ಕೇಂದ್ರದ ಬೆಲೆ ಏರಿಕೆ, ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಏ.17ರಂದು ಪ್ರತಿಭಟನೆ: ಡಿ ಕೆ ಶಿವಕುಮಾರ್

Date:

Advertisements

ಬಿಜೆಪಿಯ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಇದೇ ಏ.17 ರಂದು ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿಯ ಇಬ್ಬಗೆ ನೀತಿಯ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು.

“ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ. ಅವರ ಜನಾಕ್ರೋಶ ಯಾತ್ರೆಯ ವಿರುದ್ಧ ನಾವು ಏನಾದರೂ ಮಾಡಬೇಕಲ್ಲವೇ?” ಎಂದು ಹೇಳಿದರು.

Advertisements

ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರ್ಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆಯೇ? ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಡುತ್ತಿರುವ ಯಾತ್ರೆ” ಕುಹಕವಾಡಿದರು.

ಕೇಂದ್ರ ಬಿಜೆಪಿಯಿಂದ ರಾಜ್ಯ ಬಿಜೆಪಿಗೆ ಗಿಫ್ಟ್

“ಬಿಜೆಪಿಯವರು ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರದವರು ಪೆಟ್ರೋಲ್, ಡೀಸೆಲ್ ಗೆ ತಲಾ 2 ರೂಪಾಯಿ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಜಾಸ್ತಿ ಮಾಡಿ ಉದ್ಘಾಟನೆ ಮಾಡಿ‌, ಇವರ ಯಾತ್ರೆಗೆ ‘ಗಿಫ್ಟ್’ ಕಳಿಸಿದ್ದಾರೆ. ಇದರ ಬಗ್ಗೆ ಜನಸಾಮಾನ್ಯರು ಮಾಡುತ್ತಿರುವ ಗುಣಗಾನವನ್ನು ಎಲ್ಲರು ಕೇಳಬೇಕು. ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿರುವ ಜನಾಕ್ರೋಶ ಯಾತ್ರೆ ಎಂದು ಬಿಜೆಪಿಯವರು ಬೋರ್ಡ್ ಹಾಕಿಕೊಳ್ಳಬೇಕು” ಎಂದರು.

“ಬುಧವಾರದಂದು ಕಚ್ಚಾ ತೈಲದ ಬೆಲೆ ಶೇ. 4.23 ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್ ನ ಮೂಲ ದರ ಪ್ರತಿ ಲೀಟರ್ ಗೆ 42.60 ಪೈಸೆ ಇದೆ. ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ ‌103 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್ ಗೆ ರೂ.60 ರೂಪಾಯಿ ಲಾಭ ಸರ್ಕಾರಕ್ಕೆ ಸಿಗುತ್ತಿದೆ. ಡೀಸಲ್ ಬೆಲೆ ರೂ.91 ರೂಪಾಯಿ ಇದೆ. ರೂ. 43 ಲಾಭ ಮಾಡುತ್ತಿದ್ದಾರೆ. ಶೇಕಡ 60 ರಷ್ಟು ತೆರಿಗೆ ಪೆಟ್ರೋಲ್, ಡೀಸೆಲ್ ಮೇಲೆ ಹಾಕಿದ್ದಾರೆ” ಎಂದು ಹರಿಹಾಯ್ದರು.

“ಹಾಲಿನ ದರ ನಮ್ಮ ರಾಜ್ಯದಲ್ಲಿ ಅತ್ಯಂತ ಕಡಿಮೆಯಿದೆ. ಕರ್ನಾಟಕದಲ್ಲಿ 42 ರೂಪಾಯಿ ಇದ್ದರೆ. ಕೇರಳ 52 ರೂ, ಗುಜರಾತ್ 53 ರೂ, ದೆಹಲಿ 55 ರೂ, ಮಹಾರಾಷ್ಟ್ರ 52 ರೂ, ತೆಲಂಗಾಣ 58 ರೂ, ಅಸ್ಸಾಂ 60 ರೂ, ಹರಿಯಾಣ 56 ರೂ, ರಾಜಸ್ಥಾನ 50 ರೂ, ಮಧ್ಯಪ್ರದೇಶ 52 ರೂ, ಪಂಜಾಬ್ 56 ರೂ, ಉತ್ತರ ಪ್ರದೇಶ 56 ರೂಪಾಯಿ ಬೆಲೆಯಿದೆ” ಎಂದು ವಿವರಿಸಿದರು‌.

