚು ನಡೆದಿರುವ ಕುರಿತ ಭಾವಚಿತ್ರಗಳು ಸಾಮಾಜಿಕ ಜಾಲತಾಣ-ಮಾಧ್ಯಮಗಳಲ್ಲಿ ಹರಿದಾಡಿದ್ದು, ಭಾರಿ ಸಂಚಲನ ಮೂಡಿಸಿತ್ತು.
ನಾಲ್ವರು ಪುರುಷರಿಗೆ ಸೀರೆ ಉಡಿಸಿ, ಹೆಂಗಸರಂತೆ ಬಿಂಬಿಸಿ, ಕೂಲಿ ಹಣ ದುರ್ಬಳಕೆ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಲವೀಶ ಒರಡಿಯಾ ಅವರು ಸಂಜೆ ವೇಳೆಗೆ ಸ್ಪಷ್ಟನೆ ನೀಡಿದ್ದು, “ಈ ಘಟನೆ ಫೆಬ್ರವರಿಯಲ್ಲಿ ನಡೆದಿತ್ತು. ಈ ಪ್ರಕರಣದ ಬಗ್ಗೆ ಆಗಲೇ ದೂರು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಆರೋಪಿ ಹೊರಗುತ್ತಿಗೆ ನೌಕರ ವೀರೇಶ ಎಂಬಾತನ್ನು ಅಮಾನತು ಮಾಡಲಾಗಿದೆ. ಮನರೇಗಾ ಕಾಮಗಾರಿಗೆ ಸಂಬಂಧಿಸಿದಂತೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ನವೆಂಬರ್‌ನಿಂದ ಮೇ ತಿಂಗಳವರೆಗೆ ಉತ್ತರ ಕರ್ನಾಟಕದಿಂದ ಬೆಂಗಳೂರು, ಮಂಗಳೂರು, ಗೋವಾ, ಮುಂಬೈ, ಪುಣೆ ಅಥವಾ ಹೈದರಾಬಾದ್‌ಗೆ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಹುಡುಕಿಕೊಂಡು ಹೆಚ್ಚಿನ ಕಾರ್ಮಿಕರು ವಲಸೆ ಹೋಗುತ್ತಾರೆ. ಇದನ್ನು ತಡೆಯಲು ಮನರೇಗಾ ಅಡಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಸಿವಿಲ್ ಕೆಲಸವನ್ನು ಹಂಚಿಕೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಡುವೆ ಸಂಪರ್ಕ ಸಾಧಿಸುವ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಈ ಯೋಜನೆಯಡಿ ಅರ್ಹ ಮತ್ತು ಮಾನವ ದಿನಗಳ ಲಭ್ಯತೆಯ ಆಧಾರದ ಮೇಲೆ ಕೆಲಸವನ್ನು ಗುರುತಿಸಿ ಹಂಚಿಕೆ ಮಾಡುತ್ತಾರೆ” ಎಂದರು.
“ಆರೋಪಗಳಲ್ಲಿ ಹುರುಳಿರುವುದು ಕಂಡುಬಂದರೆ ಔಪಚಾರಿಕ ದೂರು ದಾಖಲಿಸಲಾಗುವುದು ಮತ್ತು ಔಪಚಾರಿಕವಾಗಿ ತನಿಖೆ ಕೈಗೊಳ್ಳಲಾಗುವುದು” ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.
ಯಾದಗಿರಿ ತಾಲೂಕಿನ ಮಲ್ದಾರ್ ಗ್ರಾಮದ ಕಾಲುವೆಯೊಂದರ ಬಳಿ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದಾಗ ತೆಗೆದ ಫೋಟೋ ಇದಾಗಿದ್ದು, ಬಳಿಕ ಅದನ್ನು ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸರ್ವೀಸ್ ಮೂಲಕ ಅಪ್ಲೋಡ್ ಮಾಡಲಾಗಿತ್ತು. ಮಹಿಳಾ ಕಾರ್ಮಿಕರನ್ನು ಒಳಗೊಂಡ ಈ ತಂಡವು ಕಾಮಗಾರಿಯನ್ನು ಪೂರ್ಣಗೊಳಿಸಿದೆ ಎಂದು ಪ್ರತಿಪಾದಿಸಿದ್ದರು. ಮಹಿಳಾ ವೇಷ ಧರಿಸಿದ ಪುರುಷರು ನಕಲಿ ಹಾಜರಾತಿ ಛಾಯಾಚಿತ್ರಗಳಿಂದ ಅಕ್ರಮವಾಗಿ ಒಟ್ಟು ₹3 ಲಕ್ಷ ಲಾಭ ಪಡೆದಿದ್ದಾರೆಂದು ವರದಿಯಾಗಿದೆ.
ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಗ್ರಾಪಂಗಳಲ್ಲಿ ಮನರೇಗಾ ಯೋಜನೆ ಜಾರಿಗೆ ತಂದಿದ್ದು, ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಯಂತ್ರಗಳ ಸಹಾಯದಿಂದ ನಡೆಸದೆ, ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಕೂಲಿ ದೊರೆಯುವಂತೆ ಮಾಡಬೇಕು ಎಂಬುದು ಯೋಜನೆಯ ಉದ್ದೇಶ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಏ.12ರಂದು ಕಾಂತರಾಜ್ ವರದಿ ಕುರಿತ ವಿಚಾರ ಸಂಕಿರಣ, ʼಅರಿವೇ ಅಂಬೇಡ್ಕರʼ ಸಂಚಿಕೆ ಬಿಡುಗಡೆ
ಮನರೇಗಾ ಕೂಲಿಯನ್ನು 2025-26ನೇ ಸಾಲಿನ ಆರ್ಥಿಕ ವರ್ಷದಿಂದ ಏರಿಕೆ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆದೇಶವನ್ನು ಹೊರಡಿಸಿದೆ. ಆದ್ದರಿಂದ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮನರೇಗಾ ಯೋಜನೆಯಡಿ ಕಾರ್ಮಿಕರು ಪಡೆಯುವ ಕೂಲಿ ₹349ರಿಂದ 370ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಬಡಜನರಿಗೆ ಸ್ವಲ್ಪವಾದರೂ ಮನರೇಗಾ ಯೋಜನೆ ಅನುಕೂಲವಾಗಿದೆ.
ಮಹಿಳೆಯರ ವೇಷ ಧರಿಸಿ ಅಕ್ರಮ ಎಸಗಿರುವ ಪ್ರಕರಣವನ್ನು ಕಂಡಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ)ಯ ಪ್ರಯೋಜನಗಳು ಸಂಕಷ್ಟದಲ್ಲಿರುವ ರೈತರಿಗೆ ಹಾಗೂ ನಿಜವಾದ ಕೂಲಿ ಕಾರ್ಮಿಕರಿಗೆ ತಲುಪುವಲ್ಲಿ ವಿಫಲವಾಗಿವೆ. ಅಕ್ರಮಗಳು, ಭ್ರಷ್ಟಾಚಾರ ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಲೇ ಇದ್ದು, ಪ್ರಭಾವಿ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳ ಪಾಲಾಗುತ್ತಿವೆ.