ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿನಿಧಿಸುವ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಭೀಕರ, ಅಮಾನುಷ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. 19 ವರ್ಷದ ಯುವತಿಯ ಮೇಲೆ 23 ಮಂದಿ ಕಾಮುಕರು ಒಂದು ವಾರ (7 ದಿನ) ನಿರಂತರವಾಗಿ ಅತ್ಯಾಚಾರ / ಸಾಮೂಹಿಕ ಅತ್ಯಾಚಾರ ಎಸಗಿ ಕೌರ್ಯ ಮರೆದಿದ್ದಾರೆ. ವಿಕೃತ ಕಾಮುಕರಲ್ಲಿ ಯುವತಿಯ ಸ್ನೇಹಿತರು, ರಕ್ಷಣೆಗಾಗಿ ಬಂದವರೂ ಸೇರಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತ ಯುವತಿಯನ್ನು ಆರೋಪಿಗಳು ವಿವಿಧ ಸ್ಥಳಗಳಿಗೆ ಎಳೆದೊಯ್ದು ಮತ್ತು ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ, 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಾರಣಾಸಿಯ ಪಾಂಡೇಪುರ ಲಾಲ್ಪುರ ಪ್ರದೇಶದ ಯುವತಿಯನ್ನು ಕೆಲ ಆರೋಪಿಗಳು (ಆಕೆಯ ಹಳೆಯ ಸಹಪಾಠಿಗಳು ಮತ್ತು ಸ್ನೇಹಿತರು) ಮಾರ್ಚ್ 29ರಂದು ಅಪಹರಿಸಿದ್ದರು. ಅಂದು ಯುವತಿಯ ಸ್ನೇಹಿತನೇ ಆಗಿರುವ ರಾಜ್ ವಿಶ್ವಕರ್ಮ ಎಂಬಾತ ಆಕೆಯನ್ನು ತನ್ನ ಕೆಫೆಗೆ ಕರೆದೊಯ್ದಿದ್ದನು. ಅಲ್ಲಿ, ಯುವತಿಯನ್ನು ಕೂಡಿ ಹಾಕಿ, ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಆತ ಇಲ್ಲದ ಸಮಯದಲ್ಲಿ ಯುವತಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ತಪ್ಪಿಸಿಕೊಂಡು ಬರುವ ವೇಳೆ, ಆಕೆಗೆ ಪರಿಚಿತನಿದ್ದ ಮತ್ತೋರ್ವ ಆರೋಪಿ ಎದುರಾಗಿದ್ದು, ಮನೆ ತಲುಪಲು ನೆರವು ನೀಡುವುದಾಗಿ ಹೇಳಿ ತನ್ನ ಬೈಕ್‌ನಲ್ಲಿ ಕರೆದೊಯ್ದಿದ್ದಾರೆ. ಆದರೆ, ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ, ಬಳಿಕ, ಇತರ 10 ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬರುವಾಗ ಆಕೆಯನ್ನು ಗಮನಿಸಿದ ಮತ್ತೊಂದು ಗುಂಪು ಆಕೆಯನ್ನು ಅಪಹರಿಸಿ, ಗೋಡೌನ್‌ನಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದೆ. 7 ದಿನಗಳಲ್ಲಿ 23 ಕಾಮುಕರ ವಿಕೃತಿಗೆ ಬಲಿಯಾದ ಸಂತ್ರಸ್ತೆ, ಏಪ್ರಿಲ್ 4ರಂದು ತನ್ನ ಮನೆಗೆ ಸೇರಿದ್ದಾರೆ. ಬಳಿಕ, ಪೋಷಕರ ಬಳಿ ತನ್ನ ಮೇಲಾದ ದೌರ್ಜನ್ಯಗಳ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ವರದಿ ಓದಿದ್ದೀರಾ?: ಅನಂತ್ ಅಂಬಾನಿಯ ಪಾದಯಾತ್ರೆ ಪ್ರಹಸನಕ್ಕೆ ಸನಾತನ ಧರ್ಮವೇ ಸರಕು!
ಪೋಷಕರು ಆಕೆಯನ್ನು ಪಾಂಡೇಪುರ ಲಾಲ್ಪುರ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯು ತನ್ನ ದೂರಿನಲ್ಲಿ 23 ಕಾಮುಕರ ಪೈಕಿ 12 ಮಂದಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಉಲ್ಲೇಖಿತ 12 ಆರೋಪಿಗಳು ಮತ್ತು 11 ಮಂದಿ ಅನಾಮಧೇಯ ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 70(1), 74, 123, 126(2), 127(2), ಮತ್ತು 351(2) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆ ನೀಡಿನ ಮಾಹಿತಿ ಆಧಾರದ ಮೇಲೆ ಕೆಫೆ, ಹೋಟೆಲ್ ಹಾಗೂ ಗೋಡೌನ್‌ಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಮಾಹಿತಿ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಈವರೆಗೆ, 9 ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ವಾರಣಾಸಿ ಡಿಸಿಪಿ ಚಂದ್ರಕಾಂತ್ ಮಿನಾ, “ಈವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ.. ಇತರ ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.