ಸಾರಿಗೆ ಬಸ್ ಮತ್ತು ಬುಲೆರೊ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದೇವಸ್ಥಾನಕ್ಕೆಂದು ಹೊರಟಿದ್ದ ನಾಲ್ವರು ದುರ್ಮರಣ ಹೊಂದಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮದ್ದರಕಿ ಬಳಿಯ ‘ರಾಷ್ಟ್ರೀಯ ಹೆದ್ದಾರಿ 150ಎ’ನಲ್ಲಿ ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಬುಲೆರೊದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಲೆರೊ ಮತ್ತು ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮೃತರನ್ನು ಯಾದಗಿರಿ ತಾಲೂಕಿನ ವರ್ಕನಹಳ್ಳಿ ಗ್ರಾಮದ ಬುಲೆರೊ ಚಾಲಕ ಶರಣಪ್ಪ(30), ಸುನೀತಾ (19), ಸೋಮವ್ವ (50) ಹಾಗೂ ತಂಗಮ್ಮ (55) ಎಂದು ಗುರುತಿಸಲಾಗಿದೆ.
ಮೃತರು ಸೇರಿದಂತೆ ಹಲವರು ಬುಲೆರೊ ವಾಹನದಲ್ಲಿ ಕಲಬುರಗಿಯ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.