ಕೆಎಂಎಫ್ ಮತ್ತು ವಿದ್ಯುತ್ ಕಂಪನಿಗಳ ದಕ್ಷತೆಯನ್ನು ಹೆಚ್ಚಿಸಿ, ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚ ನಿಯಂತ್ರಣ ಮಾಡುವ ಕಡೆಗೆ ಸರ್ಕಾರ ಗಮನ ಹರಿಸಬೇಕು. ಅಗತ್ಯ ವಸ್ತುಗಳು, ಹಾಲು ಮತ್ತು ವಿದ್ಯುತ್ ದರ ಏರಿಕೆಗಳು ಇತರೆ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಜನಸಾಮಾನ್ಯರು ಹಾಗೂ ಕೂಲಿಕಾರ್ಮಿಕರಿಗೆ ಇದರ ಬಿಸಿ ತಟ್ಟುತ್ತಿದೆ. ಇದರಿಂದ ಬೇಸತ್ತ ಜನಸಾಮಾನ್ಯರು, ಪ್ರಗತಿಪರ ಸಂಘಟನೆಗಳು ಬೆಲೆ ಏರಿಕೆ ಹಿಂಪಡೆಯುವಂತೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನೂ ನಡೆಸುತ್ತಿವೆ.
ಹಾಲಿನ ದರ ₹4, ವಿದ್ಯುತ್ ದರ ಯುನಿಟ್‌ಗೆ 35 ಹೈಸೆ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆ ಲೀಟರ್‌ಗೆ ₹2ನಂತೆ ಹಲವು ವಸ್ತುಗಳ ಬೆಲೆಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಕೇಂದ್ರ ಸರ್ಕಾರವೂ ಕೂಡ ಎಲ್‌ಪಿಜಿ ಸಿಲಿಂಡರ್ ದರವನ್ನು ₹50 ಹಾಗೂ ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ₹2ಗೆ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಏಕಾಏಕಿ ಡೀಸೆಲ್, ಪೆಟ್ರೋಲ್ ಮತ್ತು ಅನಿಲದ ಬೆಲೆಯನ್ನು ಏರಿಸಿರುವುದು ಆಘಾತಕಾರಿಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಅತ್ಯಂತ ಕಡಿಮೆ ಇದ್ದು, ದೇಶದಲ್ಲಿ ಮಾತ್ರ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಲಾಗಿದೆ. ಇದರಿಂದಾಗಿ ಒಂದೇ ದಿನದಲ್ಲಿ 30,000 ಕೋಟಿ ರೂಪಾಯಿ, ಜತೆಗೆ ಬಡವರಿಗೆ ಆಸರೆಯಾಗಿರುವ ಅಡುಗೆ ಅನಿಲದ ಬೆಲೆಯನ್ನೂ ಏರಿಕೆಯಿಂದ ಸಂಗ್ರಹವಾದ 7,200 ಕೋಟಿ ರೂಪಾಯಿ ಕೇಂದ್ರ ಸರ್ಕಾರದ ಖಜಾನೆಗೆ ಬಂದಿದೆ ಎಂಬುದಾಗಿ ವರದಿಗಳು ಹೇಳುತ್ತಿವೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಬದುಕಿಗೆ ಭಾರವಾಗಿದೆ. ಇದರ ಪರಿಣಾಮ ಎಲ್ಲ ಹಂತದಲ್ಲೂ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಮುಂದಿನ ದಿನಗಳಲ್ಲಿ ಹೋಟೆಲ್‌ಗಳಲ್ಲಿ ಕಾಫಿ, ತಿಂಡಿ ಬೆಲೆ, ಜನಸಾಮಾನ್ಯ ಉಪಯೋಗಿಸುವ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಈ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ.
ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರವು ಏರಿಕೆ ಮಾಡಿರುವುದರಿಂದ ಲೀಟರ್‌ಗೆ ₹2 ಹೆಚ್ಚಳವಾಗಿದೆ. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ಸುಂಕವನ್ನು ಶೇ.5ರಷ್ಟು ಏರಿಕೆ ಮಾಡಿದೆ. ಡೀಸೆಲ್ ಮತ್ತು ಹೆದ್ದಾರಿಗಳೆರಡೂ ಸಾರ್ವಜನಿಕ ಸಾರಿಗೆ ಮತ್ತು ಸರಕು ಸಾಗಾಣಿಕೆಗಳ ಮೇಲೆ ಪರಿಣಾಮ ಬೀರಲಿವೆ. ಇದರಿಂದ ಪ್ರಯಾಣ ದರಗಳು, ಸಾಗಾಣಿಕೆ ವೆಚ್ಚ ಏರಿಕೆಯಾಗಿ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ತುಟ್ಟಿಯಾಗಲಿದೆ.
ಇತ್ತೀಚೆಗಷ್ಟೆ ರೈತರ ಹಬ್ಬವಾದ ಯುಗಾದಿ ಹಾಗೂ ಪವಿತ್ರ ರಂಝಾನ್ ಹಬ್ಬಗಳು ಬಂದವು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಗಳಿಲ್ಲ, ರೈತರ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲ. ಜನರು ಅಗತ್ಯ ವಸ್ತುಗಳನ್ನು ಖರೀದಿಸಿ, ಒಳ್ಳೆ ಬಗೆ ಬಗೆಯ ಅಡುಗೆ ಮಾಡಿ, ಸಂತೋಷದಿಂದ ಒಂದೊಳ್ಳೆ ಹಬ್ಬದ ಊಟ ಮಾಡಲು ಸಾಧ್ಯವಾಗಿಲ್ಲ, ಮಕ್ಕಳಿಗೆ ಹೊಸ ಬಟ್ಟೆಗಳನ್ನು ತಂದುಕೊಡಲು ಆಗುತ್ತಿಲ್ಲ. ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸಿ ಒಳ್ಳೆ ಶಿಕ್ಷಣ ಕೊಡಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇತ್ತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣವೂ ದೊರೆಯುತ್ತಿಲ್ಲ. ಇದರಿಂದ ಬಡವರ ಮಕ್ಕಳು, ತಳಸಮುದಾಯಗಳ ಮಕ್ಕಳು ವಿದ್ಯಾಭ್ಯಾಸವನ್ನು ಹಾಗೂ ಉನ್ನತ ಶಿಕ್ಷಣದ ಕನಸನ್ನು ಚಿವುಟಿ ಹಾಕುವಂತಾಗಿದೆ.
ಮಲ್ಟಿ ನ್ಯಾಷನಲ್ ಕಾರ್ಪೊರೇಟ್‌ಗಳ ಪರವಿರುವ ಸರ್ಕಾರಗಳು
ಎಲ್ಲ ವಸ್ತುಗಳ ಮೇಲೆ ಜಿಎಸ್‌ಟಿ ಹಾಕ್ತಾರೆ, ಬೆಲೆ ಏರಿಕೆ ಮಾಡ್ತಾರೆ. ಆದರೆ, ಕಾರ್ಮಿಕರ ಸಂಬಳವನ್ನು ಹೆಚ್ಚಳ ಮಾಡುತ್ತಿಲ್ಲ. ರೈತರು ತಾವು ಬೆಳೆದ ಬೆಳೆಗಳಾದ ಈರುಳ್ಳಿ ಹಾಗೂ ಟೊಮೆಟೊ ಸೇರಿದಂತೆ ಇತರೆ ಬೆಳೆಗಳಿಗೆ ಬೆಲೆ ಇಲ್ಲದೆ ಬೀದಿಗೆ ಸುರಿಯುತ್ತಿದ್ದಾರೆ. ಬೆಳೆಯಿಂದ ನಷ್ಟ ಅನುಭವಿದ ರೈತರು ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಸಾವಿನ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದರೂ ಕೂಡ ಸರ್ಕಾರಗಳು ರೈತರಿಗೆ ಸ್ಪಂದಿಸುತ್ತಿಲ್ಲ. ರೈತರಿಗೆ MSP ನೀಡುತ್ತಿಲ್ಲ. ಬದಲಿಗೆ ಮಲ್ಟಿ ನ್ಯಾಷನಲ್ ಕಾರ್ಪೊರೇಟ್‌ಗಳ ಪರ ಇದ್ದಾರೆ. ಒಟ್ಟಾರೆಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರದ ಬಿಜೆಪಿ ಸರ್ಕಾರಗಳೆರೆಡೂ ಒಂದೇ ನಾಣ್ಯದ ಎರಡು ಮುಖಗಳು. ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಒಬ್ಬರ ಮೇಲೊಬ್ಬರು ಗೊಬ್ಬರದ ಬಂಡಿ ಹೊಡೆದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ಕೆಕೆಆರ್‌ಎಸ್‌ನ ಶರಣಬಸಪ್ಪ ಮಮಶೆಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹೈನುಗಾರರ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಪಶು ಆಹಾರ, ಮೇವು, ಪಶು ವೈದ್ಯಕೀಯ ವೆಚ್ಚ ಮೊದಲಾದ ಹೈನುಗಾರಿಕೆಯ ಒಳಸುಳಿಗಳ ವೆಚ್ಚವನ್ನು ಸರ್ಕಾರ ಕಡಿತ ಮಾಡಬೇಕಿತ್ತು. ಆದರೆ ಸಂಸ್ಕರಿಸಿದ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಅಡುಗೆ ಅನಿಲದ ದರವನ್ನು ಏಕಾಏಕಿ ಏರಿಕೆ ಮಾಡಿದೆ. ಆಳುವ ಸರ್ಕಾರಗಳು ಪ್ರತಿಬಾರಿಯೂ ವೆಚ್ಚದ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ವರ್ಗಾಯಿಸುವುದು ಸರಿಯಲ್ಲ” ಎಂದು ಬೆಲೆ ಏರಿಕೆಯನ್ನು ಖಂಡಿಸಿದರು.
“ರೈತರು ಕಷ್ಟಪಟ್ಟು ವರ್ಷಪೂರ್ತಿ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ದರೆ ಸರಿಯಾದ ಬೆಲೆಯಿಲ್ಲದೆ ಕೇಳಿದ ಬೆಲೆಗೆ ಕೊಟ್ಟು ಮುಖ ಸಪ್ಪೆಮುಖ ಮಾಡಿಕೊಂಡು ಹಿಂದಿರುಗಬೇಕು. ಕೆಲವೊಮ್ಮೆ ವಾಹನದ ಬಾಡಿಗೆಯನ್ನೂ ಭರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ರೈತರ ಮೇಲೆ ಹೊರೆಯಾಗುತ್ತದೆ. ಆದರೆ ಅದೇ ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಪ್ಯಾಕೆಟ್ ಮಾಡಿ ಎಂಆರ್‌ಪಿ ಬೆಲೆ ಹಾಕಿರುತ್ತಾರೆ. ಗ್ರಾಹಕರು ಅಷ್ಟು ಬೆಲೆಯನ್ನೂ ಕೊಟ್ಟು ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಇದರಿಂದ ಗ್ರಾಹಕರಿಗೆ ಅಂದರೆ, ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಹೊರೆಯಾಗುತ್ತದೆ” ಎಂದು ಹೇಳಿದರು.
“ಕೇಂದ್ರ ಸರ್ಕಾರ ಮನರೇಗಾ ಕಾರ್ಮಿಕರಿಗೆ 7 ರೂಪಾಯಿ ಹೆಚ್ಚಳ ಮಾಡಿ ಮೂಗಿಗೆ ತುಪ್ಪದ ವಾಸನೆ ತೋರಿಸಿದ್ದಾರೆ. MMS, GPS ಅಂತೇಳಿ ಕಾರ್ಮಿಕರನ್ನು ಸತಾಯಿಸುತ್ತಾರೆ. ಕಾರ್ಮಿಕರು ಆರು ವಾರಗಳು ಕೆಲಸ ಮಾಡಿದ್ದರೆ, ಕೇವಲ ಒಂದು ವಾರದ ವೇತನ ನೀಡಿದ್ದಾರೆ. ಆರ್‌ಡಿಪಿಆರ್ ಮಂತ್ರಿ, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನವನ್ನು ಬಿಡುಗಡೆ ಮಾಡಿಸಬಹುದಿತ್ತು. ಆದರೆ ರಾಜ್ಯ ಸರ್ಕಾರ ಇಂತಹ ಪ್ರಯತ್ನವನ್ನು ಮಾಡಲಿಲ್ಲ” ಎಂದು ಆರೋಪಿಸಿದರು.
“ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಂಡು, ಬಾಕಿಯಿರುವ ಮನರೇಗಾ ಕಾರ್ಮಿಕರ ಹಣವನ್ನು ಬಿಡುಗಡೆ ಮಾಡಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು. ಈ ಮೂಲಕವಾದರೂ ಅವರನ್ನು ಅಧಿಕಾರಕ್ಕೆ ತಂದಿರುವ ಮತದಾರರ ಋಣ ತೀರಿಸಿ ಕೃತಜ್ಞರಾಗಬೇಕು” ಎಂದು ಆಗ್ರಹಿಸಿದರು.
ಡಿಎಸ್‌ಎಸ್ ಮುಂಂಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿರುವುದು ಶ್ಲಾಘನೀಯ. ಇದರಿಂದ ಬಡಬಗ್ಗರಿಗೆ ನಿಜವಾಗಿಯೂ ಅನುಕೂಲವಾಗುತ್ತದೆ. ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಪ್ರತಿಯೊಬ್ಬರಿಗೂ ತಟ್ಟುತ್ತಿದೆ. ಇದರಿಂದ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಲ್ಲಿ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ” ಎಂದು ಹೇಳಿದರು.
“ನಮ್ಮಿಂದ ತೆರಿಗೆ ಪಡೆದುಕೊಳ್ಳುತ್ತಾರೆ. ಸರ್ಕಾರಿ ನೌಕರರ ಸಂಬಳ ಜಾಸ್ತಿ ಮಾಡ್ತಾರೆ. ಆದರೆ ನಮಗೆ ಕೂಲಿ ಹೆಚ್ಚಾಗುವುದಿಲ್ಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇರುತ್ತದೆ ನಾವು ಹೇಗೆ ಬದುಕಬೇಕು. ಎಷ್ಟು ಬಾರಿ ಸಂಬಳ ಹೆಚ್ಚಳ ಮಾಡಿದರೂ ಸರ್ಕಾರಿ ನೌಕರರು ಸರಿಯಾಗಿ ಕೆಲಸ ಮಾಡುಯವುದಿಲ್ಲ, ಲಂಚ, ಭ್ರಷ್ಟಾಚಾರರಗಳು ಕಡಿಮೆಯಾಗಿಲ್ಲ” ಎಂದು ದೂರಿದರು.
“ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೂಡ ಜನಪರ ಆಡಳಿತ ನಡೆಸುವಲ್ಲಿ ಸೋತಿದ್ದಾರೆ. ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ನಿಜವಾಗಿಯೂ ಜನಪರ ಯೋಚಿಸುವುದಾದರೆ ಮೋದಿ ಸಾಹೇಬರಿಗೆ ಹೇಳಿ ಅಡುಗೆ ಅನಿಲದ ದರವನ್ನು ಕಡಿಮೆ ಮಾಡಿಸಲಿ, ಎಂದ ಅವರು ಏನಾದರೂ ಮಾಡಿಕೊಳ್ಳಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಉತ್ತಮ ಆರೋಗವನ್ನು ಉಚಿತವಾಗಿ ನೀಡಲಿ. ಈ ಸದ್ಯ ಬೆಲೆ ಏರಿಕೆ ಮಾಡಿರುವುದನ್ನು ಕೂಡಲೇ ಹಿಂಪಡೆಯಲಿ” ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಗರು
ಕೇಂದ್ರ ಸರ್ಕಾರ ರಾತ್ರೋರಾತ್ರಿ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕಿಗೆ ಬರೆ ಎಳಿದಿದೆ. ಒಂದು ಕಡೆ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿರುವ ಬಗ್ಗೆ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಬೆಲೆ ಏರಿಕೆ ವಿರುದ್ಧ ಮಾತನಾಡುತ್ತಿಲ್ಲ. ಜತೆಗೆ ಬಿಜೆಪಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ಕ್ರಮವನ್ನು ಸಮರ್ಥನೆ ಮಾಡುತ್ತಿರುವುದು ನಾಚಿಕೆಗೇಡುತನ.
