ಗುರುವಾರ ಬಿಹಾರದ ಹಲವಾರು ಜಿಲ್ಲೆಗಳಲ್ಲಿ ಬಿರುಗಾಳಿ, ಮಿಂಚು ಸಹಿತ ಭಾರೀ ಮಳೆಯಾಗಿದ್ದು, 58 ಮಂದಿ ಸಾವನ್ನಪ್ಪಿದ್ದಾರೆ. ನಳಂದ ಜಿಲ್ಲೆಯೊಂದರಲ್ಲೇ 23 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
58 ಮಂದಿ ಮೃತರ ಪೈಕಿ 35 ಜನರು ಮರ ಅಥವಾ ಗೋಡೆಗಳು ಕುಸಿದು ಸಾವನ್ನಪ್ಪಿದ್ದಾರೆ. ಇತರ 23 ಮಂದಿ ರಾಜ್ಯಾದ್ಯಂತ ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದಾರೆ. ನಳಂದ ಜಲ್ಲೆಯಲ್ಲಿ ಅಧಿಕ ಸಾವು, ಆಸ್ತಿಪಾಸ್ತಿ ಹಾನಿ ಉಂಟಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ಶುಭಂಕರ್ ದೃಢಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರೀ ಮಳೆ | ತಾಪ ಏರಿಕೆಯಿಂದ ದೆಹಲಿಗೆ ಮುಕ್ತಿ, ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಈ ಬಗ್ಗೆ ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶುಭಂಕರ್, “ಮರಗಳು ಅಥವಾ ಗೋಡೆಗಳು ಕುಸಿದು 22 ಜನರು ಸಾವನ್ನಪ್ಪಿದ್ದಾರೆ. ಒಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ” ಎಂದು ಹೇಳಿದರು.
“ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿರ್ದೇಶನದಂತೆ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ. ಹಲವು ಮಂದಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಉಳಿದವರಿಗೆ ಶುಕ್ರವಾರವೇ ಪಾವತಿಸಲಾಗುವುದು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬಿಹಾರ | ಸಿಡಿಲು ಬಡಿದು ಮತ್ತೆ 12 ಮಂದಿ ಸಾವು, ಮೃತರ ಸಂಖ್ಯೆ 40ಕ್ಕೆ ಏರಿಕೆ
ಮೂರರಿಂದ ನಾಲ್ಕು ಗಾಯಾಳುಗಳು ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಳಂದದಲ್ಲಿ ಚಂಡಮಾರುತವು ವ್ಯಾಪಕ ನಾಶನಷ್ಟವನ್ನುಂಟುಮಾಡಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳು ಮತ್ತು ಬೆಳೆಗಳಿಗೆ ತೀವ್ರ ಹಾನಿಯಾಗಿದೆ.
“ಐದು ಜಾನುವಾರುಗಳೂ ಸಾವನ್ನಪ್ಪಿದೆ. ಪರಿಹಾರ ನೀಡುವ ಮುನ್ನ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸಾವಿನ ವರದಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ನಳಂದ ಜಿಲ್ಲೆಯಲ್ಲಿ 18 ಕಿ.ಮೀ.ಗೂ ಹೆಚ್ಚು ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ. 300 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಹಲವಾರು ಟ್ರಾನ್ಸ್‌ಫಾರ್ಮರ್‌ಗಳು ನಾಶವಾಗಿವೆ. ವಿದ್ಯುತ್ ಸಂಪರ್ಕ ಮತ್ತೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ.
