- ದರೋಡೆ ಸಂಬಂಧ ದೆಹಲಿ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು
- ಪ್ರಗತಿ ಮೈದಾನದ ಸುರಂಗ ರಸ್ತೆಯಲ್ಲಿ ಕ್ಯಾಬ್ ಅಡ್ಡಗಟ್ಟಿ ಹಣ ದೋಚಿದ್ದ ಕಳ್ಳರು
ದೆಹಲಿ ಪ್ರಗತಿ ಮೈದಾನದ ಬಳಿಯ ಸುರಂಗ ರಸ್ತೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಎರಡು ಬೈಕ್‌ನಲ್ಲಿ ಕ್ಯಾಬ್ ಹಿಂಬಾಲಿಸಿಕೊಂಡು ಬಂದು ಕಾರು ಅಡ್ಡಗಟ್ಟಿ ಗನ್ ತೋರಿಸಿ ಹಣ ದೋಚಿದ್ದ ಐವರು ದರೋಡೆಕೋರರನ್ನು ಪೊಲೀಸರು ಮಂಗಳವಾರ (ಜೂನ್ 27) ಬಂಧಿಸಿದ್ದಾರೆ.
ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ಅಳವಡಿಸಲಾಗಿರುವ 350ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ದರೋಡೆ ನಡೆಸಿದ ನಂತರ ದರೋಡೆಕೋರರು ಯಾವ ಮಾರ್ಗವನ್ನು ಅನುಸರಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ.
ಘಟನೆಯನ್ನು ಸಿಸಿಟಿವಿ ಕ್ಯಾಮೆರಾಗಳು ಸ್ಪಷ್ಟವಾಗಿ ಸೆರೆಹಿಡಿದಿದ್ದರೂ ಕಳ್ಳರು ಹೆಲ್ಮೆಟ್ ಧರಿಸಿದ್ದರಿಂದ ಬೈಕ್‌ಗಳಲ್ಲಿ ಬಂದ ದರೋಡೆಕೋರರ ಮುಖವನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ದೆಹಲಿ ದರೋಡೆ ಘಟನೆಯ 22 ಸೆಕೆಂಡುಗಳ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ. ನಾಲ್ವರು ಎರಡು ಬೈಕ್ ಗಳಲ್ಲಿ ಕ್ಯಾಬ್ ಅನ್ನು ಹಿಂಬಾಲಿಸಿ ಅಡ್ಡಗಟ್ಟಿದರು. ಎರಡೂ ಬೈಕ್ ನಲ್ಲಿದ್ದ ಹಿಂಬದಿ ಸವಾರರಿಬ್ಬರು ಕೆಳಗಿಳಿದು ಒಬ್ಬರು ಚಾಲಕನ ಸೀಟಿನ ಕಡೆಗೆ ತೆರಳಿದರೆ, ಮತ್ತೊಬ್ಬ ಕಾರಿನ ಹಿಂದಿನ ಬಾಗಿಲಿನತ್ತ ತೆರಳಿದ್ದಾನೆ.
ಇಬ್ಬರೂ ಪಿಸ್ತೂಲ್ ತೋರಿಸಿ, ಏಜೆಂಟ್ ಬಳಿಯಿದ್ದ ಹಣವನ್ನು ದೋಚಿದರು. ನಂತರ ನಾಲ್ವರು ಬೈಕ್‌ಗಳಲ್ಲಿ ಹೊರಟರು. ಈ ವೇಳೆ ನಾಲ್ವರೂ ಹೆಲ್ಮೆಟ್ ಧರಿಸಿದ್ದರು. ದೆಹಲಿಯನ್ನು ಸರಾಯ್ ಕಾಲೆ ಖಾನ್ ಮತ್ತು ನೋಯ್ಡಾದೊಂದಿಗೆ ಸಂಪರ್ಕಿಸುವ 1.5 ಕಿಮೀ ಸುರಂಗ ರಸ್ತೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸೆರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 397 (ದರೋಡೆ ಅಥವಾ ಡಕಾಯಿತಿ, ಸಾವು ಅಥವಾ ಘೋರವಾದ ಗಾಯ ಉಂಟುಮಾಡುವ ಪ್ರಯತ್ನ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗಡಿ ಪ್ರದೇಶಗಳಲ್ಲಿನ ಮತದಾರರಿಗೆ ಬಿಎಸ್‌ಎಫ್ ಯೋಧರಿಂದ ಬೆದರಿಕೆ: ಮಮತಾ ಬ್ಯಾನರ್ಜಿ ಆರೋಪ
ಶನಿವಾರ ಮಧ್ಯಾಹ್ನ ಘಟನೆ ನಡೆದಿತ್ತು. ಚಾಂದಿನಿ ಚೌಕ್ ನ ಒಮಿಯಾ ಎಂಟರ್ಪ್ರೈಸಸ್‌ನ ಡೆಲಿವರಿ ಏಜೆಂಟ್ ಮತ್ತು ಆತನ ಸಹಚರರೊಬ್ಬರು ಹಣವನ್ನು ತಲುಪಿಸಲು ಕ್ಯಾಬ್‌ನಲ್ಲಿ ದೆಹಲಿ ನಗರದಿಂದ ಗುರುಗ್ರಾಮದ ಕಡೆಗೆ ತೆರಳುತ್ತಿದ್ದಾಗ ಬೈಕ್‌ಗಳಲ್ಲಿ ಬಂದ ದರೋಡೆಕೋರರು ಪ್ರಗತಿ ಮೈದಾನದ ಸುರಂಗ ರಸ್ತೆ ಬಳಿ ಕ್ಯಾಬ್ ಅಡ್ಡಗಟ್ಟಿ ಏಜೆಂಟ್ ಬಳಿ ಇದ್ದ ₹2 ಲಕ್ಷ ದೋಚಿ ಪರಾರಿಯಾಗಿದ್ದರು.
ಘಟನೆ ಸಂಬಂಧ ಕಾರಿನಲ್ಲಿದ್ದ ವ್ಯಕ್ತಿ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.