ಕೂಳಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ಮತ್ತು ಬಿಲ್ ಕಲೆಕ್ಟರ್ ರಶೀದಿಗಳನ್ನು ನೀಡದೆ ಗ್ರಾಮಸ್ಥರಿಗೆ ಮೋಸ ಮಾಡುತ್ತಿದ್ದು, ಈ ಸಂಬಂಧ ಶಿಸ್ತುಕ್ರಮ ಕೈಗೊಳ್ಳಲು ಸಲ್ಲಿಸಿರುವ ದೂರು ಅರ್ಜಿಯ ಸಂಬಂಧ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರೆಕಲ್‌ದೊಡ್ಡಿ ಗ್ರಾಮಸ್ಥರು ಮತ್ತು ಕೆಆರ್‌ಎಸ್ ಪಕ್ಷದಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಮನವಿ ನೀಡಿದರು.
“ಕೂಳಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ಮತ್ತು ಬಿಲ್‌ಕಲೆಕ್ಟರ್ ಕಂದಾಯ ರಶೀದಿ ನೀಡದೆ ಗ್ರಾಮಸ್ಥರಿಗೆ ಮೋಸ ಮಾಡುತ್ತಿದ್ದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕೋರಿ ದೂರು ಅರ್ಜಿ ಸಲ್ಲಿಸಿದ್ದು, ಅದರಂತೆ ಸದರಿ ಮನವಿಯನ್ನು ಸಾರ್ವಜನಿಕರ ಕುಂದುಕೊರತೆ ಅರ್ಜಿಯೆಂದು ಪರಿಗಣಿಸಿ ಆದ್ಯತರ ಮೇರೆಗೆ ಪರಿಶೀಲಿಸಬೇಕು. ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು, ಇದರ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಬೇಕು” ಎಂದು ಅರೆಕಲ್‌ದೊಡ್ಡಿ ಗ್ರಾಮಸ್ಥರು ಒತ್ತಾಯಿಸಿದರು.
“ಸದರಿ ದೂರು ಅರ್ಜಿಗೆ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ಸಲ್ಲಿಸಲು ಮದ್ದೂರು ತಾಲೂಕು ಯೋಜನಾಧಿಕಾರಿ, ಸಹಾಯಕ ನಿರ್ದೇಶಕರು, ತಾಲೂಕು ಪಂಚಾಯತ್ ಅಧಿಕಾರಿಗಳನ್ನು ಒಂಗೊಂಡ ತಂಡ ರಚಿಸಿ, ಖುದ್ದು ಕೂಳಗೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯಲ್ಲಿನ ಕಡತ ಹಾಗೂ ಸ್ಥಳ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಆದರಂತೆ ಪರಿಶೀಲನಾ ತಂಡವು ಮಾರ್ಚ್ 19ರ ಬುಧುವಾರ ಕೂಳಗೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ದೂರುದಾರರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್‌ಗಳಿಂದ ಮಾಹಿತಿ ಹಾಗೂ ದಾಖಲಾತಿಗಳನ್ನು ಪಡೆದು ಪರಿಶೀಲಿಸಿ, ವಿವರವಾದ ವರದಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕಚೇರಿಗೆ ಸಲ್ಲಿಸಿ, ಕೆಳಕಂಡ ಅಂಶಗಳು ಕಂಡುಬಂದಿರುವುದಾಗಿ ತಿಳಿಸುತ್ತ, ಗ್ರಾಮಸ್ಥರು ನೀಡಿರುವ ದಾಖಲೆ ಹಾಗೂ ಹೇಳಿಕೆಗಳ ಆಧಾರದ ಮೇಲೆ ಸತ್ಯಾವಾಗಿರುವುದು ಕಂಡುಬಂದಿದೆ” ಎಂದರು.
ಇದು ಕೇವಲ ಒಂದು ದಾಖಲೆ ಗ್ರಾಮಕ್ಕೆ ಮಾತ್ರ ಸಂಬಂಧಿಸಿದ್ದು, ಸದರಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 9 ಗ್ರಾಮಗಳಿದ್ದು, ಅದರಲ್ಲಿ 4 ಕಂದಾಯ ಗ್ರಾಮ ಮತ್ತು 5 ದಾಖಲೆ ಗ್ರಾಮಗಳಿರುತ್ತವೆ ಎಂದು ವರದಿ ಸಲ್ಲಿಸಿರುತ್ತಾರೆ.
- ಅರೆಕಲ್‌ದೊಡ್ಡಿಯು ಆರುವನಹಳ್ಳಿ ಗ್ರಾಮಕ್ಕೆ ದಾಖಲೆ ಗ್ರಾಮವಾಗಿರುತ್ತದೆ.
- ಒಬ್ಬ ವ್ಯಕ್ತಿಯಿಂದ ಹಣ ಪಡೆದು ಮತ್ತೊಬ್ಬ ವ್ಯಕ್ತಿಯ ಖಾತೆಗೆ ಹಣ ಜಮೆ ಮಾಡಿರುವುದು ಕಂಡುಬಂದಿರುತ್ತದೆ.
- 500/-ರೂ ಹಣ ಪಡೆದು 580/- ರೂಗಳನ್ನು ಬೇರೆಯವರ ಬಿಲ್ಲು ನೀಡಿರುವುದು ಕಂಡುಬಂದಿರುತ್ತದೆ.
