ಹರಿಯಾಣದಲ್ಲಿ ಹೆಣ್ಣು ಭ್ರೂಣಹತ್ಯೆ ಜಾಲದ ಬಗ್ಗೆ ಮಾಧ್ಯಮವೊಂದು ತನಿಖೆ ನಡೆಸಿದ್ದು, ಹೆಣ್ಣು ಭ್ರೂಣಹತ್ಯೆಯಿಂದಾಗಿ ರಾಜ್ಯದಲ್ಲಿ ಲಿಂಗಾನುಪಾತ ಕುಸಿತ ಕಂಡಿದೆ ಎಂದಿದೆ. ಇದಾದ ಬೆನ್ನಲ್ಲೇ ಸರ್ಕಾರವು ಅಕ್ರಮ ಗರ್ಭಪಾತವನ್ನು ತಡೆಯಲು ಕಾರ್ಯಪಡೆಯನ್ನು ಸ್ಥಾಪಿಸಿದೆ.
ಇದಲ್ಲದೆ, ಹರಿಯಾಣದಲ್ಲಿರುವ 1,500 ಗರ್ಭಪಾತ ಕೇಂದ್ರಗಳ ಪೈಕಿ 300ರ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಈ ಪೈಕಿ ಕೆಲವು ಕೇಂದ್ರಗಳು ಸರ್ಕಾರದ ಕ್ರಮಕ್ಕೂ ಮುನ್ನವೇ ಸ್ವಯಂಪ್ರೇರಿತವಾಗಿಯೇ ಕೇಂದ್ರಕ್ಕೆ ಬೀಗ ಜಡಿದಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ವಿಜಯನಗರ | ಭ್ರೂಣಹತ್ಯೆ ನಡೆಯುತ್ತಿದ್ದರೂ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ: ಡಿವೈಎಫ್‌ಐ ಅರೋಪ
ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಔಷಧ ನಿಯಂತ್ರಣ ಮತ್ತು ಪೊಲೀಸರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್-ಹರಿಯಾಣದ ನಿರ್ದೇಶಕ ಡಾ. ವೀರೇಂದ್ರ ಯಾದವ್ ಈ ಕಾರ್ಯಪಡೆಯ ನೇತೃತ್ವವನ್ನು ವಹಿಸಿದ್ದಾರೆ. ಪ್ರತಿ ಮಂಗಳವಾರ ವಿಮರ್ಶೆ ನಡೆಸುವ, ಕ್ಷೇತ್ರ ಭೇಟಿ ನಡೆಸುವ ಜವಾಬ್ದಾರಿಯನ್ನು ಈ ತಂಡಕ್ಕೆ ನೀಡಲಾಗಿದೆ.
ಹರಿಯಾಣದಲ್ಲಿ 2019ರಲ್ಲಿ 1,000 ಗಂಡು ಮಕ್ಕಳಿಗೆ 923 ಹೆಣ್ಣು ಮಕ್ಕಳಿದ್ದರು. ಆದರೆ 2024ರಲ್ಲಿ ಲಿಂಗಾನುಪಾತ 910ಕ್ಕೆ ಇಳಿದಿದೆ. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಪಾಣಿಪತ್‌ನಲ್ಲಿ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆ ಆರಂಭಿಸಿದ್ದಾರೆ. ಆದರೆ ಅದು ಹೆಸರು ಮಾತ್ರಕ್ಕೆ ಯೋಜನೆಯಾಗಿ ಉಳಿದಿದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇನ್ನಷ್ಟುಯ ಕಡಿಮೆಯಾಗಿದೆ.
ಇದನ್ನು ಓದಿದ್ದೀರಾ? ‘ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ ಜನರ ಆರೋಗ್ಯ ಸಮಸ್ಯೆಗೆ 25 ಕೋಟಿ ರೂ. ಬಿಡುಗಡೆ: ಸಿದ್ದರಾಮಯ್ಯ
ಇಂಡಿಯಾ ಟುಡೇ ತಂಡವು ನಡೆಸಿದ ತನಿಖೆಯಲ್ಲಿ ಗಂಡು ಮಗು ಬೇಕು ಎಂಬ ಕಾರಣಕ್ಕೆ ಭ್ರೂಣಹತ್ಯೆ ಮತ್ತು ಶಿಶುಹತ್ಯೆ ಹೆಚ್ಚಾಗುತ್ತಿದೆ ಎಂದು ಕಂಡುಬಂದಿದೆ. ಈ ವರದಿ ಬೆನ್ನಲ್ಲೇ ಸರ್ಕಾರ ಕಾರ್ಯಪಡೆ ರಚಿಸಿದೆ. 23 ಗರ್ಭಪಾತ ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಗರ್ಭಪಾತ ಕಿಟ್‌ಗಳ ಆನ್‌ಲೈನ್ ಮಾರಾಟ ಮಾಡುತ್ತಿದ್ದ 17 ಮಾರಾಟಗಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಲಿಂಗ ಅನುಪಾತದಲ್ಲಿನ ವ್ಯತ್ಯಾಸವನ್ನು ಕಡಿಮೆ ಮಾಡಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕನಿಷ್ಠ ಒಬ್ಬ ಹೆಣ್ಣು ಮಗುವನ್ನು ಹೊಂದಿರುವ ಸುಮಾರು 62,000 ಗರ್ಭಿಣಿಯರಿಗೆ 104 ಸಹಾಯವಾಣಿ ಮೂಲಕ ಸಮಾಲೋಚನೆ ನೀಡಲಾಗುತ್ತಿದೆ. ಅಧಿಕ ಹೆಣ್ಣು ಮಕ್ಕಳನ್ನು ಹೊಂದಿರುವ ಗರ್ಭಿಣಿಯರ ಮೇಲ್ವಿಚಾರಣೆಗಾಗಿ ಆಶಾ ಕಾರ್ಯಕರ್ತರನ್ನು ನಿಯೋಜಿಸಲಾಗುತ್ತಿದೆ. ಹೆಣ್ಣು ಮಗು ಜನಿಸಿದರೆ 1,000 ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಬೆನ್ನಲ್ಲೇ ಮಾರ್ಚ್‌ನಿಂದ ಲಿಂಗ ಅನುಪಾತವು 1,000 ಗಂಡು ಮಕ್ಕಳಿಗೆ 911 ಹೆಣ್ಣುಮಕ್ಕಳಿಗೆ ಸುಧಾರಿಸಿದೆ ಎಂದು ಹರಿಯಾಣ ಸರ್ಕಾರ ಹೇಳಿಕೊಂಡಿದೆ.
