ರಾಜ್ಯ ಸರ್ಕಾರಕ್ಕೆ ಕೊಡಬೇಕಾದ ತೆರಿಗೆ ಹಣ ನೀಡದ ಕೇಂದ್ರ ಸರ್ಕಾರ ಮಾಡಿರುವ ತಾರತಮ್ಯ ನೀತಿಯ ಫಲವಾಗಿ ಬೆಲೆ ಏರಿಕೆ ಕಂಡಿದೆ. ಜನಕ್ರೋಶದಿಂದ ಕೇಂದ್ರ ಸರ್ಕಾರಕ್ಕೆ ಕಪಾಳಮೋಕ್ಷವಾಗಿದೆ ಎಂದು ಕಾಂಗ್ರೆಸ್ ಮುಖಂಡ ಶಂಕರಾನಂದ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು ಪುರ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮಾನ ಮರ್ಯಾದೆ ಇದ್ದರೆ ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಮಾಡಲಿ ಎಂದು ಕಿಡಿಕಾರಿದರು.
ತಾರತಮ್ಯ ನೀತಿ ಅನುಸರಿಸುವ ಕೇಂದ್ರ ರಾಜ್ಯದಿಂದ ತೆರಿಗೆ ಹಣವನ್ನು 5 ಲಕ್ಷ ಕೋಟಿ ರೂಗಳಲ್ಲಿ ಪಡೆದು ಮರಳಿ ನಮಗೆ ಕೇವಲ 50 ಸಾವಿರ ಕೋಟಿ ನೀಡುತ್ತಿದೆ. ನಂತರ ಕಾಂಗ್ರೆಸ್ ಜನರಿಗೆ ತೊಂದರೆ ನೀಡಿದೆ ಎನ್ನುವ ಕೇಂದ್ರದ ಈ ಮಸಲತ್ತು ಆಟ ಬಗ್ಗೆ ಜನರಿಗೆ ತಿಳಿದಿದೆ ಎಂದ ಅವರು ರಾಜ್ಯ ರಾಷ್ಟ್ರ ಸಂವರ್ಧಿ ಪಟ್ಟಿ ಪ್ರಕಾರ ಶೇಕಡಾ 33 ರಷ್ಟು ತೆರಿಗೆ ಹಣ ಮರಳಿ ಬರಬೇಕಿದೆ. ಈ ರೀತಿ ಬಂದಿದ್ದರೆ ಬಜೆಟ್ ನ ಅರ್ಧ ಹಣ ಇಲ್ಲಿಯೇ ಉತ್ಪತ್ತಿ ಆಗುತ್ತಿತ್ತು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆ ಖಂಡನೀಯ. ಅರ್ಥಗರ್ಭಿತ ಮಾತುಗಳು ಅವರ ಹೇಳಿಕೆಯಲ್ಲಿಲ್ಲ. ಮೋದಿ ರಾಹುಲ್ ಗಾಂಧಿ ಅವರನ್ನು ಹೋಲಿಕೆ ಮಾಡಿ ಮಾತನಾಡಿ ಸಿಲೆಂಡರ್ ಬೆಲೆ 2500 ಆಗುತ್ತಿತ್ತು ಎನ್ನುವ ವಿಜಯೇಂದ್ರ ಅವರು ಅರ್ಥಶಾಸ್ತ್ರ ತಿಳಿದು ಮಾತನಾಡಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆ , ತೈಲ ಬೆಲೆ ಬಗ್ಗೆ ತಿಳಿಯಿರಿ ಎಂದ ಅವರು ಬೆಲೆ ಏರಿಕೆಗೆ ಕೇಂದ್ರ ಕಾರಣ ಎಂಬ ಅಂಶ ಮೊದಲು ತಿಳಿದು ಮಾತನಾಡಬೇಕಿದೆ. ಕೇವಲ ರಾಜ್ಯ ಸರ್ಕಾರ ದೂಷಿಸುವ ಮೊದಲು ಕೇಂದ್ರ ಸರ್ಕಾರ ನೀಡಿದ ತೊಂದರೆ ಬಗ್ಗೆ ಚಕಾರ ಎತ್ತಲ್ಲ ಎಂದರು.
ಮೈಸೂರು ರಸ್ತೆ ವಾಹನ ದಟ್ಟಣೆಯ ರಸ್ತೆ. ಇಲ್ಲಿಗೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಸ್ವಾಗತಾರ್ಹ. ಕ್ರಿಯಾಶೀಲ ಸಚಿವರು ಜಿಲ್ಲೆಯಲ್ಲಿ ಅಭಿವೃದ್ದಿ ಕೆಲಸ ಮಾಡಿರುವುದು ಸಂತೋಷದ ವಿಚಾರ. ಈ ಸೇತುವೆ ಬಗ್ಗೆ ಹಿಂದೆ ಕಾಂಗ್ರೆಸ್ ಸಂಸದರು ಪ್ರಯತ್ನಪಟ್ಟಿದ್ದರು. ಹಾಗೆಯೇ ನೆನೆಗುದಿಗೆ ಬೀಳುವ ಮುನ್ನ ಸೋಮಣ್ಣ ಅವರ ಕಾರ್ಯ ವೈಖರಿ ಮೆಚ್ಚುವಂತದ್ದು ಎಂದು ಶ್ಲಾಘಿಸಿದ ಅವರು ವಿರೋಧಪಕ್ಷ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದೆ. ಆದರೆ ಶಾಸಕರ ವೇತನ ಹಾಗೂ ಇನ್ನಿತರ ಭತ್ಯೆ ಹೆಚ್ಚಳ ಬಗ್ಗೆ ಚಕಾರ ಎತ್ತಲ್ಲ. ಬಿಜೆಪಿ, ಜೆಡಿಎಸ್ ಶಾಸಕರು ನಮಗೆ ಬೇಕಿಲ್ಲ ಎಂದು ತಿರಸ್ಕರಿಸಬೇಕಿತ್ತು. ಜೊತೆಗೆ ನಿಗಮ ಮಂಡಳಿ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅಧಿಕಾರ ವಿಕೇಂದ್ರೀಕರಣ ಬಗ್ಗೆ ಪಕ್ಷ ಆಲೋಚಿಸಿ ತೀರ್ಮಾನಿಸಲಿದೆ ಎಂದರು.