‘ಪುಲೆ’ ಚಿತ್ರದ ವಿವಾದದ ಬಗ್ಗೆ ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ-ಆರ್‌ಎಸ್‌ಎಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾತಿ ತಾರತಮ್ಯ ಮತ್ತು ಅನ್ಯಾಯದ ನಿಜವಾದ ಸತ್ಯ ಮುನ್ನೆಲೆಗೆ ಬರದಂತೆ ಅವರು (ಬಿಜೆಪಿ, ಆರ್‌ಎಸ್‌ಎಸ್) ಪ್ರತಿ ಹಂತದಲ್ಲೂ ದಲಿತ-ಬಹುಜನ ಇತಿಹಾಸವನ್ನು ಅಳಿಸಿಹಾಕಲು ಬಯಸಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
‘ಫುಲೆ’ ಸಿನಿಮಾ ಸಮಾಜ ಸುಧಾರಕರಾದ ಜ್ಯೋತಿರಾವ್ ಗೋವಿಂದರಾವ್ ಫುಲೆ ಮತ್ತು ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಆದರೆ ಚಿತ್ರದ ನಿರ್ದೇಶಕ ಅನಂತ್ ಮಹಾದೇವನ್, “ಬ್ರಾಹ್ಮಣ ಸಮುದಾಯದಿಂದ ಬಂದ ಆಕ್ಷೇಪಣೆಗಳಿಂದಾಗಿ ಇದು ವಿಳಂಬವಾಗಿದೆ ಮತ್ತು ಸೆನ್ಸಾರ್ ಮಂಡಳಿ ತಿದ್ದುಪಡಿಗಳನ್ನು ಸೂಚಿಸಿದ್ದರಿಂದ ಅಲ್ಲ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಜ್ಯೋತಿಬಾ ಜನ್ಮದಿನ | ಬ್ರಾಹ್ಮಣಶಾಹಿ ವಿರುದ್ಧ ಹೋರಾಟ ನಡೆಸಿದವರು ಮಹಾತ್ಮ ಫುಲೆ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಒಂದೆಡೆ, ಬಿಜೆಪಿ-ಆರ್‌ಎಸ್‌ಎಸ್ ನಾಯಕರು ಫುಲೆ ಅವರಿಗೆ ಮೇಲ್ನೋಟಕ್ಕೆ ಗೌರವ ಸಲ್ಲಿಸುತ್ತಾರೆ. ಮತ್ತೊಂದೆಡೆ, ಅವರು ಫುಲೆ ಅವರ ಜೀವನದ ಮೇಲೆ ನಿರ್ಮಿಸಲಾದ ಚಿತ್ರವನ್ನು ಸೆನ್ಸಾರ್ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಮಹಾತ್ಮ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ತಮ್ಮ ಇಡೀ ಜೀವನವನ್ನು ಜಾತಿವಾದದ ವಿರುದ್ಧದ ಹೋರಾಟಕ್ಕೆ ಮುಡಿಪಾಗಿಟ್ಟರು. ಆದರೆ ಸರ್ಕಾರ ಆ ಹೋರಾಟ ಮತ್ತು ಅದರ ಐತಿಹಾಸಿಕ ಸಂಗತಿಗಳು ತೆರೆಯ ಮೇಲೆ ಬರುವುದನ್ನು ಬಯಸುವುದಿಲ್ಲ” ಎಂದು ಆರೋಪಿಸಿದ್ದಾರೆ.
ಪ್ರತೀಕ್ ಗಾಂಧಿ ಜ್ಯೋತಿಬಾ ಫುಲೆಯಾದರೆ, ಪತ್ರಲೇಖಾ ಸಾವಿತ್ರಿಬಾಯಿ ಜ್ಯೋತಿಬಾ ಫುಲೆಯಾಗಿ ನಟಿಸಿರುವ ‘ಫುಲೆ’ ಸಿನಿಮಾ ಶುಕ್ರವಾರ ಬಿಡುಗಡೆಯಾಗಬೇಕಿತ್ತು. ಆದರೆ ಏಪ್ರಿಲ್ 25 ರಂದು ಚಿತ್ರಮಂದಿರಗಳಿಗೆ ಬರಲಿದೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಏಪ್ರಿಲ್ 7 ರಂದು ನಿರ್ಮಾಪಕರಿಗೆ ‘ಯು’ ಪ್ರಮಾಣಪತ್ರವನ್ನು ನೀಡಿದೆ. ಆದರೆ ಸಿನಿಮಾದಲ್ಲಿ ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದ್ದಾರೆ. ಏಪ್ರಿಲ್ 10 ರಂದು ಟ್ರೇಲರ್ ಆನ್‌ಲೈನ್‌ನಲ್ಲಿ ಬಿಡುಗಡೆಯಾದ ನಂತರ, ಬ್ರಾಹ್ಮಣ ಸಮುದಾಯದ ಕೆಲವರು ತಮ್ಮನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಹೇಳಿ ಆಕ್ಷೇಪಣೆ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಮೂಲದ ಸಂಘಟನೆ ಹಿಂದೂ ಮಹಾಸಂಘದ ಅಧ್ಯಕ್ಷ ಆನಂದ್ ದಾವೆ ಟ್ರೇಲರ್ ವೀಕ್ಷಿಸಿದ ನಂತರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಬ್ರಾಹ್ಮಣ ಸಮುದಾಯದ ಬಗ್ಗೆ ಅಷ್ಟು ಕೆಟ್ಟದಾಗಿ ತೋರಿಸಿರುವುದು ಅನ್ಯಾಯ ಎಂದು ಹೇಳಿದರು.
