ವೀರಶೈವ, ಲಿಂಗಾಯತ ಧರ್ಮದ ಆಚರಣೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಅಂಗೈನಲ್ಲಿ ಲಿಂಗಧರಿಸಿ ನಿತ್ಯವೂ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗಿದೆ. ಸತ್ಯನಾರಾಯಣ ಪೂಜೆಗೂ ಲಿಂಗಾಯತ, ವೀರಶೈವರಿಗೂ ಏನು ಸಂಬಂಧ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿದರು
ತುಮಕೂರು ನಗರದಲ್ಲಿ ನಡೆದ ಸೇವಾಧೀಕ್ಷೆ, ಸಾಧಕರಿಗೆ ಸನ್ಮಾನ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೀರಶೈವರು ಮತ್ತೊಂದು ಧರ್ಮದ ಅನುಸರಣೆ ಮಾಡುವುದು ಸರಿಯಲ್ಲ. ಪರಧರ್ಮದ ಸಹಿಷ್ಣುತೆ ಇರಲಿ. ಆದರೆ ನಮ್ಮ ಧರ್ಮದ ಆಚರಣೆ ಬಿಡಬಾರದು ಎಂದರು.
ಯಾರು ಲಿಂಗಧಾರಣೆ ಮಾಡಿಕೊಂಡಿಲ್ಲವೋ, ಅವರಿಗೆ ಸೇವಾಧೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿ ಒಗ್ಗಟ್ಟು ಕೇವಲ ರಾಜಕೀಯ ಅಧಿಕಾರಕ್ಕಾಗಿ ಮಾತ್ರ ಆದರೆ ಸಾಲದು. ಎಲ್ಲಾ ರಂಗದಲ್ಲಿಯೂ ವೀರಶೈವ, ಲಿಂಗಾಯತರು ಮುಂದೆ ಬರುವಂತೆ ಆಗಬೇಕು ಎಂದರು
ಅಖಿಲ ಭಾರತ ವೀರಶೈವ ಮಹಾ ಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ ಮಾತನಾಡಿ, ಭಾರತದ ಒಟ್ಟಾರೆ ಜನಸಂಖ್ಯೆಯ ಶೇಕಡಾ 3ರಷ್ಟಿರುವ ಬ್ರಾಹ್ಮಣರೇ ಇಡೀ ದೇಶವನ್ನು ಲೀಡ್ ಮಾಡುತ್ತಿದ್ದಾರೆ. ಬ್ರಾಹ್ಮಣ ಸಮುದಾಯ ರಾಜಕೀಯವಾಗಿ, ಅರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಿಂಹಪಾಲು ಪಡೆದಿದೆ. ಕೇಂದ್ರದ ಮಂತ್ರಿ ಮಂಡಲದಲ್ಲಿ 18 ಜನ ಕ್ಯಾಬಿನೆಟ್ ದರ್ಜೆ ಸಚಿವರಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ನಮ್ಮ ಸಮುದಾಯಕ್ಕೆ ಕ್ಯಾಬಿನ್ ದರ್ಜೆ ಸಚಿವ ಸ್ಥಾನ ಸಿಕ್ಕಿಲ್ಲ. ಒಗ್ಗಟ್ಟಿಲ್ಲದೆ ಹಿಂಳಿದಿದ್ದೇವೆ. ಐಎಎಸ್, ಐಪಿಎಸ್, ರಾಜ್ಯಪಾಲರ ಹುದ್ದೆಗಳಲ್ಲಿ ಬ್ರಾಹ್ಮಣ ಸಮುದಾಯವೇ ಹೆಚ್ಚಿದೆ. ಇದಕ್ಕೆ ಸಂಘಟನೆಯ ಕೊರತೆಯೇ ಕಾರಣ ಎಂದರು
ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಹೇಳಿದಂತೆ ವೀರಶೈವ, ಲಿಂಗಾಯತ ಬೇರೆ ಬೇರೆಯಲ್ಲ. ಎರಡೂ ಒಂದೇ. ನಮ್ಮ ನಡುವಿನ ವ್ಯತ್ಯಾಸವೆಂದರೆ ವೀರಶೈವರೆಂದರೆ ಸಂಸ್ಕೃತ, ಲಿಂಗಾಯತರೆಂದರೆ ಕನ್ನಡ. ಜಾಗತಿಕ ಲಿಂಗಾಯತ ಮಹಾಸಭಾದವರು ನಮ್ಮನ್ನು ಏನು ಟೀಕಿಸಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡವೆಂದು ಶಂಕರ ಬಿದರಿ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಳ್ಳಿ ಚಂದ್ರಶೇಖರ ಸ್ವಾಮೀಜಿ, ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಡಾ. ಶಿವರುದ್ರಶಿವಾಚಾರ್ಯ ಸ್ವಾಮೀಜಿ, ಮಹಾ ಸಭಾದ ಜಿಲ್ಲಾಧ್ಯಕ್ಷ ಡಾ.ಎಸ್. ಪರಮೇಶ್, ಶಾಸಕ ಜಿ.ಬಿ. ಜ್ಯೋತಿಗಣೇಶ್ ಇದ್ದರು.