“ಸಣ್ಣಪುಟ್ಟ ವ್ಯಾಪಾರ ಮಾಡುವ ಮುಖಾಂತರ ನಾಗರಿಕರ ಅಗತ್ಯಗಳನ್ನು ಪೂರೈಸುತ್ತಿರುವ ಬೀದಿಬದಿ ವ್ಯಾಪಾರಿಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಈ ಮುಖಾಂತರ ಅವರ ಜೀವನೋಪಾಯ ಹಕ್ಕು, ಸಂರಕ್ಷಣೆ ಖಾತ್ರಿಪಡಿಸುವುದು ಸ್ಥಳಿಯ ಸಂಸ್ಥೆಗಳ ಕರ್ತವ್ಯ ಆಗಬೇಕು” ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಫೆಡರೇಶನ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ ಪತ್ತಾರ ಆಗ್ರಹಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸೇವಾಲಾಲ್ ಸಮುದಾಯ ಭವನದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘ (ಸಿಐಟಿಯು)ಸಂಘಟನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
“ಬೀದಿ ವ್ಯಾಪಾರಿಗಳನ್ನು ಒಂದು ಸಮಸ್ಯೆಯಾಗಿ ನೋಡುವ ಬದಲು ಅವರನ್ನು ನಗರ ಆರ್ಥಿಕತೆಯ ಪ್ರಮುಖ ಭಾಗವೆಂದು ಗುರುತಿಸುವತ್ತ ಸಾಗಬೇಕಿದೆ. ಬೀದಿ ಬದಿ ವ್ಯಾಪಾರಿಗಳು ಅಸಂಘಟಿತ ಕಾರ್ಮಿಕರಾಗಿದ್ದು, ಸರಕಾರ ಅವರಿಗೆ ಯೋಗ್ಯ ಬಡ್ಡಿರಹಿತ ಸಾಲ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದರು.
ಬೀದಿ ಬದಿ ವ್ಯಾಪಾರಸ್ಥರ ಸಂಘದ ತಾಲೂಕ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, “ಬೀದಿ ಬದಿ ವ್ಯಾಪಾರ ನಂಬಿ ಪಟ್ಟಣದಲ್ಲಿ ನೂರಾರು ಬಡ ಕುಟುಂಬಗಳು ಬದುಕುತ್ತಿವೆ. ರಾಜಕೀಯ ದೊಂಬರಾಟದಿಂದ ಆತಂಕದಲ್ಲೇ ಜೀವನ ಕಳೆಯುವಂತಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ನೋಟಿಸ್ ನೀಡಿದ ನಂತರ ತೆರವುಗೊಳಿಸಬೇಕು. ಕಾನೂನಿನ ಚೌಕಟ್ಟಿನಲ್ಲಿದ್ದರೆ ಬೀದಿ ಬದಿ ವ್ಯಾಪಾರಸ್ಥರಿಗೆ ಬದುಕಲು ಅವಕಾಶ ಕೊಡಬೇಕು. ಆದರೆ, ರಾಜಕೀಯ ನಾಯಕರ ದೊಂಬರಾಟದ ಫಲ ಈಗ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿವಾಯ್ಎಫ್ಐ ಜಿಲ್ಲಾ ಮುಖಂಡರಾದ ದಾವಲಸಾಬ ತಾಳಿಕೋಟಿ, ಫಯಾಜ್ ತೋಟದ ಮಾತನಾಡಿ, “ಸರ್ಕಾರ ಬೀದಿ ಬದಿ ವ್ಯಾಪಾರಿ ಗಳ ಹಿತ ರಕ್ಷಣೆಗಾಗಿಯೆ ಪ್ರತ್ಯೇಕ ಕಾಯ್ದೆ ರೂಪಿಸಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನದತ್ತ ಇಲ್ಲಿನ ಸ್ಥಳೀಯ ಸಂಸ್ಥೆ ಗಮನ ಹರಿಸಿಲ್ಲ. ಹೀಗಾಗಿ ಇಲ್ಲಿನ ಬೀದಿ ಬದಿ ವ್ಯಾಪಾರಿಗಳು ಸಾಮಾಜಿಕ ಭದ್ರತೆ ಇಲ್ಲದೆ ಬಳಲುವಂತಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ನೆಲೆ ಕಲ್ಪಿಸಬೇಕು ಎಂಬ ವಿಷಯ ಆಗಾಗ ಮುನ್ನೆಲೆಗೆ ಬಂದರೂ ನಂತರ ಅದು ಹಿಂದಕ್ಕೆ ಸರಿಯುತ್ತಿದೆ. ಹೀಗಾಗಿ ಸದಾ ಅಭದ್ರತೆಯಲ್ಲೆ ಬೀದಿ ಬದಿ ವ್ಯಾಪಾರಿಗಳು ಜೀವನ ನಿರ್ವಹಿಸುವಂತಾಗಿದೆ. ಪ್ರತಿಯೊಬ್ಬ ಬೀದಿ ಬದಿಯ ವ್ಯಾಪಾರಿಯ ಹಿಂದೆ ಒಂದು ಕುಟುಂಬವಿದೆ ಎಂಬ ಮಾನವೀಯ ಅಂತಃಕರಣದ ದೃಷ್ಟಿಕೋನ ಆಡಳಿತ ನಡೆಸುವವರಿಗೆ ಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | 42ನೇ ವಯಸ್ಸಿನಲ್ಲಿ ಮಗಳೊಂದಿಗೆ ಪಿಯು ಪರೀಕ್ಷೆ ಬರೆದು ಪಾಸಾದ ತಾಯಿ
ಕಾರ್ಯಗಾರದಲ್ಲಿ ಎಸ್.ಎಫ್.ಐ ಮುಖಂಡ ಗಣೇಶ ರಾಠೋಡ, ಕೃಷಿ ಕೂಲಿಕಾರ ಸಂಘದ ತಾಲೂಕ ಅಧ್ಯಕ್ಷ ಬಾಲು ರಾಠೋಡ, ಮೈಬು ಹವಾಲ್ದಾರ್, ಅನ್ವರಭಾಷಾ ಹಿರೇಕೊಪ್ಪ, ರೂಪೇಶ ಮಾಳೋತ್ತರ, ಅಂಬರೀಶ್ ಚವ್ಹಾಣ, ಕಳಕಪ್ಪ ಮಾಳೋತ್ತರ, ಮೆಹಬೂಬ್ ಮಾಲ್ದಾರ, ರಾಜು ಮಾಂಡ್ರೆ, ಚೌಡಮ್ಮ ಯಲ್ಪು, ಮಂಜುಳಾ ಪಮ್ಮಾರ, ಪರುಶರಾಮ ಬಡಿಗೇರ, ವಿಷ್ಣು ಚಂದುಕರ, ಸೇರಿದಂತೆ ನೂರಾರು ಬೀದಿ ಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
