ಕೆಜಿಎಫ್, ಹೊಂದಿಸಿ ಬರೆಯಿರಿ ಚಿತ್ರಗಳಲ್ಲಿ ನಟಿಸಿ, ಸಿನಿಪ್ರಿಯರ ಮನ ಗೆದ್ದಿರುವ ನಟಿ ಅರ್ಚನಾ ಜೋಯಿಸ್ ಅವರು ಸದ್ಯ, ‘ಯುದ್ಧಕಾಂಡ‘ ಸಿನಿಮಾದಲ್ಲಿ ತೊಡಗಿದ್ದಾರೆ. ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಅರ್ಚನಾ, ‘ನಾನು ಬಿಟ್ಟರೂ, ಈ ಪಾತ್ರ ನನ್ನನ್ನು ಬಿಡಲಿಲ್ಲ. ಅದೊಂದು ಹೋರಾಟದ ಪಾತ್ರ’ ಎಂದಿದ್ದಾರೆ.
ನಟ ಅಜಯ್ ರಾವ್ ಮುಖ್ಯಭೂಮಿಕೆಯಲ್ಲಿ ನಟಿಸಿ, ನಿರ್ಮಾಣ ಮಾಡಿರುವ, ಪವನ್ ಭಟ್ ನಿರ್ದೇಶನದ ಯುದ್ಧಕಾಂಡ ಸಿನಿಮಾ ಏಪ್ರಿಲ್ 18ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ನಟಿ ಅರ್ಚನಾ ಜೋಯಿಸ್ ಅವರು ‘ನಿವೇದಿತಾ’ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವೂ ಭಾವನಾತ್ಮಕತೆಯನ್ನು ಹೊಂದಿರುವ ಪಾತ್ರವಾಗಿದ್ದು, ತಮ್ಮನ್ನು ಗಾಢವಾಗಿ ಕಾಡಿದೆ. ಸಿನಿಮಾ ಮತ್ತು ತಮ್ಮ ಪಾತ್ರವು ಸಮಾಜದಲ್ಲಿ ಜಾಗೃತಿ ಮೂಡಿಸುವ ನೆಲೆಯನ್ನು ಒಳಗೊಂಡಿದೆ ಎಂದು ಅರ್ಚನಾ ಹೇಳಿಕೊಂಡಿದ್ದಾರೆ.
“ಕೆಜಿಎಫ್ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ನನಗೆ ಅಮ್ಮನ ಪಾತ್ರಗಳೇ ಹೆಚ್ಚಾಗಿ ಬರುತ್ತಿದ್ದವು. ಯುದ್ಧಕಾಂಡ ಸಿನಿಮಾದಲ್ಲಿಯೇ ಅಮ್ಮನದ್ದೇ ಪಾತ್ರ ಎಂದಿದ್ದಾಗ, ಚಿತ್ರತಂಡದ ಭಾಗವಾಗಲು ನಿರಾಕರಿಸಿದ್ದೆ. ಆದರೆ, ಅಜಯ್ ರಾವ್ ಅವರು ನಾಯಕ ನಟಿಯ ಪಾತ್ರ ಎಂದು ಹೇಳಿದರು. ಬಳಿಕ, ಸಿನಿಮಾ ಮಾಡಲು ಒಪ್ಪಿಕೊಂಡೆ. ನಿರ್ದೇಶಕ ಪವನ್ ಅವರು ಕತೆ ಹೇಳಿದ ಮೇಲಂತೂ ನಾಯಕ ನಟಿ ಪಾತ್ರಕ್ಕಿಂತ ನಿವೇದಿತಾ ಪಾತ್ರವೇ ಹೆಚ್ಚು ಕಾಡಿತು. ಆ ಪಾತ್ರವು ತೂಕಭರತವಾದದ್ದು. ಹೀಗಾಗಿ, ಆ ಪಾತ್ರವನ್ನೇ ಆಯ್ದುಕೊಂಡೆ” ಎಂದು ಹೇಳಿದ್ದಾರೆ.
“ನಿವೇದಿತಾ ಪಾತ್ರಕ್ಕೆ ಬಹಳಷ್ಟು ಗಂಭೀರತೆ ಇದೆ. ರೋಷ, ಆಕ್ರೋಶ, ಹೋರಾಟದ ಪಾತ್ರವದು. ಪಾತ್ರದಲ್ಲಿ ಭಾವನಾತ್ಮಕ ಅಂಶಗಳಿವೆ. ಹೀಗಾಗಿ, ನಿವೇದಿತಾ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡ ಬಳಿಕ, ಪಾತ್ರದಲ್ಲಿನ ಹಾವ, ಭಾವ, ನಡವಳಿಕೆಗಳ ತಯಾರಿಗಾಗಿ ಮನಶಾಸ್ತ್ರಜ್ಞರ ಸಲಹೆಯನ್ನೂ ಪಡೆದುಕೊಂಡೆ. ಒಂದಷ್ಟು ತಯಾರಿಗಳನ್ನು ನಡೆಸಿದೆ” ಎಂದು ಅವರು ಹೇಳಿದ್ದಾರೆ.
ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆ ಹಾಗೂ ಅತ್ಯಾಚಾರ ಮತ್ತು ಅವುಗಳ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದ ಕತೆಗಳಿರುವ ಹಲವಾರು ಸಿನಿಮಾಗಳು ಈಗಾಗಲೇ ಬಂದಿವೆ. ಆದರೂ, ಯುದ್ಧಕಾಂಡ ಸಿನಿಮಾ ವಿಭಿನ್ನದೆ. ಸಿನಿಮಾದಲ್ಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ತಾಯಿ ನ್ಯಾಯಕ್ಕಾಗಿ ನಡೆಸುವ ಹೋರಾಟವೇ ಚಿತ್ರದ ಪ್ರಮುಖ ಸಾರವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಸಿನಿಮಾದಲ್ಲಿ ನಟ ಅಜಯ್ ರಾವ್ ಅವರು ವಕೀಲನಾಗಿ ಅಭಿನಯಿಸಿದ್ದಾರೆ.