ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬೆನ್ನಿಗೆ ನಿಂತಿರುವ ಕೂಡಲಸಂಗಮ ಜಯಬಸವ ಮೃತ್ಯುಂಜಯ ಸ್ವಾಮಿಗಳ ವಿರುದ್ಧ ಪಂಚಮಸಾಲಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ವಿಜಯಪುರದ ಬಿಜೆಪಿ ಪಂಚಮಸಾಲಿ ಸಮಾಜದ ವಿಜುಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ಡಾ.ಸುರೇಶ ಬಿರಾದಾರ, ಭೀಮಾಶಂಕರ ಹದನೂರ, ರವಿಕಾಂತ ಬಗಲಿ, ಕಾಸುಗೌಡ ಬಿರಾದಾರ, ಸಂದೀಪ ಪಾಟೀಲ ಮೊದಲಾದವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸುವುದರ ಜೊತೆಗೆ ಯತ್ನಾಳರ ವಿರುದ್ಧವೂ ಕಿಡಿ ಕಾರಿದ್ದಾರೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೆನ್ನಿಗೆ ನಿಂತಿ್ದ್ದೇವೆ ಎನ್ನುವ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಮುಖಂಡ ಸಂಜಯ ಪಾಟೀಲ ಕನಮಡಿ ಮಾತನಾಡಿ, “ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಹಿಂದೂತ್ವವನ್ನೇ ಉಸಿರಾಗಿಸಿಕೊಂಡ ನಾಯಕ. ಆದರೆ ಯತ್ನಾಳರ ಹಿಂದೆ ಇರುವ ಪಂಚಮಸಾಲಿ ಶ್ರೀಗಳು ತಾವು ಹಿಂದೂ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಹಿಂದೂ ಒಂದೆಡೆ ಇರಲಿ ವೀರಶೈವ ಎಂಬ ಪದವನ್ನೇ ತಮ್ಮ ಪೀಠದ ಮುಂದೆ ಬಳಸಿಕೊಳ್ಳುತ್ತಿಲ್ಲ. ಹಿಂದೂಧರ್ಮದ ಆಚರಣೆಗಳನ್ನು ಸಹ ಖಂಡಿಸಿದ್ದ ಪಂಚಮಸಾಲಿ ಶ್ರೀಗಳು ಹಿಂದೂ ಧರ್ಮವನ್ನು ಒಡೆದು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿವಹಿಸಿ ಕಾಂಗ್ರೆಸ್ ನಾಯಕರಿಗೆ ಸಾಥ್ ನೀಡಿದ್ದರು. ಈ ಹಿಂದೆ ವಿನಾಕಾರಣ ಕಲ್ಲು ನಾಗರಕ್ಕೆ ಹಾಲೆರೆಯುವುದು ಬೇಡ ಎಂದಿದ್ದ ಶ್ರೀಗಳು, ಈಗ ತಾವು ಬೆಂಬಲ ನೀಡುತ್ತಿರುವ ನಾಯಕರ ಭಾವಚಿತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾಲೆರೆಯುವುದನ್ನು ಏಕೆ ನಿಲ್ಲಿಸಲು ಹೋಗಲಿಲ್ಲ” ಎಂದು ಖಾರವಾಗಿ ಪ್ರಶ್ನಿಸಿದರು.
“ಸಹಕಾರ ಮಹಾಮಂಡಳದ ಚುನಾವಣೆಯಲ್ಲಿ ಸಹಕಾರ ಭಾರತೀಯ ಅಧಿಕೃತ ಅಭ್ಯರ್ಥಿ ನಾನೇ ಇದ್ದೆ. ಎಲ್ಲ ಕಡೆಯಿಂದಲೂ ವ್ಯಾಪಕ ಬೆಂಬಲವೂ ವ್ಯಕ್ತವಾಯಿತು. ಆದರೆ ಯತ್ನಾಳರ ಪುತ್ರ ವ್ಯಾಮೋಹದಿಂದ ನನಗೆ ಸೋಲಾಯಿತು. ಬೆಳಗಾವಿಯ ಕಾಂಗ್ರೆಸ್ ಶಾಸಕರ ಸಹಾಯ ಪಡೆದು ಗೆದ್ದಿದ್ದು ಯತ್ನಾಳರು ಮರೆತಂತಿದೆ. ನಾನು ಪಂಚಮಸಾಲಿ ಸಮಾಜದ ನಾಯಕ. ನಾನು ಚುನಾವಣೆಯಲ್ಲಿ ಸೋತಾಗ ಶ್ರೀಗಳು ಕರೆ ಮಾಡಿ ಅನುಕಂಪ ತೋರುವ ಸೌಜನ್ಯವೂ ತೋರಿಲ್ಲವಲ್ಲ ಎಂಬ ನೋವು ನನಗೆ ಕಾಡುತ್ತಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ಬೆಳೆ ಹಾನಿ; ವಿಮಾ ಕಂಪನಿ ವಿರುದ್ಧ ರೈತರ ಆಕ್ರೋಶ
ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, “2023ರ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಸ್ಟಾರ್ ಪ್ರಚಾರಕರಾಗಿದ್ದ ಯತ್ನಾಳ ಅವರನ್ನು ಕರೆಯಲು ಬಂದಾಗ ಅವರು, “ಇಲ್ಲ ನೀ ಜಿಗಜಿಣಗಿ ಅನುಯಾಯಿ ಎಂದರು. ಯತ್ನಾಳರ ಅನುಯಾಯಿಗಳೆಲ್ಲರೂ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದರು. ಇದೇ ಜಿಲ್ಲೆಯಲ್ಲಿ ಗೆಲ್ಲಿಸಲಾಗದ ನೀ ಸ್ಟಾರ್ ಪ್ರಚಾರಕ ಆಗಿ ಉಪಯೋಗ ಏನು?” ಎಂದು ನುಡಿದರು.