ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಔರಾದ್ ತಾಲ್ಲೂಕಿನ ಸಂತಪೂರ ಗ್ರಾಮದ ಜನತಾ ಪ್ರವೀಣ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿಗೆ ಶೇ 86.07 ರಷ್ಟು ಫಲಿತಾಂಶ ದೊರೆತಿದ್ದು, ಒಟ್ಟು 37 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 4 ವಿದ್ಯಾರ್ಥಿಗಳು ಅಗ್ರಶ್ರೇಣಿ, 16 ಪ್ರಥಮ ದರ್ಜೆ ಹಾಗೂ 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ʼಜೊನ್ನೆಕೇರಿ ಗ್ರಾಮದ ಶ್ರವಣ ನಾಗನಾಥ ಶೇ 92.5 ರಷ್ಟು ಅಂಕ ಗಳಿಸುವ ಮೂಲಕ ತಾಲ್ಲೂಕಿನ ಅನುದಾನಿತ ಕಾಲೇಜುಗಳ ಕಲಾ ವಿಭಾಗದಲ್ಲಿ ಗಮನ ಸೆಳೆದಿದ್ದಾನೆ. ಪ್ರವೀಣ್ ವಿಜಯಕುಮಾರ ಶೇ 86.33, ವಿನೋದ್ ಪ್ರಕಾಶ್ ಶೇ 85 ಹಾಗೂ ಸೋನಿಯಾ ಶರಣಪ್ಪ ಶೇ 84 ರಷ್ಟು ಅಂಕ ಗಳಿಸಿ ಅಗ್ರಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆʼ ಎಂದು ಕಾಲೇಜು ಪ್ರಾಚಾರ್ಯ ರಮೇಶ ಪವಾರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಜನತಾ ಪ್ರವೀಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುಗಪುರುಷ ಮತ್ತು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.