ಸಮಾಜಕ್ಕೆ ವಚನಕಾರರ ಬದುಕು-ಬರಹ ಆದರ್ಶವಾಗಿದೆ. ವಚನಗಳ ಮೂಲಕ ಲೋಕಕ್ಕೆ ಕರ್ಪೂರದ ಸುಂಗಧ ದ್ರವ್ಯ ಬೀರಿ ಮರೆಯಾದರು ಎಂದು ಡಾ.ಕಾವ್ಯಶ್ರೀ ಮಹಾಗಾಂವಕರ ನುಡಿದರು.
ವಚನಾಮೃತ ಕನ್ನಡ ಸಂಘ ಹಾಗೂ ಪ್ರೊ.ಬಿ.ಜಿ.ಮೂಲಿಮನಿ ಫೌಂಡೇಶನ್ ಸಹಯೋಗದಲ್ಲಿ ಗುರುವಾರ ಸಂಜೆ ಆಯೋಜಿಸಿದ ಶಿವಶರಣೆಯರಾದ ಅಕ್ಕಾನಾಗಮ್ಮ ಹಾಗೂ ಮುಕ್ತಾಯಕ್ಕ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿ ಡಾ.ರಾಮಚಂದ್ರ ಗಣಾಪೂರ ಅವರು ಶರಣೆ ಅಕ್ಕನಾಗಮ್ಮನವರ ಕುರಿತು ಉಪನ್ಯಾಸ ನೀಡಿ, ʼಬಸವಣ್ಣವರ ಹಿರಿಯ ಸಹೋದರಿ ಅಕ್ಕನಾಗಮ್ಮ ಅವರು ಬರೆದ ಮೌಲಿಕವಾದ 15 ವಚನಗಳು ಲಭ್ಯವಾಗಿವೆ. ʼಬಸವಣ್ಣಪ್ರಿಯ ಚೆನ್ನಸಂಗಯ್ಯʼ ಎಂಬ ಕಾವ್ಯನಾಮದಿಂದ ಬರೆದ ವಚನಗಳು ವೈಚಾರಿಕ ಪ್ರಜ್ಞೆಗೆ ಸಾಕ್ಷಿಯಾಗಿವೆ. ಚೆನ್ನಬಸವಣ್ಣನವರಂತಹ ಮಗನನ್ನು ಹೆತ್ತ ಈ ತಾಯಿ ಮಗನಿಗೆ ಒಳ್ಳೆಯ ಸಂಸ್ಕಾರ ನೀಡಿ ಜ್ಞಾನದ ಖಣಿಯಾಗಿ ಬೆಳೆಸಿದರುʼ ಎಂದು ನುಡಿದರು.
ಶಿವಶರಣೆ ಮುಕ್ತಾಯಕ್ಕ ಕುರಿತು ಉಪನ್ಯಾಸ ನೀಡಿದ ಸೂರ್ಯಕಲಾ ಹೊಡಮನಿ ಮಾತನಾಡಿ, ʼಮುಕ್ತಾಯಕ್ಕ ಅವರು ʼಅಜಗಣ್ಣ ತಂದೆʼ ವಚನಾಂಕಿತ ಇಟ್ಟುಕೊಂಡು 36 ವಚನಗಳನ್ನು ರಚಿಸಿದ್ದಾರೆ. ಮುಕ್ತಾಯಕ್ಕ ಅವರು ʼಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಎಂಬ ವಚನದಲ್ಲಿ ʼಕಾಯಕ ತತ್ವʼ ಕುರಿತು ತಿಳಿಸಿದ್ದಾರೆʼ ಎಂದರು.

ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಕೆ.ಸತ್ಯಮೂರ್ತಿ ಮಾತನಾಡಿ, ʼಕನ್ನಡ ಭಾಷೆ, ಕನ್ನಡ ಸಾಹಿತ್ಯ, ವಚನ ಸಾಹಿತ್ಯ ಬೆಳವಣಿಗೆಗೆ ನಾವೆಲ್ಲರೂ ಇನ್ನೂ ಬಹಳಷ್ಟು ಕಾಳಜಿಯಿಂದ ಕೆಲಸ ಮಾಡಬೇಕಾಗಿದೆʼ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ʼಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ವಚನ ಚಳವಳಿ ನಡೆಸಿದ ವಚನಕಾರರ ಬದುಕು-ಬರಹ ಕುರಿತು ನಾವೆಲ್ಲರೂ ತಿಳಿದುಕೊಳ್ಳುವುದು ತುಂಬಾ ಅವಶ್ಯಕತೆ ಇದೆʼ ಎಂದು ಹೇಳಿದರು.
ಶಿವಲಿಂಗಪ್ಪ ಜಲಾದೆ ಅವರು ಮೂಲಿಮನಿ ಫೌಂಡೇಶನ್ ಸ್ಥಾಪನೆ ಉದ್ದೇಶ ಕುರಿತು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಂವಿಧಾನ ಮೇಲೆ ಬೆಳಕು ಚೆಲ್ಲುವ ʼಭಾಗ್ಯವಿದಾತʼ ಕೃತಿ : ಧನರಾಜ ತುಡಮೆ
ಪ್ರವೀಣ ಮ್ಯೂಜಿಕ್ ಅಕಾಡೆಮಿಯ ಮಕ್ಕಳು ನಾಡಗೀತೆ ಹಾಡಿದರು. ಹಿರಿಯ ಕಲಾವಿದ ಶಂಭುಲಿಂಗ ವಾಲದೊಡ್ಡಿ ಹಾಗೂ ಶ್ರೀಕಾಂತ ಬಿರಾದಾರ ಅವರು ವಚನ ಗಾಯನ ನಡೆಸಿಕೊಟ್ಟರು. ಬಸವರಾಜ ಮೂಲಗೆ ನಿರೂಪಿಸಿದರು, ಬಸವರಾಜ ಬಿರಾದಾರ ಸ್ವಾಗತಿಸಿದರು. ಸಂತೋಷ ಮಂಗಳೂರೆ ವಂದಿಸಿದರು.