2025ರ ಐಪಿಎಲ್ ಪಂದ್ಯಾವಳಿಯಲ್ಲಿ ಗುರುವಾರ ರಾತ್ರಿ ನಡೆದ ಆರ್‌ಸಿಬಿ ಮತ್ತು ಡಿಸಿ (ಡೆಲ್ಲಿ ಕ್ಯಾಪಿಟಲ್ಸ್) ನಡುವಿನ ಪಂದ್ಯದ ವೇಳೆ ಅಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ತಂಡವೊಂದನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತರಲ್ಲಿ ಪ್ರಮುಖ ಆರೋಪಿ ಬಿಜೆಪಿ ಕಾರ್ಯಕರ್ತನೆಂದು ತಿಳಿದುಬಂದಿದೆ.
ಐಪಿಎಲ್ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಬೆಂಗಳೂರಿನ ಯಲಹಂಕ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಆರೋಪಿಗಳಿಂದ ಲ್ಯಾಪ್‌ಟಾಪ್ ಮತ್ತು ಇತರ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತರ ಪೈಕಿ, ವಿಜಯ್ ಕುಮಾರ್ ಎಂಬಾತನನ್ನು ಪ್ರಮುಖ ಆರೋಪಿಯೆಂದು ಗುರುತಿಸಲಾಗಿದೆ. ಆತ ಬಿಜೆಪಿ ಕಾರ್ಯಕರ್ತನೆಂದು ಹೇಳಲಾಗಿದೆ.
ವಿಜಯ್ ಕುಮಾರ್ ಮತ್ತು ಆತನ ಸಂಗಡಿಗರು ಯಲಹಂಕದ ಉದಯ್ ಡಾಬಾದಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಡಾಬಾ ಮೇಲೆ ದಾಳಿ ಮಾಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಐದು ಮಂದಿಯನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಮುಖ ಆರೋಪಿಯಾದ ವಿಜಯ್ ಕುಮಾರ್ ಇನ್ನೂ ಪೊಲೀಸ್ ಠಾಣೆಯಲ್ಲಿಯೇ ಇದ್ದಾನೆ ಎಂದು ತಿಳಿದುಬಂದಿದೆ.
ಬಿಜೆಪಿ ಕಾರ್ಯಕರ್ತ, ಆರೋಪಿ ವಿಜಯ್ ಕುಮಾರ್ ಬಿಜೆಪಿಯ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಜೈಲಿನಿಂದ ಹೊರಬರಲು ಯತ್ನಿಸುತ್ತಿದ್ದಾನೆ ಎಂದೂ ಆರೋಪಿಸಲಾಗಿದೆ.
ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಯಲಹಂಕ ಪೊಲೀಸ್ ಠಾಣೆಗೆ ಈದಿನ.ಕಾಮ್ ಕರೆ ಮಾಡಿತ್ತು. ಆದರೆ, ಪೊಲೀಸ್ ಸಿಬ್ಬಂದಿಗಳು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದು, ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸಬೇಕೆಂದು ಹೇಳಿದ್ದರು. ಇನ್ಸ್‌ಪೆಕ್ಟರ್‌ಗೆ ಕರೆ ಮಾಡಲಾಗಿದ್ದು, ಅವರು ಕರೆ ಸ್ವೀಕರಿಸಿಲ್ಲ. ಕರೆಗೆ ಇನ್ಸ್‌ಪೆಕ್ಟರ್ ಲಭ್ಯವಾದ ಬಳಿಕ, ಮತ್ತಷ್ಟು ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುವುದು.