- ಆದಿಪುರುಷ್ ನಿಷೇಧಿಸಬೇಕು ಎಂದು ಕೋರಿ ವಕೀಲ ಕುಲದೀಪ್ ತಿವಾರಿ ಅರ್ಜಿ
- ಸಿನಿಮಾ ನಿಷೇಧ ಕುರಿತ ಅರ್ಜಿ ವಿಚಾರಣೆ ನಡೆಸುತ್ತಿರುವ ಲಖನೌ ಪೀಠ
ಆದಿಪುರುಷ್ ಚಲನಚಿತ್ರದ ಸಂಭಾಷಣೆ ಕುರಿತು ಅಲಹಾಬಾದ್ ಹೈಕೋರ್ಟ್ ಮಂಗಳವಾರ (ಜೂನ್ 27) ಚಿತ್ರದ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ ಆಕ್ಷೇಪಾರ್ಹ ಮಾತುಗಳ ಆರೋಪಕ್ಕೆ ಸಂಬಂಧಿಸಿ ವಾರದೊಳಗೆ ಉತ್ತರಿಸುವಂತೆ ನ್ಯಾಯಾಲಯ ಸಂಭಾಷಣೆಕಾರ ಮನೋಜ್ ಮುಂತಶಿರ್ ಶುಕ್ಲಾ ಅವರಿಗೆ ನ್ಯಾಯಾಲಯ ನೋಟಿಸ್ ನೀಡಿದೆ.
ಚಿತ್ರದಲ್ಲಿನ ಆಕ್ಷೇಪಾರ್ಹ ಸಂಭಾಷಣೆ ಹಿನ್ನೆಲೆ ಚಲನಚಿತ್ರ ನಿಷೇಧಿಸಬೇಕು ಎಂದು ಕೋರಿ ವಕೀಲ ಕುಲದೀಪ್ ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ವಿಚಾರಣೆ ನಡೆಸಿತು.
ಆದಿಪುರುಷ್ ಸಿನಿಮಾ ಬಗೆಗಿನ ಅರ್ಜಿಯನ್ನು ಪೀಠ ಸೋಮವಾರದಿಂದ (ಜೂನ್ 26) ವಿಚಾರಣೆ ನಡೆಸುತ್ತಿದೆ.
ಸಿನಿಮಾದ ಸಂಭಾಷಣೆಗಳು ಒಂದು ದೊಡ್ಡ ವರ್ಗವನ್ನು ಕೆರಳುವಂತೆ ಮಾಡಿವೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಿನಿಮಾ ತಂಡ ಉತ್ತರಿಸಬೇಕು. ಅದಕ್ಕಾಗಿ ಸಂಭಾಷಣೆಕಾರ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಕಕ್ಷಿದಾರರನ್ನಾಗಿ ಮಾಡಲಾಗಿದೆ. ಅವರಿಗೆ ನೋಟಿಸ್ ನೀಡಲಾಗಿದ್ದು ಸಂಭಾಷಣೆಗಳ ಆಕ್ಷೇಪಣೆ ಕುರಿತು ವಾರದೊಳಗೆ ಮನೋಜ್ ಪ್ರತಿಕ್ರಿಯೆ ನೀಡಬೇಕು ಎಂದು ಪೀಠ ಹೇಳಿದೆ.
“ರಾಮಾಯಣ ನಮಗೆ ಮಾದರಿಯಾಗಿದೆ. ಆದರೆ ಸಿನಿಮಾದಲ್ಲಿನ ಸಂಭಾಷಣೆಗಳ ಸ್ವರೂಪ ಒಂದು ಪ್ರಮುಖ ಸಮಸ್ಯೆಯಾಗಿದೆ. ಕೆಲವು ಸನ್ನಿವೇಶಗಳು ಬಾಲಿಶವಾಗಿವೆ. ಈ ನಿಟ್ಟಿನಲ್ಲಿ ಚಲನಚಿತ್ರ ಪ್ರಮಾಣೀಕರಣ ಮಂಡಳಿ ತನ್ನ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿಲ್ಲ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
“ಆದಿಪುರುಷ್ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಿರುವುದು ಸಮಧಾನಕರ ಸಂಗತಿ. ಹನುಮಂತ ದೇವರು ಮತ್ತು ಸೀತಾ ದೇವಿಯನ್ನು ಭಿನ್ನವಾಗಿ ತೋರಿಸಲಾಗಿದೆ. ಇಂತಹ ಸಂಗತಿಗಳನ್ನು ಆರಂಭದಿಂದಲೇ ತೆಗೆದುಹಾಕಬೇಕು. ಸಿನಿಮಾದಲ್ಲಿನ ಕೆಲವು ದೃಶ್ಯಗಳು ವಯಸ್ಕರ ವರ್ಗಕ್ಕೆ ಸೇರಿದಂತಿವೆ. ಇಂತಹ ಸಿನಿಮಾಗಳನ್ನು ನೋಡುವುದು ತಂಬಾ ಕಷ್ಟಕರವಾಗಿದೆ” ಎಂದು ಪೀಠ ಉಲ್ಲೇಖಿಸಿದೆ.
“ನಾವು ಸಹಿಷ್ಣುವಾಗಿದ್ದರೆ ಅದನ್ನೂ ಪರೀಕ್ಷಿಸಲಾಗುತ್ತದೆ? ಸಿನಿಮಾದ ಆಕ್ಷೇಪಣೆಗಳ ಕುರಿತು ಪ್ರಮಾಣೀಕರಣ ಮಂಡಳಿ ಏನು ಮಾಡುತ್ತಿದೆ?” ಎಂದು ಪೀಠ ಪ್ರಶ್ನಿಸಿತು.
ಆಕ್ಷೇಪಾರ್ಹ ಸಂಭಾಷಣೆಗಳನ್ನು ಸಿನಿಮಾದಲ್ಲಿ ಈಗಾಗಲೇ ತೆಗೆದು ಹಾಕಲಾಗಿದೆ ಎಂದು ಉಪ ಸಾಲಿಸಿಟರ್ ಜನರಲ್ ಪೀಠಕ್ಕೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆಗೂ ಮುನ್ನ ಕೆಸಿಆರ್‌ಗೆ ಆಘಾತ: ಮಾಜಿ ಸಚಿವರು, ಶಾಸಕರು ಸೇರಿ 35 ಮಂದಿ ‘ಕೈ’ ಸೇರ್ಪಡೆಗೆ ಸಜ್ಜು
ವಿಚಾರಣೆ ಬುಧವಾರ (ಜೂನ್ 28) ಮುಂದೂಡಿಕೆಯಾಗಿದೆ.
ಚಿತ್ರದಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ. ಇವು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತವೆ. ಆದ್ದರಿಂದ ಆದಿಪುರುಷ್ ಚಲನಚಿತ್ರ ನಿಷೇಧಿಸಬೇಕು ಎಂದು ಕೋರಿ ವಕೀಲ ಕುಲದೀಪ್ ತಿವಾರಿ ಅವರು ಅರ್ಜಿ ಸಲ್ಲಿಸಿದ್ದರು.