“ನೀರಿನ ಬೆಲೆ ಏರಿಕೆಯನ್ನು ಅತ್ಯಂತ ಕಡಿಮೆ ಮಾಡಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಈ ಹಿಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ನಿಗದಿ ಮಾಡಿ ಬಡವರ ಪರವಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರ ಬದುಕು ಹಸನಾಗಲಿ ಎಂದು ಗ್ಯಾರಂಟಿ ಯೋಜನೆ ಮೂಲಕ ರೂ.52 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ” ಎಂದರು.

“ಯುಪಿಎ ಸರ್ಕಾರದ ಅವಧಿಯಲ್ಲಿ ಚಿನ್ನದ ಬೆಲೆ ರೂ. 28 ಸಾವಿರವಿತ್ತು ಈಗ ರೂ.92 ಸಾವಿರವಿದೆ. 10 ಸಾವಿರವಿದ್ದ ಮೊಬೈಲ್ ದರ 30 ಸಾವಿರಕ್ಕೆ ಏರಿಕೆಯಾಗಿದೆ. ರೂ.13 ಸಾವಿರವಿದ್ದ 32 ಇಂಚಿನ ಟಿವಿ ರೂ.36 ಸಾವಿರವಾಗಿದೆ. 1.5 ಟನ್ ಸಾಮರ್ಥ್ಯದ ಎಸಿ ಬೆಲೆ ರೂ.25 ಸಾವಿರದಿಂದ ರೂ.44 ಸಾವಿರಕ್ಕೆ ಏರಿಕೆಯಾಗಿದೆ. ಫ್ರಿಡ್ಜ್ ಬೆಲೆ ರೂ. 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಾಗಿದೆ. ರೂ.59 ಇದ್ದ ಡಾಲರ್ ಬೆಲೆ ಈಗ ರೂ. 89 ಆಗಿದೆ. ಸಿಮೆಂಟ್ ಬೆಲೆ 268 ಇದ್ದಿದ್ದು ಈಗ ರೂ.410 ಕ್ಕೆ ಹೆಚ್ಚಳಗಿದೆ. ಈ ಬೆಲೆಯನ್ನೆಲ್ಲಾ ಯಾರೂ ನಿಯಂತ್ರಣ ಮಾಡುವವರು” ಎಂದು ಪ್ರಶ್ನಿಸಿದರು.

“ಕಬ್ಬಿಣದ ಬೆಲೆ ರೂ.16 ಸಾವಿರ, ಕಾರಿನ ಬೆಲೆಗಳಲ್ಲಿ ಊಹೆಗೂ ನಿಲುಕದ ಜಿಗತವಾಗಿದೆ. ರೂ. 1.5 ಲಕ್ಷಕ್ಕೆ ಸಿಗುತ್ತಿದ್ದ ಮಿನಿ ಟ್ರಾಕ್ಟರ್ ಬೆಲೆ ರೂ. 5 ಲಕ್ಷಕ್ಕೆ ಏರಿಕೆಯಾಗಿದೆ. ಫಾರ್ಚೂನರ್ ಕಾರಿನ ಬೆಲೆ 25 ಲಕ್ಷದಿಂದ 45 ಲಕ್ಷಕ್ಕೆ ಏರಿಕೆಯಾಗಿದೆ” ಎಂದು ವಿವಿಧ ಅಗತ್ಯ ವಸ್ತುಗಳು ಹಾಗೂ ವಾಹನಗಳ ಬೆಲೆಯ ಪಟ್ಟಿಯನ್ನು ಡಿಸಿಎಂ ಮಾಧ್ಯಮಗಳ ಮುಂದಿಟ್ಟರು.

