ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
“ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿಯೇ ಸಂಶಿ ಅತಿ ದೊಡ್ಡ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲ. ಇದರಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ತೆರೆಯುವಂತೆ ಹಲವು ಬಾರಿ ಅಂಚೆಯ ಮೂಲಕ ಶಾಸಕರಿಗೆ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರೂ ಈವರೆಗೆ ಯಾರೂ ಸ್ಪಂದಿಸುತ್ತಿಲ್ಲ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ದಿನ.ಕಾಮ್‌ನೊಂದಿಗೆ ನಿವೃತ್ತ ಶಿಕ್ಷಕ ಎನ್ ಎಫ್ ನದಾಫ್ ಮಾತನಾಡಿ, “ಸಂಶಿ ಗ್ರಾಮದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನವಸತಿ ಇದ್ದು, ಇಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ಸರ್ಕಾರಿ ಶಾಲೆಗಳು ಇವೆ. ಪದವಿ ಪೂರ್ವ ಕಾಲೇಜನ್ನು ತೆರೆದರೆ ಗ್ರಾಮದ ಮಕ್ಕಳಿಗೆ ಹಾಗೂ ಸುತ್ತಲಿನ ಗ್ರಾಮಗಳಾದ ಚಾಕಲಬ್ಬಿ, ಹೊಸಳ್ಳಿ, ಪಶುಪತಿಹಾಳ, ಹಿರೇಹರಕುಣಿ, ಶಿರೂರು, ಬಸಾಪೂರ ಸೇರಿದಂತೆ ಬಹುತೇಕ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆಂದು ಹಲವು ಬಾರಿ ಮನವಿಯಲ್ಲಿ ತಿಳಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿ
ಪರಶುರಾಮ ಸೋಲದ ಮಾತನಾಡಿ, “ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ತೆರೆಯುವಂತೆ ಗ್ರಾಮದ ನಾಗರಿಕರಿಕರೆಲ್ಲ ಸೇರಿ ಅಂಚೆಯ ಮೂಲಕ ಶಾಸಕರಿಗೆ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಇಂದಿಗೂ ಯಾರೂ ಸ್ಪಂದಿಸುತ್ತಿಲ್ಲ. ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಇಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಕುರಿತು ಶಿಕ್ಷಣ ಇಲಾಖೆ ಗಮನಹರಿಸಬೇಕು” ಎಂದು ಒತ್ತಾಯಿಸಿದರು.
ವಿ ಡಿ ಅಕ್ಕಿ, ವಿ ಡಿ ಯರಗುಪ್ಪ, ಲೋಕೇಶ ಸರಾವರಿ, ವಿದ್ಯಾಧರ ಸುಕುಂದ, ಎಲ್ ಬಿ ದೊಡ್ಡಮನಿ, ಡಿ ಬಿ ದೊಡ್ಡಮನಿ, ರಾಜು ಪುಟ್ಟಣ್ಣವರ ಸೇರಿ ಮನವಿ ಸಲ್ಲಿಸಿದ್ದಾರೆ.