ಅಜ್ಞಾನದ ಅಂಧಕಾರವನ್ನು ಒಡೆದೋಡಿಸಲು ಮಹಿಳೆ ಮತ್ತು ದಲಿತರಿಗೆ ಜ್ಞಾನದ ಬೆಳಕನ್ನು ನೀಡಲು ಮುಂದಾದ ಮಹಾ ಪುರುಷ ಜ್ಯೋತಿರಾವ್ ಫುಲೆ ಎಂದು ಸಾಹಿತಿ, ಸಾಮಾಜಿಕ ಚಿಂತಕಿ ಸರಸ್ವತಿ ಹೇಳಿದರು.
ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, “ಮೌಢ್ಯ, ಕಂದಾಚಾರಗಳ ವಿರುದ್ಧ ಸತತ ಹೋರಾಟ ನಡೆಸಿದರು. ಅವರ ಚಿಂತನೆಗಳು ಇಂದಿನ ಎಲ್ಲಾ ಸಮುದಾಯಗಳಿಗೆ ಪ್ರಸ್ತುತವಾಗಿವೆ. ಜ್ಞಾನ ಪ್ರಸಾರದ ಕಾರ್ಯಕ್ಕೆ ಅವರು ಅನೇಕರ ಬೆಂಬಲ ಮತ್ತು ಸಹಕಾರದೊಂದಿಗೆ ಸಂಘಟಿತ ಪ್ರಯತ್ನಕ್ಕೆ ಮುಂದಾದರು” ಎಂದರು.
ದಲಿತ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಶ್ರೀನಾಥ್ ಪೂಜಾರಿ ಮಾತನಾಡಿ, “ವಿಜಯಪುರ ಜಿಲ್ಲೆ ದಿನದಿಂದ ದಿನಕ್ಕೆ ಕೋಮುದ್ವೇಷಕ್ಕೆ ಬಲಿಯಾಗುತ್ತಿದೆ. ಇದರ ವಿರುದ್ಧ ಬಲಿಷ್ಠವಾದ ಜನಾಂದೋಲನ ಬೆಳೆಸುವುದು ಅನಿವಾರ್ಯವಾಗಿದೆ. ಬಹುತ್ವ ಭಾರತವನ್ನು ನಾವೆಲ್ಲ ಜಾರಿ ಮಾಡಲು ಶ್ರಮ ವಹಿಸಬೇಕಾಗಿದೆ. ಅಂಬೇಡ್ಕರ್ ಚಿಂತನೆಗಳನ್ನು ನಮ್ಮೊಳಗೂ ಬೆಳೆಸಿಕೊಳ್ಳಲು ಇಂತಹ ಹಬ್ಬಗಳು ಪೂರಕವಾಗಿವೆ” ಎಂದು ತಿಳಿಸಿದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಫಾ. ಫ್ರಾನ್ಸಿಸ್ ಜೋಸೆಫ್ ಮಾತನಾಡಿ, “ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟವರು ಜ್ಯೋತಿಬಾ ಫುಲೆ. ಇಂದು ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದಡಿ ಇಡುತ್ತಿರುವುದಕ್ಕೆ ಮುಖ್ಯ ಕಾರಣ ಅಂಬೇಡ್ಕರರ ಸಂವಿಧಾನ. ಸಂವಿಧಾನಕ್ಕೆ ಅಪಚಾರ ಮಾಡುವವರ ವಿರುದ್ಧ ನಾವು ಒಗ್ಗೂಡಿ ಹೋರಾಡುವ ಅವಶ್ಯಕತೆ ಇದೆ. ತಳ ಸಮುದಾಯಗಳನ್ನು ಮುನ್ನಡೆಗೆ ತರುವ ನಿಟ್ಟಿನಲ್ಲಿ ಜ್ಯೋತಿಬಾ ಫುಲೆ ಅವರ ಶ್ರಮ ಎಷ್ಟಿದೆ ಅಷ್ಟೇ ಫಾತಿಮಾ ಶೇಖ್ ಅವರದೂ ಕೂಡ ಇದೆ” ಎಂದು ಸ್ಮರಿಸಿದರು.
ಇದನ್ನೂ ಓದಿ: ವಿಜಯಪುರ | ಬೆಳೆ ಹಾನಿ; ವಿಮಾ ಕಂಪನಿ ವಿರುದ್ಧ ರೈತರ ಆಕ್ರೋಶ
ಕಾರ್ಯಕ್ರಮದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಫಾದರ್ ಟಿಯೋಲ್ ಮಾಚಾದೊ, ದಲಿತ ಸಂಘರ್ಷ ಸಮಿತಿ ನಾಗವಾರ ಬಣ್ಣದ ಚೆನ್ನು ಕಟ್ಟಿಮನಿ, ಹಿರಿಯ ಪತ್ರಕರ್ತರಾದ ಅನಿಲ ಹೊಸಮನಿ,ಮಹೇಶ್ವರಿ ಮಠಪತಿ, ಮಾನವ ಬಂದತ್ವ ವೇದಿಕೆಯ ಪ್ರಭುಗೌಡ ಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ, ಅಕ್ಷಯ ಅಜಮನಿ, ಮಾದೇಶ ಚಲವಾದಿ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು ದಲಿತ ವಿದ್ಯಾರ್ಥಿ ಪರಿಷತ್ತಿನ ನಾಯಕರು ಜಾಗೃತ ಕರ್ನಾಟಕದ ನಾಯಕರು ಇತರರು ಇದ್ದರು.