“ರೂ. 80 ಇದ್ದ ಹೆದ್ದಾರಿ ಟೋಲ್ ಬೆಲೆ 250 ಕ್ಕೂ ಹೆಚ್ಚಾಗಿದೆ. ಇದೆಲ್ಲವು ಅಶೋಕ್ ಅವರಿಗೆ ಕಾಣಿಸುತ್ತಿಲ್ಲವೇ? ಹಾಲಿನ ದರ ಏರಿಕೆ ವಿರೋಧಿಸುವ ನೀವು ರೈತ ವಿರೋಧಿಗಳು. ಬ್ಯಾಂಕ್ ಗಳಲ್ಲಿ ಹಣ ಕಟ್ಟಲು, ಬಿಡಿಸಲು, ಚೆಕ್ ಬುಕ್ ತೆಗೆದುಕೊಳ್ಳಲು ಹೀಗೆ ಎಲ್ಲದಕ್ಕೂ ಶುಲ್ಕ ವಿಧಿಸಿ ಸುಲಿಗೆ ಮಾಡಲಾಗುತ್ತಿದೆ. ಇದು ದೊಡ್ಡ ಹಗರಣವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಹೇಳುತ್ತಿದ್ದರು” ಎಂದರು.

ಬಿಜೆಪಿಯವರ ಫೋಟೋ ಹಾಕಿಕೊಳ್ಳಲಿ

“ಬಿಜೆಪಿಯವರು ಪ್ರತಿಭಟನಾ ಬ್ಯಾನರ್ ನಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಫೋಟೋಗಳನ್ನು ಹಾಕುವ ಬದಲು ಕೇಂದ್ರ ನಾಯಕರ ಫೋಟೋ ಹಾಕಿಕೊಳ್ಳಿ, ನಮ್ಮ ಬೆಲೆ ಏರಿಕೆ ಬದಲು ಬಿಜೆಪಿ ಬೆಲೆ ಏರಿಕೆಯನ್ನು ಪ್ರಶ್ನಿಸಿ. ನಿಮ್ಮ ಆಕ್ರೋಶ ನಿಮ್ಮ ನಾಯಕರ ಮೇಲಿರಲಿ, ಇದರಿಂದ ಜನರಿಗೆ, ಪಕ್ಷಕ್ಕೆ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ವಿವರಿಸಬೇಕು” ಎಂದು ವ್ಯಂಗ್ಯವಾಡಿದರು.

“ಬಿಜೆಪಿಯವರ ಹೋರಾಟ ಗ್ಯಾರಂಟಿಗಳ ವಿರುದ್ಧ ನಡೆಯುತ್ತಿದೆ. 1 ಕೋಟಿ 22 ಲಕ್ಷ ಮಹಿಳೆಯರು ಗೃಹಲಕ್ಷ್ಮೀ ಲಾಭ ಪಡೆಯುತ್ತಿದ್ದಾರೆ. ತೆಲಂಗಾಣದಲ್ಲಿ ನಮ್ಮ ಪಕ್ಷದ ಸರ್ಕಾರವಿದೆ ಅಲ್ಲಿ 6 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ನಮ್ಮಲ್ಲಿ 10 ಕೆಜಿ ನೀಡಲಾಗುತ್ತಿದೆ. ನಾವು ಇಷ್ಟರ ಮಟ್ಟಿಗೆ ಗ್ಯಾರಂಟಿಗಳನ್ನು ನೀಡಿ ಯಶಸ್ವಿಯಾಗುತ್ತೇವೆ ಎಂದು ಅವರು ಎಣಿಸಿರಲಿಲ್ಲ ಅದಕ್ಕೆ ಅವರಿಗೆ ಹೊಟ್ಟೆಯುರಿ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X