“ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ 2023, 2024 ಮತ್ತು 2025ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿಆರ್ ಅಂಬೇಡ್ಕರ್ ಪ್ರಶಸ್ತಿಗೆ 15 ಜನರನ್ನು ವಿವಿಧ ಕ್ಷೇತ್ರದ ಸಾಧಕರೆಂದು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಈ 15 ಜನ ಪ್ರಶಸ್ತಿ ಪುರಸ್ಕೃತರು ಛಲವಾದಿ ಜಾತಿ ಒಂದಕ್ಕೇ ಸೇರಿದವರನ್ನು ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಆಯ್ಕೆಯಾಗುವಂತೆ ನೋಡಿಕೊಂಡು , ಸಾಮಾಜಿಕ ನ್ಯಾಯ ಮರೆತಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪನವರು ತಕ್ಷಣ ರಾಜಿನಾಮೆ ನೀಡಬೇಕು” ಎಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.
“ಆಯ್ಕೆಯಾಗಿರುವ ಎಲ್ಲಾ 15 ಪುರಸ್ಕೃತರು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪನವರ ಜಾತಿಗೆ ಸೇರಿದವರಾಗಿದ್ದಾರೆಂದು ಗುಟ್ಟಾಗಿ ಉಳಿದಿಲ್ಲ” ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಕ್ಷೇಪಿಸಿದ್ದಾರೆ.

“ಪರಿಶಿಷ್ಟರೆಂದರೆ 100ಕ್ಕೂ ಹೆಚ್ಚು ಜಾತಿ, ಜನಾಂಗದವರಿದ್ದಾರೆ. ಎಲ್ಲಾ ಜಾತಿಗಳಲ್ಲೂ ಮಹಾ ಸಾಧಕರಿದ್ದಾರೆ. ಆದರೆ ಇಲಾಖೆ ಸಚಿವರು ಹಾಗೂ ಇಲಾಖೆಯ ಆಯುಕ್ತರು ಒಂದೆ ಜಾತಿಗೆ ಸೇರಿದ್ದು, ಅವರ ಸಮುದಾಯಕ್ಕೆ ಸೇರಿದವರನ್ನು ಮಾತ್ರ ಆಯ್ಕೆ ಮಾಡಿರುವುದು ಎಷ್ಟು ಸಮಂಜಸ” ಎಂದು ಪ್ರಶ್ನಿಸಿದ್ದಾರೆ.
“ಡಾ.ಅಂಬೇಡ್ಕರ್‌ರನ್ನು ಛಲವಾದಿ ಜಾತಿಗೆ, ಡಾ.ಬಾಬು ಜಗಜೀವನರಾಂರನ್ನು ಮಾದಿಗ ಜಾತಿಗೆ ಸೀಮಿತಗೊಳಿಸುವ ಮನೋಭಾವದ ಮಹದೇವಪ್ಪನವರು ಸಚಿವರಾಗಿ ಮುಂದುವರೆಯಲು ಅನರ್ಹರಾಗಿದ್ದಾರೆ. ರಾಷ್ಟ್ರ ನಾಯಕರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೀಳು ಮಟ್ಟದ ರಾಜಕಾರಣವನ್ನು ಸಮಾಜ ಕಲ್ಯಾಣ ಸಚಿವರಿಂದ ನಿರೀಕ್ಷೆ ಮಾಡಿರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಂವಿಧಾನ ಸಂರಕ್ಷಕರ ಸಮಾವೇಶ, ಎದ್ದೇಳು ಕರ್ನಾಟಕ ತಂಡ ಸಂವಿಧಾನ ಯಾನ ತಂಡ ಪಂಡಿತಾರಾಧ್ಯ ಶ್ರೀಗಳ ಭೇಟಿ, ಚರ್ಚೆ.
“ಅಂಬೇಡ್ಕರ್ ಪ್ರಶಸ್ತಿಯ ಮೌಲ್ಯವನ್ನು ಇವರು ಹಾಳು ಮಾಡುತ್ತಿದ್ದಾರೆ. ಕರ್ನಾಟಕದ ಅಂಬೇಡ್ಕರ್ ಎಂದೇ ಕರೆಯಲ್ಪಡುವ ಪ್ರೊ.ಬಿ.ಕೃಷ್ಣಪ್ಪನವರು ಎಲ್ಲ ತಳ ಸಮುದಾಯದ ಪರವಾಗಿ ಹೋರಾಟ ಮಾಡಲಿಲ್ಲವೆ?, ಬದುಕನ್ನೇ ಸಮರ್ಪಣೆ ಮಾಡಿ ಈಗಲೂ ರಾಜ್ಯದಲ್ಲಿರುವ ಕೃಷ್ಣಪ್ಪನವರ ಅನೇಕ ಹಿರಿಯ ಅನುಯಾಯಿಗಳು ಇವರಿಗೆ ಯಾರೂ ಕಾಣಲಿಲ್ಲವೆ?” ಎಂದು ಪ್ರಶ್ನಿಸಿದ್ದಾರೆ.
“ಸರ್ಕಾರ ಅಧಿಕೃತವಾಗಿ ಅಂಬೇಡ್ಕರ್ ಪ್ರಶಸ್ತಿಯನ್ನು ಕೇವಲ ಒಂದೇ ಜಾತಿಗೆ ಸೀಮಿತ ಎಂದು ಘೋಷಿಸಲಿ, ಇಲ್ಲವೆ ಈ ಪ್ರಶಸ್ತಿಗೆ ಪರಿಶಿಷ್ಟರ ಎಲ್ಲಾ ಜಾತಿ, ಜನಾಂಗದವರನ್ನು ಪರಿಗಣಿಸಬೇಕು. ಸಮಾಜವಾದವನ್ನು ಪ್ರತಿಪಾದಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿರುವ ತಪ್ಪನ್ನು ಗಮನಿಸಿ ಸರಿಪಡಿಸಬೇಕು” ಎಂದು ಒತ್ತಾಯಿಸಿದರು.
“ಒಂದೇ ಜಾತಿಯ ಸಾಧಕರ ಪಟ್ಟಿಯನ್ನು ರದ್ದುಪಡಿಸಿ, ಒಟ್ಟಾರೆ ಪರಿಶಿಷ್ಟರಲ್ಲಿರುವ ಸಾಧಕರನ್ನು ಸೂಕ್ಷ್ಮವಾಗಿ ಅವಲೋಕಿಸಿ ಹೊಸದಾಗಿ ಆಯ್ಕೆ ಮಾಡಬೇಕು, ಸ್ವಜನ ಪಕ್ಷಪಾತ ಮಾಡಿರುವ ಸಚಿವ ಮಹಾದೇವಪ್ಪರನ್ನು ಸಂಪುಟದಿಂದ ಕೈಬಿಡಬೇಕು, ಇಲಾಖೆಯ ಆಯುಕ್ತರನ್ನು ಅಮಾನತ್ತು ಪಡಿಸಬೇಕು. ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ಹಮ್ಮಿಲಾಗುವುದು”ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜಕೀಯದಲ್ಲಿ ಬೆಳೆಯುವ ಶೋಷಿತ ವರ್ಗದವರಿಗೆ ಅಡ್ಡಿಬೇಡ, ಗುಲಾಮರಾಗಿ ಬದುಕುವುದು ಬೇಡ;ವಿನಯ್ ಕುಮಾರ್ ಜಿಬಿ.
ಈ ವೇಳೆ ದಲಿತ ಸಂಘರ್ಷ ಸಮಿತಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದು ಬೆಂಬಲ ವ್ಯಕ್ತಪಡಿಸಿದ್ದಾರೆ