ಎರೆಡು ಬಾರಿ ಮುಂದೂಡಲಾಗಿದ್ದ ಸಚಿವ ಸಂಪುಟ ಸಭೆ ಇದೇ ಏ. 24 ರಂದು ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದೆ.
ಫೆ. 15 ಹಾಗೂ ಫೆ. 17 ರಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ,ಬೇರೆ ಬೇರೆ ಕಾರಣಗಳಿಂದ ಸಭೆ ನಡೆದಿರಲಿಲ್ಲ. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮೊದಲ ಬಾರಿಗೆ ನಡೆಸಿ ಹಳೇ ಮೈಸೂರು ಪ್ರಾಂತ್ಯದ ಗಮನ ಸೆಳೆಯುವ ನಿಟ್ಟಿನಲ್ಲಿ ಆರಂಭದಿಂದಲೇ ಪ್ರಯತ್ನ ನಡೆದಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಅವರು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಸಭೆ ನಡೆಸಿ ಸಚಿವ ಸಂಪುಟ ಸಭೆಗೆ ಅಗತ್ಯವಿರುವ ವ್ಯವಸ್ಥೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಆದರೆ ಆರೋಗ್ಯ, ನಿರಾವರಿ, ಮೂಲಭೂತ ಸೌಲಭ್ಯ ಒದಗಿಸಲು ನೆರವಾಗುತ್ತದೆ ಎಂಬ ನಿರೀಕ್ಷೆಯಲ್ಲಿದೆ.
ಅದರಲ್ಲೂ ಹೇಳಿ ಕೇಳಿ ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದುಳಿದಿದೆ. ಜನಪ್ರತಿನಿಧಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುವ ಸಂದರ್ಭವಿದ್ದಾಗ ಸಿದ್ದರಾಮಯ್ಯ ಅವರು ನಗರ ಪ್ರವೇಶ ಮಾಡಿ ಕಳಂಕ ತೊಡೆದು ಹಾಕಿದ್ದರು.
ಮತ್ತೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುವುದರಿಂದ ಜಿಲ್ಲೆಗೆ ಪೂರಕವಾದ ಅಭಿವೃದ್ಧಿ ವಿಚಾರದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಜಿಲ್ಲೆಯ ಜನಪ್ರತಿನಿದಿಗಳು, ಅಧಿಕಾರಿಗಳು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಿಲ್ಲೆಯ ಇಂದೂಧರ ಹೊನ್ನಾಪುರ, ಹರಿಹರ ಆನಂದ ಸ್ವಾಮಿ ಸೇರಿದಂತೆ 15 ಮಂದಿ ಸಾಧಕರಿಗೆ ‘ ಅಂಬೇಡ್ಕರ್ ಪ್ರಶಸ್ತಿ ‘
ಈ ನಡುವೆ ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಮಾಡಲು ಚಿಂತಿಸಿರುವ ಸರ್ಕಾರದ ಗಮನ ಸೆಳೆಯಲು ಪ್ರಸ್ತಾಪ ತಳ್ಳಿ ಹಾಕುವಂತೆ ಒತ್ತಡ ಹೇರಲು, ಜಿಲ್ಲೆಯ ಪರಿಸರವಾದಿಗಳು, ಸಾಮಾಜಿಕ ಹೋರಾಟಗಾರರು ಚಿಂತನೆ ನಡೆಸಿದ್ದಾರೆ.