ದೇಶಕ್ಕೆ ರಾಜಪ್ರಭುತ್ವಕ್ಕಿಂತ ಪ್ರಜಾಪ್ರಭುತ್ವದ ಅವಶ್ಯಕತೆಯಿದೆ ಎಂದು ತಿಳಿದ ಡಾ.ಅಂಬೇಡ್ಕರ್ ಅವರು ಬಹುತ್ವ ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಸಂವಿಧಾನ ಎಂಬ ವಿಷಯ ಮೇಲೆಯೇ ʼಭಾಗ್ಯವಿದಾತʼ ಕೃತಿ ಬೆಳಕು ಚೆಲ್ಲುತ್ತದೆ ಎಂದು ಸಾಹಿತಿ ಡಾ.ಧನರಾಜ ತುಡಮೆ ಅಭಿಪ್ರಾಯಪಟ್ಟರು.
ಬೀದರ್ ನಗರದ ಮಹಾಲಕ್ಷ್ಮೀ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ ಭಾರತ ಸಂವಿಧಾನದ ಮಹತ್ವ ಸಾರುವ ʼಭಾಗ್ಯವಿಧಾತʼ ಕವನ ಸಂಕಲನ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಪುಸ್ತಕ ಕುರಿತು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ವಿಶ್ವದ ಅಪಾರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಸಂವಿಧಾನ ರಚನೆ ಸುಲಭದ ಮಾತಲ್ಲ. ಸೂಜಿಯ ಮೊನೆಯಷ್ಟೂ ಲೋಪವಿಲ್ಲದ ಸಂವಿಧಾನ ರಚಿಸಿ ಭಾರತ ದೇಶಕ್ಕೆ ಅರ್ಪಿಸಿದ್ದಾರೆ. ದೇಶದ ಸರ್ವಜನರ ಅಭ್ಯುದಯಕ್ಕಾಗಿ ರಚಿಸಲಾದ ಸಂವಿಧಾನ ಮೇಲೆ ಬೆಳಕು ಚೆಲ್ಲುವ 48 ಮೌಲಿಕ ಕವಿತೆಗಳ ಕೃತಿ ಓದುಗರನ್ನು ಆಕರ್ಷಿಸುತ್ತದೆʼ ಎಂದರು.
ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಮಹಿಳೆಯರ ನೋವು ಅರ್ಥೈಸಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳಾ ಸಮಾನತೆಗಾಗಿ ಅನೇಕ ಹಕ್ಕುಗಳನ್ನು ಒದಗಿಸಿಕೊಟ್ಟಿದ್ದಾರೆ. ಬಾಬಾ ಸಾಹೇಬರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ ಎನಿಸುತ್ತವೆ. ನಾವೆಲ್ಲರೂ ಸಂವಿಧಾನ ಮಾರ್ಗದಲ್ಲಿ ಮುನ್ನಡೆಯೋಣʼ ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅವರು ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ʼಸಂವಿಧಾನ ಅರ್ಥೈಸಿಕೊಂಡವರು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಲು ಸಾಧ್ಯ. ಯಾವುದೇ ಒಂದು ಜಾತಿ-ಧರ್ಮದವರಿಗೆ ಮಾತ್ರ ಅಲ್ಲದೇ ದೇಶದ ಸರ್ವರಿಗೂ ಸಂವಿಧಾನ ನ್ಯಾಯದ ಹಕ್ಕು ನೀಡಿದ್ದಾರೆ. ಸಮಾಜದಲ್ಲಿ ಸಂವಿಧಾನ ಜಾಗೃತಿಗೆ ʼಭಾಗ್ಯವಿದಾತʼ ಪುಸ್ತಕ ಅತ್ಯಂತ ಮಹತ್ವದಾಗಿದೆʼ ಎಂದು ಶ್ಲಾಘಿಸಿದರು.
ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮನೋಹರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ʼವ್ಯಕ್ತಿಯ ಬದುಕಿನ ತುಡಿತ, ಭಾವನೆಗಳ ಹೊಯ್ದಾಟ, ವಾದ-ವಿವಾದಗಳ ಬಗೆಹರಿಯುವಿಕೆಗೆ ಸಂವಿಧಾನ ಬೇಕೇ ಬೇಕು. ವ್ಯಕ್ತಿ ಸಮಸ್ಯೆಗಳನ್ನು ಹಲವು ಸಮಸ್ಯೆಗಳಿಗೆ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಪ್ರತಿಯೊಬ್ಬರನ್ನು ಸಂವಿಧಾನ ಓದಿಸುವ ಕಾರ್ಯ ಹೆಚ್ಚೆಚ್ಚು ನಡೆಯಬೇಕಿದೆʼ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪೀಠಿಕೆ ಪಠಣ ಮಾಡಲಾಯಿತು. ʼಭಾಗ್ಯವಿದಾತʼ ಕವನ ಸಂಕಲನಕ್ಕೆ ಕವಿತೆ ಬರೆದ ಕವಿಗಳನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಜಾತಿ ಜನಗಣತಿ ಲಕೋಟೆ ಓಪನ್, ಜಾರಿ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ
ಪ್ರಮುಖರಾದ ಡಾ.ದೇವಿದಾಸ ತುಮಕುಂಟೆ, ಡಾ.ರಜಿಯಾ ಬಳಬಟ್ಟಿ, ಮಾರುತಿ ಬೌದ್ಧೆ, ನಾಗಶೆಟ್ಟಿ ಪಾಟೀಲ ಗಾದಗಿ, ಸಂಜೀವಕುಮಾರ್ ಅತಿವಾಳೆ, ಸುಜಾತಾ ಹೊಸಮನಿ, ದಿಲೀಪ ಆರ್., ಎಸ್.ಬಿ.ಕುಚಬಾಳ, ಅಶ್ವಜಿತ ದಂಡಿನ್, ಡಾ.ಶ್ರೇಯಾ ಯಶಪಾಲ, ರಮೇಶ ಬಿರಾದಾರ, ಅಜಿತ್ ನೇಳಗಿ, ಮಾಣಿಕ ನೇಳಗಿ, ಮಹೇಶ ಗೋರನಾಳಕರ್, ರೂಪಾ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಿರಿಯ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಪ್ರಾರ್ಥಿಸಿದರು. ಟ್ರಸ್ಟ್ ಖಜಾಂಚಿ ಸುಭಾಷ ರತ್ನ ಸ್ವಾಗತಿಸಿದರು. ಟ್ರಸ್ಟ್ ಉಪಾಧ್ಯಕ್ಷ ಸುಮಂತ ಕಟ್ಟಿಮನಿ ನಿರೂಪಿಸಿದರು. ಕಾರ್ಯದರ್ಶಿ ಪ್ರವೀಣಚಂದ್ರ ವಂದಿಸಿದರು.