ಅಡುಗೆ ಅನಿಲದ ಬೆಲೆ ಏರಿಕೆಯಿಂದ ಇನ್ನಷ್ಟು ಹೊರೆಯಾಗಿದ್ದು, ಗ್ರಾಮೀಣ ಪ್ರದೇಶದ ಜೀವನ ಸ್ಥಿತಿ ಬೀದಿಗೆ ಬೀಳುವಂತಾಗಿದೆ. ₹820 ಇದ್ದ ಸಿಲಿಂಡರ್ ಬೆಲೆ ಏರಿಕೆಯಿಂದ ಸಿಲಿಂಡರ್ ಮನೆಗೆ ತರುವಷ್ಟರಲ್ಲಿ ₹860 ಆಗುತ್ತದೆ. ₹110 ಇದ್ದ ಅಡುಗೆ ಎಣ್ಣೆ ಬೆಲೆ ಈಗ ₹125ರಿಂದ ₹130 ದಾಟಿದೆ. ಅಕ್ಕಿ ಬೆಲೆ ಗಗನಕ್ಕೇರಿದೆ, ಕೆಜಿ ಅಕ್ಕಿಗೆ ಕಡಿಮೆ ಅಂದರೂ 50ರಿಂದ 60 ರೂಪಾಯಿ. ಅಗತ್ಯ ವಸ್ತುಗಳನ್ನು ಖರೀದಿಸಲು ಜನಸಾಮಾನ್ಯರು ಬಡಬಗ್ಗರು ಹೈರಾಣಾಗುವಂತಾಗಿದೆ.
ಇನ್ನೊಂದೆಡೆ ವಿದ್ಯುತ್ ದರವನ್ನು ಮತ್ತೆ ಪರಿಷ್ಕರಣೆ ಮಾಡಲಾಗಿದೆ. ಸದ್ಯಕ್ಕೆ ಗೃಹಜ್ಯೋತಿ ಯೋಜನೆ ಇರುವುದರಿಂದ ಬಹುಪಾಲು ಗ್ರಾಹಕರಿಗೆ ಸಮಸ್ಯೆ ಆಗದೇ ಇರಬಹುದು. ಆದರೆ ವಾಣಿಜ್ಯ ಮತ್ತು ಸಣ್ಣ ಕೈಗಾರಿಕೆಗಳಿಗೆ ಇದು ಹೊರೆಯಾಗಲಿದೆ. ಕೆಎಂಎಫ್ ಮತ್ತು ವಿದ್ಯುತ್ ಕಂಪನಿಗಳ ದಕ್ಷತೆಯನ್ನು ಹೆಚ್ಚಿಸಿ, ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚ ನಿಯಂತ್ರಣ ಮಾಡುವ ಕಡೆಗೆ ಸರ್ಕಾರ ಗಮನ ಹರಿಸಬೇಕು. ಅಗತ್ಯ ವಸ್ತುಗಳು, ಹಾಲು ಮತ್ತು ವಿದ್ಯುತ್ ದರ ಏರಿಕೆಗಳು ಇತರೆ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜನಸಾಮಾನ್ಯರಿಗೆ ಕೂಲಿ ಕಾರ್ಮಿಕರಿಗೆ, ಬಡವರಿಗೆ ತುಂಬಾ ಹೊರೆಯಾಗುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಜನಸಾಮಾನ್ಯರು ಅದರ ಲಾಭ ಪಡೆಯುತ್ತಿದ್ದಾರೆ. ಆದರೂ ಆಗಾಗ್ಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಪಂಚ ಗ್ಯಾರಂಟಿ ಯೋಜನೆ ಅದರ ಮಹತ್ವವನ್ನು ಕಳೆದುಕೊಳ್ಳುತ್ತಿದೆ ಎಂಬ ಆರೋಪವನ್ನು ಸರ್ಕಾರ ಎದುರಿಸಬೇಕಾಗಿದೆ. ಜನ ಕೂಡ ಬೆಲೆ ಏರಿಕೆಯಾದಾಗಲೆಲ್ಲ ಸರ್ಕಾರವನ್ನು ಟೀಕಿಸುವುದು, ಪ್ರತಿಭಟನೆಗಳನ್ನು ನಡೆಸುವುದು ಕಂಡುಬರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ರೈತರು ಮತ್ತು ಗ್ರಾಹಕರು ಇಬ್ಬರ ಹಿತವನ್ನೂ ರಕ್ಷಿಸುವಂತಹ ಸಮತೋಲನದ ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.