ಹಣದ ವಿಷಯಕ್ಕೆ ಸಂಬಂಧಿಸಿದ ವಿವಾದದಿಂದಾಗಿ ಯುವಕನೊಬ್ಬನನ್ನು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿರುವ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಜಿ ಬೊಮ್ಮನಹಳ್ಳಿ ಗ್ರಾಮದಲ್ಲಿ ಯುವಕನನ್ನು ಧ್ವಜಸ್ಥಂಭಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲ್ಲೆಗೊಳಗಾದ ಯುವಕನನ್ನು ಅದೇ ಗ್ರಾಮದ ನಾಗೇಶ್ ಎಂದು ಹೇಳಲಾಗಿದೆ. ನಾಗೇಶ್ ಮತ್ತು ಗ್ರಾಮದ ಚಲುವೇಶ್ ನಡುವೆ ಹಣದ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ನಾಗೇಶ್ ಚಾಕು ಹಿಡಿದುಕೊಂಡು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಕುಪಿತಗೊಂಡ ಗ್ರಾಮಸ್ಥರು ನಾಗೇಶ್‌ನನ್ನು ಕಂಬಕ್ಕೆ ಕಟ್ಟಿ, ಹಲ್ಲೆಗೈದಿದ್ದಾರೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ; ನಾಗೇಶ್ ಅವರನ್ನು ಧ್ವಜಸ್ಥಂಭಕ್ಕೆ ಕಟ್ಟಲಾಗಿದ್ದು, ಕೆಲವರು ಕಪಾಳಕ್ಕೆ ಹೊಡೆದಿದ್ದಾರೆ. ಆತನ ಮೇಲಿನ ಹಲ್ಲೆಯನ್ನು ಗ್ರಾಮದ ಮುಖಂಡರು ತಡೆಯಲು ಯತ್ನಿಸಿದ್ದಾರೆ. ನಾಗೇಶ್‌ನನ್ನು ರಕ್ಷಿಸಿದ್ದಾರೆ.
ನಾಗೇಶ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.