- ಗ್ರಾಮಸ್ಥರಿಂದ ಹೆಚ್ಚು ಹಣ ಪಡೆದು ಕಡಿಮೆ ಹಣ ಸರ್ಕಾರಕ್ಕೆ ಜಮಾ ಮಾಡಿರುವುದು ಕಂಡುಬಂದಿರುತ್ತದೆ.
- ಎರಡು ಆಸ್ತಿ ಇರುವ ಗ್ರಾಮಸ್ಥರಿಂದ 3 ಆಸ್ತಿಗೆ ತೆರಿಗೆ ಹಣವನ್ನು ಪಡೆದಿರುವುದು ಕಂಡುಬಂದಿರುತ್ತದೆ.
- ಬೇರೆಯವರ Merchant Copy ನೀಡಿ ಹಣ ವಸೂಲು ಮಾಡಿರುವುದು ಕಂಡುಬಂದಿರುತ್ತದೆ.
- ಹೆಚ್ಚುವರಿಯಾಗಿ ಮಟನ್ ಮಾರ್ಕೆಟ್ ಎಂದು ತೆರಿಗೆ ವಸೂಲಿ ಮಾಡಿರುವುದು ಕಂಡುಬಂದಿರುತ್ತದೆ.
- ಬೇರೆ ಗ್ರಾಮದ ವ್ಯಾಪ್ತಿಯ ಹೆಸರಿನ ಬಿಲ್ಲುಗಳನ್ನು ನೀಡಿ ಹಣ ಪಡೆದಿರುವುದು ಕಂಡುಬಂದಿರುತ್ತದೆ.
- ಮ್ಯುಟೇಷನ್‌ಗೆ ₹1,000 ಪಡೆಯುವ ಬದಲಾಗಿ ₹2,600 ಪಡೆದಿರುವುದು ಕಂಡುಬಂದಿರುತ್ತದೆ.
- ಕಟ್ಟಡ, ಭೂಮಿ, ಬೀದಿದೀಪ ಮತ್ತು ನೀರಿನ ಕರ ಪಡೆದು ಬಿಲ್ ನೀಡಿ ಮತ್ತೆ ನೀರಿನ ಕರವೆಂದು ಹೆಚ್ಚುವರಿ ಹಣ ವಸೂಲಿ ಮಾಡಿರುವುದು ಕಂಡುಬಂದಿರುತ್ತದೆ.
- ಸರ್ಕಾರಕ್ಕೆ 3,518 ರೂಗಳನ್ನು ಜಮಾ ಮಾಡಿ ಅದೇ ವ್ಯಕ್ತಿಯಿಂದ ಹೆಚ್ಚುವರಿಯಾಗಿ 1,5067 ರೂಗಳನ್ನು ಪಡೆದಿರುವುದು ಕಂಡುಬಂದಿರುತ್ತದೆ.
- ದಾಖಲೆಗಳನ್ನು ಪರಿಶೀಲಿಸಿ ಬಾಕಿ ತೆರಿಗೆ ಎಷ್ಟು ಎಂದು ತಿಳಿಸದೆ ಪ್ರತಿ ಬಾರಿಯೂ ಮನಸ್ಸಿಗೆ ಬಂದಂತೆ ತೆರಿಗೆಯನ್ನು ಖಾಲಿ ಪೇಪರಲ್ಲಿ ಬರೆದುಕೊಂಡಿರುವುದು ಸೇರಿದಂತೆ ಬಹುತೇಕೆ ಅಕ್ರಮಗಳು ನಡೆದಿರುವುದು ಕಂಡುಬಂದಿರುತ್ತದೆ. ಇದು ಕೇವಲ ಒಂದು ದಾಖಲೆ ಗ್ರಾಮಕ್ಕೆ ಸಂಬಂಧಿಸಿರುತ್ತದೆ.
ಈ ಸುದ್ದಿ ಓದಿದ್ದೀರಾ? ವೇಮುಲ ಆತ್ಮಹತ್ಯೆ ಸಂದರ್ಭದ ಉಪಕುಲಪತಿ ಅಪ್ಪಾರಾವ್ ಅವರನ್ನು ಕುವೆಂಪು ವಿವಿಗೆ ಕರೆದವರು ಯಾರು?
ಸದರಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 9 ಗ್ರಾಮಗಳಿದ್ದು, ಅದರಲ್ಲಿ 4 ಕಂದಾಯ ಗ್ರಾಮ ಮತ್ತು 5 ದಾಖಲೆ ಗ್ರಾಮವಾಗಿರುತ್ತದೆ ಸದರಿ ದೂರಿಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಬಿಲ್ ಕಲೆಕ್ಟರ್ ಇಬ್ಬರೂ ನೀಡಿರುವ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ. ಹಾಗಾಗಿ ಮೇಲ್ಕಂಡ ಅಂಶಗಳನ್ನು ತಮ್ಮ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ. ಎಲ್ಲ ದಾಖಲೆ ಮತ್ತು ದೂರು ಪ್ರತಿಯನ್ನು ಪರಿಶೀಲಿಸಿ ಕೂಳಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಬಿಲ್ ಕಲೆಕ್ಟರ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಮತ್ತು ಕೆಆರ್‌ಎಸ್ ಪಕ್ಷದಿಂದ ಒತ್ತಾಯಿಸಲಾಗಿದೆ.