ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ವರ್ತಿ ಗ್ರಾಮದ ರೇವಣಸಿದ್ದೇಶ್ವರ ನೀರಾವರಿ ಕಚೇರಿಯಲ್ಲಿ ಮಾತನಾಡಿದ ಅವರು, “ಇಂಡಿ, ಚಡಚಣ ತಾಲೂಕು ವ್ಯಾಪ್ತಿಯ ಬಹುತೇಕ ಗ್ರಾಮೀಣ ಭಾಗದಲ್ಲಿ ಮತ್ತು ವಸತಿ ಪ್ರದೇಶಗಳಿಗೆ ನೀರಿನ ತೊಂದರೆ ಇದೆ. ಅಧಿಕಾರಿಗಳು ಕನಿಷ್ಠ 15 ದಿನಗಳವರೆಗೆ ತೀಡಗುಂದಿ ಶಾಖಾ ಕಾಲುವೆಯ ಮೂಲಕ ನೀರಿನ ಸಮಸ್ಯೆ ನಿವಾರಿಸಲು ಶ್ರಮಿಸಬೇಕಾಗಿದೆ. ಕುಡಿಯುವ ನೀರಿಗಾಗಿಯೇ ಪದೇ ಪದೇ ಸಭೆಯನ್ನು ಮಾಡಿ ಎಲ್ಲಿ ತೊಂದರೆ ಇದೆ ಅಲ್ಲಿ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬೇಕು. ಕಾಲುವೆಗಳಿಗೆ ಪಂಪ್ಸೆಟ್ ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇವಲ ಕುಡಿಯುವ ನೀರಿಗಾಗಿ ಮಾತ್ರ ಕಾಲುವೆ ನೀರನ್ನು ಹರಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 15 ದಿನಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆದು ಸಭೆ ಮಾಡಿಸಿ ಕ್ರಮ ಕೈಗೊಳ್ಳುವಂತೆ” ಸೂಚಿಸಿದರು.
ಇದನ್ನೂ ಓದಿ: ವಿಜಯಪುರ | ಬೆಳೆ ಹಾನಿ; ವಿಮಾ ಕಂಪನಿ ವಿರುದ್ಧ ರೈತರ ಆಕ್ರೋಶ
ಸಭೆಯಲ್ಲಿ ಆಲಮಟ್ಟಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತ ಮುಖ್ಯ ಎಂಜಿನಿಯರ್ ಡಿ ಬಸವರಾಜ, ಎಂಜಿನಿಯರ್ ಗೋವಿಂದ ರಾಠೋಡ, ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ರೆಡ್ಡಿ ಪಾಟೀಲ, ಕಾರ್ಯಪಾಲಕ ಎಂಜಿನಿಯರ್ ರಿಯಾಜ್, ಸಹಾಯಕ ಎಂಜಿನಿಯರ್ ವಿಜಯಕುಮಾರ್ ಇದ್ದರು.